ಹಾಥರಸ್ ಅತ್ಯಾಚಾರ, ಕೊಲೆ: ಮತ್ತೊಮ್ಮೆ ನ್ಯಾಯದ ಕಗ್ಗೊಲೆ
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಉತ್ತರ ಪ್ರದೇಶದ ಹಾಥರಸ್‌ನ ದಲಿತ ಮಹಿಳೆಯೋರ್ವರ ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆ ಪ್ರಕರಣಕ್ಕೆ ಕೊನೆಗೂ 'ನ್ಯಾಯ' ದೊರಕಿದೆ. ಉತ್ತರ ಪ್ರದೇಶದ ಎಸ್‌ಸಿ-ಎಸ್‌ಟಿ ನ್ಯಾಯಾಲಯವೊಂದು ಅತ್ಯಾಚಾರಕ್ಕೆ ಸಂಬಂಧಿಸಿ ನಾಲ್ವರನ್ನೂ ದೋಷ ಮುಕ್ತಿಗೊಳಿಸಿದೆ. ಹತ್ಯೆಗೆ ಸಂಬಂಧಿಸಿ ಓರ್ವನಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿದೆಯಾದರೂ, ಹತ್ಯೆಯನ್ನು ಕೊಲೆಗೆ ಸಮನಲ್ಲದ ನರಹತ್ಯೆ ಎಂದು ಬಣ್ಣಿಸಿ ಆರೋಪಿಯ ಮೇಲೆ ಅನುಕಂಪವನ್ನು ವ್ಯಕ್ತಪಡಿಸಿದೆ. ಒಟ್ಟಿನಲ್ಲಿ ನ್ಯಾಯ ಸಿಕ್ಕಿರುವುದು ಯಾರಿಗೆ? ನ್ಯಾಯಾಲಯ ಆರೋಪಿಗಳನ್ನೇ ಸಂತ್ರಸ್ತರ ಸ್ಥಾನದಲ್ಲಿ ನಿಲ್ಲಿಸಿ ವಿಚಾರಣೆ ನಡೆಸಿತೆ? ಎನ್ನುವ ಗೊಂದಲ ಎಲ್ಲರನ್ನು ಕಾಡತೊಡಗಿದೆ. ಪುಣ್ಯಕ್ಕೆ ಈ ತೀರ್ಪನ್ನು ಆಲಿಸುವುದಕ್ಕೆ ಸಂತ್ರಸ್ತೆ ಜೀವಂತವಿಲ್ಲ. ಒಂದು ವೇಳೆ ಜೀವಂತವಿದ್ದಿದ್ದರೆ, ಇಡೀ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯ ಸಂತ್ರಸ್ತೆಯನ್ನೇ ಗಲ್ಲಿಗೇರಿಸಿ ಬಿಡುತ್ತಿತ್ತೇನೋ? ಎಂದು ಅನುಮಾನ ಪಡುವಂತಾಗಿದೆ. ಯಾಕೆಂದರೆ ಹಾಥರಸ್ ಪ್ರಕರಣದಲ್ಲಿ, ಈಗಾಗಲೇ ಅದನ್ನು ವರದಿ ಮಾಡಲು ತೆರಳಿದ ಪತ್ರಕರ್ತನನ್ನು ಎರಡು ವರ್ಷಗಳ ಕಾಲ ಜೈಲಿನಲ್ಲಿರಿಸಿ ಶಿಕ್ಷಿಸಿ, ಇತ್ತೀಚೆಗಷ್ಟೇ ಬಿಡುಗಡೆ ಮಾಡಲಾಗಿದೆ.
ಅತ್ಯಾಚಾರ, ಕೊಲೆಗಳಿಗಿಂತಲೂ ಭೀಕರವಾದುದು, ಅದನ್ನು ಪತ್ರಿಕೆಗಳಲ್ಲಿ ಬಹಿರಂಗಗೊಳಿಸುವುದು ಎನ್ನುವುದನ್ನು ಈ ಪ್ರಕರಣದಿಂದ ಈ ದೇಶ ಈಗಾಗಲೇ ಅರ್ಥ ಮಾಡಿಕೊಂಡಿದೆ. ದಲಿತ ಮಹಿಳೆಯೊಬ್ಬಳನ್ನು ಕೊಲೆಗೈಯುವುದು, ಅದನ್ನು ವರದಿ ಮಾಡಲು ತೆರಳಿದಷ್ಟು ದೊಡ್ಡ ಅಪರಾಧ ಅಲ್ಲ ಎನ್ನುವುದು ತೀರ್ಪಿನಿಂದ ಸಾಬೀತಾಗಿದೆ. 2020ರಲ್ಲಿ ನಡೆದ ಹಾಥರಸ್ ಅತ್ಯಾಚಾರ ಪ್ರಕರಣದಲ್ಲಿ ಸಂತ್ರಸ್ತೆ ತನ್ನ ಮರಣ ಹೇಳಿಕೆಯಲ್ಲಿ ನಾಲ್ವರು ಆರೋಪಿಗಳು ಸಾಮೂಹಿಕ ಅತ್ಯಾಚಾರ ಎಸಗಿದ್ದರು ಎನ್ನುವುದನ್ನು ಬಹಿರಂಗಪಡಿಸಿದ್ದಳು. ಈ ಹೇಳಿಕೆಯನ್ನು ನೀಡಿದ ಬಳಿಕ ಆಕೆ ಸಾವನ್ನಪ್ಪಿದ್ದಳು. ಈ ಸಂದರ್ಭದಲ್ಲಿ ಆಕೆಯ ವೈದ್ಯಕೀಯ ಪರೀಕ್ಷೆಯನ್ನು ಪೊಲೀಸರು ನಡೆಸಬೇಕಾಗಿತ್ತು. ಅತ್ಯಾಚಾರ, ಕೊಲೆಗೆ ಸಂಬಂಧಿಸಿದ ಸಾಕ್ಷ ನಾಶವಾಗುವ ಹಿನ್ನೆಲೆಯಲ್ಲಿ ಪೊಲೀಸರು ಮೃತದೇಹವನ್ನು ಸುಡದೇ ದಫನ ಮಾಡಬೇಕಾಗಿತ್ತು. ಆದರೆ ಕುಟುಂಬಸ್ಥರಿಗೂ ಮಾಹಿತಿ ನೀಡದೆ ಆತುರಾತುರದಲ್ಲಿ ಮೃತದೇಹವನ್ನು ಸುಟ್ಟು ಹಾಕಿದ್ದರು. ಪ್ರಕರಣವನ್ನು ಪೊಲೀಸರು ನಿಭಾಯಿಸಿದ ರೀತಿಯ ಬಗ್ಗೆ ನ್ಯಾಯಾಲಯ ಬಳಿಕ ತೀವ್ರ ಆಕ್ಷೇಪವನ್ನೂ ವ್ಯಕ್ತಪಡಿಸಿತ್ತು. ಘಟನೆ ದೇಶಾದ್ಯಂತ ಸುದ್ದಿಯಾಗುತ್ತಿದ್ದಂತೆಯೇ, ಯಾವುದೇ ಪತ್ರಕರ್ತರು ಅಥವಾ ರಾಜಕೀಯ ಮುಖಂಡರು ಭೇಟಿ ನೀಡದಂತೆ ಸಂತ್ರಸ್ತೆಯ ಕುಟುಂಬಕ್ಕೆ ಜಿಲ್ಲಾಡಳಿತ ದಿಗ್ಬಂಧನವನ್ನು ವಿಧಿಸಿತ್ತು.
ಪ್ರಕರಣ ಮಾಧ್ಯಮಗಳಲ್ಲಿ ಮುಖಪುಟದ ಸುದ್ದಿಯಾಗ ತೊಡಗಿದಂತೆ ತನ್ನ ಮಾನ ಉಳಿಸಿಕೊಳ್ಳಲು ಸರಕಾರ ಆರೋಪಿಗಳ ಮೇಲೆ ಪ್ರಕರಣವನ್ನು ದಾಖಲಿಸಿತ್ತು. ಆದರೆ ಅಷ್ಟರಲ್ಲೇ ಸಂತ್ರಸ್ತೆಯ ಪರವಾಗಿದ್ದ ಬಹುತೇಕ ಸಾಕ್ಷಗಳನ್ನು ನಾಶಗೊಳಿಸುವಲ್ಲಿ ಪೊಲೀಸ್ ಇಲಾಖೆ ಯಶಸ್ವಿಯಾಗಿತ್ತು. ಪೊಲೀಸ್ ಇಲಾಖೆ ನೀಡಿದ ಸಾಕ್ಷಿಗಳ ಆಧಾರದಲ್ಲಿ ನ್ಯಾಯಾಲಯ ತೀರ್ಪನ್ನು ನೀಡುತ್ತದೆ. ಹೊರ ಬಿದ್ದಿರುವ ತೀರ್ಪು ಪೊಲೀಸರು 'ಯಾರ ಪರವಾಗಿ ಕಾರ್ಯ ನಿರ್ವಹಿಸಿದ್ದಾರೆ' ಎನ್ನುವುದನ್ನು ಸ್ಪಷ್ಟಪಡಿಸಿದೆ. ಅತ್ಯಾಚಾರ ಆರೋಪದಿಂದ ನಾಲ್ವರನ್ನೂ ನ್ಯಾಯಾಲಯ ಖುಲಾಸೆಗೊಳಿಸಿದೆ ನಿಜ. ಹಾಗಿದ್ದರೆ ಸಂತ್ರಸ್ತೆಯ ಮೇಲೆ ಅತ್ಯಾಚಾರ ನಡೆದೇ ಇಲ್ಲ ಎಂದು ನ್ಯಾಯಾಲಯ ಹೇಳುತ್ತದೆಯೆ? ಸಂತ್ರಸ್ತಳು ಸಾಯುವ ಮುನ್ನ ನೀಡಿದ್ದಾಳೆ ಎನ್ನಲಾಗಿರುವ ಹೇಳಿಕೆಯ ಗತಿ ಏನಾಯಿತು? ಅತ್ಯಾಚಾರ ನಡೆದೇ ಇಲ್ಲ ಎಂದಾದರೆ, ಪೊಲೀಸರು ರಾತ್ರೋರಾತ್ರಿ ಮೃತದೇಹವನ್ನು ಯಾಕೆ ಸುಟ್ಟು ಹಾಕಿದರು? ಹೀಗೆ ಸುಟ್ಟು ಹಾಕಿ ತನಿಖೆಯ ದಾರಿ ತಪ್ಪಿಸಿದ ಪೊಲೀಸರಿಗೆ ಯಾವ ಶಿಕ್ಷೆಯೂ ಇಲ್ಲವೆ? ತೀರ್ಪಿನ ಬಗ್ಗೆ ಪ್ರತಿಕ್ರಿಯಿಸಿರುವ ಸಂತ್ರಸ್ತೆಯ ಕುಟುಂಬಸ್ಥರು ''ಉತ್ತರ ಪ್ರದೇಶದಲ್ಲಿ ದಲಿತರ ಸ್ಥಾನಮಾನ ಏನು ಎನ್ನುವುದನ್ನು ತೀರ್ಪು ಘೋಷಿಸಿದೆ'' ಎಂದು ಹೇಳಿದ್ದಾರೆ. ಅಂದರೆ ದಲಿತ ಮಹಿಳೆಯರನ್ನು ಅತ್ಯಾಚಾರಗೈಯುವ ಅಧಿಕಾರವನ್ನು ಪರೋಕ್ಷವಾಗಿ ಅಲ್ಲಿರುವ ಮೇಲ್‌ಜಾತಿಗಳಿಗೆ ನ್ಯಾಯಾಲಯ ನೀಡಿದೆ. ಠಾಕೂರರಂತಹ ಮೇಲ್ ಜಾತಿಯ ಜನರನ್ನು ಅನಗತ್ಯವಾಗಿ ಕ್ರೋಧಕ್ಕೀಡು ಮಾಡದೆ ಅವರಿಗೆ ತಗ್ಗಿ ಬಗ್ಗಿ ನಡೆಯಲು ನ್ಯಾಯಾಲಯದಿಂದ ಪರೋಕ್ಷ ಸಲಹೆಯೊಂದು ನೀಡಲಾಗಿದೆ. ಅದರ ಭಾಗವಾಗಿಯೇ ಹತ್ಯೆಯನ್ನು ಕಗ್ಗೊಲೆ ಎಂದು ನ್ಯಾಯಾಲಯ ಹೇಳಿಲ್ಲ. ಬದಲಿಗೆ 'ಕೊಲೆ ಮಾಡುವ ನೇರ ಉದ್ದೇಶವಿಲ್ಲದ ಹತ್ಯೆ' ಎಂದು ಅದನ್ನು ಮೃದು ಭಾಷೆಯಲ್ಲಿ ವ್ಯಾಖ್ಯಾನಿಸಿದೆ.
ಮೃತ ಮಹಿಳೆಯ ಮೇಲೆ ನಡೆದ ಅನ್ಯಾಯಕ್ಕಿಂತಲೂ ಈ ತೀರ್ಪು ಬರ್ಬರವಾಗಿದೆ. ಅಂದು, ಅನ್ಯಾಯ ಒಬ್ಬ ಮಹಿಳೆಯ ಮೇಲೆ ಮಾತ್ರ ನಡೆದಿದ್ದರೆ, ಇದೀಗ ಹೊರ ಬಿದ್ದಿರುವ ತೀರ್ಪು ಸಕಲ ದಲಿತ ಮಹಿಳೆಯರ ಮೇಲೆ ಅನ್ಯಾಯ ಎಸಗಲು ಪರೋಕ್ಷ ಪರವಾನಿಗೆಯನ್ನು ನೀಡಿದೆ. ಹಾಥರಸ್ ಪ್ರಕರಣದಲ್ಲಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾಗ, ಅಲ್ಲಿನ ಮೇಲ್‌ಜಾತಿಯ ಮುಖಂಡರು ಬಹಿರಂಗವಾಗಿ ಪ್ರತಿಭಟನೆ ನಡೆಸಿದ್ದರು. ದಲಿತರ ಮೇಲೆ ಹಲ್ಲೆ ನಡೆಸುವ ಬೆದರಿಕೆಯನ್ನೂ ಒಡ್ಡಿದ್ದರು. ಇದೀಗ ಆರೋಪಿಗಳು ಬಿಡುಗಡೆಗೊಂಡಿದ್ದಾರೆ. ಈ ಬಿಡುಗಡೆಗೊಂಡಿರುವ ಆರೋಪಿಗಳು ಸಂತ್ರಸ್ತ ಕುಟುಂಬದ ಮೇಲೆ ದಾಳಿ ನಡೆಸುವ ಸಾಧ್ಯತೆಗಳನ್ನು ನಿರಾಕರಿಸುವಂತಿಲ್ಲ. ಉತ್ತರ ಪ್ರದೇಶ ಈಗಾಗಲೇ ದಲಿತ ಮಹಿಳೆಯರ ಮೇಲೆ ನಡೆಯುವ ಅತ್ಯಾಚಾರ, ದೌರ್ಜನ್ಯಗಳಿಗಾಗಿ ಕುಖ್ಯಾತಿಯನ್ನು ಪಡೆದಿದೆ.
ಹಾಥರಸ್ ಪ್ರಕರಣದಲ್ಲಿ ಹೊರ ಬಿದ್ದ ತೀರ್ಪಿನಿಂದಾಗಿ ದಲಿತರು ಪೊಲೀಸ್ ಇಲಾಖೆ ಮತ್ತು ನ್ಯಾಯ ವ್ಯವಸ್ಥೆಯ ಮೇಲೆ ಸಂಪೂರ್ಣ ನಂಬಿಕೆ ಕಳೆದುಕೊಳ್ಳುವಂತಾಗಿದೆ. ತಮ್ಮ ಮೇಲೆ ಅನ್ಯಾಯಗಳು ನಡೆದಾಗ ಅದನ್ನು ವೌನವಾಗಿ ಸಹಿಸುವುದೇ ನಮಗಿರುವ ದಾರಿ ಎಂದು ಅವರು ಭಾವಿಸುವಂತಾಗಿದೆ. ಇತ್ತ ದಲಿತರ ಮೇಲೆ ದೌರ್ಜನ್ಯವೆಸಗಲು ಮೇಲ್ ಜಾತಿಯ ಜನರಿಗೆ ಈ ತೀರ್ಪು ಇನ್ನಷ್ಟು ಧೈರ್ಯ ನೀಡಲಿದೆ. ಭವಿಷ್ಯದಲ್ಲಿ ಕಬ್ಬಿನ ಗದ್ದೆಗಳಲ್ಲಿ, ಕಾಡು ಪ್ರದೇಶಗಳಲ್ಲಿ ಇನ್ನಷ್ಟು ದಲಿತರ ಮೃತದೇಹಗಳು ಪತ್ತೆಯಾಗುವ ಸಾಧ್ಯತೆಗಳಿವೆ. ಪೊಲೀಸ್ ಇಲಾಖೆಗಳು ತನಿಖೆಯ ಹೆಸರಿನಲ್ಲಿ ಅವುಗಳನ್ನು ಮುಚ್ಚಿ ಹಾಕಿ, ಮೇಲ್‌ಜಾತಿಯ 'ಹಕ್ಕು'ಗಳನ್ನು ಕಾಪಾಡಲಿವೆ. ಹಾಥರಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹೋರಾಟ ಮುಂದುವರಿಯದೇ ಇದ್ದರೆ, ಉತ್ತರ ಪ್ರದೇಶವೆನ್ನುವ ರಾಜ್ಯ ದಲಿತರ ಪಾಲಿಗೆ ಇನ್ನಷ್ಟು ಭೀಕರವಾಗಲಿದೆ. ದಲಿತ ಸಮುದಾಯದಿಂದ ಬಂದ ಮಹಿಳೆಯೊಬ್ಬಳು ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ ಉತ್ತರ ಪ್ರದೇಶದಲ್ಲಿ ದಲಿತ ಮಹಿಳೆಯೊಬ್ಬಳ ಭೀಕರ ಕಗ್ಗೊಲೆಗೆ ಸಂಬಂಧಿಸಿ ಹೊರ ಬಿದ್ದ ತೀರ್ಪು, ಈ ದೇಶದಲ್ಲಿ ಜಾತೀಯತೆಯ ಬೇರು ಎಷ್ಟು ಆಳವಾಗಿದೆ ಎನ್ನುವುದಕ್ಕೆ ಉದಾಹರಣೆಯಾಗಿದೆ. ''ಮೃತಪಟ್ಟ ಮಹಿಳೆ ಮೇಲ್‌ಜಾತಿಗೆ ಸೇರಿದವಳಾಗಿದ್ದು, ಆರೋಪಿ ದಲಿತನಾಗಿದ್ದರೆ ನ್ಯಾಯಾಲಯದ ತೀರ್ಪು ಇದೇ ರೀತಿ ಇರುತ್ತಿತ್ತೆ?'' ಎನ್ನುವ ಸಂತ್ರಸ್ತ ಕುಟುಂಬದ ಪ್ರಶ್ನೆ, ಸಂವಿಧಾನದ ಮೇಲೆ ನಂಬಿಕೆಯುಳ್ಳ ಎಲ್ಲರ ಪ್ರಶ್ನೆಯೂ ಹೌದು.