ವಿಶ್ವಬ್ಯಾಂಕ್ ಮುಖ್ಯಸ್ಥ ಹುದ್ದೆಗೆ ಮಾಸ್ಟರ್‌ಕಾರ್ಡ್ ಮಾಜಿ ಸಿಇಒ ಅಜಯ್ ಬಂಗಾ: ಬೈಡನ್ ನಾಮನಿರ್ದೇಶನ

Update: 2023-02-24 05:30 GMT

ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಜೋ ಬೈಡನ್ ಅವರು ಮಾಸ್ಟರ್ ಕಾರ್ಡ್‌ನ ಮಾಜಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಜಯ್ ಬಂಗಾ ಅವರನ್ನು ವಿಶ್ವಬ್ಯಾಂಕ್ ಮುಖ್ಯಸ್ಥರ ಹುದ್ದೆಗೆ ನಾಮನಿರ್ದೇಶನ ಮಾಡಿದ್ದಾರೆ. ಪ್ರಸ್ತುತ ಮುಖ್ಯಸ್ಥರಾಗಿರುವ ಡೇವಿಡ್ ಮಲ್ಪಾಸ್ ಅವರು ಅವಧಿ ಪೂರ್ವದಲ್ಲೇ ಹುದ್ದೆ ತೊರೆಯುವುದಾಗಿ ಪ್ರಕಟಿಸಿದ ಬೆನ್ನಲ್ಲೇ ಬೈಡನ್ ಈ ನೇಮಕ ಘೋಷಿಸಿದ್ದಾರೆ.

ಈ ಅಭಿವೃದ್ಧಿ ಸಾಲ ಸಂಸ್ಥೆ ಮಾರ್ಚ್ 29ರವರೆಗೆ ಈ ಹುದ್ದೆಗೆ ಅಭ್ಯರ್ಥಿಗಳ ನಾಮಪತ್ರಗಳನ್ನು ಸ್ವೀಕರಿಸಲಿದ್ದು, ಮಹಿಳಾ ಅಭ್ಯರ್ಥಿಗಳನ್ನು ಪ್ರಬಲವಾಗಿ ಉತ್ತೇಜಿಸಲಾಗುತ್ತಿದೆ ಎಂದು ಈ ಹಣಕಾಸು ಸಂಸ್ಥೆ ಪ್ರಕಟಿಸಿದೆ.

ಸಾಮಾನ್ಯವಾಗಿ ವಿಶ್ವಬ್ಯಾಂಕ್ ಅಧ್ಯಕ್ಷ ಹುದ್ದೆಯನ್ನು ಅಮೆರಿಕನ್ನರು ಅಲಂಕರಿಸುತ್ತಾರೆ ಹಾಗೂ ಐಎಂಎಫ್ ಮುಖ್ಯಸ್ಥರಾಗಿ ಯೂರೋಪಿಯನ್ನರನ್ನು ನೇಮಕ ಮಾಡಲಾಗುತ್ತದೆ.

63 ವರ್ಷ ವಯಸ್ಸಿನ ಭಾರತೀಯ ಮೂಲದ ಅಮೆರಿಕನ್ ಪ್ರಜೆಯಾಗಿರುವ ಬಂಗಾ, ಈಕ್ವಿಟಿ ಸಂಸ್ಥೆ ಜನರಲ್ ಅಟ್ಲಾಂಟಿಕ್‌ನ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇದಕ್ಕೂ ಮುನ್ನ ಮಾಸ್ಟರ್ ಕಾರ್ಡ್ ಸಿಇಒ ಆಗಿ ಅವರು ಕಾರ್ಯ ನಿರ್ವಹಿಸಿದ್ದರು.

"ಹವಾಮಾನ ಬದಲಾವಣೆ ಸೇರಿದಂತೆ ನಮ್ಮ ಕಾಲಘಟ್ಟದ ತುರ್ತು ಸವಾಲುಗಳನ್ನು ನಿಭಾಯಿಸುವ ನಿಟ್ಟಿನಲ್ಲಿ ಸರ್ಕಾರಿ- ಖಾಸಗಿ ಸಂಪನ್ಮೂಲಗಳನ್ನು ಕ್ರೋಢೀಕರಿಸುವ ನಿಟ್ಟಿನಲ್ಲಿ ಬಂಗಾ ವ್ಯಾಪಕ ಅನುಭವ ಹೊಂದಿದ್ದಾರೆ" ಎಂದು ಬೈಡೇನ್ ಹೇಳಿಕೆ ನೀಡಿದ್ದಾರೆ.

Similar News