ಪ್ರತಿರೋಧ ಹತ್ತಿಕ್ಕಲು ತನಿಖಾ ಸಂಸ್ಥೆಗಳ ದುರ್ಬಳಕೆ
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ನರೇಂದ್ರ ಮೋದಿಯವರ ನೇತೃತ್ವದ ಒಕ್ಕೂಟ ಸರಕಾರ ಪ್ರತಿಪಕ್ಷ ನಾಯಕರನ್ನು ಹಣಿಯಲು ಸ್ವತಂತ್ರ ತನಿಖಾ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಳ್ಳುತ್ತಿದೆ ಎಂದು ಎಂಟು ಪ್ರಾದೇಶಿಕ ಪಕ್ಷಗಳ ಮುಖಂಡರು ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರರಾವ್, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಪಂಜಾಬ್ ಮುಖ್ಯಮಂತ್ರಿ ಭಗವಂತಸಿಂಗ್, ಬಿಹಾರ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್, ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷದ ನಾಯಕ ಶರದ್ ಪವಾರ್, ಕಾಶ್ಮೀರದ ನ್ಯಾಷನಲ್ ಕಾನ್ಫರೆನ್ಸ್ ನಾಯಕ ಫಾರೂಕ್ ಅಬ್ದುಲ್ಲಾ, ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ಅವರು ಈ ಪತ್ರಕ್ಕೆ ಸಹಿ ಹಾಕಿದ್ದಾರೆ.
ಮೋದಿ ಸರಕಾರ ಪ್ರಜಾಪ್ರಭುತ್ವದ ಮೌಲ್ಯಗಳಿಗೆ ತಿಲಾಂಜಲಿ ನೀಡುತ್ತಿದೆ. ಭಾರತ ಪ್ರಜಾಪ್ರಭುತ್ವದಿಂದ ನಿರಂಕುಶ ಪ್ರಭುತ್ವದತ್ತ ಸಾಗುತ್ತಿದೆ ಎಂದು ಈ ಪ್ರಾದೇಶಿಕ ಪ್ರತಿಪಕ್ಷಗಳ ನಾಯಕರು ಮಾಡಿರುವ ಆರೋಪದಲ್ಲಿ ಹುರುಳಿಲ್ಲದಿಲ್ಲ. ಕಳೆದ ಎಂಟು ವರ್ಷಗಳ ವಿದ್ಯಮಾನಗಳನ್ನು ಗಮನಿಸಿದರೆ ಭಾರತದ ಜನತಂತ್ರ ಅಪಾಯದಲ್ಲಿ ಇರುವುದು ಸ್ಪಷ್ಟವಾಗುತ್ತದೆ. ಪ್ರತಿಪಕ್ಷ ನಾಯಕರನ್ನು ಮಾತ್ರವಲ್ಲ ಅಸಮಾನತೆ, ಅನ್ಯಾಯದ ವಿರುದ್ಧ ಧ್ವನಿಯೆತ್ತುವ ಚಿಂತಕರನ್ನು, ಬುದ್ಧಿಜೀವಿಗಳನ್ನು ಮೋದಿ ಸರಕಾರ ಶತ್ರುಗಳಂತೆ ಕಾಣುತ್ತಿದೆ. ಹೆಸರಾಂತ ಕವಿ ವರವರರಾವ್, ಅಂತರ್‌ರಾಷ್ಟ್ರೀಯ ಮಟ್ಟದ ಲೇಖಕ ಆನಂದ ತೇಲ್ತುಂಬ್ಡೆ, ಪತ್ರಕರ್ತ ಗೌತಮ್ ನವ್ಲಾಖಾ ಸೇರಿದಂತೆ ಸಾಂಸ್ಕೃತಿಕ ಲೋಕದ ಅನೇಕ ಬುದ್ಧಿಜೀವಿಗಳನ್ನು ಜೈಲಿಗೆ ಹಾಕಿ ಕಿರುಕುಳ ಕೊಟ್ಟಿದ್ದನ್ನು, ಕೊಡುತ್ತಿರುವುದನ್ನು ಮರೆಯಲು ಸಾಧ್ಯವಿಲ್ಲ.
ಬಿಜೆಪಿಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರದ ದುರ್ವಾಸನೆ ಬರುತ್ತಿದ್ದರೂ, ಅದನ್ನು ಮುಚ್ಚಿ ಹಾಕಿ ಪ್ರತಿಪಕ್ಷ ನಾಯಕರ ಸಣ್ಣಪುಟ್ಟ ಪ್ರಕರಣಗಳನ್ನು ಬಳಸಿಕೊಂಡು ಸಿಬಿಐ, ಜಾರಿ ನಿರ್ದೇಶನಾಲಯ, ಎನ್‌ಐಎ ಮುಂತಾದ ತನಿಖಾ ಸಂಸ್ಥೆಗಳ ಮೂಲಕ ಅವರ ಮೇಲೆ ದಾಳಿ ಮಾಡುತ್ತಿರುವುದು ಈಗ ಸಾಮಾನ್ಯವಾಗಿದೆ.
ಸದ್ಯದ ಉದಾಹರಣೆಯೆಂದರೆ ದಿಲ್ಲಿ ಉಪ ಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಬಂಧನದ ಪ್ರಕರಣ. ಅಬಕಾರಿ ನೀತಿ ಜಾರಿಯ ಸಂಬಂಧದಲ್ಲಿ ಸಿಬಿಐ ಇತ್ತೀಚೆಗೆ ಅವರನ್ನು ಬಂಧಿಸಿ ರಾಜೀನಾಮೆ ಕೊಡುವಂತೆ ಮಾಡಿತು. ಇದು ಮಾತ್ರವಲ್ಲ 2014ರಲ್ಲಿ ನಾಗಪುರ ನಿಯಂತ್ರಿತ ಮೋದಿ ಸರಕಾರ ಅಸ್ತಿತ್ವಕ್ಕೆ ಬಂದ ನಂತರ ಪ್ರತಿಪಕ್ಷ ನಾಯಕರನ್ನು ಪಟ್ಟಿ ಮಾಡಿ ಬಲಿಪಶು ಮಾಡಲಾಗುತ್ತಿದೆ. ಆರ್‌ಜೆಡಿ ನಾಯಕ ಲಾಲು ಪ್ರಸಾದ್ ಯಾದವ್, ಶಿವಸೇನೆಯ ಧುರೀಣ ಸಂಜಯ್ ರಾವುತ್, ಸಮಾಜವಾದಿ ಪಕ್ಷದ ಆಝಂ ಖಾನ್, ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷದ ನಾಯಕ ನವಾಬ್ ಮಲಿಕ್ ಮತ್ತು ಅನಿಲ್ ದೇಶಮುಖ್, ತೃಣಮೂಲ ಕಾಂಗ್ರೆಸ್‌ನ ಅಭಿಷೇಕ್ ಬ್ಯಾನರ್ಜಿ ಅವರ ವಿರುದ್ಧ ತನಿಖಾ ಸಂಸ್ಥೆಗಳನ್ನು ಉಪಯೋಗಿಸಿಕೊಂಡು ಕಿರುಕುಳ ನೀಡಲಾಗಿದೆ. ಸ್ವತಂತ್ರವಾಗಿ ಕಾರ್ಯನಿರ್ವಹಿಸಬೇಕಾದ ತನಿಖಾ ಸಂಸ್ಥೆಗಳು ಆಳುವ ಪಕ್ಷಗಳ ಆಜ್ಞಾಧಾರಕ ಪಡೆಗಳಂತೆ ಕೆಲಸ ಮಾಡುತ್ತಿವೆ.
ಒಂದು ವೇಳೆ ತನಿಖಾ ಸಂಸ್ಥೆಗಳ ಕಿರಿಕಿರಿಗೆ ಹೆದರಿ ಪ್ರತಿಪಕ್ಷ ನಾಯಕರು ಬಿಜೆಪಿ ಸೇರಿದರೆ ಅಂಥವರಿಗೆ ತನಿಖೆಯಿಂದ ವಿನಾಯಿತಿ ನೀಡಲಾಗುತ್ತದೆ. ಬಿಜೆಪಿ ಸೇರಿರುವ ಮುಕುಲ್‌ರಾಯ್, ನಾರಾಯಣ ರಾಣೆ, ಹಿಮಂತ್ ಶರ್ಮಾ, ಸುವೇಂದು ಅಧಿಕಾರಿ ಅವರ ವಿರುದ್ಧದ ಸಿಬಿಐ ತನಿಖೆ ನಿಧಾನ ಗತಿಯಲ್ಲಿ ಸಾಗಿರುವುದು ಯಾವ ಕಾರಣಕ್ಕಾಗಿ? ಕರ್ನಾಟಕದಲ್ಲಿ ಸಾವಿರಾರು ಕೋಟಿ ರೂ. ಲೂಟಿ ಮಾಡಿ ನಾಪತ್ತೆಯಾಗಿರುವ ಬಿಜೆಪಿ ಶಾಸಕ ಮಾಡಾಳ್ ಬಂಧನಕ್ಕೆ ವಿಳಂಬ ಮಾಡುತ್ತಿರುವುದೇಕೆ? ಕಳೆದ ನಾಲ್ಕು ವರ್ಷಗಳಲ್ಲಿ ಕರ್ನಾಟಕದ ಬಿಜೆಪಿ ಆಡಳಿತದಲ್ಲಿ ನಡೆದಷ್ಟು ಭ್ರಷ್ಟಾಚಾರ ಹಿಂದೆಂದೂ ನಡೆದಿಲ್ಲ. ಕೇಂದ್ರ ಗೃಹಮಂತ್ರಿ ಅಮಿತ್ ಶಾ ಮೂರು ದಿನಗಳ ಚುನಾವಣಾ ಪ್ರಚಾರಕ್ಕೆಂದು ರಾಜ್ಯಕ್ಕೆ ಬಂದವರು ಮಾಡಾಳ್ ಭ್ರಷ್ಟಾಚಾರ ಬಯಲಿಗೆ ಬಂದ ನಂತರ ಪ್ರವಾಸವನ್ನು ಮೊಟಕುಗೊಳಿಸಿ ದಿಲ್ಲಿಗೆ ವಾಪಸಾದರು.
ಒಂದೆಡೆ ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ಪ್ರತಿಪಕ್ಷ ನಾಯಕರಿಗೆ ಕಿರುಕುಳ ಕೊಡುತ್ತಿದ್ದರೆ, ಇನ್ನೊಂದೆಡೆ ಪ್ರತಿಪಕ್ಷಗಳ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ರಾಜ್ಯಪಾಲರನ್ನು ಸಂವಿಧಾನ ಬಾಹಿರವಾಗಿ ಬಳಸಿಕೊಂಡು ಪ್ರತಿಪಕ್ಷ ಸರಕಾರಗಳ ದೈನಂದಿನ ಆಡಳಿತದಲ್ಲಿ ತೊಂದರೆ ನೀಡಲಾಗುತ್ತದೆ. ಪ್ರಜಾಸತ್ತಾತ್ಮಕವಾಗಿ ಚುನಾಯಿತಗೊಂಡ ಸರಕಾರಗಳನ್ನು ರಾಜ್ಯಪಾಲರ ಮೂಲಕ ದುರ್ಬಲಗೊಳಿಸಲಾಗುತ್ತಿದೆ. ಕೇರಳ, ಪಶ್ಚಿಮ ಬಂಗಾಳ, ತೆಲಂಗಾಣ, ತಮಿಳುನಾಡು, ಮಹಾರಾಷ್ಟ್ರ ಮತ್ತು ಪಂಜಾಬ್ ರಾಜ್ಯ ಪಾಲರುಗಳು ಮತ್ತು ದಿಲ್ಲಿಯ ಲೆಫ್ಟಿನೆಂಟ್ ಗವರ್ನರ್ ಕೇಂದ್ರ ಸರಕಾರದ ಏಜೆಂಟರಂತೆ ಕಾರ್ಯನಿರ್ವಹಿಸುತ್ತಿದ್ದಾರೆ. ಇದರಿಂದ ಒಕ್ಕೂಟ ವ್ಯವಸ್ಥೆಯ ಮೂಲಭೂತ ಆಶಯಗಳಿಗೆ ಧಕ್ಕೆ ಆಗುತ್ತಿದೆ. ಇದು ನಿಜಕ್ಕೂ ಆತಂಕಕಾರಿ ಬೆಳವಣಿಗೆಯಾಗಿದೆ.
ಸ್ವತಂತ್ರ ತನಿಖಾ ಸಂಸ್ಥೆಗಳನ್ನು ಈ ರೀತಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದರೆ, ಇನ್ನೊಂದೆಡೆ ಚುನಾವಣಾ ಆಯೋಗದಂಥ ಸ್ವಾಯತ್ತ ಸಾಂವಿಧಾನಿಕ ಸಂಸ್ಥೆಗಳನ್ನು ಮೋದಿ ಸರಕಾರ ತನ್ನ ರಾಜಕೀಯ ಹಿತಾಸಕ್ತಿಗಳ ಸಲುವಾಗಿ ಬಳಸಿಕೊಳ್ಳುತ್ತಿದೆ. ಈ ಬಗ್ಗೆ ಸುಪ್ರೀಂ ಕೋರ್ಟ್ ಕೂಡ ಆತಂಕ ವ್ಯಕ್ತಪಡಿಸಿದೆ. ಚುನಾವಣಾ ಆಯುಕ್ತರ ನೇಮಕ ಮಾಡಲು ಈವರೆಗೆ ಕೇಂದ್ರ ಸಚಿವ ಸಂಪುಟಕ್ಕೆ ಇದ್ದ ಅಧಿಕಾರದ ಬದಲಿಗೆ ಸುಪ್ರೀಂ ಕೋರ್ಟ್ ಮೂವರು ಸದಸ್ಯರ ಆಯ್ಕೆ ಸಮಿತಿಯ ಅಗತ್ಯದ ಬಗ್ಗೆ ಆದೇಶ ನೀಡಿದೆ. ಈ ಸಮಿತಿಯಲ್ಲಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರು, ಪ್ರಧಾನಮಂತ್ರಿ ಹಾಗೂ ಲೋಕಸಭೆಯ ಪ್ರತಿಪಕ್ಷ ನಾಯಕರು ಇರಬೇಕೆಂದು ಸೂಚಿಸಿದೆ. ಇದು ಒಳ್ಳೆಯ ಬೆಳವಣಿಗೆಯಾಗಿದೆ.
ಒಕ್ಕೂಟ ಸರಕಾರದ ಸೂತ್ರ ಹಿಡಿದಿರುವ ಮೋದಿಯವರ ನೇತೃತ್ವದ ಬಿಜೆಪಿ ಸರಕಾರದ ವಿರುದ್ಧ ಎಂಟು ಪ್ರಾದೇಶಿಕ ಪಕ್ಷಗಳು ಮಾತ್ರ ಪತ್ರ ಬರೆದಿವೆ. ಆದರೆ ಬಹುತೇಕ ಇದೇ ನಿಲುವನ್ನು ಹೊಂದಿರುವ ಕಾಂಗ್ರೆಸ್, ಜೆಡಿಎಸ್, ಡಿಎಂಕೆ, ಜೆಡಿಯು ಹಾಗೂ ಕಮ್ಯುನಿಸ್ಟ್ ಪಕ್ಷಗಳು ಈ ಪತ್ರಕ್ಕೆ ಯಾಕೆ ಸಹಿ ಹಾಕಿಲ್ಲ ಎಂಬುದು ಗೊತ್ತಾಗಿಲ್ಲ. ಇವತ್ತಿನ ಮೋದಿಯವರ ನೇತೃತ್ವದ ಬಿಜೆಪಿ ಸರಕಾರದ ನಿರಂಕುಶಾಡಳಿತವನ್ನು ಹಿಮ್ಮೆಟ್ಟಿಸಲು ಎಲ್ಲ ಪ್ರತಿಪಕ್ಷಗಳು ಒಂದೇ ವೇದಿಕೆಗೆ ಬರುವುದು ಚಾರಿತ್ರಿಕ ಅನಿವಾರ್ಯತೆಯಾಗಿದೆ. ಪ್ರತಿಪಕ್ಷಗಳ ಒಡಕು ಒಳ್ಳೆಯ ಬೆಳವಣಿಗೆ ಅಲ್ಲ. ಇನ್ನು ಮುಂದಾದರೂ ಪ್ರತಿಪಕ್ಷಗಳು ತಮ್ಮ ಆಂತರಿಕ ಭಿನ್ನಾಭಿಪ್ರಾಯವನ್ನು ಬದಿಗೊತ್ತಿ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಕಾಪಾಡಿಕೊಳ್ಳಲು ಒಂದಾಗಬೇಕಾಗಿದೆ.