ಭಾರತಕ್ಕೆ ಅಮೆರಿಕದ ಹೊಸ ರಾಯಭಾರಿ: ಸೆನೆಟ್ ಸಮಿತಿ ಒಪ್ಪಿಗೆ

Update: 2023-03-09 05:02 GMT

ವಾಷಿಂಗ್ಟನ್: ಲಾಸ್ ಎಂಜಲೀಸ್‌ನ ಮಾಜಿ ಮೇಯರ್ ಎರಿಕ್ ಗರ್ಸೆಟ್ಟಿಯವರನ್ನು ಭಾರತದ ರಾಯಭಾರಿಯಾಗಿ ನೇಮಕ ಮಾಡುವ ಪ್ರಸ್ತಾವಕ್ಕೆ ಅಮೆರಿಕ ಸೆನೆಟ್‌ನ ವಿದೇಶಿ ವ್ಯವಹಾರಗಳ ಸಮಿತಿ ಅನುಮೋದನೆ ನೀಡಿದೆ. ಈ ನಾಮನಿರ್ದೇಶನದ ದೃಢೀಕರಣ ಸಂಬಂಧ ಮತದಾನ ಮಾಡಲು ಸಮಿತಿ ಪೂರ್ಣ ಸೆನೆಟ್‌ಗೆ ಕಳುಹಿಸಿಕೊಟ್ಟಿದೆ.

ಈ ನಾಮನಿರ್ದೇಶನವನ್ನು ಸೆನೆಟ್ ಸಮಿತಿ 13-8 ಮತಗಳ ಅಂತರದಿಂದ ಬುಧವಾರ ಅನುಮೋದಿಸಿದೆ. ಗರ್ಸೆಟ್ಟಿಯವರ ಪರವಾಗಿ ಡೆಮಾಕ್ರಟಿಕ್ ಪಕ್ಷದ ಎಲ್ಲ ಸದಸ್ಯರ ಜತೆಗೆ ರಿಪಬ್ಲಿಕನ್ ಪಕ್ಷದ ಸೆನೆಟರ್‌ಗಳಾದ ಟಾಡ್ ಯಂಗ್ ಹಾಗೂ ಬಿಲ್ ಹಗ್ರೆಟಿ ಮತ ಚಲಾಯಿಸಿದರು.

"ಸೆನೆಟ್ ಇಂದು ಈ ಬಗ್ಗೆ ಕ್ರಮ ಕೈಗೊಂಡಿರುವುದನ್ನು ನಾವು ಶ್ಲಾಘಿಸುತ್ತೇವೆ. ಭಾರತಕ್ಕೆ ದೃಢೀಕೃತ ರಾಯಭಾರಿಯ ಅಗತ್ಯ ಇದೆ. ನಮ್ಮ ತಳಮಟ್ಟದ ತಂಡ ರಾಯಭಾರಿಯ ಸ್ಥಾನದಲ್ಲಿ ಅದ್ಭುತ ಕಾರ್ಯ ಮಾಡಿದೆ" ಎಂದು ಅಮೆರಿಕದ ರಕ್ಷಣಾ ಇಲಾಖೆಯ ವಕ್ತಾರ ನೆಡ್ ಪೈಸ್ ಪ್ರತಿಕ್ರಿಯಿಸಿದ್ದಾರೆ. ಗರ್ಸೆಟ್ಟಿಯವರು ಸಾಕಷ್ಟು ಮುನ್ನವೇ ಈ ಹುದ್ದೆಗೆ ನೇಮಕಗೊಳ್ಳಬೇಕಿತ್ತು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

Similar News