ಶಾಂತವೇರಿ ಗೋಪಾಲಗೌಡ ಎಂಬ ರಾಜಕೀಯ ಸಂತ

Update: 2023-03-12 19:30 GMT

ಗೋಪಾಲಗೌಡರು ಈಗ ನಮ್ಮ ನಡುವೆ ಇಲ್ಲ. ಅವರು ಕಟ್ಟಿದ ಶಿವಮೊಗ್ಗದ ಸಮಾಜವಾದಿ ಕೋಟೆಯಲ್ಲಿ ಸಮಾನತೆಯ ಸಮಾಜವನ್ನು ವಿರೋಧಿಸುವ ಮನುವಾದಿ ಮತ್ತು ಕೋಮುವಾದಿ ಶಕ್ತಿಗಳ ಪ್ರವೇಶವಾಗಿದೆ.ಹೊಸ ತಲೆಮಾರಿನಲ್ಲಿ ಸಮಾಜವಾದಿ ವಿಚಾರಗಳ ಪ್ರಭಾವ ಕುಂದುತ್ತಿದೆ.ಬಹುತ್ವ ಭಾರತ ಮತ್ತು ಸಂವಿಧಾನಗಳು ಅಪಾಯದಲ್ಲಿವೆ. ಇಂಥ ಕೆಟ್ಟ ಕಾಲದಲ್ಲಿ ಶಾಂತವೇರಿ ಗೋಪಾಲಗೌಡರ ನೆನಪು ಮತ್ತು ನಡೆದು ಬಂದ ದಾರಿಯ ಅರಿವು ಅಗತ್ಯ.



ಇಂದಿನ ವಿಧಾನ ಮಂಡಲದ ಕಲಾಪಗಳ ವೈಖರಿ ನೋಡಿದಾಗ ಶಾಂತವೇರಿ ಗೋಪಾಲಗೌಡರು ಮತ್ತೆ ಮತ್ತೆ ನೆನಪಾಗುತ್ತಾರೆ. ಅವರ ಮಾತುಗಳನ್ನು ಕೇಳುವ ಅವಕಾಶ ಚಿಕ್ಕ ವಯಸ್ಸಿನಲ್ಲಿ ನನಗೆ ದೊರಕಿತ್ತು. ಅವರಿಗೆ ಸೋಶಿಯಲಿಸ್ಟ್ ಪಾರ್ಟಿ ಎಂಬ ವೇದಿಕೆ ಇತ್ತು. ಒಂದು ಸಿದ್ಧಾಂತ, ಒಂದು ಕಾರ್ಯಕ್ರಮ ಇತ್ತು. ಇದರಿಂದ ಗೌಡರು ಬೆಳೆಯಲು ಸಾಧ್ಯವಾಯಿತು. ಆದರೆ ಎಪ್ಪತ್ತರ ದಶಕದ ಮಧ್ಯದಲ್ಲಿ ಕಾಂಗ್ರೆಸ್ ವಿರೋಧಿ ರಾಜಕಾರಣದ ಹೆಸರಿನಲ್ಲಿ ಸೋಷಲಿಸ್ಟ್ ಪಾರ್ಟಿ ನೆಲೆ ಕಳೆದುಕೊಳ್ಳುವಂತೆ ಮಾಡುವಲ್ಲಿ ಸಂಘಪರಿವಾರ ಯಶಸ್ವಿಯಾಯಿತು. ಗೌಡರೂ ಅದಕ್ಕಿಂತ ಮುಂಚೆ ನಮ್ಮನ್ನಗಲಿದರು. ನಂತರದ ಸಂಗತಿ ಎಲ್ಲರಿಗೂ ಗೊತ್ತಿದೆ. ಮತ್ತೆ ಗೋಪಾಲ ಗೌಡರಂಥವರು ಸಾರ್ವಜನಿಕ ಬದುಕಿಗೆ ಬರುವಂತಾಗಲಿ.

ಈಗ ಚುನಾವಣೆಗೆ ಜನಸಾಮಾನ್ಯರ ನಡುವೆ ಕೆಲಸ ಮಾಡುವವರು ಸ್ಪರ್ಧಿಸಲು ಸಾಧ್ಯವಿಲ್ಲ. 25 ಕೋಟಿ ರೂ. ಇಲ್ಲದಿದ್ದರೆ ಚುನಾವಣೆಯ ಉಸಾಬರಿಗೆ ಯಾರೂ ಹೋಗಲಾರದಂಥ ಸ್ಥಿತಿ ನಿರ್ಮಾಣವಾಗಿದೆ. ಅಂತಲೇ ಗಣಿಗಾರಿಕೆಯ ಖದೀಮರು, ರಿಯಲ್ ಎಸ್ಟೇಟ್ ದಂಧೆ ಮಾಡುವವರು, ಶಿಕ್ಷಣದ ವ್ಯಾಪಾರಿಗಳು ಚುನಾವಣಾ ಕಣದಲ್ಲಿ ವಿಜೃಂಭಿಸುತ್ತಿದ್ದಾರೆ. ಅದೊಂದು ಕಾಲವಿತ್ತು. ಶಾಂತವೇರಿ ಗೋಪಾಲಗೌಡರಂಥವರು ಬರಿಗೈಲಿ ಸ್ಪರ್ಧಿಸಿ ಬದರಿನಾರಾಯಣ ಅಯ್ಯಂಗಾರರಂಥ ಭಾರೀ ಭೂಮಾಲಕರನ್ನು ಸೋಲಿಸಿ ವಿಧಾನಸಭೆಗೆ ಗೆದ್ದು ಬಂದಿದ್ದರು. ಅವರು ಮಾತ್ರವಲ್ಲ ಆ ಕಾಲದಲ್ಲಿ ಕಮ್ಯುನಿಸ್ಟ್ ಪಕ್ಷದ ಕೃಷ್ಣ ಶೆಟ್ಟರು, ಬಿ.ವಿ.ಕಕ್ಕಿಲ್ಲಾಯರು, ಎಂ.ಎಸ್ ಕೃಷ್ಣನ್, ಪಂಪಾಪತಿ ಅಂಥವರು ವಿಧಾನಸಭೆ ಪ್ರವೇಶಿಸುವ ಅವಕಾಶವಿತ್ತು.
ಸಮಾಜವಾದಿ ನಾಯಕ ಶಾಂತವೇರಿ ಗೋಪಾಲಗೌಡರು ಬದುಕಿದ್ದರೆ ನಾಳೆ ಮಾರ್ಚ್ 14ನೇ ತಾರೀಕಿಗೆ ನೂರು ವರ್ಷ ತುಂಬುತ್ತಿತ್ತು. ಈಗ ರಾಜ್ಯದ ಕೆಲವೆಡೆ ಅವರ ಶತಮಾನೋತ್ಸವವನ್ನು ಆಚರಿಸಲಾಗುತ್ತಿದೆ.

ಶಾಂತವೇರಿ ಗೋಪಾಲಗೌಡರನ್ನು ನೋಡುವ ಮತ್ತು ಮಾತಾಡುವ ಅವಕಾಶ ನನಗೆ ದೊರಕಿದ್ದು ನನ್ನ ಬದುಕಿನ ಅವಿಸ್ಮರಣೀಯ ಪ್ರಸಂಗ. ಅದು 1969ನೇ ಇಸವಿ. ಹುಬ್ಬಳ್ಳಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆ.ಭಾರತ ಕಮ್ಯುನಿಸ್ಟ್ ಪಕ್ಷದ ಅಭ್ಯರ್ಥಿಯಾಗಿ ಏ.ಜೆ.ಮುಧೋಳರು ಸ್ಪರ್ಧಿಸಿದ್ದರು.ಅವರ ಚುನಾವಣಾ ಪ್ರಚಾರಕ್ಕೆ ಗೋಪಾಲಗೌಡರು ತಮ್ಮ ಸಮಾಜವಾದಿ ಸಂಗಾತಿಗಳಾದ ಜೆ.ಎಚ್. ಪಟೇಲ್, ಮಹೇಶ್ವರಪ್ಪ ಮೊದಲಾದವರನ್ನು ಕರೆದುಕೊಂಡು ಬಂದಿದ್ದರು.

ಆಗ ನನ್ನ ವಯಸ್ಸು ಹದಿನಾರು. ಬಾಲ್ಯದಿಂದಲೇ ರಾಜಕೀಯ ಹಿನ್ನೆಲೆಯ ಕುಟುಂಬದಿಂದ ಬಂದಿರುವುದರಿಂದ ರಾಜಕೀಯ ನಾಯಕರ ಭಾಷಣ ಕೇಳುವ ಆಸಕ್ತಿ ಇತ್ತು.ಅದರಲ್ಲೂ ಕಮ್ಯುನಿಸ್ಟ್ ಚಳವಳಿಯ ಪ್ರಭಾವದಿಂದ ಆ ಪಕ್ಷದ ಸಭೆಗಳಿಗೆ ಹೋಗುತ್ತಿದ್ದೆ.ಹಾಗೆ ಹೋದಾಗ ಗೋಪಾಲಗೌಡರನ್ನು ನೋಡುವ, ಅವರ ಭಾಷಣವನ್ನು ಕೇಳುವ ಅವಕಾಶ ದೊರಕಿತ್ತು.ಅವರೊಂದಿಗೆ ಒಂದೆರಡು ಮಾತುಗಳನ್ನಾಡಿದ ನೆನಪು.

ಐವತ್ತರ ದಶಕದಲ್ಲೇ ಸಮಾಜವಾದಿ ಚಳವಳಿಯ ಪ್ರಭಾವಕ್ಕೊಳಗಾದ ಗೋಪಾಲಗೌಡರು ಕಾಗೋಡು ಸತ್ಯಾಗ್ರಹದ ಮೂಲಕ ರಾಜಕೀಯವನ್ನು ಪ್ರವೇಶಿಸಿದರು. ತಮ್ಮ 29ನೇ ವಯಸ್ಸಿನಲ್ಲಿ ಅಂದಿನ ಮೈಸೂರು ರಾಜ್ಯದ ಮೊದಲ ಮಹಾ ಚುನಾವಣೆಗೆ ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದರು. ಶಿವಮೊಗ್ಗ ಜಿಲ್ಲೆಯ ಸಾಗರ ಹೊಸನಗರ ಮತಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಎ.ಆರ್.ಬದರಿನಾರಾಯಣ ಅಯ್ಯಂಗಾರರ ಎದುರು ಸ್ಪರ್ಧಿಸಿದ ಗೋಪಾಲಗೌಡರಿಗೆ ಠೇವಣಿ 250 ರೂಪಾಯಿ ಕಟ್ಟಲು ಕೂಡ ಹಣವಿರಲಿಲ್ಲ.

ಅವರ ಮಿತ್ರರೆ ಸಂಗ್ರಹಿಸಿ ಕಟ್ಟಿದರು. ಬಡ ಗೇಣಿದಾರರು, ಕೂಲಿಕಾರರು, ಮಧ್ಯಮ ವರ್ಗದವರು ಜಾತಿ ಮತ ಭೇದವಿಲ್ಲದೆ ಗೌಡರ ಚುನಾವಣಾ ಪ್ರಚಾರಕ್ಕಿಳಿದರು. ವಾಹನದಲ್ಲಿ ಪ್ರಚಾರ ಮಾಡಲು ಹಣವಿರಲಿಲ್ಲ.ಗೋಪಾಲಗೌಡರು ಕಾರ್ಯಕರ್ತರ ಜೊತೆ ಪಾದಯಾತ್ರೆಯಲ್ಲಿ ಹಳ್ಳಿ, ಹಳ್ಳಿಗೆ ಹೋಗಿ ಕರಪತ್ರಗಳನ್ನು ಹಂಚಿ ಮತ ಯಾಚಿಸಿದರು.ಜನಸಾಮಾನ್ಯರೆ ಹಣ ಸಂಗ್ರಹ ಮಾಡಿ ಖರ್ಚಿಗೆ ಕೊಟ್ಟರು.
1952 ಮೊದಲ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನ ಬದರಿ ನಾರಾಯಣ ಅಯ್ಯಂಗಾರರಂಥ ಭಾರೀ ಭೂಮಾಲಕ ಅಭ್ಯರ್ಥಿ ಎದುರು ಸ್ಪರ್ಧಿಸಿ ಜಯಶಾಲಿಯಾದ ಗೋಪಾಲಗೌಡರು ಆ ಚುನಾವಣೆಯಲ್ಲಿ ಮಾಡಿದ ಒಟ್ಟು ಖರ್ಚು 5 ಸಾವಿರ ರೂ. ಅಲ್ಲಲ್ಲಿ ಸಾಲ ಮಾಡಿ ತಂದ 5 ಸಾವಿರ ರೂ.ಯನ್ನು ಗೌಡರು ತಮಗೆ ಬರುತ್ತಿದ್ದ ಶಾಸಕರ ವೇತನ , ಭತ್ತೆಗಳ ಮೂಲಕ ತೀರಿಸಿದರು.

ಗೌಡರ ಜೇಬಿನಲ್ಲಿ ದುಡ್ಡು ಇರುತ್ತಿರಲಿಲ್ಲ.ಶಿವಮೊಗ್ಗದಿಂದ ಬೆಂಗಳೂರಿಗೆ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಓಡಾಡಲು ಬಸ್ ಚಾರ್ಜ್‌ಗೂ ಕಾಸಿಲ್ಲದಾಗ ಜೊತೆಗಿದ್ದವರೆ ಪ್ರಯಾಣದ ವೆಚ್ಚವನ್ನು ಭರಿಸುತ್ತಿದ್ದರು. ವಿಧಾನಸಭೆಯಲ್ಲಿ ಅಸ್ಖಲಿತವಾಗಿ ಮಾತನಾಡುತ್ತಿದ್ದ ಗೋಪಾಲಗೌಡರು ಜನಸಾಮಾನ್ಯರ, ರೈತ,ಕಾರ್ಮಿಕರ ಪ್ರಶ್ನೆ ಬಂದರೆ ಹುಲಿಯಂತೆ ಗುಡುಗುತ್ತಿದ್ದರು. ಒಮ್ಮೆ ತಮ್ಮ ಮುಂದಿದ್ದ ಧ್ವನಿ ವರ್ಧಕವನ್ನೂ ಮುರಿದು ಬಿಸಾಡಿದ್ದರು.ವೈಯಕ್ತಿಕವಾಗಿ ಸರಕಾರದಿಂದ ಏನನ್ನೂ ಬಯಸದ ಗೋಪಾಲಗೌಡರು ಅಂದಿನ ಮುಖ್ಯ ಮಂತ್ರಿಗಳು ಇರಲು ಗೃಹ ಮಂಡಲಿಯ ಮನೆಯನ್ನು ತಾವಾಗಿ ಮಂಜೂರು ಮಾಡಲು ಮುಂದಾದರೂ ಗೌಡರು ಅದನ್ನು ನಿರಾಕರಿಸಿದರು. ತಮಗೆ ಕೊಡಬೇಕೆಂದಿರುವ ಮನೆಯನ್ನು ಮನೆಯಿಲ್ಲದವರಿಗೆ ಕೊಡಲು ತಿಳಿಸಿದರು.
ಶಾಸಕರಾಗಿದ್ದಾಗ ಬೆಂಗಳೂರಿಗೆ ಬಂದರೆ ಶಾಸಕರ ಭವನದ ತಮ್ಮ ಕೊಠಡಿಯಲ್ಲಿ ಇರುತ್ತಿದ್ದ ಗೋಪಾಲಗೌಡರು ಅವರ ಊರು ತೀರ್ಥಹಳ್ಳಿ ತಾಲೂಕಿನ ಆರಗದ ಪುಟ್ಟ ಗುಡಿಸಲು ಬಿಟ್ಟರೆ ಬೇರೆ ಆಸ್ತಿ ಇರಲಿಲ್ಲ. ಶಾಸಕರ ಭವನವನ್ನು ಬಿಟ್ಟರೆ ಅವರು ತಂಗುತ್ತಿದ್ದುದು ಮೆಜೆಸ್ಟಿಕ್‌ನ ಸುಬೇದಾರ ಛತ್ರ ರಸ್ತೆಯ ಸಮಾಜವಾದಿ ಪಕ್ಷದ ಕಚೇರಿಯಲ್ಲಿ. ಅನಿಶ್ಚಿತ ಹಣಕಾಸಿನ ಪರಿಸ್ಥಿತಿ, ಅವರಿವರಿಂದ ಹಣ ಕೇಳಬೇಕಾದಾಗ ಉಂಟಾಗುವ ಮುಜುಗರ, ದೈಹಿಕ ಅಸ್ವಾಸ್ಥ್ಯ ಹೀಗೆ ಹಲವಾರು ಕಾರಣಗಳಿಂದ ಗೌಡರು ಸುಸ್ತಾಗಿ ಹೋದರು.

ಗೋಪಾಲಗೌಡರಿಗೆ ಅವರ ಬದುಕಿನ ಕೊನೆಯ ದಿನದ ವರೆಗೆ ಸ್ವಂತದ ಮನೆ ಇರಲಿಲ್ಲ. ಮೊದಲ ಸಲ ಶಾಸಕರಾಗಿದ್ದಾಗ ಅಂದಿನ ಮುಖ್ಯ ಮಂತ್ರಿ ಕೆಂಗಲ್ ಹನುಮಂತಯ್ಯನವರು ಶಾಸಕರ ಕೋಟಾದಲ್ಲಿ ನಿವೇಶನ ಮಂಜೂರು ಮಾಡಿದಾಗ ಗೋಪಾಲಗೌಡರು ನಿರಾಕರಿಸಿದರು.
1957ರ ಚುನಾವಣೆಯಲ್ಲಿ ಗೌಡರು ಪರಾಭವಗೊಂಡಾಗ ಆಗಿನ ಕಂದಾಯ ಮಂತ್ರಿ ಕಡಿದಾಳ ಮಂಜಪ್ಪನವರು ಐದಾರು ಏಕರೆ ಜಮೀನು ಕೊಡಲು ಮುಂದಾದಾಗ ಗೌಡರು, ನನ್ನೊಬ್ಬನಿಗೆ ಆರು ಏಕರೆ ಜಮೀನು ಕೊಡುವ ಬದಲಾಗಿ ಆರು ಜನ ಬಡವರಿಗೆ ಕೊಡಿ. ನಾನು ಸ್ವಂತ ಸಾಗುವಳಿ ಮಾಡುವವನಲ್ಲ. ಉಳುವವನೇ ಹೊಲದೊಡೆಯನಾಗಬೇಕೆಂದು ಹೋರಾಡುತ್ತಿರುವ ನಾನು ಸಾಗುವಳಿ ಮಾಡುವುದಿಲ್ಲ. ನನಗೇಕೆ ಭೂಮಿ ಎಂದು ನಿರಾಕರಿಸಿದರು.

ಇನ್ನೇನು ಗೋಪಾಲಗೌಡರು ತೀವ್ರ ಅಸ್ವಸ್ಥರಾಗಿ ಆಸ್ಪತ್ರೆಯಲ್ಲಿದ್ದಾಗ ಅಂದಿನ ಮುಖ್ಯಮಂತ್ರಿ ವೀರೇಂದ್ರ ಪಾಟೀಲರು ಮಂಜೂರು ಮಾಡಿದ ನಿವೇಶನವನ್ನು ಗೌಡರು ಹಿಂದಿರುಗಿಸಲು ಮುಂದಾದರು. ಆದರೆ, ಅವರ ಪತ್ನಿ ಸೋನಕ್ಕ ಕಷ್ಟ ಪಟ್ಟು ಆ ನಿವೇಶನ ಉಳಿಸಿಕೊಂಡರು. ಶಿಕ್ಷಕಿಯಾಗಿದ್ದ ಸೋನಕ್ಕ ತನ್ನ ಸಂಬಳದಲ್ಲಿ ನಿವೇಶನದ ಕಂತುಗಳನ್ನು ಕಟ್ಟಿದರು.ಇಲ್ಲವಾಗಿದ್ದರೆ ಗೋಪಾಲಗೌಡರ ಕುಟುಂಬಕ್ಕೆ ಸ್ವಂತದ ನಿವೇಶನವೇ ಇರುತ್ತಿರಲಿಲ್ಲ.
ಕಟ್ಟಾ ಸಮಾಜವಾದಿಯಾಗಿದ್ದ ಗೋಪಾಲಗೌಡರು ರಾಮ ಮನೋಹರ ಲೋಹಿಯಾ ಅವರ ನಿಕಟವರ್ತಿಯಾಗಿದ್ದರು.ಸೈದ್ಧಾಂತಿಕ ಮತ್ತು ರಾಜಕೀಯ ವಿಷಯಗಳ ಬಗ್ಗೆ ಪಾಂಡಿತ್ಯ ಪೂರ್ಣವಾಗಿ ಮಾತಾಡುವಂತೆ ಸಾಹಿತ್ಯ, ಸಂಗೀತ, ಮುಂತಾದ ಸಾಂಸ್ಕೃತಿಕ ಲೋಕದ ಒಡನಾಟ ಹೊಂದಿದ್ದರು.ನವೋದಯ ಕಾಲದ ಕುವೆಂಪು, ಬೇಂದ್ರೆ, ಕಾರಂತರ ಸಾಹಿತ್ಯ ಹಾಗೂ ಪ್ರಗತಿಶೀಲ ಸಾಹಿತ್ಯಕ್ಕೆ ಹೆಸರಾದ ಬಸವರಾಜ ಕಟ್ಟೀಮನಿ, ನಿರಂಜನ ಅವರ ಒಡನಾಟ ಹೊಂದಿದ್ದರು. ನಂತರ ಬಂದ ನವ್ಯ ಸಾಹಿತ್ಯದ ಪಿ.ಲಂಕೇಶ್, ಅಡಿಗ,ಅನಂತಮೂರ್ತಿ, ತೇಜಸ್ವಿ, ಚಂಪಾ ಮೊದಲಾದವರ ಸಾಹಿತ್ಯ ವನ್ನು ಓದಿಕೊಂಡಿದ್ದರು.

60, 70ರ ದಶಕದ ಭಾರತದ ರಾಜಕೀಯ ಪರಿಸ್ಥಿತಿ ಈಗಿನಕ್ಕಿಂತ ಭಿನ್ನವಾಗಿತ್ತು. ಈಗ ಬಿಜೆಪಿ ಎಂದು ಕರೆಯಲ್ಪಡುವ ಆಗಿನ ಜನಸಂಘ ಈಗಿನಷ್ಟು ಪ್ರಬಲವಾಗಿರಲಿಲ್ಲ. ಕಾಂಗ್ರೆಸ್ ಆಡಳಿತ ಪಕ್ಷವಾಗಿತ್ತು.ಕಮ್ಯುನಿಸ್ಟ್ ಮತ್ತು ಸೋಷಲಿಸ್ಟ್ ಪಕ್ಷಗಳು ಮುಖ್ಯ ವಿರೋಧ ಪಕ್ಷಗಳಾಗಿದ್ದವು.ರಾಮ ಮನೋಹರ ಲೋಹಿಯಾ ಅವರ ಕಾಂಗ್ರೆಸ್ ವಿರೋಧಿ ರಾಜಕಾರಣ ಕೊನೆಗೆ ಅವರ ಪಕ್ಷವನ್ನೇ ಮುಳುಗಿಸಿತು.ಲೋಹಿಯಾ ಅವರ ಶಿಷ್ಯರಾಗಿದ್ದ ಗೋಪಾಲಗೌಡರಿಗೆ ಇದೆಲ್ಲ ಗೊತ್ತಿತ್ತು.

ಕಾಂಗ್ರೆಸ್ ವಿರೋಧ ಮಾಡಿದರೂ ಅವರು ಸಂಘ ಪರಿವಾರದ ಕೋಮು ವಾದವನ್ನು ಒಪ್ಪುತ್ತಿರಲಿಲ್ಲ.ಈ ಬಗ್ಗೆ ತಮ್ಮ ಒಡನಾಡಿಗಳ ಜೊತೆ ಅಭಿಪ್ರಾಯ ವನ್ನು ಹಂಚಿಕೊಳ್ಳುತ್ತಿದ್ದರು. ಸುಳ್ಳು ಇತಿಹಾಸ ಸೃಷ್ಟಿಯ ಮೂಲಕ ಹಾಗೂ ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ಇವತ್ತು ಕೇಂದ್ರದ ಮತ್ತು ಕೆಲ ರಾಜ್ಯಗಳ ಅಧಿಕಾರ ಸೂತ್ರ ಹಿಡಿದ ಪಕ್ಷ ಪ್ರಜಾಪ್ರಭುತ್ವಕ್ಕೆ ಕಂಟಕಕಾರಿಯಾಗಿರುವುದು ಎಲ್ಲರಿಗೂ ಗೊತ್ತಿದೆ.ಗೋಪಾಲಗೌಡರು ಈಗ ಬದುಕಿದ್ದರೆ ಕೋಮುವಾದ ವಿರೋಧಿ ಹೋರಾಟದ ನಾಯಕತ್ವ ವನ್ನು ವಹಿಸುತ್ತಿದ್ದರು.

ಗೋಪಾಲಗೌಡರ ಕೊನೆಯ ದಿನಗಳಲ್ಲಿ ಒಮ್ಮೆ ಚಿಕ್ಕಮಗಳೂರಿನಲ್ಲಿ ಕೋಮು ಗಲಭೆ ನಡೆಯಿತು.ಆಗ ಗೋಪಾಲಗೌಡರು ಅಂದಿನ ಉಭಯ ಕಮ್ಯುನಿಸ್ಟ್ ಪಕ್ಷಗಳ ನಾಯಕರಾಗಿದ್ದ ಬಿ.ವಿ.ಕಕ್ಕಿಲ್ಲಾಯ ಮತ್ತು ಎನ್.ಎಲ್.ಉಪಾಧ್ಯಾಯರ ಜೊತೆಗೆ ನಿಯೋಗ ತೆಗೆದುಕೊಂಡು ಹೋಗಿ ಶಾಂತಿ ಮತ್ತು ಸೌಹಾರ್ದ ಸಭೆಗಳನ್ನು ನಡೆಸಿದ್ದರು.

ಗೋಪಾಲಗೌಡರು ಲೋಹಿಯಾ ಅವರ ಸಂಯುಕ್ತ ಸಮಾಜವಾದಿ ಪಕ್ಷದಲ್ಲಿ ಇದ್ದರೂ ಉಳಿದವರಂತೆ ಕಮ್ಯುನಿಸ್ಟ್ ವಿರೋಧಿ ಆಗಿರಲಿಲ್ಲ.ಕಾಂಗ್ರೆಸ್ ವಿರೋಧಿ ರಾಜಕಾರಣಕ್ಕಿಂತ ಸಮಾನ ಮನಸ್ಕ ಶಕ್ತಿಗಳ ಪರ್ಯಾಯ ರಾಜಕೀಯ ದ ಬಗ್ಗೆ ಅವರಿಗೆ ವಿಶೇಷ ಆಸಕ್ತಿ ಇತ್ತು.
ಗೋಪಾಲಗೌಡರು ಈಗ ನಮ್ಮ ನಡುವೆ ಇಲ್ಲ. ಅವರು ಕಟ್ಟಿದ ಶಿವಮೊಗ್ಗದ ಸಮಾಜವಾದಿ ಕೋಟೆಯಲ್ಲಿ ಸಮಾನತೆಯ ಸಮಾಜವನ್ನು ವಿರೋಧಿಸುವ ಮನುವಾದಿ ಮತ್ತು ಕೋಮುವಾದಿ ಶಕ್ತಿಗಳ ಪ್ರವೇಶವಾಗಿದೆ.ಹೊಸ ತಲೆಮಾರಿನಲ್ಲಿ ಸಮಾಜವಾದಿ ವಿಚಾರಗಳ ಪ್ರಭಾವ ಕುಂದುತ್ತಿದೆ.ಬಹುತ್ವ ಭಾರತ ಮತ್ತು ಸಂವಿಧಾನ ಗಳು ಅಪಾಯದಲ್ಲಿವೆ.

ಇಂಥ ಕೆಟ್ಟ ಕಾಲದಲ್ಲಿ ಶಾಂತವೇರಿ ಗೋಪಾಲಗೌಡರ ನೆನಪು ಮತ್ತು ನಡೆದು ಬಂದ ದಾರಿಯ ಅರಿವು ಅಗತ್ಯ.ಹೊಸ ಪೀಳಿಗೆಗೆ ಅವರ ಬಗ್ಗೆ ತಿಳಿಸಿ ಹೇಳಬೇಕಾಗಿದೆ.ಸಮಾಜವಾದಿ ಪಕ್ಷ ಅಸ್ತಿತ್ವ ಕಳೆದುಕೊಂಡಿದ್ದರೂ ಆ ವಿಚಾರ ಧಾರೆಯ ರಾಜಕೀಯ ನೇತಾರರು, ಸಾಂಸ್ಕೃತಿಕ ಚಿಂತಕರು, ಲೇಖಕರು, ಕಲಾವಿದರು ನಮ್ಮ ನಡುವೆ ಇದ್ದಾರೆ. ಅವರೆಲ್ಲ ಸೇರಿ ಹೊಸ ದಾರಿಯ ಅನ್ವೇಷಣೆ ನಡೆಸಬೇಕಾಗಿದೆ.

Similar News