ವಿಶ್ವಬ್ಯಾಂಕ್ ನ ಸಾರಥ್ಯ ವಹಿಸಲು‌ ಅಮೆರಿಕ ಅಧ್ಯಕ್ಷ ಜೋ ಬೈಡನ್‌ ನಾಮಕರಣ ಮಾಡಿದ ಅಜಯ್ ಬಂಗಾ ಯಾರು ಗೊತ್ತೇ?

Update: 2023-02-24 11:21 GMT

ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಜೋ ಬೈಡನ್ ಅವರು ವಿಶ್ವಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ಭಾರತೀಯ-ಅಮೆರಿಕನ್ ಉದ್ಯಮ ಕಾರ್ಯನಿರ್ವಾಹಕ ಅಜಯ್ ಬಂಗಾ ಅವರನ್ನು ಗುರುವಾರ ನಾಮ ನಿರ್ದೇಶನ ಮಾಡಿದ್ದಾರೆ. ವಿಶ್ವಬ್ಯಾಂಕ್ ನಿರ್ದೇಶಕರ ಮಂಡಳಿಯು ದೃಢಪಡಿಸಿದರೆ ಬಂಗಾ (63) ಎರಡು ಉನ್ನತ ಜಾಗತಿಕ ಹಣಕಾಸು ಸಂಸ್ಥೆಗಳ (ವಿಶ್ವಬ್ಯಾಂಕ್ ಮತ್ತು ಐಎಂಎಫ್) ಪೈಕಿ ಯಾವುದೇ ಒಂದರ ಮೊದಲ ಭಾರತೀಯ-ಅಮೆರಿಕನ್ ಅಧ್ಯಕ್ಷರಾಗಲಿದ್ದಾರೆ.

ವಿಶ್ವಬ್ಯಾಂಕ್ ಗ್ರೂಪ್ ನ ಹಾಲಿ ಅಧ್ಯಕ್ಷ ಡೇವಿಡ್ ಮಲ್ಪಾಸ್ ಅವರು ಹುದ್ದೆಯಿಂದ ಕೆಳಗಿಳಿಯುವುದಾಗಿ ಕಳೆದ ವಾರ ಪ್ರಕಟಿಸಿದ್ದರು. ತನ್ನ ಐದು ವರ್ಷಗಳ ಅಧಿಕಾರಾವಧಿ ಅಂತ್ಯಗೊಳ್ಳಲು ಸುಮಾರು ಒಂದು ವರ್ಷ ಮೊದಲೇ, ಜೂ.30ರಂದು ಅವರು ಅಧಿಕಾರವನ್ನು ತೊರೆಯಲಿದ್ದಾರೆ. 2019ರಲ್ಲಿ ಅಮೆರಿಕದ ಆಗಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮೆಲ್ಪಾಸ್ರನ್ನು ವಿಶ್ವಬ್ಯಾಂಕ್ ಅಧ್ಯಕ್ಷತೆಗೆ ಆಯ್ಕೆ ಮಾಡಿದ್ದರು.

ಬಂಗಾ ಅವರ ದೃಢೀಕರಣವು ವಿಶ್ವಬ್ಯಾಂಕ್ ಕಾರ್ಯನಿರ್ವಾಹಕ ನಿರ್ದೇಶಕರ ಮತವನ್ನು ಆಧರಿಸಿರುತ್ತದೆ. ಆದರೆ ವಿಶ್ವಬ್ಯಾಂಕ್ ನಲ್ಲಿ ಅಮೆರಿಕವು ಅತ್ಯಂತ ದೊಡ್ಡ ಪಾಲುದಾರನಾಗಿರುವುದರಿಂದ ಸಾಮಾನ್ಯವಾಗಿ ಅದು ನಾಮನಿರ್ದೇಶನ ಮಾಡಿರುವವರೇ ಅಧ್ಯಕ್ಷರಾಗಿ ಆಯ್ಕೆಯಾಗುತ್ತಾರೆ. ವಿಶ್ವಬ್ಯಾಂಕ್ ಅಧ್ಯಕ್ಷರು ಇಂಟರ್ನ್ಯಾಷನಲ್ ಬ್ಯಾಂಕ್ ಫಾರ್ ರಿಕನ್ಸ್ಟ್ರಕ್ಷನ್ ಆ್ಯಂಡ್ ಡೆವಲಪ್ಮೆಂಟ್ (IBRD)ನ ಪದನಿಮಿತ್ತ ಅಧ್ಯಕ್ಷರೂ ಆಗಿರುತ್ತಾರೆ. ಅವರು ಇಂಟರ್ನ್ಯಾಷನಲ್ ಫೈನಾನ್ಸ್ ಕಾರ್ಪೊರೇಷನ್, ಮಲ್ಟಿಲ್ಯಾಟರಲ್ ಇನ್ವೆಸ್ಟ್ಮೆಂಟ್ ಗ್ಯಾರಂಟಿ ಏಜೆನ್ಸಿ ಇತ್ಯಾದಿಗಳಂತಹ ವಿಶ್ವಸಂಸ್ಥೆಯ ಇತರ ಸಂಸ್ಥೆಗಳಿಗೂ ಅಧ್ಯಕ್ಷರಾಗಿರುತ್ತಾರೆ.

ಯಾರು ಈ ಅಜಯ ಬಂಗಾ?
ಪುಣೆಯಲ್ಲಿ ಹುಟ್ಟಿ ಬೆಳೆದ ಬಂಗಾ ಹೈದರಾಬಾದ್ ಪಬ್ಲಿಕ್ ಸ್ಕೂಲ್ ನಲ್ಲಿ ಶಾಲಾ ಶಿಕ್ಷಣದ ಬಳಿಕ ದಿಲ್ಲಿ ವಿವಿಯ ಸೈಂಟ್ ಸ್ಟೆಫನ್ಸ್ ಕಾಲೇಜಿನಿಂದ ಅರ್ಥಶಾಸ್ತ್ರದಲ್ಲಿ ಪದವಿಯನ್ನು ಗಳಿಸಿದ್ದರು ಮತ್ತು ನಂತರ ಐಐಎಂ-ಅಹ್ಮದಾಬಾದ್ ನಿಂದ ಎಂಬಿಎ ಪದವಿಯನ್ನು ಪಡೆದಿದ್ದರು.

1981ರಲ್ಲಿ ನೆಸ್ಲೆಯೊಂದಿಗೆ ತನ್ನ ವೃತ್ತಿಜೀವನವನ್ನು ಆರಂಭಿಸಿದ್ದ ಬಂಗಾ, ಬಳಿಕ ಪೆಪ್ಸಿಕೋಗೆ ಸೇರಿದ್ದರು, ನಂತರ ಸಿಟಿಗ್ರೂಪ್ಗೆ ಸೇರ್ಪಡೆಗೊಂಡಿದ್ದರು. ಅವರು ಹಣಕಾಸು ಸೇವೆಗಳ ಸಂಸ್ಥೆ ಮಾಸ್ಟರ್ ಕಾರ್ಡ್ ನ ಅಧ್ಯಕ್ಷ ಹಾಗೂ ಸಿಇಒ ಆಗಿಯೂ ಸೇವೆ ಸಲ್ಲಿಸಿದ್ದಾರೆ. 2016ರಲ್ಲಿ ಅವರು ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದರು.
ಬಂಗಾ ಪ್ರಸ್ತುತ ಖಾಸಗಿ ಈಕ್ವಿಟಿ ಕಂಪನಿಯಾಗಿರುವ ಜನರಲ್ ಅಟ್ಲಾಂಟಿಕ್ನ ಉಪಾಧ್ಯಕ್ಷರಾಗಿದ್ದಾರೆ.

‘ಬಂಗಾ ಇಂಟರ್ನ್ಯಾಷನಲ್ ಚೇಂಬರ್ ಆಫ್ ಕಾಮರ್ಸ್ ನ ಗೌರವಾಧ್ಯಕ್ಷರಾಗಿದ್ದಾರೆ ಮತ್ತು ಅಮೆರಿಕನ್ ರೆಡ್ ಕ್ರಾಸ್, ಕ್ರಾಫ್ಟ್ ಫುಡ್ಸ್ ಹಾಗೂ ಡೋ ಇನ್ಕಾರ್ಪೊರೇಷನ್ ನ ಆಡಳಿತ ಮಂಡಳಿಗಳ ಸದಸ್ಯರೂ ಆಗಿದ್ದಾರೆ. ಅವರು ಪಾರ್ಟ್ನರ್ಶಿಪ್ ಫಾರ್ ಸೆಂಟ್ರಲ್ ಅಮೆರಿಕಾದ ಸಹ ಅಧ್ಯಕ್ಷರಾಗಿ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರೊಂದಿಗೆ ನಿಕಟವಾಗಿ ಕಾರ್ಯಾಚರಿಸಿದ್ದಾರೆ. ಅವರು ಭಾರತ-ಅಮೆರಿಕ ವ್ಯೆಹಾತ್ಮಕ ಪಾಲುದಾರಿಕೆ ವೇದಿಕೆಯ ಸ್ಥಾಪಕ ಟ್ರಸ್ಟಿ, ಅಮೆರಿಕ-ಚೀನಾ ಸಂಬಂಧಗಳ ಕುರಿತ ರಾಷ್ಟ್ರೀಯ ಸಮಿತಿಯ ಮಾಜಿ ಸದಸ್ಯರು ಹಾಗೂ ಅಮೆರಿಕನ್ ಇಂಡಿಯಾ ಪ್ರತಿಷ್ಠಾನದ ಚೇರಮನ್ ಎಮಿರೇಟಸ್ ಕೂಡ ಆಗಿದ್ದಾರೆ’ ಎಂದು ಶ್ವೇತಭವನವು ಪ್ರಕಟಣೆಯಲ್ಲಿ ತಿಳಿಸಿದೆ.

ಬಂಗಾ ರಾಷ್ಟ್ರೀಯ ಸೈಬರ್ ಭದ್ರತೆಯನ್ನು ಹೆಚ್ಚಿಸುವ ಕುರಿತು ಅಧ್ಯಕ್ಷ ಒಬಾಮಾರ ಆಯೋಗದ ಸದಸ್ಯರೂ ಆಗಿದ್ದರು. 

ಈ ನಡುವೆ ಬೈಡನ್ ಅವರು ಹೇಳಿಕೆಯೊಂದರಲ್ಲಿ, ‘ಇತಿಹಾಸದ ಈ ನಿರ್ಣಾಯಕ ಘಳಿಗೆಯಲ್ಲಿ ವಿಶ್ವಬ್ಯಾಂಕ್ ಅನ್ನು ಸಮರ್ಥವಾಗಿ ಮುನ್ನಡೆಸಲು ಬಂಗಾ ಸಜ್ಜಾಗಿದ್ದಾರೆ. ಭಾರತದಲ್ಲಿ ಹುಟ್ಟಿ ಬೆಳೆದಿರುವ ಅವರು ಅಭಿವೃದ್ಧಿಶೀಲ ದೇಶಗಳು ಹೊಂದಿರುವ ಅವಕಾಶಗಳು ಮತ್ತು ಎದುರಿಸುತ್ತಿರುವ ಸವಾಲುಗಳ ಬಗ್ಗೆ ಹಾಗೂ ಬಡತನವನ್ನು ಕಡಿಮೆ ಮಾಡುವ ಮತ್ತು ಸಮೃದ್ಧಿಯನ್ನು ಹೆಚ್ಚಿಸುವ ವಿಶ್ವಬ್ಯಾಂಕ್ ನ ಮಹತ್ವಾಕಾಂಕ್ಷೆಯ ಕಾರ್ಯಸೂಚಿಯನ್ನು ಹೇಗೆ ಪೂರೈಸಬಹುದು ಎನ್ನುವುದರ ಬಗ್ಗೆ ಅನನ್ಯ ದೃಷ್ಟಿಕೋನವನ್ನು ಹೊಂದಿದ್ದಾರೆ’ ಎಂದು ಬಣ್ಣಿಸಿದ್ದಾರೆ.

ಪ್ರತ್ಯೇಕ ಹೇಳಿಕೆಯಲ್ಲಿ ಅಮೆರಿಕದ ವಿತ್ತ ಸಚಿವೆ ಜಾನೆಟ್ ಯೆಲೆನ್ ಅವರು, ಬಂಗಾ ಅವರ ಪ್ರಯತ್ನಗಳು ಬ್ಯಾಂಕಿಂಗ್ ಸೌಲಭ್ಯ ಹೊಂದಿರದ 50 ಕೋಟಿ ಜನರನ್ನು ಡಿಜಿಟಲ್ ಆರ್ಥಿಕತೆಯೊಳಗೆ ತರುವಲ್ಲಿ ನೆರವಾಗಿವೆ. ಈ ಎಲ್ಲ ವರ್ಷಗಳಲ್ಲಿ ಅವರು ಡಿಜಿಟಲ್ ವಿಧಾನಗಳ ಮೂಲಕ ಬಡವರ ಆರ್ಥಿಕ ಸೇರ್ಪಡೆಗೆ ಆಗಾಗ್ಗೆ ಒತ್ತು ನೀಡಿದ್ದಾರೆ ಎಂದು ಹೇಳಿದ್ದಾರೆ.

Similar News