ದ್ವಿತೀಯ ಪಿಯುಸಿ ಪರೀಕ್ಷೆ: ಉಡುಪಿ ಜಿಲ್ಲೆಯಲ್ಲಿ 91 ವಿದ್ಯಾರ್ಥಿಗಳು ಗೈರು

28 ಕೇಂದ್ರಗಳಲ್ಲಿ ಪರೀಕ್ಷೆ

Update: 2023-03-09 15:22 GMT

ಉಡುಪಿ, ಮಾ.9: ಗುರುವಾರ ನಡೆದ ಕನ್ನಡ ಭಾಷಾ ಪರೀಕ್ಷೆಗೆ ಒಟ್ಟು 91 ಮಂದಿ ಗೈರುಹಾಜರಾಗಿದ್ದಾರೆ ಎಂದು ಡಿಡಿಪಿಯು ತಿಳಿಸಿದ್ದಾರೆ. ಪರೀಕ್ಷೆಗಾಗಿ ನೊಂದಾಯಿಸಿಕೊಂಡಿದ್ದ 8833 ಮಂದಿಯಲ್ಲಿ ಒಟ್ಟು 8742 ಮಂದಿ ಇಂದು ಪರೀಕ್ಷೆಗೆ ಹಾಜರಾಗಿದ್ದಾರೆ ಎಂದವರು ತಿಳಿಸಿದ್ದಾರೆ.

ವಿದ್ಯಾರ್ಥಿಯೊಬ್ಬನ ಶೈಕ್ಷಣಿಕ ಬದುಕಿನಲ್ಲಿ ಅತಿ ಮುಖ್ಯವಾದ ದ್ವಿತೀಯ ಪಿಯುಸಿ ಪರೀಕ್ಷೆ ಇಂದು ಉಡುಪಿ ಜಿಲ್ಲೆಯ 28 ಪರೀಕ್ಷಾ ಕೇಂದ್ರಗಳಲ್ಲಿ ಪ್ರಾರಂಭಗೊಂಡಿದೆ. ಮೊದಲ ದಿನವಾದ ಗುರುವಾರ ಕನ್ನಡ ಭಾಷಾ ಪರೀಕ್ಷೆ ಯಾವುದೇ ಅಹಿತಕರ ಘಟನೆಗಳಿಲ್ಲದೇ ಜಿಲ್ಲೆಯಾದ್ಯಂತ ಸಾಂಗವಾಗಿ ನೆರವೇರಿತು. 

ಜಿಲ್ಲೆಯಲ್ಲಿ ಪ್ರಾರಂಭಗೊಂಡಿರುವ ದ್ವಿತೀಯ ಪಿಯುಸಿ ಪರೀಕ್ಷೆಗೆ ಸಂಬಂಧಿಸಿದಂತೆ, ಪರೀಕ್ಷಾ ಕೇಂದ್ರದಲ್ಲಿ ಕೈಗೊಂಡಿರುವ ಮುಂಜಾಗ್ರತಾ  ಕ್ರಮಗಳ ಬಗ್ಗೆ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ಅವರು  ಇಂದು ನಗರದ ಬಾಲಕಿಯರ ಪದವಿ ಪೂರ್ವ ಕಾಲೇಜಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಜಿಲ್ಲೆಯಲ್ಲಿ ಒಟ್ಟು 15,635 ವಿದ್ಯಾರ್ಥಿಗಳು ಪಿಯುಸಿ ಪರೀಕ್ಷೆ ಬರೆಯು ತಿದ್ದಾರೆ. 14,341 ಮಂದಿ ರೆಗ್ಯುಲರ್ ವಿದ್ಯಾರ್ಥಿಗಳು, 719 ಮಂದಿ ಖಾಸಗಿಯಾಗಿ ಹಾಗೂ 575 ಮಂದಿ ಪುನರಾವರ್ತಿತರು ಪರೀಕ್ಷೆಗೆ ಹೆಸರು ನೊಂದಾಯಿಸಿಕೊಂಡಿದ್ದಾರೆ.

ಒಟ್ಟು 7,739 ವಿದ್ಯಾರ್ಥಿಗಳು ಹಾಗೂ 7896 ವಿದ್ಯಾರ್ಥಿನಿಯರು ಹೆಸರು ನೊಂದಾಯಿಸಿಕೊಂಡಿದ್ದಾರೆ. ಇವರಲ್ಲಿ ರೆಗ್ಯುಲರ್ ವಿದ್ಯಾರ್ಥಿಗಳು 6948+7393 ಮಂದಿ. ವಿಜ್ಞಾನ ವಿಭಾಗದಲ್ಲಿ 6303, ವಾಣಿಜ್ಯ ವಿಭಾಗ ದಲ್ಲಿ 7673, ಕಲಾ ವಿಭಾಗದಲ್ಲಿ 1658 ವಿದ್ಯಾರ್ಥಿಗಳಿದ್ದಾರೆ.

ಪರೀಕ್ಷೆ ಹಿನ್ನಲೆಯಲ್ಲಿ ಇಂದಿನಿಂದ 29ನೇ ತಾರೀಕಿನವರೆಗೂ ಶಾಲಾ ಆವರಣದಲ್ಲಿ 144 ಸೆಕ್ಷನ್ ಜಾರಿಗೊಳಿಸಲಾಗಿದೆ. ಪರೀಕ್ಷಾ ಕೊಠಡಿಯಲ್ಲಿ ಸಮವಸ್ತ್ರ ಪಾಲನೆಗೆ ಸೂಚನೆ ನೀಡಲಾಗಿದೆ. ಪರೀಕ್ಷಾ ಕೇಂದ್ರ ಆವರಣದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ತುರ್ತು ಸಂದರ್ಭ ಮತ್ತು ಶೀತ-ಜ್ವರ ಲಕ್ಷಣ ಇರುವ ವಿದ್ಯಾರ್ಥಿಗಳನ್ನು ಪರೀಕ್ಷಿಸಿ ಅಗತ್ಯಬಿದ್ದರೆ, ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಲಾಗಿದೆ.

ನಕಲು ಹಾಗೂ ಪರೀಕ್ಷಾ ಅಕ್ರಮಗಳನ್ನು ತಡೆಯಲು ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲೂ ಸಿಸಿಟಿವಿಯನ್ನು ಅಳವಡಿಸಲಾಗಿದೆ. ಮೊಬೈಲ್ ಸೇರಿದಂತೆ ಯಾವುದೇ ಇಲೆಕ್ಟ್ರಾನಿಕ್ಸ್ ಉಪಕರಣ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಮೊದಲ ದಿನದ ಪರೀಕ್ಷೆಯು ಯಾವುದೇ ಅಹಿತಕರ ಘಟನೆಗಳಿಲ್ಲದೇ ಶಾಂತಿಯುತವಾಗಿ ಮುಕ್ತಾಯಗೊಂಡಿದೆ ಎಂದು ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಮೊದಲ ದಿನ 91 ಮಂದಿ ಗೈರು

ಗುರುವಾರ ನಡೆದ ಕನ್ನಡ ಭಾಷಾ ಪರೀಕ್ಷೆಗೆ ಒಟ್ಟು 91 ಮಂದಿ ಗೈರುಹಾಜರಾಗಿದ್ದಾರೆ ಎಂದು ಡಿಡಿಪಿಯು ತಿಳಿಸಿದ್ದಾರೆ. ಪರೀಕ್ಷೆಗಾಗಿ ನೊಂದಾಯಿಸಿಕೊಂಡಿದ್ದ 8833 ಮಂದಿಯಲ್ಲಿ ಒಟ್ಟು 8742 ಮಂದಿ ಇಂದು ಪರೀಕ್ಷೆಗೆ ಹಾಜರಾಗಿದ್ದಾರೆ ಎಂದವರು ತಿಳಿಸಿದ್ದಾರೆ.
ಅರೆಬಿಕ್ ಪರೀಕ್ಷೆಗೆ ಜಿಲ್ಲೆಯಿಂದ ಯಾವುದೇ ವಿದ್ಯಾರ್ಥಿ ನೊಂದಾಯಿಸಿ ಕೊಂಡಿಲ್ಲ ಎಂದೂ ಅವರು ಹೇಳಿದ್ದಾರೆ.

Similar News