ದಲಿತ ವಿದ್ಯಾರ್ಥಿಗಳ ಆತ್ಮಹತ್ಯೆ: ಪ್ರಯೋಗವಾಗಲಿ ನ್ಯಾಯದ ದಂಡ

Update: 2023-03-02 04:24 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ 

Full View

ವಿದ್ಯಾ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳ ಆತ್ಮಹತ್ಯೆಗಳು ಹೆಚ್ಚುತ್ತಿರುವ ಬಗ್ಗೆ ಮುಖ್ಯ ನ್ಯಾಯಮೂರ್ತಿ ಡಿ. ವೈ. ಚಂದ್ರಚೂಡ್ ಆತಂಕ ವ್ಯಕ್ತಪಡಿಸಿದ್ದಾರೆ. ‘‘ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಳ್ಳುವಂತೆ ಬಲವಂತ ಪಡಿಸುವ ನಮ್ಮ ಸಂಸ್ಥೆಗಳು ಎಲ್ಲಿ ದಾರಿ ತಪ್ಪಿವೆ ಎಂದು ನನಗೆ ಅಚ್ಚರಿಯಾಗುತ್ತದೆ. ಅಂಚಿನಲ್ಲಿರುವ ಸಮುದಾಯಗಳ ಸಂತ್ರಸ್ತರನ್ನು ಒಳಗೊಂಡು ಇಂತಹ ಘಟನೆಗಳು ಹೆಚ್ಚುತ್ತಿರುವುದು ಕಳವಳಕಾರಿ’’ ಎಂದು ದಿ ನ್ಯಾಶನಲ್ ಅಕಾಡಮಿ ಆಫ್ ಲೀಗಲ್ ಸ್ಟಡೀಸ್ ಆ್ಯಂಡ್ ರಿಸರ್ಚ್‌ನಲ್ಲಿ ಘಟಿಕೋತ್ಸವ ಭಾಷಣ ಮಾಡುತ್ತಾ ಅವರು ಹೇಳಿದರು. ಇತ್ತೀಚೆಗಷ್ಟೇ ಐಐಟಿ ಬಾಂಬೆಯಲ್ಲಿ ದಲಿತ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿರುವುದನ್ನು ಉಲ್ಲೇಖಿಸಿ ಅವರು ಭಾಷಣದಲ್ಲಿ ಕಳವಳ ವ್ಯಕ್ತಪಡಿಸಿದ್ದರು. ‘‘ಇಂತಹ ಆತ್ಮಹತ್ಯೆಗಳ ಹಿಂದೆ ಸಾವಿರಾರು ವರ್ಷಗಳ ಕಥೆಗಳಿವೆ. ನಾವು ಈ ಸಮಸ್ಯೆಯನ್ನು ಪರಿಹರಿಸಲು ಬಯಸುವುದಾದರೆ, ಮೊದಲು ಸಮಸ್ಯೆಯನ್ನು ಗುರುತಿಸಲು ಮುಂದಾಗಬೇಕು. ಪರಿಹಾರಕ್ಕೆ ಇದುವೇ ಮೊದಲ ಹಂತ’’ ಎಂದು ಅವರು ಸ್ಪಷ್ಟವಾಗಿ ಹೇಳಿದ್ದಾರೆ. ವಿಪರ್ಯಾಸವೆಂದರೆ, ಈ ಭಾಷಣ ಮಾಡಿದ ಎರಡು ದಿನ ಕಳೆಯುವಷ್ಟರಲ್ಲಿ, ಹೈದರಾಬಾದ್‌ನಲ್ಲಿ ದಲಿತ ವಿದ್ಯಾರ್ಥಿನಿಯೊಬ್ಬಳು, ಹಿರಿಯ ವಿದ್ಯಾರ್ಥಿಯ ರ್ಯಾಗಿಂಗ್‌ಗೆ ನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ಮಾಧ್ಯಮಗಳಲ್ಲಿ ವರದಿಯಾಗಿದೆ. ಸ್ವಾತಂತ್ರೋತ್ತರ ಭಾರತದಲ್ಲಿ ದಲಿತರ ಬದುಕು ಇಷ್ಟೊಂದು ಕಳವಳಕಾರಿ ಹಂತವನ್ನು ಯಾವತ್ತೂ ತಲುಪಿರಲಿಲ್ಲ. ಸಂವಿಧಾನವನ್ನೇ ಪ್ರಶ್ನಿಸುವ ಮನಸ್ಥಿತಿ ದೇಶದಲ್ಲಿ ಬೆಳೆಯುತ್ತಿದೆ. ದಲಿತ, ದುರ್ಬಲ ವರ್ಗಗಳ ಹಕ್ಕುಗಳನ್ನು ಎತ್ತಿ ಹಿಡಿಯುತ್ತಿದೆ ಎನ್ನುವ ಕಾರಣಕ್ಕೆ ಸಂವಿಧಾನವನ್ನು ಪ್ರಶ್ನಿಸಲಾಗುತ್ತಿದೆ. ದುರದೃಷ್ಟವಶಾತ್, ಇಂದು ದೇಶದಲ್ಲಿ ಶೋಷಿತರು ಸಂಘಟಿತರಾಗುವ ಬದಲು ಬಲಾಢ್ಯರು ಸಂಘಟಿತರಾಗಿ ರಾಜಕೀಯವನ್ನು ನಿಯಂತ್ರಿಸ ತೊಡಗಿದ್ದಾರೆ.

ಈ ಹಿಂದೆ ‘ದಲಿತರಿಗೆ ಮೀಸಲಾತಿ ನಿಲ್ಲಿಸಿ’ ಎಂದು ಕೇಳುತ್ತಿದ್ದವರು ಇಂದು ‘‘ನಮಗೂ ಮೀಸಲಾತಿ ಕೊಡಿ’’ ಎಂದು ಕೇಳತೊಡಗಿದ್ದಾರೆ. ಮಾತ್ರವಲ್ಲ, ಮೀಸಲಾತಿಯನ್ನು ತಮ್ಮದಾಗಿಸಿಕೊಳ್ಳುತ್ತಿದ್ದಾರೆ. ಇದು ದಲಿತರ ಮೀಸಲಾತಿಯನ್ನು ದುರ್ಬಲಗೊಳಿಸುವ ಇನ್ನೊಂದು ತಂತ್ರವಾಗಿದೆ. ರಾಜಕೀಯವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ ಅತಿ ಹೆಚ್ಚು ಪ್ರಾತಿನಿಧ್ಯವನ್ನು ಹೊಂದಿರುವ ಪಟೇಲರು, ಮರಾಠರು, ಬ್ರಾಹ್ಮಣರು, ಬನಿಯಾಗಳು, ಜಾಟರು ಮೀಸಲಾತಿಯ ‘ಹಕ್ಕಿ’ಗಾಗಿ ಬೀದಿಗಿಳಿದಿದ್ದಾರೆ. ಅಷ್ಟೇ ಅಲ್ಲ, ಮೀಸಲಾತಿಯ ಮೂಲಕ ದಲಿತರು ‘ಮೇಲ್‌ಜಾತಿಯ ಪ್ರತಿಭಾವಂತ’ರ ಹಕ್ಕುಗಳನ್ನು ಕಸಿದುಕೊಳ್ಳುತ್ತಿದ್ದಾರೆ ಎನ್ನುವ ಆಲೋಚನೆಗಳನ್ನು ವ್ಯಾಪಕವಾಗಿ ಬಿತ್ತಲಾಗುತ್ತಿದೆ. ಸ್ವತಃ ಶೋಷಿತ ಸಮುದಾಯದ ಜನರೇ ಈ ಆಲೋಚನೆಗಳನ್ನು ನಂಬತೊಡಗಿದ್ದಾರೆ. ಪರಿಣಾಮವಾಗಿ, ಮೇಲ್‌ಜಾತಿಯ ಸಂಘಟಿತ ಹೋರಾಟದ ವಿರುದ್ಧ ಪ್ರತಿ ಹೋರಾಟವನ್ನು ಸಂಘಟಿಸುವಲ್ಲೂ ಅವರು ಸೋಲುತ್ತಿದ್ದಾರೆ. ಇವೆಲ್ಲವೂ ದಲಿತ, ದುರ್ಬಲ ವರ್ಗದ ವಿದ್ಯಾರ್ಥಿಗಳ ಮೇಲೆ ನೇರವಾಗಿ ದುಷ್ಪರಿಣಾಮಗಳನ್ನು ಬೀರುತ್ತಿದೆ. ವಿದ್ಯಾಸಂಸ್ಥೆಗಳಲ್ಲಿ ಅವರು ಕೀಳರಿಮೆ, ಆತಂಕ, ಭಯ, ಅವಮಾನದಿಂದ ಬದುಕುವ ಸನ್ನಿವೇಶವನ್ನು ಸೃಷ್ಟಿಸಿದೆ. ಶಾಲೆ, ಕಾಲೇಜುಗಳಲ್ಲಿ ಅವರು ಒಂಟಿತನವನ್ನು ಅನುಭವಿಸುತ್ತಿದ್ದಾರೆ. ಇಂತಹ ಒಂಟಿ ವಿದ್ಯಾರ್ಥಿಗಳು ಮೇಲ್‌ಜಾತಿಯ, ಬಲಾಢ್ಯ ಸಮುದಾಯದ ಸುಲಭದ ತುತ್ತಾಗುತ್ತಿದ್ದಾರೆ. ವಿದ್ಯಾ ಸಂಸ್ಥೆಗಳಲ್ಲಿ ತಮ್ಮ ಮೇಲಾಗುತ್ತಿರುವ ದೌರ್ಜನ್ಯವನ್ನು ದಲಿತ ವಿದ್ಯಾರ್ಥಿಗಳು ಪ್ರತಿಭಟಿಸುವುದು ಸುಲಭವಿಲ್ಲ. ಅದನ್ನು ಪ್ರತಿಭಟಿಸಿದರೆ ಅವರು ಆ ವಿದ್ಯಾರ್ಥಿಗಳ ಜೊತೆಗೆ ಮಾತ್ರವಲ್ಲ, ಇಡೀ ವಿದ್ಯಾ ಸಂಸ್ಥೆಯ ಜೊತೆಗೇ ಗುದ್ದಾಟಕ್ಕಿಳಿಯಬೇಕಾಗುತ್ತದೆ. ಇದಕ್ಕೆ ಉತ್ತಮ ಉದಾಹರಣೆಯಾಗಿ, ನಮ್ಮ ಮುಂದೆ ರೋಹಿತ್ ವೇಮುಲಾ ಆತ್ಮಹತ್ಯೆ ಪ್ರಕರಣವಿದೆ.

ಎಬಿವಿಪಿ ವಿದ್ಯಾರ್ಥಿ ಮುಖಂಡನ ಜೊತೆಗಿದ್ದ ಅವರ ಸಂಘರ್ಷ ನಿಧಾನಕ್ಕೆ ಇಡೀ ವಿಶ್ವವಿದ್ಯಾನಿಲಯದ ಸಂಘರ್ಷವಾಗಿ ಪರಿವರ್ತನೆಗೊಂಡಿತು. ಎಬಿವಿಪಿಯ ವಿದ್ಯಾರ್ಥಿಯ ಜೊತೆಗಿನ ಜಗಳಕ್ಕಾಗಿ ಅವರ ಮೇಲೆ ಮೊಕದ್ದಮೆಯನ್ನು ದಾಖಲಿಸಲಾಗಿತ್ತು. ಇದೇ ಸಂದರ್ಭದಲ್ಲಿ ಎಬಿವಿಪಿ ವಿದ್ಯಾರ್ಥಿಯ ಮೇಲೆ ಯಾವುದೇ ಮೊಕದ್ದಮೆ ದಾಖಲಾಗಿರಲಿಲ್ಲ. ದಲಿತ ಸಂಘಟನೆಗಳಲ್ಲಿ ಗುರುತಿಸಿಕೊಂಡು ಸಕ್ರಿಯರಾದ ಕಾರಣಕ್ಕೇ ಅವರ ಮೇಲೆ ಶಾಲೆಯ ಮುಖ್ಯಸ್ಥರ, ಕುಲಪತಿಗಳ ಕೆಂಗಣ್ಣು ಬಿತ್ತು. ಅವರಿಗೆ ಸಿಗಬೇಕಾಗಿದ್ದ ಫೆಲೋಶಿಪ್‌ನ್ನು ತಡೆ ಹಿಡಿಯಲಾಯಿತು. ಹಾಸ್ಟೆಲ್‌ನಿಂದ ಹೊರ ಹಾಕಲಾಯಿತು. ಅಂತಿಮವಾಗಿ ಅವರು ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿ ನಿರ್ಮಾಣವಾಯಿತು. ಇತ್ತೀಚೆಗೆ ಐಐಟಿ ಬಾಂಬೆಯಲ್ಲಿ ದಲಿತ ವಿದ್ಯಾರ್ಥಿಯ ಆತ್ಮಹತ್ಯೆಯ ಹಿಂದೆಯೂ ವ್ಯವಸ್ಥೆಯ ಕೈವಾಡವಿದೆ ಎಂದು ಆರೋಪಿಸಲಾಗಿದೆ. ಹೈದರಾಬಾದ್‌ನಲ್ಲಿ ವಿದ್ಯಾರ್ಥಿನಿಯ ಆತ್ಮಹತ್ಯೆಯ ಹಿಂದೆ, ಸೈಫ್ ಎನ್ನುವ ಹಿರಿಯ ವಿದ್ಯಾರ್ಥಿಯ ಪಾತ್ರವಿತ್ತು ಎನ್ನಲಾಗುತ್ತಿದೆ. ಈತ ವಿದ್ಯಾರ್ಥಿನಿಯನ್ನು ಜಾತಿ ಹಿನ್ನೆಲೆಯಲ್ಲಿ ‘ರ್ಯಾಗಿಂಗ್’ ಮಾಡುತ್ತಿದ್ದ ಎನ್ನುವ ಆರೋಪಗಳಿವೆ. ವಿದ್ಯಾರ್ಥಿನಿ ಇದರ ವಿರುದ್ಧ ಸಂಸ್ಥೆಯ ಮುಖ್ಯಸ್ಥರ ಗಮನ ಸೆಳೆದಿದ್ದಾರೆ. ಆದರೆ ಅವರು ಆ ದೂರನ್ನು ಸಂಪೂರ್ಣ ನಿರ್ಲಕ್ಷಿಸಿದ್ದಾರೆ. ದಲಿತ ವಿದ್ಯಾರ್ಥಿಗಳು ನಿಂದನೆಗೆ, ದೂಷಣೆಗೆ ಅರ್ಹರು. ಅವರದನ್ನು ಸಹಿಸಿಕೊಳ್ಳಬೇಕು ಎನ್ನುವಂತಹ ಮನಸ್ಥಿತಿ ವಿದ್ಯಾಸಂಸ್ಥೆಯ ಮುಖ್ಯಸ್ಥರಲ್ಲೇ ಇದ್ದರೆ ಸಮಸ್ಯೆ ಪರಿಹಾರವಾಗುವುದಾದರೂ ಹೇಗೆ?

 ವಿದ್ಯಾಸಂಸ್ಥೆಗಳು, ಜಿಲ್ಲಾಡಳಿತ, ಸರಕಾರ ಇವೆಲ್ಲವೂ ದಲಿತರ ಕುರಿತಂತೆ ಪೂರ್ವಾಗ್ರಹವನ್ನು ಹೊಂದಿದ್ದಾಗ ದಲಿತ ಸಮುದಾಯಕ್ಕೆ ಇರುವ ಒಂದೇ ಒಂದು ಆಶ್ರಯ ನ್ಯಾಯಾಲಯ. ‘ಸಮಸ್ಯೆಯನ್ನು ಗುರುತಿಸದೆ ಸಮಸ್ಯೆಯನ್ನು ಪರಿಹರಿಸಲು ಸಾಧ್ಯವಿಲ್ಲ’ ಎಂದು ಚಂದ್ರಚೂಡ್ ಅವರೂ ಅಭಿಪ್ರಾಯ ಪಟ್ಟಿದ್ದಾರೆ. ಸಮಸ್ಯೆಯನ್ನು ಗುರುತಿಸಬೇಕಾದವರು ಯಾರು? ದಲಿತರ ಸಮಸ್ಯೆಗಳಿಗೆ ಈ ದೇಶದ ನ್ಯಾಯ ವ್ಯವಸ್ಥೆ ಎಷ್ಟರಮಟ್ಟಿಗೆ ಸ್ಪಂದಿಸಿದೆ? ಈ ಹಿಂದೆ ಸರಕಾರ ನ್ಯಾಯಾಲಯದ ಮೂಲಕವೇ ದಲಿತ ದೌರ್ಜನ್ಯ ಕಾಯ್ದೆಯನ್ನು ದುರ್ಬಲಗೊಳಿಸಲು ಮುಂದಾಯಿತು. ದಲಿತ ಸಮುದಾಯ ಅದರ ವಿರುದ್ಧ ಬೀದಿಗಿಳಿದಾಗ ಅದನ್ನು ಅತ್ಯಂತ ಕ್ರೂರವಾಗಿ ದಮನಗೊಳಿಸಲಾಯಿತು. ಇದೀಗ ಮೀಸಲಾತಿಯ ಕುರಿತಂತೆಯೂ ನ್ಯಾಯಾಲಯದ ಧೋರಣೆ ಮೇಲ್‌ಜಾತಿಯ ಧೋರಣೆಗೆ ಪೂರಕವಾಗಿದೆ. ದಲಿತ ಸಮುದಾಯದ ಸಂಕಷ್ಟಗಳನ್ನು, ಸಮಸ್ಯೆಗಳನ್ನು ಅದು ಮೇಲ್‌ಜಾತಿಯ ಬಡವರ ಜೊತೆಗೆ ಸಮೀಕರಿಸಿದೆ. ಶೋಷಿತ ಸಮುದಾಯವನ್ನು ಮೇಲೆತ್ತುವುದಕ್ಕೆ ನೀಡಲಾಗುತ್ತಿದ್ದ ಮೀಸಲಾತಿಯನ್ನು ಮೇಲ್‌ಜಾತಿಯ ಬಡವರಿಗೂ ನೀಡುವುದಕ್ಕೆ ಮುಂದಾಗಿದೆ. ‘ಮೀಸಲಾತಿಯಿರುವುದು ಬಡತನವನ್ನು ನಿವಾರಿಸುವುದಕ್ಕೆ’ ಎಂದು ನ್ಯಾಯಾಲಯವೂ ಭಾವಿಸಿದೆ. ಸಮಸ್ಯೆಯನ್ನು ಗುರುತಿಸುವಲ್ಲಿ ನ್ಯಾಯಾಲಯವೇ ಎಡವಿರುವಾಗ, ದಲಿತ ವಿದ್ಯಾರ್ಥಿಗಳು ವಿದ್ಯಾ ಸಂಸ್ಥೆಗಳಲ್ಲಿ ಆತ್ಮಹತ್ಯೆಯನ್ನು ಮಾಡದೆ ಇನ್ನಾವ ದಾರಿಯಿದೆ?

ದಲಿತ ವಿದ್ಯಾರ್ಥಿಗಳ ಆತ್ಮಹತ್ಯೆಯ ಕುರಿತಂತೆ ಚಂದ್ರಚೂಡ್ ಅವರಿಗೆ ನಿಜಕ್ಕೂ ಕಾಳಜಿಯಿದೆಯಾದರೆ ಅದನ್ನು ಕೇವಲ ಭಾಷಣಕ್ಕೆ ಸೀಮಿತಗೊಳಿಸಬಾರದು. ನ್ಯಾಯಾಲಯದ ಪೀಠದಲ್ಲಿ ಕುಳಿತು ದಲಿತರ ಸಮಸ್ಯೆಗಳನ್ನು ಗುರುತಿಸಿ ಅವುಗಳಿಗೆ ಪರಿಹಾರವನ್ನು ನೀಡಲು ಪ್ರಯತ್ನಿಸಬೇಕು. ಶಾಲೆ, ಕಾಲೇಜುಗಳಲ್ಲಿ, ಸಮಾಜದಲ್ಲಿ ದಲಿತ ವಿದ್ಯಾರ್ಥಿಗಳು, ಯುವಕರು ಇನ್ನೂ ಅವಮಾನಗಳನ್ನು, ದೌರ್ಜನ್ಯಗಳನ್ನು ಎದುರಿಸುವ ಪರಿಸ್ಥಿತಿಯಿದೆ ಎಂದಾದರೆ ನ್ಯಾಯವ್ಯವಸ್ಥೆಯೂ ಅದಕ್ಕೆ ಮುಖ್ಯ ಕಾರಣವಾಗಿದೆ. ಸಂವಿಧಾನ ನೀಡಿರುವ ದಲಿತರ ಹಕ್ಕುಗಳನ್ನು ಅವರಿಗೆ ಮರಳಿಸುವ ಕಾರ್ಯದಲ್ಲಿ ನ್ಯಾಯಾಲಯದ ವೈಫಲ್ಯವನ್ನು ಅದು ಹೇಳುತ್ತದೆ. ದಲಿತ ದೌರ್ಜನ್ಯಗಳ ವಿರುದ್ಧ ಇರುವ ಕಾನೂನನ್ನು ಬಲಗೊಳಿಸಬೇಕು. ಮೀಸಲಾತಿಯನ್ನು ಪರಿಣಾಕಾರಿಯಾಗಿ ಜಾರಿಗೊಳಿಸಲು ಕ್ರಮ ಕೈಗೊಳ್ಳಬೇಕು. ಹಾಗೆಯೇ ಮೇಲ್‌ಜಾತಿಗೆ ನೀಡಿರುವ ಶೇ. 10 ಮೀಸಲಾತಿಯನ್ನು ರದ್ದುಗೊಳಿಸಿ, ಒಳಮೀಸಲಾತಿಯ ಮೂಲಕ ದಲಿತ ಸಮುದಾಯದ ಎಲ್ಲ ಎಡ-ಬಲಗಳಿಗೆ ಮೀಸಲಾತಿಯ ಪ್ರಯೋಜನ ದಕ್ಕುವಂತೆ ಮಾಡಬೇಕು. ಕೈಯಲ್ಲಿ ಕಾನೂನಿನ ದಂಡವಿದ್ದರೂ ಅದನ್ನು ಪ್ರಯೋಗಿಸದೆ ಕೇವಲ ಬಾಯಲ್ಲಿ ಬೆಣ್ಣೆ ಸುರಿಸುವುದರಿಂದ ದಲಿತ ವಿದ್ಯಾರ್ಥಿಗಳ ಆತ್ಮಹತ್ಯೆಯನ್ನು ತಡೆಯಲು ಸಾಧ್ಯವಿಲ್ಲ ಎನ್ನುವುದನ್ನು ಚಂದ್ರಚೂಡ್ ಮೊದಲು ಅರ್ಥ ಮಾಡಿಕೊಳ್ಳಬೇಕು.

Similar News