ಈ ನೆಲದ ಭಾಷೆಯ ಬಗ್ಗೆ ನಿರ್ಲಕ್ಷ್ಯ ಬೇಡ

Update: 2023-02-21 04:20 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ 

Full View

ಈಗ ಒಕ್ಕೂಟ ಸರಕಾರದ ಸೂತ್ರ ಹಿಡಿದವರಿಗೆ ಭಾರತದ ಬಹುತ್ವವನ್ನು ಅಳಿಸಿ ಹಾಕಿ ಒಂದೇ ಧರ್ಮ, ಒಂದೇ ಭಾಷೆಯನ್ನು ಹೇರುವ ತವಕ. ರೈಲು ನಿಲ್ದಾಣಗಳಲ್ಲಿ ಇಂಗ್ಲಿಷ್ ಜೊತೆ ಸ್ಥಳೀಯ ಭಾಷೆಯ ಬದಲಾಗಿ ಎಲ್ಲೆಲ್ಲೂ ಹಿಂದಿ ಭಾಷೆಯ ಬೋರ್ಡುಗಳು ರಾರಾಜಿಸುತ್ತಿವೆ. ಮೈಲಿ ಗಲ್ಲುಗಳಿಗೂ ಅದೇ ಸ್ಥಿತಿ ಬಂದಿದೆ. ಇದಕ್ಕಿಂತ ಅದ್ವಾನ ಉಂಟಾಗಿರುವುದು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ. ರಾಜ್ಯದ ಬಹುತೇಕ ಬ್ಯಾಂಕುಗಳಲ್ಲಿ ಉತ್ತರ ಭಾರತದ ಸಿಬ್ಬಂದಿಯನ್ನು ನೇಮಕ ಮಾಡಿದ್ದಾರೆ. ಈ ನೆಲದ ಭಾಷೆಯನ್ನು ಕಲಿಯಲು ಕಿಂಚಿತ್ ಆಸಕ್ತಿ ತೋರಿಸದ ಈ ಬ್ಯಾಂಕ್ ಸಿಬ್ಬಂದಿ ಹಿಂದಿಯಲ್ಲಿ ಮಾತಾಡುವಂತೆ ಸ್ಥಳೀಯರ ಮೇಲೆ ಒತ್ತಡ ಹೇರುತ್ತಾರೆ. ಆದರೆ ಗ್ರಾಮೀಣ ಪ್ರದೇಶಗಳ ಅನೇಕ ಗ್ರಾಹಕರಿಗೆ ಕನ್ನಡ ಬಿಟ್ಟು ಬೇರೆ ಭಾಷೆ ಬರುವುದಿಲ್ಲ. ಹೀಗಾಗಿ ಬ್ಯಾಂಕುಗಳಲ್ಲಿ ಆಗಾಗ ಬಿರುಸಿನ ವಾಗ್ವಾದ ಮತ್ತು ಜಗಳಗಳು ಸಾಮಾನ್ಯವಾಗಿವೆ.

ಕೆಲವು ದಿನಗಳ ಹಿಂದೆ ನಡೆದಿದ್ದ ಭಾರತೀಯ ಬ್ಯಾಂಕುಗಳ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮಾತನಾಡಿದ್ದ ಕೇಂದ್ರ ಹಣಕಾಸು ಮಂತ್ರಿ ನಿರ್ಮಲಾ ಸೀತಾರಾಮನ್ ಅವರು ಬ್ಯಾಂಕುಗಳಲ್ಲಿ ಸ್ಥಳೀಯ ಭಾಷೆಗಳಲ್ಲಿ ಮಾತಾಡುವ ಸಿಬ್ಬಂದಿಯ ನೇಮಕದ ಬಗ್ಗೆ ಪ್ರಸ್ತಾವಿಸಿದ್ದರು.ಅಲ್ಲಿ ಮಾತ್ರವಲ್ಲ ಅನೇಕ ಸಲ ಈ ಮಾತನ್ನು ಅವರು ಹೇಳಿದ್ದಾರೆ. ಆದರೆ ಅವರ ಮಾತು ಅನುಷ್ಠಾನಕ್ಕೆ ಬರುತ್ತಿಲ್ಲ. ರಾಷ್ಟ್ರೀಕೃತ ಬ್ಯಾಂಕುಗಳು ಮಾತ್ರವಲ್ಲ ಸ್ಥಳೀಯ ಖಾಸಗಿ ವಲಯದ ಬ್ಯಾಂಕುಗಳಲ್ಲಿ ಕೂಡ ಕನ್ನಡ ಮಾತಾಡುವ ಸಿಬ್ಬಂದಿಯ ಕೊರತೆ ಎದ್ದು ಕಾಣುತ್ತಿದೆ. ಹೀಗಾಗಿ ಬ್ಯಾಂಕುಗಳ ದೈನಂದಿನ ಕಾರ್ಯನಿರ್ವಹಣೆ ಸುಗಮವಾಗಿ ನಡೆಯುತ್ತಿಲ್ಲ.

ಕರ್ನಾಟಕದ ಬ್ಯಾಂಕುಗಳಲ್ಲಿ ಕನ್ನಡ ಬಾರದ ಸಿಬ್ಬಂದಿ ಒಂದೆಡೆಯಿದ್ದರೆ ಇನ್ನೊಂದೆಡೆ ಬ್ಯಾಂಕುಗಳಲ್ಲಿ ಮಾಹಿತಿ ಭರ್ತಿಗೆ ಕೊಡುವ ಚಲನ್ ಮತ್ತು ಫಾರ್ಮ್‌ಗಳಲ್ಲಿ ಕೂಡ ಕನ್ನಡ ಮಾಯವಾಗಿದೆ. ಎಲ್ಲೆಡೆ ಹಿಂದಿ ಭಾಷೆ ವಿಜೃಂಭಿಸುತ್ತಿದೆ. ನಾವೇನು ಕರ್ನಾಟಕದಲ್ಲಿ ಇದ್ದೇವೆಯೋ ಇಲ್ಲ ಉತ್ತರ ಭಾರತದಲ್ಲಿ ಇದ್ದೇವೆಯೋ ಎಂಬ ಭಾವನೆ ಬರುತ್ತದೆ. ವಾಸ್ತವವಾಗಿ ಹಿಂದಿ ರಾಷ್ಟ್ರ ಭಾಷೆಯಲ್ಲ. ಅದು ರಾಷ್ಟ್ರ ಭಾಷೆಗಳಲ್ಲಿ ಒಂದು. ಕನ್ನಡ ಕೂಡ ರಾಷ್ಟ್ರ ಭಾಷೆಗಳ ಪಟ್ಟಿಯಲ್ಲಿದೆ. ಆದರೂ ಕೇವಲ ಐದಾರು ರಾಜ್ಯಗಳ ಭಾಷೆಯನ್ನು ಭಾರತದ ಮೇಲೆ ಹೇರುವ ಮಸಲತ್ತು ನಡೆದಿದೆ.

ಈ ಭಾಷಾ ಗೊಂದಲದ ಪರಿಣಾಮವಾಗಿ ಕರ್ನಾಟಕದ ಗ್ರಾಹಕರು ಬ್ಯಾಂಕುಗಳಿಂದ ಸೇವೆಯನ್ನು ಪಡೆಯಲು ಪರದಾಡುವಂತಾಗಿದೆ. ಇನ್ನು ಮುಂದಾದರೂ ಇದು ಬದಲಾಗಬೇಕು. ಗ್ರಾಹಕರ ಜೊತೆ ನೇರವಾಗಿ ಸಂವಹನ ನಡೆಸುವ ಹುದ್ದೆಗಳಿಗೆ ಸ್ಥಳೀಯ ಭಾಷೆ ಬಾರದ ಸಿಬ್ಬಂದಿ ಯನ್ನು ಯಾವುದೇ ಕಾರಣಕ್ಕೂ ನೇಮಕ ಮಾಡಬಾರದು. ಕನ್ನಡ ಬಾರದ ಕೆಲವು ಬ್ಯಾಂಕ್ ಸಿಬ್ಬಂದಿ ಹಟ ತೊಟ್ಟವರಂತೆ ‘‘ಹಿಂದಿಯಲ್ಲೇ ಮಾತಾಡಿ. ಹಿಂದಿ ಬರದಿದ್ದರೆ ನೀವು ಭಾರತೀಯರೆಂದು ಹೇಗೆ ಒಪ್ಪಿಕೊಳ್ಳಬೇಕು?’’ ಎಂದು ವ್ಯಂಗ್ಯ ಮಾಡಿದ ಉದಾಹರಣೆಗಳಿವೆ. ಇದು ಬ್ಯಾಂಕಿಂಗ್ ವ್ಯವಹಾರದ ಸಜ್ಜನಿಕೆಯಲ್ಲ. ಬ್ಯಾಂಕುಗಳಿರುವುದು ಗ್ರಾಹಕರ ಅಗತ್ಯಗಳನ್ನು ಪೂರೈಸಲು. ಗ್ರಾಹಕರ ಅಗತ್ಯಗಳನ್ನು ಪೂರೈಸಬೇಕೆಂದರೆ ಅವರ ಭಾಷೆಯಲ್ಲಿ ಮಾತಾಡಬೇಕು. ಕನ್ನಡ ಗೊತ್ತಿಲ್ಲದವರು ಕನ್ನಡ ಕಲಿಯಬೇಕು. ಕಲಿಯದಿದ್ದರೆ ಕನ್ನಡ ಬರುವ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಬೇಕು.

ಕರ್ನಾಟಕದ ಬ್ಯಾಂಕುಗಳಲ್ಲಿ ಕನ್ನಡ ಭಾಷೆಯಲ್ಲಿ ವ್ಯವಹಾರ ನಡೆಸಲು ಸೌಕರ್ಯಗಳನ್ನು ಕಲ್ಪಿಸಬೇಕೆಂದು ರಾಜ್ಯ ಸರಕಾರ ಬ್ಯಾಂಕುಗಳ ಪ್ರಾದೇಶಿಕ ಮುಖ್ಯಸ್ಥರಿಗೆ ಈಗಾಗಲೇ ಸೂಚನೆಯನ್ನು ನೀಡಿದೆ. ಬ್ಯಾಂಕುಗಳ ಅಸಡ್ಡೆಯ ವರ್ತನೆಯ ವಿರುದ್ಧ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಕೇಂದ್ರ ಸರಕಾರಕ್ಕೆ ದೂರು ನೀಡಿದೆ. ಇಷ್ಟೆಲ್ಲ ಮನವಿ ಮಾಡಿಕೊಂಡರೂ, ಒತ್ತಡ ಹೇರಿದರೂ ಬ್ಯಾಂಕುಗಳ ಆಡಳಿತ ವರ್ಗಗಳು ಯಾವುದೇ ಕ್ರಮವನ್ನು ಕೈಗೊಳ್ಳದಿರುವುದು ಖಂಡನೀಯ. ಗ್ರಾಹಕರ ಭಾಷೆಗೆ, ಭಾವನೆಗಳಿಗೆ ಸ್ಪಂದಿಸದ ಬ್ಯಾಂಕುಗಳ ವರ್ತನೆ ಸರಿಯಲ್ಲ. ರಾಜ್ಯ ಸರಕಾರದ ಮನವಿಯ ಜೊತೆಗೆ ಕೇಂದ್ರ ಹಣಕಾಸು ಸಚಿವರು ಹೇಳಿದರೂ ನಿರ್ಲಕ್ಷ್ಯ ಧೋರಣೆಯನ್ನು ತಾಳಿದ ಬ್ಯಾಂಕುಗಳ ಬಗ್ಗೆ ಸರಕಾರ ಇನ್ನು ಸುಮ್ಮನಿರಬಾರದು. ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು.ಕರ್ನಾಟಕದಲ್ಲಿ ಕನ್ನಡ ಮತ್ತು ಇತರ ರಾಜ್ಯಗಳಲ್ಲಿ ಸ್ಥಳೀಯ ಭಾಷೆಗಳು ಬ್ಯಾಂಕುಗಳ ವ್ಯವಹಾರದ ಭಾಷೆಯಾಗಬೇಕು.

ಈ ನಿಟ್ಟಿನಲ್ಲಿ ನ್ಯಾಯಾಲಯದ ತೀರ್ಪುಗಳನ್ನು ಸ್ಥಳೀಯ ಭಾಷೆಗಳಿಗೆ ಅನುವಾದ ಮಾಡಿ  ಜನರಿಗೆ ತಲುಪಿಸಬೇಕೆಂಬ ಸುಪ್ರೀಂ ಕೋರ್ಟಿನ ಇತ್ತೀಚಿನ ನಿರ್ಧಾರ ಸ್ವಾಗತಾರ್ಹವಾಗಿದೆ. ತಮಗೆ ತಿಳಿಯುವ ಭಾಷೆಯಲ್ಲಿ ನ್ಯಾಯಾಲಯದ ತೀರ್ಪುಗಳು ಬಂದರೆ ಜನಸಾಮಾನ್ಯರಿಗೆ ಅನುಕೂಲವಾಗುತ್ತದೆ. ಬ್ಯಾಂಕುಗಳಿಗೂ ಇದು ಮಾದರಿಯಾಗಬೇಕು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರಕಾರದ ಆಡಳಿತ ಮಾತ್ರವಲ್ಲ ನ್ಯಾಯಾಲಯದ ಕಲಾಪಗಳು ಜನ ಭಾಷೆಯಲ್ಲಿ ನಡೆಯಬೇಕೆಂಬ ವಿಷಯದಲ್ಲಿ ಯಾರಿಗೂ ಭಿನ್ನಾಭಿಪ್ರಾಯ ಇಲ್ಲ. ದೇಶದ ಬಹುಪಾಲು ಜನರಿಗೆ ತಮ್ಮ ನೆಲದ ಭಾಷೆ ಬಿಟ್ಟು ಇಂಗ್ಲಿಷ್, ಹಿಂದಿ ಸೇರಿದಂತೆ ಇತರ ಭಾಷೆಗಳು ಅರ್ಥವಾಗುವುದಿಲ್ಲ. ಹಾಗಾಗಿ ಅವರಿಗೆ ಸಂಬಂಧಿಸಿದ ತೀರ್ಪನ್ನು ಯಾರ ನೆರವಿಲ್ಲದೆ ಅವರೇ ಓದಲು ಅನುವಾದ ಮಾಡುವುದು ಸರಿಯಾದ ಕ್ರಮ. ಇದು ಬ್ಯಾಂಕಿಂಗ್ ವ್ಯವಹಾರಕ್ಕೂ ಅನ್ವಯವಾಗಬೇಕು.

ದೂರದ ಉತ್ತರದ ರಾಜ್ಯಗಳ ಸಿಬ್ಬಂದಿಯನ್ನು ದಕ್ಷಿಣ ಭಾರತಕ್ಕೆ ವರ್ಗಾವಣೆ ಮಾಡುವುದರಿಂದ ಅವರಿಗೂ ತೊಂದರೆ, ಬ್ಯಾಂಕುಗಳ ಗ್ರಾಹಕರಿಗೂ ಅನಾನುಕೂಲ. ಹಾಗಾಗಿ ಬ್ಯಾಂಕ್ ಸಿಬ್ಬಂದಿಯನ್ನು ಅವರ ರಾಜ್ಯಗಳ ಆಚೆ ದೂರದ ರಾಜ್ಯಗಳಿಗೆ ವರ್ಗಾವಣೆ ಮಾಡುವುದು ಸರಿಯಲ್ಲ. ಎಲ್ಲಾ ಬ್ಯಾಂಕುಗಳ ಅದರಲ್ಲೂ ರಾಷ್ಟ್ರೀಕೃತ ಬ್ಯಾಂಕುಗಳ ವ್ಯವಹಾರಗಳು ಕನ್ನಡ ಸೇರಿದಂತೆ ಸ್ಥಳೀಯ ಭಾಷೆಯಲ್ಲಿ ನಡೆಯುವಂತೆ ಸರಕಾರ ಕ್ರಮ ಕೈಗೊಳ್ಳಬೇಕು.

Similar News