ಗೋವುಗಳಿಗೂ, ಮನುಷ್ಯರಿಗೂ ಕಂಟಕರಾಗುತ್ತಿರುವ ನಕಲಿ ಗೋರಕ್ಷಕರು
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ರಾಜಸ್ಥಾನ, ಹರ್ಯಾಣದಂತಹ ರಾಜ್ಯಗಳು ಇತ್ತೀಚಿನ ದಿನಗಲಲ್ಲಿ ಗೋವುಗಳ ಮಾರಣ ಹೋಮಕ್ಕಾಗಿ ಮಾಧ್ಯಮಗಳಲ್ಲಿ ಸುದ್ದಿಯಾಯಿತು. ಲಕ್ಷಾಂತರ ಗೋವುಗಳು ಸಾಂಕ್ರಾಮಿಕ ರೋಗಗಳಿಂದ ಬೀದಿಗಳಲ್ಲಿ ಹೆಣವಾಗಿ ಬಿದ್ದವು. ಎಲ್ಲೆಂದರಲ್ಲಿ ಗೋವುಗಳ ಮೃತದೇಹಗಳು ಕೊಳೆತು ನಾರತೊಡಗಿದ್ದವು. ಈ ರೋಗಗಳನ್ನು ತಡೆಗಟ್ಟುವಲ್ಲಿ ಸರಕಾರ ಸಂಪೂರ್ಣ ವಿಫಲವಾಗಿತ್ತು. ಗೋಶಾಲೆಗಳಲ್ಲಿ ಜನರ ತೆರಿಗೆಯ ಹಣದಿಂದ ಸಾಕುತ್ತಿರುವ ಅನುಪಯುಕ್ತ ಗೋವುಗಳಿಗೆ ಗತಿಯೇ ಇಲ್ಲ ಎನ್ನುವ ಸ್ಥಿತಿ ನಿರ್ಮಾಣವಾಗಿತ್ತು. ರೋಗಗಳಿಗೀಡಾದ ಹಟ್ಟಿಯಲ್ಲಿರುವ ದನಗಳನ್ನೇ ರೈತರು ಬೀದಿಗೆ ಬಿಡುತ್ತಿರುವಾಗ, ಗೋಶಾಲೆಯಲ್ಲಿರುವ ರೋಗ ಪೀಡಿತ ಗೋವುಗಳನ್ನು ನೋಡಿಕೊಳ್ಳುವವರು ಯಾರು? ಇದೇ ಸಂದರ್ಭದಲ್ಲಿ, ಗೋಶಾಲೆಗಳಲ್ಲಿರುವ ಗೋವುಗಳ ಆರೈಕೆಗೆ ಸರಕಾರ ಹಣ ಬಿಡುಗಡೆ ಮಾಡುತ್ತಿಲ್ಲ ಎಂದು ಸಾವಿರಾರು ದನಗಳನ್ನು ಗೋಶಾಲೆಯ ಸಂಘಟಕರು ಬೀದಿಗೆ ಬಿಟ್ಟರು. ಹೀಗೆ, ಒಂದು ಕಾಲದಲ್ಲಿ ರೈತರ ಸೊತ್ತಾಗಿದ್ದ, ಆರ್ಥಿಕ ಮೂಲವಾಗಿದ್ದ ಗೋವುಗಳು ಸರಕಾರಕ್ಕೆ ಬಹುದೊಡ್ಡ ಸಮಸ್ಯೆಯಾಗಿ ಪರಿಣಮಿಸಿತು. ಗೋಹತ್ಯೆ ಕಾಯ್ದೆಯ ಬಳಿಕ ಈ ರಾಜ್ಯಗಳಲ್ಲಿ ಈಗಲೂ ಅನುಪಯುಕ್ತ ಗೋವುಗಳು ಬಹುದೊಡ್ಡ ಸಮಸ್ಯೆಯಾಗಿವೆ. ಇಂದು ಗುಜರಾತ್, ರಾಜಸ್ಥಾನ, ಹರ್ಯಾಣದಲ್ಲಿ ಗೋ ಸಾಕಣೆ ರೈತರ ಪಾಲಿಗೆ ದುಬಾರಿಯಾಗಿದೆ. ಒಂದೆಡೆ ಸಾಂಕ್ರಾಮಿಕ ರೋಗ, ಇನ್ನೊಂದೆಡೆ ಗೋರಕ್ಷಣೆಗೆ ಸರಕಾರವೇ ಅನುಷ್ಠಾನಗೊಳಿಸಿದ ಕಾಯ್ದೆಗಳಿಂದಾಗಿ ರೈತರು ಅನುಪಯುಕ್ತ ಗೋವುಗಳನ್ನು ಹಟ್ಟಿಯಲ್ಲಿಟ್ಟುಕೊಳ್ಳುವಂತಿಲ್ಲ. ಮಾರುವಂತೆಯೂ ಇಲ್ಲ. ಅನಿವಾರ್ಯವಾಗಿ ಅವುಗಳನ್ನು ರಸ್ತೆಗೆ ಬಿಡಬೇಕಾಗುತ್ತದೆ. ಒಂದು ಕಾಲದಲ್ಲಿ ಅನುಪಯುಕ್ತ ಹಸುಗಳನ್ನು ಮಾರಿ, ಇತರ ಗೋವುಗಳ ಸಾಕಣೆಯ ವೆಚ್ಚವನ್ನು ರೈತರು ಭರಿಸಿಕೊಳ್ಳುತ್ತಿದ್ದರು. ಇಂದು ತಾವೇ ಸಾಕಿದ ಜಾನುವಾರುಗಳನ್ನು ಮುಕ್ತವಾಗಿ ಮಾರುವ ಹಕ್ಕು ರೈತರಿಗಿಲ್ಲ. ಪರಿಣಾಮವಾಗಿ ರೈತರು ಗೋಸಾಕಣೆಯಿಂದ ಹಿಂದೆ ಸರಿಯುತ್ತಿದ್ದಾರೆ. ಇದು ದೇಶದಲ್ಲಿ ದೊಡ್ಡ ಮಟ್ಟದ ಹಾಲಿನ ಉತ್ಪಾದನೆ ಇಳಿಕೆಗೆ ಕಾರಣವಾಗುತ್ತಿದೆ ಎನ್ನುವುದು ಈಗಾಗಲೇ ಬಹಿರಂಗವಾಗಿದೆ.
ಇವೆಲ್ಲದರ ನಡುವೆ ಹೈನೋದ್ಯಮಗಳ ಪಾಲಿಗೆ ಭಯಾನಕ ವೈರಸ್‌ಗಳಾಗಿ ಕಾಡ ತೊಡಗಿರುವುದು 'ನಕಲಿ ಗೋರಕ್ಷಕರು'. ಇವರು ಮನೆಯಲ್ಲಿ ಗೋವುಗಳನ್ನು ಸಾಕುವುದಿಲ್ಲ. ಹೈನೋದ್ಯಮಗಳಲ್ಲಿ ಇವರ ಪಾತ್ರವೇ ಇಲ್ಲ. ಆದರೆ ಯಾರಾದರೂ ರೈತರು, ಗೋ ವ್ಯಾಪಾರಿಗಳು ಗೋವುಗಳನ್ನು ಸಾಗಿಸುತ್ತಿದ್ದರೆ ಅವರ ಮೇಲೆ ಹಲ್ಲೆ ನಡೆಸಿ, ಅವರನ್ನು ದರೋಡೆ ಮಾಡುವುದೇ ಇವರ ಪಾಲಿಗೆ ಲಾಭದಾಯಕ ಹೈನೋದ್ಯಮ. ರಾಜಸ್ಥಾನ, ಹರ್ಯಾಣದಂತಹ ರಾಜ್ಯಗಳಲ್ಲಿ ಈ ನಕಲಿ ಗೋರಕ್ಷಕರಿಂದ ಹಲವು ಕೊಲೆಗಳು ನಡೆದವು. ಅವುಗಳನ್ನು ಪೊಲೀಸರು ತನಿಖೆ ನಡೆಸಿದಂತೆ ನಟಿಸಿ ಮುಚ್ಚಿ ಹಾಕಿದರು. ಪೊಲೀಸರು ಮತ್ತು ನಕಲಿ ಗೋರಕ್ಷಕರ ನಡುವಿನ ಅನೈತಿಕ ಸಂಬಂಧದ ಕಾರಣದಿಂದಾಗಿ ಈ ನಕಲಿ ಗೋರಕ್ಷಕರ 'ಹೈನೋದ್ಯಮ' ನಿಜವಾದ ರೈತರ ಹೈನೋದ್ಯಮಕ್ಕಿಂತ ಲಾಭದಾಯಕವಾಗತೊಡಗಿತು. ಇದರ ಬೆನ್ನಿಗೇ ಬಂದ ಸರಕಾರದ ಕಾನೂನು ಈ ನಕಲಿ ಗೋರಕ್ಷಕರಿಗೆ ಇನ್ನಷ್ಟು ಅನುಕೂಲಗಳನ್ನು ಮಾಡಿಕೊಟ್ಟಿತು. ಒಂದೆಡೆ ದನ ಸಾಕುವ ರೈತರು ನಷ್ಟಕ್ಕೀಡಾಗಿ ಹಟ್ಟಿ ಮುಚ್ಚತೊಡಗಿದರೆ, ಈ ನಕಲಿ ಗೋರಕ್ಷಕರು ಬೀದಿಗಳಲ್ಲಿ ಕೊಬ್ಬ ತೊಡಗಿದ್ದರು. ಭಾರತದ ಗೋವುಗಳಿಗೆ ಸಾಂಕ್ರಾಮಿಕ ರೋಗ ಹಬ್ಬುವ ಮೊದಲೇ, ಈ ನಕಲಿ ಗೋರಕ್ಷಕರೆಂಬ ವೈರಸ್‌ಗಳು ಅಂಟಿಕೊಂಡು ಅದರ ಜೀವ ಹಿಂಡತೊಡಗಿತ್ತು.
ಗೋರಕ್ಷಣೆಯ ಹೆಸರಿನಲ್ಲಿ ಈ ನಕಲಿ ಗೋರಕ್ಷಕರು ರೈತರಿಗೆ ನೀಡಿದ ಕಿರುಕುಳ, ಅಮಾಯಕರ ಮೇಲೆ ಎಸಗಿದ ದೌರ್ಜನ್ಯದ ಫಲವೋ ಎಂಬಂತೆ ರಾಜಸ್ಥಾನದಲ್ಲಿ ಸಾಲು ಸಾಲಾಗಿ ಗೋವುಗಳು ರೋಗ ಬಡಿದು ಸಾಯತೊಡಗಿದ್ದವು. ಒಂದೆಡೆ ಗೋವುಗಳ ಮಾರಣಹೋಮ ಮುಂದುವರಿದಂತೆಯೇ ಇತ್ತ ಸಂಘಪರಿವಾರ ಗೋಸಾಕಣೆಗಾರರ ಮೇಲೆ ನಡೆಸುತ್ತಿರುವ ತನ್ನ ದಾಳಿಯನ್ನು ಮುಂದುವರಿಸಿದೆ. ಕೆಲವು ದಿನಗಳ ಹಿಂದೆ ರಾಜಸ್ಥಾನದ ಇಬ್ಬರು ತರುಣರನ್ನು ಗೋವುಗಳ ಹೆಸರಿನಲ್ಲಿ ಬರ್ಬರವಾಗಿ ಸುಟ್ಟು ಕೊಂದು ಹಾಕಿದ ಘಟನೆ ಇದೀಗ ಚರ್ಚೆಯಲ್ಲಿದೆ. ಈ ಯುವಕರು ಕಸಾಯಿಖಾನೆಗೆ ಅಕ್ರಮವಾಗಿ ಗೋವುಗಳನ್ನು ಸಾಗಿಸುತ್ತಿದ್ದರು ಎನ್ನುವ ಆರೋಪದಲ್ಲಿ ಬರ್ಬರವಾಗಿ ಥಳಿಸಿದ್ದಾರೆ ಮಾತ್ರವಲ್ಲ, ವಾಹನ ಸಮೇತ ಅವರನ್ನು ಸುಟ್ಟು ಹಾಕಿದ್ದಾರೆ. ಇದೇ ಸಂದರ್ಭದಲ್ಲಿ, ಅವರು ಗೋವುಗಳನ್ನು ಸಾಗಿಸುತ್ತಿದ್ದರೋ ಇಲ್ಲವೋ ಎನ್ನುವುದನ್ನು ಪೊಲೀಸರು ಇನ್ನೂ ಸ್ಪಷ್ಟ ಪಡಿಸಿಲ್ಲ. ಇದಿಷ್ಟೇ ಅಲ್ಲ, ಆರೋಪಿಗಳನ್ನು ಬಂಧಿಸಿದ ಕಾರಣಕ್ಕಾಗಿ ದುಷ್ಕರ್ಮಿಗಳು ರಾಜಸ್ಥಾನ ಪೊಲೀಸರಿಗೇ ಜೀವ ಬೆದರಿಕೆಯನ್ನು ಒಡ್ಡಿದ್ದಾರೆ. ಗೋರಕ್ಷಣೆಯ ಹೆಸರಿನಲ್ಲಿ ಬೀದಿಗಿಳಿದು ನಿಧಾನಕ್ಕೆ ಜನರ ಮೇಲೆ ದೌರ್ಜನ್ಯಗಳನ್ನು ಎಸಗುತ್ತಿದ್ದ ನಕಲಿ ಗೋರಕ್ಷಕರು, ಇದೀಗ ಕಾನೂನಿಗೇ ಸವಾಲಾಗಿ ಹೇಗೆ ಬೆಳೆದು ನಿಂತಿದ್ದಾರೆ ಎನ್ನುವುದಕ್ಕೆ ಇದು ಉದಾಹರಣೆಯಾಗಿದೆ. ಈ ಪ್ರಕರಣ ಹಲವು ಆಯಾಮಗಳನ್ನು ಪಡೆದುಕೊಂಡಿದೆ. ಸ್ಥಳೀಯ ಪೊಲೀಸರೂ ಈ ಹತ್ಯೆಯಲ್ಲಿ ಪರೋಕ್ಷವಾಗಿ ಭಾಗಿಯಾಗಿರುವ ಆರೋಪಗಳು ಕೇಳಿ ಬರುತ್ತಿವೆ. ಅಮಾಯಕ ಯುವಕರನ್ನು ದುಷ್ಕರ್ಮಿಗಳು ಮಾರಣಾಂತಿಕವಾಗಿ ಥಳಿಸಿ ಪೊಲೀಸ್ ಠಾಣೆಗೆ ಕೊಂಡೊಯ್ದಿದ್ದರು. ಆದರೆ ಅಷ್ಟರಲ್ಲೇ ಆ ಯುವಕರು ಮೃತರಾಗಿದ್ದ ಕಾರಣ, ಪೊಲೀಸರ ಸಲಹೆಯಂತೆಯೇ ಅವರ ಮೃತ ದೇಹಗಳನ್ನು ಸುಟ್ಟು ಹಾಕಲಾಗಿದೆ ಎನ್ನುವ ಮಾತುಗಳೂ ಕೇಳಿ ಬರುತ್ತಿವೆ. ರಾಜಸ್ಥಾನ ಪೊಲೀಸರು ಆರೋಪಿಗಳಲ್ಲಿ ಕೆಲವರನ್ನು ಬಂಧಿಸಿದ್ದಾರಾದರೂ, ಅವರಿಗೆ ಶಿಕ್ಷೆಯಾಗುವುದರ ಬಗ್ಗೆ ಯಾವ ಭರವಸೆಯೂ ಇಲ್ಲ.
ಈ ಕೊಲೆಯಲ್ಲಿ ರಾಜಸ್ಥಾನ ಸರಕಾರದ ಪಾತ್ರವನ್ನು ನಿರಾಕರಿಸುವಂತಿಲ್ಲ. ಈ ಹಿಂದೆ ರಾಜಸ್ಥಾನದಲ್ಲಿ ಗೋರಕ್ಷಕರು ನಡೆಸಿದ ಹಲವು ದಾಂಧಲೆಗಳನ್ನು ಸರಕಾರ ಗಂಭೀರವಾಗಿ ತೆಗೆದುಕೊಂಡಿರಲೇ ಇಲ್ಲ. 2018ರಲ್ಲಿ ರಕ್ಬರ್ ಖಾನ್ ಎನ್ನುವ ರೈತನನ್ನು ಗೋಸಾಗಾಟದ ಹೆಸರಿನಲ್ಲಿ ಥಳಿಸಿ ಕೊಂದ ಪ್ರಕರಣದಲ್ಲಿ ಆರೋಪಿಗಳಿಗೆ ಯಾವ ಶಿಕ್ಷೆಯೂ ಆಗಿಲ್ಲ. ಈ ಪ್ರಕರಣದ ಬಗ್ಗೆ ಸರಕಾರ ಸಂಪೂರ್ಣ ಆಸಕ್ತಿಯನ್ನು ಕಳೆದುಕೊಂಡಿದೆ ಎಂದು ಸಂತ್ರಸ್ತರ ಪರವಾಗಿ ವಾದಿಸುತ್ತಿರುವ ಸರಕಾರಿ ವಕೀಲರು ಮಾಧ್ಯಮಗಳ ಜೊತೆಗೆ ತೋಡಿಕೊಂಡಿದ್ದಾರೆ. ಆ ವಕೀಲರ ಅಗತ್ಯ ಶುಲ್ಕವನ್ನು ಕೂಡ ಸರಕಾರ ಪಾವತಿಸಿಲ್ಲ ಎಂದು ಅವರು ಆರೋಪಿಸಿದ್ದಾರೆ. ನಕಲಿ ಗೋರಕ್ಷಕರ ಕುರಿತಂತೆ ರಾಜಸ್ಥಾನದಲ್ಲಿರುವ ಕಾಂಗ್ರೆಸ್ ಸರಕಾರದ ಧೋರಣೆಯನ್ನು ಇದು ಹೇಳುತ್ತದೆ. ನಕಲಿ ಗೋರಕ್ಷಕರು ರಾಜಸ್ಥಾನದಲ್ಲೂ ಕೂಡ ರಾಕ್ಷಸರಂತೆ ಹರಡಿಕೊಂಡಿದ್ದಾರೆ. 2017ರಲ್ಲಿ 'ರಾಷ್ಟ್ರೀಯ ಗೋಕುಲ್ ಮಿಶನ್' ಆಯೋಜಿಸಿದ್ದ ರಾಷ್ಟ್ರೀಯ ಗೋ ಸಾಕಣೆ ಕಾರ್ಯಕ್ರಮಕ್ಕೆ ತಮಿಳುನಾಡಿನಿಂದ ಹಾಲು ಕೊಡುವ 50 ರಾಸುಗಳನ್ನು ಸಾಗಿಸಲಾಗಿತ್ತು. ಆದರೆ ರಾಜಸ್ಥಾನದಲ್ಲಿ ಈ ವಾಹನವನ್ನು ತಡೆದ ನಕಲಿ ಗೋರಕ್ಷಕರು ಹಸುಗಳ ಸಮೇತ ವಾಹನಕ್ಕೆ ಬೆಂಕಿ ಹಚ್ಚಿದ್ದಾರೆ. ಸುಟ್ಟ ಗಾಯಗಳಿಂದಾಗಿ ಹಲವು ಹಸುಗಳು ಸಾವನ್ನಪ್ಪಿದ್ದವು. ಈ ಗೋರಕ್ಷಕರು ಗೋವುಗಳ ರಕ್ಷಣೆಯ ಹೆಸರಿನಲ್ಲಿ ಒಂದು ನಿರ್ದಿಷ್ಟ ಸಮುದಾಯದ ಮೇಲೆ ದಾಳಿಯನ್ನು ನಡೆಸುತ್ತಿದ್ದಾರೆ ಮಾತ್ರವಲ್ಲ, ಈ ದೇಶದ ಗೋಸಾಕಣೆಯ ಪರಂಪರೆಯ ಮೇಲೆಯೇ ಅವರು ಯುದ್ಧ ಹೂಡಿದ್ದಾರೆ. ಒಂದು ಕಾಲದಲ್ಲಿ ಹಾಲಿನ ಹೊಳೆಯೇ ಹರಿದ ಭಾರತ ಈ ನಕಲಿ ಗೋರಕ್ಷಕರ ದೆಸೆಯಿಂದಾಗಿ ತೊಟ್ಟು ಹಾಲಿಗಾಗಿ ಪರಿತಪಿಸಬೇಕಾದ ದಿನ ಬರಲಿದೆ. ತೊಟ್ಟು ಹಾಲಿನ ಜೊತೆಗೆ ತೊಟ್ಟು ಮನುಷ್ಯತ್ವಕ್ಕಾಗಿಯೂ ಜನರು ಹಾಹಾಕಾರ ಮಾಡಬೇಕಾದ ದುರ್ದಿನ ಭಾರತಕ್ಕೆ ಒದಗಲಿದೆ. ಅಂತಹದೊಂದು ರೆಂಬಿಗಳ ಭಾರತಕ್ಕೆ ವೇದಿಕೆಯೊಂದು ಸರಕಾರಗಳ ನೇತೃತ್ವದಲ್ಲೇ ಸಿದ್ಧವಾಗತೊಡಗಿದೆ. ಅದರ ಒಂದು ಸಣ್ಣ ಪ್ರಾತ್ಯಕ್ಷಿಕೆಗಳಷ್ಟೇ ಹರ್ಯಾಣ, ರಾಜಸ್ಥಾನದಲ್ಲಿ ನಡೆಯುತ್ತಿವೆ.