ಸಂಸತ್ ಕಲಾಪ ಪಾರದರ್ಶಕವಾಗಿರಲಿ

Update: 2023-02-24 04:05 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ 

Full View

ನರೇಂದ್ರ ಮೋದಿ ನೇತೃತ್ವದ ಬಿಜೆಪಿಯು ಕೇಂದ್ರದಲ್ಲಿ ಅಧಿಕಾರ ಸೂತ್ರವನ್ನು ಹಿಡಿದ ನಂತರ ಸಂಸತ್ತಿನ ಉಭಯ ಸದನಗಳ ಕಲಾಪ ಕಾಟಾಚಾರಕ್ಕೆ ನಡೆಯುತ್ತಿದೆಯೇನೊ ಎಂಬ ಭಾವನೆ ಸಹಜವಾಗಿ ಬರುತ್ತದೆ. ಈ ಬಗ್ಗೆ ರಾಜ್ಯಸಭೆಯ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಬಹಿರಂಗವಾಗಿ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ''ಸದನದಲ್ಲಿ ಜನತೆಯ ಪರವಾಗಿ ಧ್ವನಿಯೆತ್ತಲು ಅವಕಾಶ ಸಿಗುತ್ತಿಲ್ಲ. ಕೇಂದ್ರ ಸರಕಾರ ಸಂಸತ್ತನ್ನು ರಬ್ಬರ್‌ಸ್ಟಾಂಪ್ ಆಗಿ ಮಾಡಿಕೊಂಡಿದೆ'' ಎಂದವರು ಕಟುವಾಗಿ ಟೀಕಿಸಿದ್ದಾರೆ. ಖರ್ಗೆಯವರು ಮಾತ್ರವಲ್ಲ ಇತರ ಪ್ರತಿಪಕ್ಷಗಳ ಸದಸ್ಯರಲ್ಲೂ ಇಂತಹ ಭಾವನೆ ಸಹಜವಾಗಿ ಮೂಡಿದೆ. ಅದರಲ್ಲೂ ಇತ್ತೀಚಿನ ಸಂಸತ್ತಿನ ಉಭಯ ಸದನಗಳ ಕಲಾಪಗಳನ್ನು ಅವಲೋಕಿಸಿದರೆ ಮೋದಿ ಸರಕಾರ ವಿಮರ್ಶೆ ಹಾಗೂ ಟೀಕೆಯನ್ನು ಸಹಿಸಿಕೊಳ್ಳುತ್ತಿಲ್ಲ ಎಂಬುದು ಸ್ಪಷ್ಟವಾಗುತ್ತದೆ.

 ಸರಕಾರದ ವೈಫಲ್ಯಗಳನ್ನು ದಾಖಲೆ ಸಹಿತ ಟೀಕಿಸಿ ಸದನದಲ್ಲಿ ಮಾತಾಡುವ ಪ್ರತಿಪಕ್ಷ ಸದಸ್ಯರ ಮಾತುಗಳನ್ನು ಕಲಾಪದ ಕಡತಗಳಿಂದ ತೆಗೆದು ಹಾಕುವುದು ಸಾಮಾನ್ಯವಾಗಿದೆ. ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರಂಥ ಹಿರಿಯ ನಾಯರಿಗೆ ರಾಜ್ಯಸಭೆಯಲ್ಲಿ ನಿರಾತಂಕವಾಗಿ ಮಾತನಾಡುವ ಅವಕಾಶವನ್ನು ನಿರಾಕರಿಸಲಾಗುತ್ತದೆ. ರಾಜ್ಯಸಭೆಯ ಸಭಾಪತಿಯಾಗಿರುವ ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ಅವರು ತಮ್ಮ ಸ್ಥಾನದ ಘನತೆಯನ್ನು ನಿರ್ಲಕ್ಷಿಸಿ ಅಧಿಕಾರದಲ್ಲಿರುವ ಪಕ್ಷದ ಹಿತರಕ್ಷಕರಂತೆ ವರ್ತಿಸುತ್ತಿರುವುದು ಕೂಡ ಪ್ರತಿಪಕ್ಷಗಳ ಆಕ್ರೋಶಕ್ಕೆ ಕಾರಣವಾಗಿದೆ.ರಾಷ್ಟ್ರಪತಿಗಳ ಭಾಷಣಕ್ಕೆ ವಂದನೆ ಸೂಚಿಸುವ ಗೊತ್ತುವಳಿ ಮೇಲೆ ನಡೆದ ಚರ್ಚೆಯಲ್ಲಿ ಮಲ್ಲಿಕಾರ್ಜುನ ಖರ್ಗೆಯವರು ಪಾಲ್ಗೊಂಡು ಮಾತಾಡುವಾಗ ಸಭಾಪತಿ ಧನ್ಕರ್ ಪದೇ ಪದೇ ಅಡ್ಡಿಯುಂಟು ಮಾಡಿದರು. ಅವರ ಭಾಷಣದ ಕೆಲವು ಭಾಗಗಳನ್ನು ಕಡಿತದಿಂದ ತೆಗೆದುಹಾಕಿಸಿದರು. ರಾಷ್ಟ್ರಪತಿ ಭಾಷಣದ ಮೇಲೆ ನಡೆದ ಚರ್ಚೆಗೆ ಪ್ರಧಾನಿ ಮೋದಿಯವರು ಉತ್ತರಿಸುವಾಗ ಪ್ರತಿಪಕ್ಷ ಸದಸ್ಯರು ಕೆಲ ಸ್ಪಷ್ಟೀಕರಣ ಬಯಸಿ ಎದ್ದು ನಿಂತು ಪ್ರತಿಭಟನೆ ಮಾಡಿದರೂ ಸಂಸತ್ತಿನ ಟಿ.ವಿ. ಕ್ಯಾಮರಾ ಪ್ರತಿಪಕ್ಷಗಳ ಪ್ರತಿರೋಧವನ್ನು ದಾಖಲಿಸಲಿಲ್ಲ. ಇದು ಭಾರತದ ಸಂಸತ್ತಿನ ಇತಿಹಾಸದಲ್ಲಿ ಒಂದು ಕಪ್ಪುಚುಕ್ಕೆ ಎಂದರೆ ತಪ್ಪಾಗದು.

ಅದಾನಿ ಪ್ರಕರಣದಲ್ಲೂ ಸರಕಾರದ, ಅದರಲ್ಲೂ ಪ್ರಧಾನಿ ಮೋದಿಯವರ ಮೇಲೆ ಬಂದ ಗುರುತರ ಆರೋಪಗಳಿಗೆ ಸರಕಾರದಿಂದ ಸ್ಪಷ್ಟವಾದ ಉತ್ತರ ಬರಲಿಲ್ಲ. ಈ ಕುರಿತು ನಡೆದ ಚರ್ಚೆಯಲ್ಲಿ ಪಾಲ್ಗೊಂಡು ಉತ್ತರಿಸಿದ ಪ್ರಧಾನ ಮಂತ್ರಿಗಳು ತಮ್ಮ ಮೇಲೆ ಬಂದಿರುವ ಆರೋಪಗಳಿಗೆ ಉತ್ತರ ನೀಡುವುದನ್ನು ಬಿಟ್ಟು ಪ್ರತಿಪಕ್ಷ ಸದಸ್ಯರನ್ನು ಅದರಲ್ಲೂ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿಯವರನ್ನು ವೈಯಕ್ತಿಕವಾಗಿ ಲೇವಡಿ ಮಾಡಿ ವ್ಯರ್ಥ ಕಾಲಹರಣ ಮಾಡಿದರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂಸತ್ತು ಇರುವುದು ದೇಶದ ಜನಸಾಮಾನ್ಯರ ಜ್ವಲಂತ ಸಮಸ್ಯೆಗಳ ಚರ್ಚೆ ಮತ್ತು ಸಂವಾದಕ್ಕೆ. ಸರಕಾರದ ಲೋಪದೋಷಗಳನ್ನು ಟೀಕಿಸುವುದು ಪ್ರತಿಪಕ್ಷಗಳ ಹೊಣೆಗಾರಿಕೆ. ಪ್ರತಿಪಕ್ಷ ಸದಸ್ಯರು ಅಂಕಿಅಂಶಗಳ ಸಹಿತ ಆಡಳಿತದ ಲೋಪಗಳ ಬಗ್ಗೆ ಪ್ರಶ್ನಿಸಿದಾಗ ಸಮರ್ಪಕ ಉತ್ತರ ನೀಡುವುದು ಸರಕಾರದ ಕರ್ತವ್ಯ. ಅದರ ಬದಲಾಗಿ ಉತ್ತರದಾಯಿತ್ವದ ಹೊಣೆಗಾರಿಕೆಯಿಂದ ನುಣುಚಿಕೊಂಡು ಪ್ರತಿಪಕ್ಷಗಳ ಸದಸ್ಯರ ಬಾಯಿ ಮುಚ್ಚಿಸಲು ಯತ್ನಿಸುವುದು ಸರಕಾರಕ್ಕೆ ಶೋಭೆ ತರುವುದಿಲ್ಲ

ಸಂಸತ್ತಿನ ಕಲಾಪಗಳು ಕ್ರಮಬದ್ಧವಾಗಿ ನಡೆಯಬೇಕು. ಯುಪಿಎ ಸರಕಾರವಿದ್ದಾಗ ಟೆಲಿಕಾಂ ಹಗರಣದ ಸಂಬಂಧ ಬಿಜೆಪಿ ಸದಸ್ಯರು ಪ್ರತಿ ನಿತ್ಯವೂ ಸಂಸತ್ತಿನಲ್ಲಿ ಕೋಲಾಹಲವನ್ನು ಮಾಡಿದರೂ ಅವರ ಪ್ರತಿಭಟನೆಯ ಸ್ವಾತಂತ್ರ್ಯಕ್ಕೆ ಚ್ಯುತಿ ಬಂದಿರಲಿಲ್ಲ. ಇತ್ತೀಚಿನ ತನಿಖೆಯಿಂದ ಟೆಲಿಕಾಂ ಹಗರಣದ ಆರೋಪ ಕೂಡ ನಿರಾಧಾರವಾದುದು ಎಂಬುದು ಬಯಲಾಗಿದೆ.ಅದೇನೇ ಇರಲಿ, ಪ್ರಜಾಪ್ರಭುತ್ವದಲ್ಲಿ ಪ್ರಧಾನ ಮಂತ್ರಿ ಸ್ಥಾನದಲ್ಲಿ ಇರುವವರು ಸಂಸತ್ತಿನಲ್ಲಿ ಸೌಜನ್ಯದಿಂದ ಉತ್ತರ ನೀಡದೆ ನಿರಂಕುಶ ಪ್ರಭುವಿನಂತೆ ವರ್ತಿಸುವುದು ಸರಿಯಲ್ಲ. ಅಲ್ಲದೆ ರಾಜ್ಯಸಭೆಯ ಸಭಾಪತಿ ಕೂಡ ಸರಕಾರದ ಆದೇಶ ಪಾಲಕರಂತೆ ವರ್ತಿಸುತ್ತಿರುವುದು ವಿಷಾದದ ಸಂಗತಿಯಾಗಿದೆ. ಇತ್ತೀಚೆಗೆ ಸದನದ ಕಲಾಪಗಳನ್ನು ತಮ್ಮ ಮೊಬೈಲ್‌ನಲ್ಲಿ ಧ್ವನಿಮುದ್ರಣ ಮಾಡಿಕೊಳ್ಳುತ್ತಿದ್ದರೆಂದು ಕಾಂಗ್ರೆಸ್ ಸದಸ್ಯೆ ರಜನಿ ಪಾಟೀಲ್ ಅವರನ್ನು ಸದನದಿಂದ ಅಮಾನತು ಮಾಡಿರುವ ಧನ್ಕರ್ ಅವರ ಕ್ರಮ ಕೂಡ ಸರಿಯಲ್ಲ.

ರಾಜ್ಯಸಭೆಯ ಕಲಾಪದಲ್ಲಿ ಖರ್ಗೆಯವರ ಭಾಷಣದಲ್ಲಿನ ಸರಕಾರವನ್ನು ಟೀಕಿಸುವ ಮುಖ್ಯವಾದ ಅಂಶಗಳನ್ನು ಕಡತದಿಂದ ತೆಗೆದು ಹಾಕಿದರೆ, ಲೋಕಸಭೆಯಲ್ಲಿ ರಾಹುಲ್ ಗಾಂಧಿಯವರ ಭಾಷಣದ ಹದಿನೆಂಟು ಪ್ರಮುಖ ಪ್ಯಾರಾಗಳನ್ನು ಕಡತದಿಂದ ತಗೆದು ಹಾಕಲಾಯಿತು. ಪ್ರತಿಪಕ್ಷ ಸದಸ್ಯರ ಪ್ರಶ್ನೆಗಳಿಗೆ ಉತ್ತರ ನೀಡಲಾಗದೆ ಅವರ ಭಾಷಣಕ್ಕೆ ಕತ್ತರಿ ಪ್ರಯೋಗ ಮಾಡುವುದು ಭಾರತದ ಸಂಸತ್ತಿನ ಸತ್ಸಂಪ್ರದಾಯಕ್ಕೆ ಅಪಚಾರ ಮಾಡಿದಂತಾಗಿದೆ.

ಭಾರತದ ಸಂಸತ್ತಿನಲ್ಲಿ ಹಿಂದೆಂದೂ ಇಂತಹ ಅಪಚಾರ ನಡೆದಿರಲಿಲ್ಲ. ದೇಶದ ಮೊದಲ ಪ್ರಧಾನ ಮಂತ್ರಿ ಪಂಡಿತ್ ಜವಾಹರಲಾಲ್ ನೆಹರೂ ಅವರ ಕಾಲದಲ್ಲಿ ಅವರ ಸಂಪುಟದ ರಕ್ಷಣಾ ಸಚಿವ ವಿ.ಕೆ.ಕೃಷ್ಣ ಮೆನನ್ ಮೇಲೆ ಒಂದು ಗುರುತರವಲ್ಲದ ಆರೋಪ ಬಂದಾಗಲೂ ಅಂದಿನ ಸರಕಾರ ಜಾರಿಕೊಳ್ಳುವ ಉತ್ತರ ನೀಡಿರಲಿಲ್ಲ. ಆರೋಪ ಬಂದ ತಕ್ಷಣ ಕೃಷ್ಣ ಮೆನನ್ ರಾಜೀನಾಮೆ ನೀಡಿದರು. ಇಂದಿರಾಗಾಂಧಿ, ವಾಜಪೇಯಿ ಮತ್ತು ದೇವೇಗೌಡರು ಪ್ರಧಾನಿ ಯಾಗಿದ್ದಾಗಲೂ ಸಂಸತ್ ಕಲಾಪ ಪಾರದರ್ಶಕ ವಾಗಿತ್ತು. ಆದರೆ ಈಗ ಆ ಪಾರದರ್ಶಕತೆ ಮಾಯವಾಗಿದೆ. ಸಂಸದೀಯ ಜನತಂತ್ರ ವ್ಯವಸ್ಥೆಯಲ್ಲಿ ಸದನದ ಕಲಾಪಗಳನ್ನು ಎದುರಿಸಲು ಅಧಿಕಾರದಲ್ಲಿರುವವರು ಹೆದರಬಾರದು ಅಥವಾ ಅಮಾನತು ಅಸ್ತ್ರ ಬಳಸಿ ಪ್ರತಿಪಕ್ಷ ಸದಸ್ಯರ ಬಾಯಿ ಮುಚ್ಚಿಸಲು ಯತ್ನಿಸಬಾರದು. ಬಹುಮತವಿದೆಯೆಂದು ನಿರಂಕುಶವಾಗಿ ವರ್ತಿಸಬಾರದು. ಸಂಸತ್ ಕಲಾಪ ಶಿಸ್ತುಬದ್ಧವಾಗಿ ಪಾರದರ್ಶಕ ವಾಗಿ ನಡೆಯುವಂತೆ ಸರಕಾರ ನೋಡಿಕೊಳ್ಳಬೇಕು.

Similar News