​'ಅಪ್ಪ' ನಿವೃತ್ತರಾಗುವುದಿಲ್ಲ!

Update: 2023-03-01 03:52 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

'ಅಮ್ಮ ನಿವೃತ್ತಳಾಗುವುದಿಲ್ಲ' ಹಲವು ಪ್ರದರ್ಶನಗಳನ್ನು ಕಂಡ ಕನ್ನಡ ನಾಟಕ. ಇದು ಮನೆ ಮನೆಯ ಕತೆ. ಎಲ್ಲರ ಮನೆಯಲ್ಲಿ ಅಪ್ಪನಿಗೆ ನಿವೃತ್ತಿಯ ಬದುಕೊಂದು ಇರುತ್ತದೆ. ಆದರೆ ಅಮ್ಮನಿಗೆ ಆ ಅವಕಾಶವಿಲ್ಲ. ಆದರೆ ರಾಜಕೀಯಕ್ಕೆ ಇದು ಅನ್ವಯಿಸುವುದಿಲ್ಲ ಅಥವಾ ಅಲ್ಲಿ ಈ ನಿವೃತ್ತಿಯ ಕತೆ ತಿರುವು ಮುರುವಾಗಿದೆ. ಇಲ್ಲಿ ಯಾವ ಅಪ್ಪಂದಿರೂ ರಾಜಕೀಯವಾಗಿ ನಿವೃತ್ತರಾಗುವುದಿಲ್ಲ. ತಮ್ಮ ರಾಜಕೀಯ ಅವಧಿ ಮುಗಿದ ಬೆನ್ನಿಗೇ, ತಮ್ಮ ಮಕ್ಕಳ ರಾಜಕೀಯ ಏಳಿಗೆಗಾಗಿ ಅವರು ಒಳಗಿನಿಂದ ದುಡಿಯಬೇಕಾಗುತ್ತದೆ. ಆದುದರಿಂದಲೇ, ಬಿಜೆಪಿಯ ನಾಯಕರು ಪದೇ ಪದೇ ಸಮಾರಂಭಗಳನ್ನು ಹಮ್ಮಿಕೊಂಡು ಯಡಿಯೂರಪ್ಪ ಅವರ ಬಾಯಿಯಿಂದ ''ರಾಜಕೀಯವಾಗಿ ನಿವೃತ್ತನಾಗಿದ್ದೇನೆ'' ಎಂದು ಹೇಳಿಸುತ್ತಿದ್ದಾರಾದರೂ, ರಾಜ್ಯದ ಜನರು ಅವರ ನಿವೃತ್ತಿಯನ್ನು ನಂಬುತ್ತಿಲ್ಲ. ವರ್ಷದ ಹಿಂದೆಯೇ 'ರಾಜಕೀಯದಿಂದ ನಿವೃತ್ತನಾಗುತ್ತಿದ್ದೇನೆ' ಎಂದು ಯಡಿಯೂರಪ್ಪ ಘೋಷಿಸಿದ್ದಾರಾದರೂ, ಬಿಜೆಪಿಯೇ ಸ್ವತಃ ಅದನ್ನು ನಂಬಿದಂತಿಲ್ಲ. ಆ ಕಾರಣಕ್ಕೇ ಇರಬೇಕು, ಇದೀಗ ಮತ್ತೆ ಮತ್ತೆ ವೇದಿಕೆಯನ್ನು ನಿರ್ಮಿಸಿ ಯಡಿಯೂರಪ್ಪ ಅವರ ನಿವೃತ್ತಿಯನ್ನು ನಾಯಕರು ಘೋಷಿಸುತ್ತಿದ್ದಾರೆ. ಯಡಿಯೂರಪ್ಪ ಅವರ ಮಾತುಗಳಿಗೆ ಸ್ವಯಂ ಪ್ರಧಾನಿ ನರೇಂದ್ರ ಮೋದಿಯವರೇ ಭಾವುಕರಾದಂತೆ ನಟಿಸಿ, ಅವರ ನಿವೃತ್ತಿಯನ್ನು ರಾಜ್ಯದ ಜನರಿಗೆ ಸ್ಪಷ್ಟ ಪಡಿಸುತ್ತಿದ್ದಾರೆ. ''ನನ್ನ ನಿವೃತ್ತಿಯ ಕುರಿತಂತೆ ಲಿಂಗಾಯತ ಸಮುದಾಯ ತಪ್ಪು ತಿಳಿಯಬಾರದು. ನಾನೇ ಸ್ವಯಂಪ್ರೇರಿತನಾಗಿ ನಿವೃತ್ತನಾಗುತ್ತಿದ್ದೇನೆ. ನನಗೆ ಯಾವುದೇ ಒತ್ತಡ ಇಲ್ಲ'' ಎಂದು ಯಡಿಯೂರಪ್ಪ ತಮ್ಮ ಭಾಷಣದಲ್ಲಿ ಹೇಳಿದ್ದಾರೆ. ಲಿಂಗಾಯತ ಸಮುದಾಯ ತಪ್ಪು ತಿಳಿಯುವ ಸಾಧ್ಯತೆಯನ್ನು ಈ ಮೂಲಕ ಅವರು ಬಿಜೆಪಿಯ ವರಿಷ್ಠರಿಗೆ ಪ್ರಕಟಪಡಿಸಿದ್ದಾರೆ.

ಯಡಿಯೂರಪ್ಪ ಅವರ ನಿವೃತ್ತಿಯ ಕುರಿತಂತೆ ಬಿಜೆಪಿಯೊಳಗೆ ಪಾಪಪ್ರಜ್ಞೆ ಮತ್ತು ಆತಂಕಗಳಿವೆ. ಆ ಆತಂಕಗಳನ್ನು ನಿವಾರಿಸುವ ಪ್ರಯತ್ನವನ್ನು ಬಿಜೆಪಿಯೊಳಗಿರುವ ನಾಯಕರು ನಡೆಸುತ್ತಿದ್ದಾರೆ. ಶೂನ್ಯದಲ್ಲಿದ್ದ ಬಿಜೆಪಿಯನ್ನು ರಾಜ್ಯದಲ್ಲಿ ಅಧಿಕಾರದವರೆಗೆ ಕೈ ಹಿಡಿದು ಮುನ್ನಡೆಸಿರುವುದು ಯಡಿಯೂರಪ್ಪ. ಅವರ ರಾಜಕೀಯ ತಂತ್ರಗಾರಿಕೆಯ ಪರಿಣಾಮವಾಗಿಯೇ ದಕ್ಷಿಣ ಭಾರತದ ರಾಜ್ಯವೊಂದರಲ್ಲಿ ಬಿಜೆಪಿ ಮೊದಲ ಬಾರಿಗೆ ಅಧಿಕಾರ ಹಿಡಿಯುವಂತಾಯಿತು. ಆದರೆ ಬಿಜೆಪಿಯನ್ನು ಅಧಿಕಾರಕ್ಕೆ ತರುವ ಸಂದರ್ಭದಲ್ಲಿ ತನ್ನ ಪಕ್ಷದೊಳಗಿರುವ ನಾಯಕರ ಜೊತೆಗೇ ಅವರು ಗುದ್ದಾಡಬೇಕಾಯಿತು. ಬಿಜೆಪಿ ಅಧಿಕಾರಕ್ಕೆ ಬಂದರೆ ಯಡಿಯೂರಪ್ಪ ಮುಖ್ಯಮಂತ್ರಿಯಾಗುತ್ತಾರೆ ಎನ್ನುವ ಒಂದೇ ಕಾರಣದಿಂದ ರಾಜ್ಯ ಬಿಜೆಪಿಯೊಳಗಿರುವ ಬ್ರಾಹ್ಮಣ್ಯ ಲಾಬಿ ಅವರ ಪ್ರಯತ್ನದ ವಿರುದ್ಧ ಮಸಲತ್ತು ನಡೆಸಿತು. ದಿವಂಗತ ಅನಂತಕುಮಾರ್ ಅವರು ಅದರ ನೇತೃತ್ವ ವಹಿಸಿದ್ದರು. ಯಡಿಯೂರಪ್ಪ ವಿರುದ್ಧ ಆರೆಸ್ಸೆಸ್ ಅಕ್ಷರಶಃ ಸಂಚಿನ ಮನೆಯಾಗಿತ್ತು. ಈ ಸಂದರ್ಭದಲ್ಲಿ ಯಡಿಯೂರಪ್ಪ ಬೆನ್ನಿಗೆ ಲಿಂಗಾಯತ ಶಕ್ತಿ ಇಲ್ಲದೇ ಇದ್ದರೆ ಅನಂತಕುಮಾರ್ ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಕಟವಾಗಿ ಬಿಡುತ್ತಿದ್ದರು.

ಮುಖ್ಯಮಂತ್ರಿಯಾದ ಬಳಿಕವೂ ಯಡಿಯೂರಪ್ಪ ಅವರಿಗೆ ನೆಮ್ಮದಿಯಿಂದ ಆಡಳಿತ ನಡೆಸುವ ಅವಕಾಶವನ್ನು ಬಿಜೆಪಿಯೊಳಗಿರುವ ನಾಯಕರು ನೀಡಲಿಲ್ಲ. ಆರಂಭದಲ್ಲಿ ಗಣಿ ರೆಡ್ಡಿ ಸಹೋದರರ ಮೂಲಕ ಯಡಿಯೂರಪ್ಪ ಅವರಿಗೆ ಭೀಕರ ಕಿರುಕುಳವನ್ನು ನೀಡಲಾಯಿತು. ಆನಂತರ ರೇಣುಕಾಚಾರ್ಯ ತಂಡದ ಮೂಲಕ ಯಡಿಯೂರಪ್ವ ವಿರುದ್ಧ ಬಂಡಾಯವೇರ್ಪಟ್ಟಿತು. ಎರಡೆರಡು ಬಾರಿ ಅತ್ಯಂತ ಅಮಾನವೀಯ ರೀತಿಯಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿ ಹುದ್ದೆಯನ್ನು ತ್ಯಜಿಸಬೇಕಾಯಿತು. ಶೆಟ್ಟರ್, ಸದಾನಂದಗೌಡ, ಬೊಮ್ಮಾಯಿ ಮೊದಲಾದ ಅನಿರೀಕ್ಷಿತ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳು ಬಿಜೆಪಿಯಲ್ಲಿ ಸೃಷ್ಟಿಯಾದದ್ದು ಯಡಿಯೂರಪ್ಪ ಅವರನ್ನು ಅಧಿಕಾರದಿಂದ ಹೊರಗಿಡುವ ಭಾಗವಾಗಿ. ಒಂದು ಬಾರಿ ಬಿಜೆಪಿಯನ್ನು ತೊರೆದು ಕೆಜೆಪಿಯನ್ನು ಕಟ್ಟಿ, ರಾಜ್ಯದಲ್ಲಿ ಬಿಜೆಪಿಯ ಹೀನಾಯ ಸೋಲಿಗೆ ಯಡಿಯೂರಪ್ಪ ಕಾರಣರಾದರು. ಯಡಿಯೂರಪ್ಪ ಇಲ್ಲದೆ ರಾಜ್ಯದಲ್ಲಿ ಬಿಜೆಪಿ ಅಧಿಕಾರ ಹಿಡಿಯುವುದು ಕಷ್ಟವೆನ್ನುವುದು ಅರ್ಥ ಮಾಡಿಕೊಂಡ ದಿಲ್ಲಿ ವರಿಷ್ಠರು ಅವರನ್ನು ಮರಳಿ ಪಕ್ಷಕ್ಕೆ ಕರೆಸಿಕೊಂಡರು. ಬಿಜೆಪಿ ವಾಮಮಾರ್ಗದಿಂದ ಮತ್ತೆ ರಾಜ್ಯದಲ್ಲಿ ಅಧಿಕಾರ ಹಿಡಿಯಿತು. ಯಡಿಯೂರಪ್ಪ ಮತ್ತೆ ಮುಖ್ಯಮಂತ್ರಿಯಾದರಾದರೂ, ಅವರು ಸುಗಮವಾಗಿ ಆಡಳಿತ ನಡೆಸದಂತೆ ದಿಲ್ಲಿಯ ವರಿಷ್ಠರು ಕೈಗಳನ್ನು ಕಟ್ಟಿ ಹಾಕಿದರು. ಸೂಕ್ತ ಸಮಯದಲ್ಲಿ ನೆರೆಪರಿಹಾರ ಒದಗಿಸದೆ, ರಾಜ್ಯಕ್ಕೆ ಸಲ್ಲಬೇಕಾದ ಅನುದಾನಗಳನ್ನು ನೀಡದೆ ಯಡಿಯೂರಪ್ಪ ಅವರನ್ನು ಸತಾಯಿಸತೊಡಗಿದರು. ಎರಡೆರಡು ಬಾರಿ ದಿಲ್ಲಿಗೆ ಭೇಟಿ ನೀಡಿದರೂ, ಪ್ರಧಾನಿಯವರ ದರ್ಶನವಾಗದೆ ಅವಮಾನದಿಂದ ವಾಪಸಾದರು.

ರಾಜ್ಯದ ಸಂಸದರೇ ''ಕರ್ನಾಟಕಕ್ಕೆ ಪರಿಹಾರದ ಅಗತ್ಯವಿಲ್ಲ'' ಎಂಬ ಹೇಳಿಕೆ ನೀಡಿ ಮುಜುಗರ ಸೃಷ್ಟಿಸಿದರು. ಆರೆಸ್ಸೆಸ್‌ನ ಕಿರುಕುಳಕ್ಕೆ ರೊಚ್ಚಿಗೆದ್ದ ಯಡಿಯೂರಪ್ಪ ಬಹಿರಂಗವಾಗಿಯೇ ತಮ್ಮ ಅಸಮಾಧಾನ ಹೊರಗೆಡಹಿದರು. ಇವೆಲ್ಲದರಿಂದ ಅವರು ಬಿಜೆಪಿಯೊಳಗೆ ತನ್ನ ಅವಧಿ ಮುಗಿಯುತ್ತಿರುವುದನ್ನು ಮನಗಂಡರು. ಆದುದರಿಂದ, ಮುಖ್ಯಮಂತ್ರಿಯಾಗಿರುವಾಗಲೇ, ತನ್ನ ಪುತ್ರನನ್ನು ಬಿಜೆಪಿಯೊಳಗೆ ಬೆಳೆಸತೊಡಗಿದರು. ಇದು ಬಿಜೆಪಿಯೊಳಗಿರುವ ನಾಯಕರನ್ನು ಇನ್ನಷ್ಟು ಆತಂಕಕ್ಕೆ ತಳ್ಳಿತು. ಯಡಿಯೂರಪ್ಪ ತನ್ನ ಉತ್ತರಾಧಿಕಾರಿಯನ್ನು ಸಿದ್ಧಗೊಳಿಸುತ್ತಿರುವುದು ಆರೆಸ್ಸೆಸ್ ಗಮನಕ್ಕೆ ಬಂತು. ಇನ್ನೂ ಯಡಿಯೂರಪ್ಪ ಅಧಿಕಾರದಲ್ಲಿ ಮುಂದುವರಿದರೆ, ಶೀಘ್ರದಲ್ಲೇ ಅವರ ಪುತ್ರ ಪಕ್ಷದಲ್ಲಿ ಬೇರಿಳಿಸುತ್ತಾನೆ ಎನ್ನುವ ಆತಂಕದಿಂದ, ಭ್ರಷ್ಟಾಚಾರವನ್ನು ಮುಂದಿಟ್ಟು ಮತ್ತೆ ಯಡಿಯೂರಪ್ಪರ ಬೆನ್ನು ಹತ್ತಿತ್ತು. ಐಟಿ ದಾಳಿಯ ಬೆದರಿಕೆಯನ್ನು ಒಡ್ಡಿ ಯಡಿಯೂರಪ್ಪ ಅವರನ್ನು ಕೊನೆಗೂ ಅಧಿಕಾರದಿಂದ ಕೆಳಗಿಳಿಸಲಾಯಿತು.

ಬೇರೆ ಪಕ್ಷದಿಂದ ಬಂದರೂ, ಪ್ರತಿಭೆಯ ಆಧಾರದ ಮೇಲೆ ಸಿದ್ದರಾಮಯ್ಯ ಅವರಿಗೆ ಕಾಂಗ್ರೆಸ್‌ನಲ್ಲಿ ಐದು ವರ್ಷ ಪೂರ್ಣ ಪ್ರಮಾಣದಲ್ಲಿ ಅಧಿಕಾರ ಅನುಭವಿಸಲು ಸಾಧ್ಯವಾಯಿತು. ಆದರೆ, ತಾನೇ ಕಟ್ಟಿದ ಬಿಜೆಪಿಯೊಳಗೆ ಪೂರ್ಣಾವಧಿ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸುವ ಅವಕಾಶ ಯಡಿಯೂರಪ್ಪ ಅವರಿಗೆ ಸಿಗಲಿಲ್ಲ. ಇದು ಯಡಿಯೂರಪ್ಪ ಪಾಲಿಗೆ ಆರದ ಗಾಯ. ಆದುದರಿಂದಲೇ, ಬಿಜೆಪಿಯೊಳಗಿರುವ ಬ್ರಾಹ್ಮಣ್ಯ ಶಕ್ತಿಯ ವಿರುದ್ಧ ಅವರ ಸದ್ಯಕ್ಕೆ ನಿಲ್ಲುವಂತೆ ಕಾಣುವುದಿಲ್ಲ. ನೇರ ರಾಜಕಾರಣದಿಂದ ನಿವೃತ್ತರಾಗಿ, ಮಗನ ಮೂಲಕ ಬಿಜೆಪಿಯೊಳಗಿರುವ ಬ್ರಾಹ್ಮಣ್ಯ ಲಾಬಿಗಳ ಜೊತೆಗೆ ಗುದ್ದಾಡುವ ಎಲ್ಲ ಸಾಧ್ಯತೆಗಳು ಕಾಣುತ್ತಿವೆ. ಆರೆಸ್ಸೆಸ್ ಈಗಾಗಲೇ ಹಳೆ ತಲೆಗಳನ್ನೆಲ್ಲ ಬದಿಗೆ ಸರಿಸಿ, ರಾಜ್ಯದಲ್ಲಿ ಬ್ರಾಹ್ಮಣ್ಯದ ಹೊಸ ಕುಡಿಗಳನ್ನು ಮುನ್ನೆಲೆಗೆ ತರುವ ಭಾರೀ ಸಿದ್ಧತೆ ನಡೆಸುತ್ತಿದೆ. ಈ ಸಿದ್ಧತೆಗೆ ಪ್ರತಿಯಾಗಿ ತನ್ನ ಮಗನನ್ನು ಮುಂದಿಟ್ಟುಕೊಂಡು ಯಡಿಯೂರಪ್ಪ ಲಿಂಗಾಯತ ಸಮುದಾಯವನ್ನು ಹೇಗೆ ಆರೆಸ್ಸೆಸ್ ವಿರುದ್ಧ ಸಂಘಟಿಸಲಿದ್ದಾರೆ ಎನ್ನುವುದನ್ನು ಕಾದು ನೋಡಬೇಕಾಗಿದೆ. ಒಟ್ಟಿನಲ್ಲಿ 'ಅಪ್ಪ'ನಾಗಿ ಯಡಿಯೂರಪ್ಪ ರಾಜಕೀಯದಿಂದ ನಿವೃತ್ತರಾಗುವುದಿಲ್ಲ ಎನ್ನುವುದು ಸ್ಪಷ್ಟ. ಇದು ಬಿಜೆಪಿಗೂ ಗೊತ್ತಿದೆ. ಆದುದರಿಂದಲೇ, ಯಡಿಯೂರಪ್ಪ ಅವರ ನಿವೃತ್ತಿಯ ಘೋಷಣೆಯನ್ನು ಬಿಜೆಪಿ ವರಿಷ್ಠರು ಕೊಂಡಾಡುತ್ತಾ, ಅವರನ್ನು ಹೊನ್ನ ಶೂಲಕ್ಕೇರಿಸಲು ಹೊರಟಿದ್ದಾರೆ. ಅದನ್ನು ಏರಿದಂತೆ ನಟಿಸುತ್ತಿದ್ದಾರೆ ಅಷ್ಟೇ.

Similar News