ತಾನೇ ತೋಡಿದ ಹಳ್ಳಕ್ಕೆ ಬಿದ್ದ ಆಮ್ ಆದ್ಮಿ

Update: 2023-03-03 04:14 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಆಮ್ ಆದ್ಮಿ ಪಕ್ಷದ ಹಿರಿಯ ಮುಖಂಡ, ದಿಲ್ಲಿಯ ಉಪಮುಖ್ಯಮಂತ್ರಿಯೂ ಆಗಿದ್ದ ಮನೀಷ್ ಸಿಸೋಡಿಯಾ ಅವರನ್ನು ಸಿಬಿಐ ಬಂಧಿಸುವುದರೊಂದಿಗೆ ದಿಲ್ಲಿ ರಾಜಕಾರಣಕ್ಕೆ ಮತ್ತೆ ವರ್ಣರಂಜಿತ ಕಳೆ ಬಂದಿದೆ. ಈ ಬಂಧನದ ಸರಿ-ತಪ್ಪುಗಳ ಕುರಿತಂತೆ ಚರ್ಚೆಗಳು ನಡೆಯುತ್ತಿವೆ. ಪ್ರಧಾನಿ ಮೋದಿಯರ ‘ರಾಜಕೀಯ ಸೇಡಿ’ನ ಪರಿಚಯ ದೇಶಕ್ಕೆ ಈಗಾಗಲೇ ಆಗಿರುವುದರಿಂದ, ಸಿಸೋಡಿಯಾ ಬಂಧನವನ್ನೂ ಅದೇ ಸಾಲಿಗೆ ಸೇರಿಸಿ ಮೋದಿಯನ್ನು ಒಂದು ಗುಂಪು ಟೀಕಿಸುತ್ತಿದೆ. ಆಮ್ ಆದ್ಮಿ ಪಕ್ಷ, ಮೋದಿಯ ‘ಸರ್ವಾಧಿಕಾರ’ದ ಮರೆಯಲ್ಲಿ ತನ್ನ ತಪ್ಪುಗಳನ್ನು ಮರೆ ಮಾಚುವ ಪ್ರಯತ್ನವನ್ನು ನಡೆಸುತ್ತಿದೆ. ‘‘ಒಂದು ವೇಳೆ ಸಿಸೋಡಿಯಾ ಮತ್ತು ಅವರ ತಂಡ ಬಿಜೆಪಿ ಸರಕಾರದ ಭಾಗವಾಗಿದ್ದರೆ ಈ ಬಂಧನ ನಡೆಯುತ್ತಿತ್ತೆ?’’ ಎಂದು ಕೆಲವರು ಕೇಜ್ರಿವಾಲ್ ಪರವಾಗಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ನಿಜ. ಸಿಸೋಡಿಯಾ ತಂಡ ಬಿಜೆಪಿಯೊಳಗಿದ್ದಿದ್ದರೆ ಈ ಬಂಧನ ನಡೆಯುತ್ತಲೇ ಇರುತ್ತಿರಲಿಲ್ಲ. ಆದರೆ, ಆ ಕಾರಣಕ್ಕಾಗಿ ಸಿಸೋಡಿಯಾ ಅವರನ್ನು ‘ಸಂತ್ರಸ್ತ’ ಎಂದು ಕರೆಯಲಾಗುವುದಿಲ್ಲ. ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ ದಿಲ್ಲಿ ಮತ್ತು ಪಂಜಾಬ್‌ನಲ್ಲಿ ಅಧಿಕಾರಕ್ಕೆ ಬರುವ ಮುನ್ನಾ ದಿನಗಳ ಅದರ ಹೆಜ್ಜೆಗುರುತುಗಳನ್ನು ನಾವು ಮತ್ತೊಮ್ಮೆ ಗಮನಿಸಬೇಕಾಗಿದೆ.

ಯುಪಿಎ ಸರಕಾರದ ಭ್ರಷ್ಟಾಚಾರಗಳ ವಿರುದ್ಧ ನಡೆದ ರಾಷ್ಟ್ರಮಟ್ಟದ ಬೃಹತ್ ಆಂದೋಲನದಲ್ಲಿ ಹೊರಹೊಮ್ಮಿದ ಪಕ್ಷ ಆಮ್ ಆದ್ಮಿ. ಅಣ್ಣಾ ಹಜಾರೆ ಮತ್ತು ಗಾಂಧೀಜಿಯನ್ನು ಮುಂದಿಟ್ಟುಕೊಂಡು ಅದು ರಾಜಕೀಯವನ್ನು ಪ್ರವೇಶಿಸಿತ್ತು. ‘ಮದ್ಯ ನಿಷೇಧ’ದ ವಿರುದ್ಧ ದೊಡ್ಡ ಧ್ವನಿಯಲ್ಲಿ ಮಾತನಾಡಿದವರು ಅಣ್ಣಾ ಹಜಾರೆ. ಇದೀಗ ಅದೇ ಪಕ್ಷ ಮದ್ಯಕ್ಕೆ ಸಂಬಂಧಿಸಿ ಭ್ರಷ್ಟಾಚಾರವೊಂದರಲ್ಲಿ ಗುರುತಿಸಿಕೊಂಡಿದೆ. ಈ ಭ್ರಷ್ಟಾಚಾರ ಬಿಜೆಪಿಯ ಒಂದು ವ್ಯರ್ಥ ಆರೋಪವಾಗಿದ್ದರೆ ದೇಶ ಬಂಧಿತ ಸಿಸೋಡಿಯಾ ಪರವಾಗಿ ನಿಲ್ಲಬಹುದಾಗಿತ್ತು. ಆದರೆ, ಸಿಸೋಡಿಯಾ ಮೇಲಿರುವ ಆರೋಪಗಳನ್ನು ಅಲ್ಲಗಳೆಯುವುದು ಅಷ್ಟು ಸುಲಭವಿಲ್ಲ. ಸಿಸೋಡಿಯಾ ಬಂಧನದಲ್ಲಿ ಕೇಂದ್ರ ಸರಕಾರದ ಕೈವಾಡವಿದೆ, ಬಿಜೆಪಿಯಲ್ಲಿಯೂ ಪರಮ ಭ್ರಷ್ಟರಿದ್ದಾರೆ ಎನ್ನುವ ಕಾರಣಕ್ಕಾಗಿ ಸಿಸೋಡಿಯಾರ ಮೇಲಿರುವ ಆರೋಪಗಳನ್ನು ನಾವು ನಿರ್ಲಕ್ಷಿಸುವಂತಿಲ್ಲ. ಹಿಂದಿನ ಯುಪಿಎ ಸರಕಾರ ಮತ್ತು ಇಂದಿನ ಎನ್‌ಡಿಎ ಸರಕಾರ ಪರಮ ಭ್ರಷ್ಟವೆಂದು ಆಮ್ ಆದ್ಮಿ ಪಕ್ಷ ಆರೋಪಿಸುತ್ತಾ ಅಧಿಕಾರವನ್ನು ಹಿಡಿದಿದೆ. ಬಿಜೆಪಿ ಭ್ರಷ್ಟ ಸರಕಾರ ಮಾತ್ರವಲ್ಲ, ಬಡವರ ವಿರೋಧಿ ಮತ್ತು ಕೋಮುವಾದಿ. ಕೋಮುವಾದದ ಕುರಿತಂತೆ ಆಮ್ ಆದ್ಮಿಯ ನಿಲುವುಗಳಲ್ಲಿ ಹಲವು ಗೊಂದಲಗಳಿವೆ. ಬಿಜೆಪಿಗೆ ಪರ್ಯಾಯವಾಗಿ ಆಮ್ ಆದ್ಮಿ ಪಕ್ಷ ತನ್ನನ್ನು ಬಿಂಬಿಸಿಕೊಳ್ಳುತ್ತಿದೆ. ಆ ಕಾರಣಕ್ಕಾಗಿಯೇ ಬಿಜೆಪಿಯ ಹಿಂದುತ್ವ ಮತ್ತು ಕೋಮುವಾದಿ ನಿಲುವುಗಳ ಬಗ್ಗೆ ಅದು ವೌನವಾಗಿದೆ ಎನ್ನುವ ಆರೋಪಗಳಿವೆ.

ಮೀಸಲಾತಿಯ ಬಗ್ಗೆಯೂ ಆಪ್ ತನ್ನ ಸ್ಪಷ್ಟ ನಿಲುವುಗಳನ್ನು ಬಹಿರಂಗ ಪಡಿಸಿಲ್ಲ. ಈ ದೇಶದ ದಲಿತರು, ಶೋಷಿತರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯಗಳ ಬಗ್ಗೆಯೂ ಅದು ಮಾತನಾಡಿಲ್ಲ. ಅಭಿವೃದ್ಧಿಯ ಬಗ್ಗೆ ಅದು ಮಾತನಾಡುತ್ತಿದೆಯಾದರೂ, ಭಾರತದಲ್ಲಿ ಅಭಿವೃದ್ಧಿಯ ಸಮಾನ ಹಂಚಿಕೆಯ ಬಗ್ಗೆ ಅದು ಗಂಭೀರವಾಗಿ ಯೋಚಿಸಿಲ್ಲ. ಇವೆಲ್ಲದರ ಜೊತೆಗೆ ಇದೀಗ ಭ್ರಷ್ಟಾಚಾರದ ಕಳಂಕವನ್ನೂ ತನ್ನ ಮೈಮೇಲೆ ಮೆತ್ತಿಕೊಂಡಿದೆ. ಈಗಷ್ಟೇ ಒಂದು ರಾಜ್ಯದಲ್ಲಿ ಪೂರ್ಣ ಪ್ರಮಾಣದಲ್ಲಿ ಆಮ್ ಆದ್ಮಿ ಪಕ್ಷ ಅಧಿಕಾರ ಹಿಡಿದಿದೆ. ಅಷ್ಟರಲ್ಲೇ ಅದರ ಮುಖಂಡರು ಭ್ರಷ್ಟಾಚಾರದ ಕಾರಣಕ್ಕಾಗಿ ಬಂಧಿಸಲ್ಪಡುತ್ತಿದ್ದಾರೆ. ಅವರೊಂದಿಗೆ ಅಂತರ ಕಾಯ್ದುಕೊಳ್ಳಬೇಕಾಗಿದ್ದ ಕೇಜ್ರಿವಾಲ್, ಬೇರೆ ಬೇರೆ ನೆಪಗಳನ್ನು ಮುಂದೊಡ್ಡಿ ಸಮರ್ಥಿಸಲು ಮುಂದಾಗಿದ್ದಾರೆ. ಒಂದು ವೇಳೆ, ಇಡೀ ದೇಶದ ಅಧಿಕಾರ ಇವರ ಕೈಗೆ ಸಿಕ್ಕಿದರೆ ಪರಿಣಾಮವೇನಾಗಬಹುದು? ಯುಪಿಎ ಅಥವಾ ಬಿಜೆಪಿಯ ಭ್ರಷ್ಟಾಚಾರಗಳ ವಿರುದ್ಧ ಮಾತನಾಡುವ ನೈತಿಕತೆ ಇವರಿಗಿದೆಯೆ? ಈ ಪ್ರಶ್ನೆಯನ್ನು ನಾವು ಕೇಳ ಬೇಕಾಗಿದೆ.

ಬಿಜೆಪಿಯ ಸರ್ವಾಧಿಕಾರಿ ಧೋರಣೆ, ಸೇಡಿನ ರಾಜಕೀಯದ ಕುರಿತಂತೆ ದೊಡ್ಡ ಧ್ವನಿಯಲ್ಲಿ ಮಾತನಾಡುತ್ತಿರುವ ಆಮ್ ಆದ್ಮಿ ಪಕ್ಷವು, ಮದ್ಯ ನೀತಿಯಲ್ಲಿ ತನ್ನ ಸರಕಾರ ನಡೆಸಿದ ಹಸ್ತಕ್ಷೇಪಗಳ ಬಗ್ಗೆ ಎದ್ದಿರುವ ಪ್ರಶ್ನೆಗಳಿಗೆ ಸಮರ್ಪಕ ಉತ್ತರಗಳನ್ನು ನೀಡುತ್ತಲೇ ಇಲ್ಲ. ಮದ್ಯ ಸೇವನೆ ಪ್ರಮಾಣವನ್ನು ಕಡಿತಗೊಳಿಸುತ್ತೇವೆ ಎಂಬುದಾಗಿ ತನ್ನ ಮೊದಲ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆಯನ್ನು ಈಡೇರಿಸುವುದಕ್ಕೆ ಬದಲಾಗಿ, ಆಪ್ ಎಲ್ಲ ರಾಜ್ಯ ಸರಕಾರಗಳಂತೆ ಮದ್ಯ ಸೇವನೆ ಮತ್ತು ಆ ಮೂಲಕ ಆದಾಯ ಹೆಚ್ಚಿಸಲು ಕ್ರಮಗಳನ್ನು ತೆಗೆದುಕೊಂಡಿತು. ಮದ್ಯನೀತಿಯನ್ನು ಅದು ಹಿಂದೆಗೆದುಕೊಂಡಿರುವುದು, ಈ ಹಗರಣದಲ್ಲಿ ಪಾಲುಗೊಂಡಿರುವ ಬಗ್ಗೆ ಸಂಶಯವನ್ನು ಹೆಚ್ಚಿಸುತ್ತದೆ. ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಸುರಿದಿರುವ ಹಣವೆಲ್ಲವೂ ಮದ್ಯದ ಲಾಬಿಗಳಿಂದ ಬಂದಿರುವುದು ಎನ್ನುವ ಆರೋಪವನ್ನು ನಿರಾಕರಿಸುವುದು ಆಪ್‌ಗೆ ಕಷ್ಟವಾಗಿದೆ. ಆದುದರಿಂದ ಕೇಜ್ರಿವಾಲ್ ಅವರು ಸಿಸೋಡಿಯಾ ಬಂಧನಕ್ಕಾಗಿ ಕೇಂದ್ರ ಸರಕಾರವನ್ನು ಟೀಕಿಸುವ ಮೊದಲು, ಮದ್ಯ ಹಗರಣದಲ್ಲಿ ತನ್ನ ಪಾತ್ರವಿಲ್ಲ ಎನ್ನುವುದನ್ನು ಸಾಬೀತು ಪಡಿಸುವುದಕ್ಕೆ ಕೇಜ್ರಿವಾಲ್ ಆದ್ಯತೆಯನ್ನು ನೀಡಬೇಕಾಗಿದೆ. ಹಾಗೆಯೇ ಭ್ರಷ್ಟಾಚಾರವನ್ನು ವಿರೋಧಿಸಿ ಅಧಿಕಾರ ಹಿಡಿದ ಆಪ್ ಪಕ್ಷ, ಪದೇ ಪದೇ ಭ್ರಷ್ಟಾಚಾರದ ಕಾರಣಕ್ಕಾಗಿಯೇ ಗುರುತಿಸಿಕೊಳ್ಳುತ್ತಿರುವುದು ಯಾಕೆ ಎನ್ನುವುದಕ್ಕೂ ಸ್ಪಷ್ಟೀಕರಣ ನೀಡಬೇಕಾಗಿದೆ.

ಈಗಾಗಲೇ ಆಮ್ ಆದ್ಮಿ ಪಕ್ಷದ ಹಲವು ನಾಯಕರು ಭ್ರಷ್ಟಾಚಾರದ ಕಾರಣಕ್ಕಾಗಿ ಜೈಲು ಸೇರಿದ್ದಾರೆ. ಪಂಜಾಬ್‌ನಲ್ಲೂ ಅಲ್ಲಿನ ಸರಕಾರದ ವಿರುದ್ಧ ಆರೋಪಗಳು ಕೇಳಿ ಬರುತ್ತಿವೆ. ಅಧಿಕಾರಕ್ಕೆ ಬಂದ ಬೆನ್ನಿಗೇ ಸಚಿವ ವಿಜಯ್ ಸಿಂಗ್ಲಾ ಭ್ರಷ್ಟಾಚಾರದ ಆರೋಪದಲ್ಲಿ ಬಂಧಿತರಾದರೆ, ಜನವರಿಯಲ್ಲಿ ಇನ್ನೋರ್ವ ಸಚಿವ ಫೌಜಾ ಸಿಂಗ್ ಕೂಡ ಭ್ರಷ್ಟಾಚಾರ ಆರೋಪದಿಂದಾಗಿ ರಾಜೀನಾಮೆ ನೀಡಬೇಕಾಯಿತು. ಓರ್ವ ಶಾಸಕನ ಮೇಲೂ ಭ್ರಷ್ಟಾಚಾರದ ಕಳಂಕವಿದೆ. ಭಾರೀ ಬಹುಮತದೊಂದಿಗೆ ಪಂಜಾಬ್‌ನ ಅಧಿಕಾರವನ್ನು ಆಪ್ ಹಿಡಿದಿದೆಯಾದರೂ, ಅದು ಪಂಜಾಬ್‌ನ ನಿರೀಕ್ಷೆಗಳನ್ನು ಈಡೇರಿಸುವಲ್ಲಿ ವಿಫಲವಾಗಿದೆ. ಇವೆಲ್ಲವು ಸಿಸೋಡಿಯಾ ಪ್ರಕರಣದಲ್ಲಿ ಆಪ್ ಮುಗ್ಧ ಅಲ್ಲ ಎನ್ನುವುದನ್ನು ಹೇಳುತ್ತದೆ. ತನ್ನ ಭ್ರಷ್ಟಾಚಾರವನ್ನು ಹೀಗೆ ಸಮರ್ಥಿಸುತ್ತಾ ಮುಂದುವರಿದರೆ, ಅದನ್ನು ಮರೆ ಮಾಚಲು ಬಿಜೆಪಿಯಂತೆ ಕೋಮುವಾದಿ ಹಿಂಸಾಚಾರಗಳ ಮೊರೆ ಹೊಕ್ಕರೆ ಅಚ್ಚರಿಯೇನೂ ಇಲ್ಲ. ಸಿಸೋಡಿಯಾ ಮೇಲಿರುವ ಆರೋಪ ನಿಧಾನಕ್ಕೆ ಕೇಜ್ರಿವಾಲ್ ಅವರನ್ನೂ ಸುತ್ತಿಕೊಳ್ಳುವ ಸಾಧ್ಯತೆಗಳಿವೆ. ಬರೇ ಮೋದಿಯನ್ನು ಟೀಕಿಸುವ ಮೂಲಕ ಅದರಿಂದ ಪಾರಾಗುವುದು ಅಸಾಧ್ಯದ ಮಾತು. ಒಂದು ರೀತಿಯಲ್ಲಿ, ಆಮ್ ಆದ್ಮಿ ಪಕ್ಷ ತಾನೇ ತೋಡಿದ ಹಳ್ಳಕ್ಕೆ ಬಿದ್ದು ಬಿಟ್ಟಿದೆ.

Similar News