​ಬೇನಾಮಿ ಆಸ್ತಿ ಖರೀದಿ: ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ ಪ್ರಮೋದ್ ಮುತಾಲಿಕ್

Update: 2023-03-02 17:32 GMT

ಉಡುಪಿ: ಕಾರ್ಕಳ ವಿಧಾನಸಭಾ ಕ್ಷೇತ್ರದ ಹೆಬ್ರಿ ತಾಲೂಕಿನ ಶಿವಪುರ ಗ್ರಾಮದಲ್ಲಿ ಬೇನಾಮಿ ಆಸ್ತಿ ಖರೀದಿಗೆ ಸಂಬಂಧಿಸಿ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಗುರುವಾರ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದರು.

ಉಡುಪಿ ಲೋಕಾಯುಕ್ತ ಕಚೇರಿಗೆ ತೆರಳಿದ ಪ್ರಮೋದ್ ಮುತಾಲಿಕ್ ನೇತೃತ್ವದ ನಿಯೋಗ ಲೋಕಾಯುಕ್ತ ಉಡುಪಿ ವಿಭಾಗ ಡಿವೈಎಸ್ಪಿ ಪ್ರಕಾಶ್ ಕೆ.ಸಿ. ಅವರಿಗೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಲೋಕಾಯುಕ್ತ ಪೊಲೀಸ್ ನಿರೀಕ್ಷಕರಾದ ರಫೀಕ್ ಎಂ., ಜಯರಾಮ ಗೌಡ ಹಾಜರಿದ್ದರು.

‘ಶಿವಪುರ ಗ್ರಾಮದಲ್ಲಿ ಗಜಾನನ ಮತ್ತು ವಿದ್ಯಾ ಸುವರ್ಣ ಎಂಬವರ ಹೆಸರಿನಲ್ಲಿ 67.94 ಎಕರೆ ಜಾಗವನ್ನು 4.15ಕೋಟಿ ರೂ.ಗೆ ಖರೀದಿ ಮಾಡಿದ್ದು, ಇವರಿಗೆ ಯಾವುದೇ ಆದಾಯದ ಮೂಲ ಇಲ್ಲ. ಇವರು ಬಿಜೆಪಿಯ ಸಾಮಾನ್ಯ ಕಾರ್ಯಕರ್ತರಾಗಿದ್ದು, ಇದರ ಹಿಂದೆ ಪ್ರಭಾವಿ ಸಚಿವರ ಕೈವಾಡದ ಶಂಕೆ ಇದೆ. ಆದುದರಿಂದ ಈ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸುವಂತೆ ದೂರಿನಲ್ಲಿ ಒತ್ತಾಯಿಸಲಾಗಿದೆ.

ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಪ್ರಮೋದ್ ಮುತಾಲಿಕ್, ವ್ಯವಸ್ಥಿತವಾಗಿ 53 ರೈತರಿಗೆ ಮೋಸ ಮಾಡಿ ಬಲತ್ಕಾರವಾಗಿ ಕಡಿಮೆ ಬೆಲೆಯಲ್ಲಿ ಭೂಮಿ ಖರೀದಿ ಮಾಡಲಾಗಿದೆ. ಈಗ ಅದೇ ಜಾಗವನ್ನು ಕೈಗಾರಿಕ ವಲಯ ಎಂಬುದಾಗಿ ಘೋಷಣೆ ಮಾಡಿ ನಾಲ್ಕೈದು ಪಟ್ಟು ಹೆಚ್ಚು ಹಣಕ್ಕೆ ಸರಕಾರಕ್ಕೆ ಮಾರಾಟ ಮಾಡಿ ಹಣ ಪಡೆಯುವ ವ್ಯವಸ್ಥಿತ ಹುನ್ನಾರ ನಡೆಯುತ್ತಿದೆ. ಈ ಬಗ್ಗೆ ಎರಡು ದಿನಗಳ ಹಿಂದೆ ಜಿಲ್ಲಾಧಿಕಾರಿಗೆ ಮತ್ತು ಇವತ್ತು ಲೋಕಾಯುಕ್ತರಿಗೆ ದೂರು ಸಲ್ಲಿಸಿದ್ದೇವೆ. ಈ ಕುರಿತು ವಾರದೊಳಗೆ ಸಂಪೂರ್ಣ ತನಿಖೆಯಾಗ ಬೇಕು ಎಂದು ಒತ್ತಾಯಿಸಿದರು.

ಇದರಲ್ಲಿ ನೂರಕ್ಕೆ ನೂರು ರಾಜಕೀಯ ಒತ್ತಡ ಇದೆ. ಮಂತ್ರಿಗಳ ಕೈವಾಡ ಇರುವ ಸಂಶಯ ಇದೀಗ ನಿಶ್ಛಿತವಾಗಿದೆ. ಹಾಗಾಗಿ ಈ ಬೇನಾಮಿ ಆಸ್ತಿ ಯಾರದ್ದು, ಯಾಕಾಗಿ ಖರೀದಿ ಮಾಡಿದರು ಎಂದು ಪ್ರಶ್ನಿಸಿದ ಅವರು, ಗಜಾನನ ಮತ್ತು ವಿದ್ಯಾ ಸುವರ್ಣ ಅವರಿಗೆ ಯಾವುದೇ ಆದಾಯ ಇಲ್ಲ, ಕೆಲಸ ಇಲ್ಲ. ಇವರು ಬಿಜೆಪಿಯ ತಾಲೂಕು ಪದಾಧಿಕಾರಿಗಳಾಗಿದ್ದಾರೆ. ಇದು ಒಂದು ಅಲ್ಲ. ಇಂತಹ ಬೇನಾಮಿ ಆಸ್ತಿ ಖರೀದಿ ಕಾರ್ಕಳ ಕ್ಷೇತ್ರದಲ್ಲಿ ಸಾಕಷ್ಟು ಇದೆ ಎಂದು ಅವರು ಆರೋಪಿಸಿದರು.

‘ಆಪ್ತನಿಂದ ಮುಖ್ಯಮಂತ್ರಿಗೂ ಲಿಂಕ್’
ಪ್ರಭಾವಿ ಸಚಿವರ ಸಂಬಂಧಿಕರೊಬ್ಬರು ಮುಖ್ಯಮಂತ್ರಿಯ ಆಪ್ತ ಸಹಾಯಕ ರಾಗಿದ್ದಾರೆ. ಆದುದರಿಂದ ಇದರ ಲಿಂಕ್ ಮುಖ್ಯಮಂತ್ರಿ ಸುತ್ತಲೂ ಸುತ್ತುತ್ತಿದೆ. ಈ ಬೇನಾಮಿ ಆಸ್ತಿಯ ಆರೋಪ ಮುಖ್ಯಮಂತ್ರಿಗೂ ಅಂಟುತ್ತಿದೆ. ಈ ಬಗ್ಗೆ ಸಿಎಂ ಸ್ಪಷ್ಟನೆ ಕೊಡಬೇಕು. ಇದರ ಹಿಂದೆ ಯಾರಿದ್ದಾರೆಂಬುದನ್ನು ಬಹಿರಂಗ ಪಡಿಸಬೇಕು ಎಂದು ಪ್ರಮೋದ್ ಮುತಾಲಿಕ್ ಒತ್ತಾಯಿಸಿದರು.

ಸಚಿವರ ವಿರುದ್ಧ ಯಾವುದೇ ಭ್ರಷ್ಟಾಚಾರ ಆರೋಪಗಳಿದ್ದರೆ ದಾಖಲೆ ಸಹಿತ ಲೋಕಾಯುಕ್ತಕ್ಕೆ ದೂರು ಕೊಡಿ ಎಂದು ಮುಖ್ಯಮಂತ್ರಿ ಹೇಳುತ್ತಾರೆ. ಇದೀಗ ನಾವು ಅದನ್ನೇ ಮಾಡಿದ್ದೇವೆ. ಸಮಗ್ರ ತನಿಖೆ ಮಾಡಲಿ. ಈ ಪ್ರಕರಣದಲ್ಲಿ ಭಾಗಿಯಾಗಿರುವ ಪ್ರಭಾವಿ ಸಚಿವರು ಯಾರು ಎಂಬುದು ತನಿಖೆಯಿಂದ ಹೊರಗೆ ಬರುತ್ತದೆ ಎಂದು ಅವರು ತಿಳಿಸಿದರು.

Similar News