ಸರಕಾರದ ಆಮಿಷ-ಭೀತಿಯಲ್ಲಿ ನ್ಯಾಯಾಧೀಶರು ಕೆಲಸ ಮಾಡುವಂತಾದರೆ ಪ್ರಜಾತಂತ್ರ ಉಳಿಯುವುದೇ?
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಕೇಂದ್ರದಲ್ಲಿ ಮೋದಿ ಸರಕಾರ ಅಧಿಕಾರಕ್ಕೆ ಬಂದಮೇಲೆ ತಮ್ಮ ಸರಕಾರ ಹಾಗೂ ತಮ್ಮ ಸಿದ್ಧಾಂತಗಳ ಪರವಾಗಿರುವ ನ್ಯಾಯಾಧೀಶರನ್ನು ನಿವೃತ್ತಿಯಾದ ನಂತರ ಸರಕಾರಿ ಸ್ಥಾನಮಾನಗಳನ್ನು ಕೊಟ್ಟು ಪುರಸ್ಕರಿಸುವ ಅಪಾಯಕಾರಿ ಸಂಪ್ರದಾಯವನ್ನು ಹೆಚ್ಚುಮಾಡುತ್ತಿದೆ. ಇತ್ತೀಚೆಗೆ ಸುಪ್ರೀಂ ಕೋರ್ಟಿನ ನಿವೃತ್ತ ನ್ಯಾಯಾಧೀಶ ಅಬ್ದುಲ್ ನಝೀರ್ ಅವರನ್ನು ಆಂಧ್ರದ ರಾಜ್ಯಪಾಲರನ್ನಾಗಿ ನೇಮಕ ಮಾಡಿದ್ದು ಇತ್ತೀಚಿನ ಉದಾಹರಣೆ. ಇದಕ್ಕೆ ಮುನ್ನ ಸುಪ್ರೀಂ ಕೋರ್ಟಿನ ನಿವೃತ್ತ ಮುಖ್ಯ ನ್ಯಾಯಮೂರ್ತಿ ನ್ಯಾ. ರಂಜನ್ ಗೊಗೊಯಿ ನಿವೃತ್ತಿಯಾದ ನಾಲ್ಕೇ ತಿಂಗಳಲ್ಲಿ ಮೋದಿ ಸರಕಾರ ಅವರನ್ನು ರಾಜ್ಯಸಭಾ ಸದಸ್ಯರನ್ನಾಗಿ ನೇಮಕ ಮಾಡಿತ್ತು. ಗೊಗೊಯಿ ಅವರು ಮುಖ್ಯ ನ್ಯಾಯಾಧೀಶರಾಗಿದ್ದ ಅವಧಿಯಲ್ಲಿ ಅಯೋಧ್ಯಾ ವಿವಾದ, ರಫೇಲ್ ಯುದ್ಧ ವಿಮಾನ ಖರೀದಿ ವಿವಾದ, ಇನ್ನಿತರ ಹತ್ತು ಹಲವು ಪ್ರಕರಣಗಳಲ್ಲಿ ಮೋದಿ ಸರಕಾರವನ್ನು ಪಾರು ಮಾಡಿದ್ದು ಕಾಕತಾಳೀಯ ಎಂದು ಯಾರೂ ಸಮರ್ಥಿಸಿಕೊಳ್ಳಲಾಗದು.
ರಾಜ್ಯಸಭಾ ಸದಸ್ಯರಾಗಿ ಗೊಗೊಯಿ ಅವರು ನಡೆದುಕೊಂಡಿರುವ ರೀತಿಯೂ ಇದಕ್ಕೆ ಪುರಾವೆಗಳನ್ನು ಒದಗಿಸುತ್ತದೆ. ತನ್ನನ್ನು ರಾಜ್ಯಸಭಾ ಸದಸ್ಯನನ್ನಾಗಿ ಮಾಡಿರುವುದರಿಂದ ಸರಕಾರದ ನೀತಿ ನಿರೂಪಣೆಗಳಲ್ಲಿ ನ್ಯಾಯಾಂಗದ ದೃಷ್ಟಿಕೋನ ಮತ್ತು ನ್ಯಾಯಾಂಗದ ವಿವೇಕಗಳು ಒದಗಿ ದೇಶಕ್ಕೆ ಅನುಕೂಲವಾಗುತ್ತದೆ ಎಂದು ಗೊಗೊಯಿ ಅವರು ತನ್ನ ನೇಮಕಾತಿಯನ್ನು ಸಮರ್ಥಿಸಿಕೊಂಡಿದ್ದರು. ಆದರೆ ರಾಜ್ಯಸಭಾ ಸದಸ್ಯರಾದ ಆನಂತರದ ಕಳೆದ ಮೂರು ವರ್ಷಗಳಲ್ಲಿ ಅವರು ಕೇವಲ ಶೇ.25ರಷ್ಟು ದಿನಗಳು ಮಾತ್ರ ರಾಜ್ಯಸಭೆಗೆ ಹಾಜರಾಗಿದ್ದಾರೆ ಹಾಗೂ ರಾಜ್ಯಸಭೆಯಲ್ಲಿ ಒಂದು ಪ್ರಶ್ನೆಯನ್ನೂ ಕೇಳಿಲ್ಲ. ಒಂದೂ ಚರ್ಚೆಯಲ್ಲೂ ಭಾಗವಹಿಸಿಲ್ಲ.
ಇದಕ್ಕೆ ಮುಂಚೆ ಮೋದಿ ಸರಕಾರ 2014ರಲ್ಲಿ ಮೊದಲ ಬಾರಿಗೆ ಅಧಿಕಾರಕ್ಕೆ ಬಂದಾಗಲೂ ನ್ಯಾ. ಸದಾಶಿವಂ ಅವರನ್ನು ಮುಖ್ಯ ನ್ಯಾಯಮೂರ್ತಿಯಾಗಿ ನಿವೃತ್ತಿಯಾದ ನಾಲ್ಕು ತಿಂಗಳಲ್ಲಿ ಕೇರಳದ ರಾಜ್ಯಪಾಲರನ್ನಾಗಿ ನೇಮಕ ಮಾಡಿತ್ತು. ಭಾರತದ ಇತಿಹಾಸದಲ್ಲಿ ನಿವೃತ್ತ ಮುಖ್ಯನ್ಯಾಯಾಧೀಶರೊಬ್ಬರನ್ನು ರಾಜ್ಯಪಾಲರನ್ನಾಗಿ ನೇಮಕ ಮಾಡಿದ್ದು ಅದೇ ಮೊದಲು. ಇದು ಸದಾಶಿವಂ ಅವರು ತುಳಸಿ ಪ್ರಜಾಪತಿ ಸುಳ್ಳು ಎನ್ ಕೌಂಟರ್ ಪ್ರಕರಣದಲ್ಲಿ ಆಡಳಿತಾರೂಢ ಪಕ್ಷದ ಪ್ರಭಾವಿ ನಾಯಕ ಅಮಿತ್ ಶಾ ಅವರನ್ನು ಬಚಾವು ಮಾಡಿದ್ದಕ್ಕೆ ಸಿಕ್ಕಿದ ಗೌರವ ಎಂದು ರಾಜಕೀಯ ವಿಶ್ಲೇಷಕರು ವಿಶ್ಲೇಷಣೆ ಮಾಡಿದ್ದರು.
ಇದಲ್ಲದೆ ಕಳೆದ ಎಂಟು ವರ್ಷಗಳಲ್ಲಿ ಮೋದಿ ಸರಕಾರದಿಂದ ವಿವಿಧ ಟ್ರಿಬ್ಯುನಲ್ ಹಾಗೂ ಆಯೋಗಗಳಿಗೆ ನಿವೃತ್ತರಾದ ನಂತರ ಮುಖ್ಯಸ್ಥರಾಗಿ ನೇಮಕವಾದ ನ್ಯಾ. ಅರುಣ್ ಮಿಶ್ರಾ, ನ್ಯಾ. ಹೇಮಂತ್ ಗುಪ್ತಾ, ನ್ಯಾ. ಋತುರಾಜ್ ಅವಸ್ಥಿ, ನ್ಯಾ. ಆರ್.ಕೆ. ಗೋಯಲ್, ನ್ಯಾ. ಸಿಖ್ರಿ, ಅಶೋಕ್ ಭೂಷಣ್ ಇನ್ನಿತರರು ಒಂದಲ್ಲ ಒಂದು ಬಗೆಯಲ್ಲಿ ಮೋದಿ ಸರಕಾರಕ್ಕೆ ರಾಜಕೀಯವಾಗಿ ಮತ್ತು ಸೈದ್ಧಾಂತಿಕವಾಗಿ ಸಹಾಯವಾಗುವ ತೀರ್ಮಾನಗಳನ್ನು ನೀಡಿದ್ದು ಅವರ ನೇಮಕಾತಿ ಕಾಕತಾಳೀಯವಲ್ಲ ಎನ್ನುವುದನ್ನು ಸಾಬೀತು ಮಾಡುತ್ತದೆ.
ಹಾಗೆ ನೋಡಿದರೆ ನಿವೃತ್ತ ನ್ಯಾಯಾಧೀಶರನ್ನು ರಾಜ್ಯ ಸಭಾ ಸದಸ್ಯರಾಗಿಯೋ, ರಾಜ್ಯಪಾಲರಾಗಿಯೋ ಬಿಜೆಪಿಯೇತರ ಸರಕಾರಗಳೂ ನೇಮಕ ಮಾಡಿವೆ. ಸುಪ್ರೀಂ ಕೋರ್ಟಿನ ನಿವೃತ್ತ ನ್ಯಾಯಮೂರ್ತಿ ಫಾತಿಮಾ ಬೀವಿಯವರು ರಾಜ್ಯಪಾಲರಾಗಿಯೂ, ನ್ಯಾ. ಹಿದಾಯತುಲ್ಲಾ ಮತ್ತು ನ್ಯಾ. ರಂಗನಾಥ ಮಿಶ್ರಾ ಅವರನ್ನು ರಾಜ್ಯ ಸಭಾ ಸದಸ್ಯರನ್ನಾಗಿಯೂ ಬಿಜೆಪಿಯೇತರ ಸರಕಾರಗಳು ನೇಮಕ ಮಾಡಿವೆ. ಆದರೆ ವ್ಯತ್ಯಾಸವೇನೆಂದರೆ ಅವರನ್ನು ನೇಮಕ ಮಾಡಿದ್ದು ಅವರ ಅವಧಿಯಲ್ಲಿ ಆಡಳಿತದಲ್ಲಿದ್ದ ಸರಕಾರಗಳಲ್ಲ. ಅಲ್ಲದೆ ಅವರು ಈ ಹೊಸ ಹುದ್ದೆಗೆ ನೇಮಕಗೊಳ್ಳುವಾಗ ಅವರು ನಿವೃತ್ತಿಹೊಂದಿ ಹಲವಾರು ವರ್ಷಗಳ ಕೂಲಿಂಗ್ ಪೀರಿಯಡ್ ಅನ್ನು ದಾಟಿದ್ದರು. ಹೀಗಾಗಿ ಅವರ ನೇಮಕಾತಿಗಳು ಆಳುವ ಸರಕಾರದ ಋಣ ಸಂದಾಯ ಎನ್ನುವ ಆರೋಪ ಆಗ ಬಂದಿರಲಿಲ್ಲ.
ತುರ್ತುಸ್ಥಿತಿಯ ಕಾಲದಲ್ಲಿ ಇಂದಿರಾ ಗಾಂಧಿಯವರು ತನ್ನ ಪರವಾದ ಆದೇಶ ನೀಡಿದ ನ್ಯಾಯಾಧೀಶರನ್ನು ಹಿರಿತನವನ್ನು ಉಲ್ಲಂಘಿಸಿ ಮುಖ್ಯ ನ್ಯಾಯಾಧೀಶ ಹುದ್ದೆಯನ್ನು ಕೊಟ್ಟು ಪುರಸ್ಕರಿಸಿದ್ದು ಅಧಿಕಾರ ದುರ್ಬಳಕೆಯ ಒಂದು ಕೆಟ್ಟ ಉದಾಹರಣೆಯೆಂದು ಇತಿಹಾಸದಲ್ಲಿ ದಾಖಲಾಗಿದೆ. ವಿಪರ್ಯಾಸವೆಂದರೆ ಈ ರೀತಿ ನಿವೃತ್ತ ನ್ಯಾಯಾಧೀಶರನ್ನು ಓಲೈಸುವುದು ನ್ಯಾಯಾಂಗದ ಮೇಲೆ ಕೆಟ್ಟ ಪ್ರಭಾವ ಬೀರುತ್ತದೆಂದು ಇದೇ ಬಿಜೆಪಿಯ ನಾಯಕರೇ ವಿರೋಧ ಪಕ್ಷದಲ್ಲಿದ್ದಾಗ ದೊಡ್ಡದಾಗಿ ವಿರೋಧಿಸಿದ್ದರು. 2013ರಲ್ಲಿ ರಾಜ್ಯಸಭೆಯ ವಿರೋಧ ಪಕ್ಷದ ನಾಯಕರಾಗಿದ್ದ ಬಿಜೆಪಿಯ ಅರುಣ್ ಜೇಟ್ಲಿಯವರು ಹಾಲಿ ನ್ಯಾಯಾಧೀಶರ ತೀರ್ಮಾನಗಳ ಮೇಲೆ ನಿವೃತ್ತಿಯ ನಂತರದಲ್ಲಿ ಸರಕಾರ ಕೊಡಬಹುದಾದ ಅವಕಾಶಗಳ ಲಾಲಸೆಯು ಕೆಲಸ ಮಾಡುತ್ತದೆ ಎಂದು ರಾಜ್ಯಸಭೆಯಲ್ಲಿ ಗಂಭೀರವಾಗಿ ಆರೋಪಿಸಿದ್ದರು. ಹಾಗೂ ನ್ಯಾಯಾಧೀಶರೊಬ್ಬರು ನಿವೃತ್ತಿಯಾದ ನಂತರ ಕನಿಷ್ಠ ಎರಡು ವರ್ಷಗಳ ಕಾಲ ಯಾವುದೇ ಸರಕಾರಿ ಹುದ್ದೆಗಳನ್ನು ಸ್ವೀಕರಿಸಬಾರದೆಂಬ ನಿಯಮವಾಗಬೇಕು ಎಂದು ಆಗ್ರಹಿಸಿದ್ದರು. ಆಗ ಬಿಜೆಪಿಯ ರಾಷ್ಟ್ರಾಧ್ಯಕ್ಷರಾಗಿದ್ದ ನಿತಿನ್ ಗಡ್ಕರಿಯವರು 2014ರ ತಮ್ಮ ಚುನಾವಣೆ ಪ್ರಣಾಳಿಕೆಯಲ್ಲಿ ಈ ಬಗೆಯ ನ್ಯಾಯಾಂಗ ಸುಧಾರಣೆಯ ಕ್ರಮವನ್ನು ಸೇರಿಸುವುದಾಗಿಯೂ, ತಾವು 2014ರಲ್ಲಿ ಅಧಿಕಾರಕ್ಕೆ ಬಂದರೆ ಅಂತಹ ಸೂಕ್ತ ತಿದ್ದುಪಡಿಯನ್ನು ಮಾಡುವುದಾಗಿಯೂ ಭರವಸೆಯನ್ನು ನೀಡಿದ್ದರು.
ಆದರೆ 2014ರ ಮೇ ತಿಂಗಳಲ್ಲಿ ಅಧಿಕಾರಕ್ಕೆ ಬಂದ ಮೋದಿ ನೇತೃತ್ವದ ಬಿಜೆಪಿ ಸರಕಾರ ನಿವೃತ್ತಿಯಾಗಿ ಕೇವಲ ನಾಲ್ಕು ತಿಂಗಳು ಮಾತ್ರವಾಗಿದ್ದರೂ ನ್ಯಾ. ಸದಾಶಿವಂ ಅವರನ್ನು 2014ರ ಸೆಪ್ಟಂಬರ್‌ನಲ್ಲಿ ಕೇರಳದ ರಾಜ್ಯಪಾಲರನ್ನಾಗಿ ನೇಮಿಸಿತು. 2018ರಲ್ಲಿ ಸುಪ್ರೀಂ ಕೋರ್ಟಿನ ನ್ಯಾಯಾಮೂರ್ತಿಯಾಗಿ ನಿವೃತ್ತಿ ಹೊಂದಿದ ದಿನವೇ ಆರ್.ಕೆ. ಗೋಯಲ್ ಅವರನ್ನು ನ್ಯಾಷನಲ್ ಗ್ರೀನ್ ಟ್ರಿಬ್ಯುನಲ್‌ನ ಅಧ್ಯಕ್ಷರನ್ನಾಗಿ ನೇಮಿಸಿತು. ಮತ್ತೊಂದು ಕಡೆ ನ್ಯಾ. ಅಕಿಲ್ ಖುರೇಷಿಯವರು 2017ರಿಂದ ಸುಪ್ರೀಂ ಕೋರ್ಟ್‌ಗೆ ನೇಮಕವಾದ ಯಾವುದೇ ಹೈಕೋರ್ಟಿನ ನ್ಯಾಯಾಧೀಶರಿಗಿಂತ ಹಿರಿಯರಾಗಿದ್ದರೂ, ಸುಪ್ರೀಂ ಕೋರ್ಟ್‌ನ ಕೊಲಿಜಿಯಂ ಪದೇಪದೇ ಅವರ ಹೆಸರನ್ನು ಪದೋನ್ನತಿಗೆ ಸೂಚಿಸಿದರೂ ಮೋದಿ ಸರಕಾರ ಅದಕ್ಕೆ ಒಪ್ಪಿಗೆ ನೀಡಲಿಲ್ಲ.
ಈಗ ಜಗಜ್ಜಾಹೀರಾಗಿರುವಂತೆ ಅದಕ್ಕಿರುವ ಏಕೈಕ ಕಾರಣ ಅವರು 2010ರಲ್ಲಿ ಸೊಹ್ರಾಬುದ್ದೀನ್ ಎನ್‌ಕೌಂಟರ್ ಪ್ರಕರಣದಲ್ಲಿ ಅಮಿತ್ ಶಾ ಅವರನ್ನು ಸಿಬಿಐ ಕಸ್ಟಡಿಗೆ ಕೊಟ್ಟಿದ್ದು. ಹಾಗೆಯೇ 2020ರ ದಿಲ್ಲಿ ಗಲಭೆಯ ಸಂದರ್ಭದಲ್ಲಿ ಮೋದಿ ಸರಕಾರದ ಉದ್ದೇಶಗಳಿಗೆ ಪೂರಕವಾಗಿ ನಡೆದುಕೊಳ್ಳದ ಕಾರಣಕ್ಕಾಗಿಯೋ ಎಂಬಂತೆ ಹಿರಿಯ ಹೈಕೋರ್ಟ್ ನ್ಯಾಯಾಧೀಶರಾದ ನ್ಯಾ. ಮುರಳೀಧರ್ ಅವರಿಗೆ ಸಿಗಬೇಕಾದ ವರ್ಗಾವಣೆ ಮತ್ತು ಪದೋನ್ನತಿಗಳನ್ನು ತಿರಸ್ಕರಿಸಲಾಗುತ್ತಿದೆ ಎಂಬ ದಟ್ಟವಾದ ಅನುಮಾನವಿದೆ.
ಮೋದಿ ಸರಕಾರದ ಈ ಧೋರಣೆ ನ್ಯಾಯಾಂಗದ ಸ್ವಾಯತ್ತತೆಯ ಮೇಲೆ ಹಾಗೂ ಪ್ರಜಾತಂತ್ರದ ಮೇಲೆ ಅತ್ಯಂತ ಕೆಟ್ಟ ಪರಿಣಾಮವನ್ನು ಬೀರುತ್ತದೆ. ನ್ಯಾಯಾಂಗವು ಭೀತಿ ಮತ್ತು ಆಮಿಷಗಳಲ್ಲಿ ಕೆಲಸ ಮಾಡಿದಾಗ ಸರಕಾರವು ಸರ್ವಾಧಿಕಾರಿಯಾಗುವುದು ಸುಲಭವಾಗುತ್ತದೆ.