ದೇಶಕ್ಕೆ ಅಪಮಾನ ಮಾಡಿರುವುದು ಯಾರು?

Update: 2023-03-15 04:25 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ 

Full View

''ಭಾರತದಲ್ಲಿ ಪ್ರಜಾಪ್ರಭುತ್ವ ಆತಂಕದಲ್ಲಿದೆ'' ''ಸ್ವಾತಂತ್ರಕ್ಕೆ ಧಕ್ಕೆಯಾಗುತ್ತಿದೆ'' ಎನ್ನುವ ಆರೋಪಗಳು ಕೇಳಿ ಬರುತ್ತಿದ್ದರೆ, ಅದಕ್ಕೆ ಹೊಣೆ ದೇಶವಲ್ಲ, ಆ ದೇಶವನ್ನು ಆಳುತ್ತಿರುವ ಸರಕಾರ. ತಲೆತಗ್ಗಿಸಬೇಕಾದುದು ಆ ಸರಕಾರದ ನೇತೃತ್ವವನ್ನು ವಹಿಸಿರುವ ನಾಯಕರೇ ಹೊರತು, ದೇಶದ ಜನರಲ್ಲ. ವಿಪರ್ಯಾಸವೆಂದರೆ, ಈ ದೇಶದ ನಾಯಕರು ತಮ್ಮ ಮುಖದ ಕಳಂಕವನ್ನು ದೇಶದ ಮುಖಕ್ಕೆ ಒರೆಸಲು ಮುಂದಾಗಿದ್ದಾರೆ. ಸರಕಾರದ ವಿರುದ್ಧ ತೂರಿ ಬರುತ್ತಿರುವ ಟೀಕಾ ಬಾಣಗಳಿಂದ ರಾಷ್ಟ್ರೀಯತೆಯ ಮರೆಯಲ್ಲಿ ಬಚ್ಚಿಟ್ಟು ಕೊಂಡು ಬಚಾವಾಗಲು ಹೊರಟಿದ್ದಾರೆ. ಗುಜರಾತ್ ಹತ್ಯಾಕಾಂಡ ನಡೆಯುವುದಕ್ಕೆ ವಾತಾವರಣವನ್ನು ನಿರ್ಮಿಸಿದವರ ಕುರಿತಂತೆ ಬಿಬಿಸಿ ಮಾತನಾಡಿದರೆ, ಅದನ್ನು 'ದೇಶದ ವಿರುದ್ಧ ವಸಾಹತು ಶಾಹಿ ರಾಷ್ಟ್ರಗಳು ನಡೆಸುತ್ತಿರುವ ಸಂಚು' ಎಂದು ಕೇಂದ್ರ ಸರಕಾರ ಬಣ್ಣಿಸುತ್ತದೆ.

ಗುಜರಾತ್ ಹತ್ಯಾಕಾಂಡದ ಹಿಂದೆ ಬಿಬಿಸಿ ಪಾತ್ರವಿದ್ದಿದ್ದರೆ ಸರಕಾರದ ಮಾತನ್ನು ಒಪ್ಪಿಕೊಳ್ಳಬಹುದಿತ್ತು. ಆದರೆ, ಇಲ್ಲಿ ಬಿಬಿಸಿಯೇ ಗುಜರಾತ್ ಹತ್ಯಾಕಾಂಡದ ಹಿಂದಿರುವ ಶಕ್ತಿಗಳ ಮುಖವಾಡವನ್ನು ಹರಿದು ಹಾಕಿದೆ. ಗುಜರಾತ್ ಹತ್ಯಾಕಾಂಡ ದೇಶದ ವಿರುದ್ಧ ನಡೆಸಿದ ಮಹಾ ಅಪರಾಧವಾಗಿದೆ. ಈ ಹತ್ಯಾಕಾಂಡದಿಂದಾಗಿ ವಿಶ್ವದ ಮುಂದೆ ದೇಶ ತಲೆತಗ್ಗಿಸುವಂತಾಗಿತ್ತು. ಅಂದಿನ ಗುಜರಾತ್‌ನ ಮುಖ್ಯಮಂತ್ರಿ ನರೇಂದ್ರ ಮೋದಿಯವರಿಗೆ ಹಲವು ದೇಶಗಳು ಗುಜರಾತ್ ಹತ್ಯಾಕಾಂಡವನ್ನು ಮುಂದಿಟ್ಟುಕೊಂಡು ವೀಸಾ ನೀಡುವುದಕ್ಕೆ ನಿರಾಕರಿಸಿದ್ದವು. ಬಿಬಿಸಿ ಮಾಡಿರುವ ಆರೋಪ ಸುಳ್ಳೇ ಆಗಿದ್ದರೆ, ಯಾಕೆ ಅಂದು ಮೋದಿಗೆ ವಿವಿಧ ದೇಶಗಳು ದಿಗ್ಬಂಧನವನ್ನು ವಿಧಿಸಬೇಕಾಗಿತ್ತು? ಅದೆಲ್ಲ ಇರಲಿ, ಗುಜರಾತ್ ಹತ್ಯಾಕಾಂಡದಲ್ಲಿ ತನ್ನ ಕೈವಾಡ ಇಲ್ಲದೇ ಇದ್ದರೆ ಗುಜರಾತ್ ಹತ್ಯಾಕಾಂಡ ಆರೋಪಿಗಳನ್ನು ಬಹಿರಂಗವಾಗಿ ಸರಕಾರವೇ ಯಾಕೆ ಬೆಂಬಲಿಸಿತು? ಜೀವಾವಧಿ ಶಿಕ್ಷೆಗೊಳಗಾಗಿದ್ದ ಗುಜರಾತ್ ಹತ್ಯಾಕಾಂಡ ಆರೋಪಿಗಳನ್ನು ಗುಜರಾತ್ ಸರಕಾರ ಬಿಡುಗಡೆ ಮಾಡಿದಾಗ ಕೇಂದ್ರ ಯಾಕೆ ವೌನವಾಗಿತ್ತು? ಸರಕಾರದ ಈ ನಡತೆಗಳಿಂದ ಭಾರತದ ವರ್ಚಸ್ಸಿಗೆ ಅಪಮಾನವಾಯಿತೇ ಹೊರತು, ಆ ತಪ್ಪುಗಳನ್ನು ಜಗತ್ತಿಗೆ ಎತ್ತಿ ತೋರಿಸಿದ ಬಿಬಿಸಿಯಿಂದ ಭಾರತಕ್ಕೆ ಯಾವುದೇ ಅವಮಾನವಾಗಿರಲಿಲ್ಲ.

ಅದಾನಿಯ ಶೇರು ವಂಚನೆಯನ್ನು ವೆಬ್‌ಸೈಟ್ ಒಂದು ಬಹಿರಂಗ ಪಡಿಸಿದಾಗ, ಕೇಂದ್ರ ಸರಕಾರ ಅದಾನಿಯನ್ನು ವಿಚಾರಣೆಗೆ ಒಳಪಡಿಸುವ ಬದಲು ಅದನ್ನೂ ದೇಶದ ವಿರುದ್ಧ ಸಂಚು ಎಂದು ಕರೆದು ತನ್ನ ಮುಖ ಉಳಿಸಿಕೊಳ್ಳುವ ಪ್ರಯತ್ನ ನಡೆಸಿತು. ದೇಶದ ಜನರ ದೊಡ್ಡ ಪ್ರಮಾಣದ ಹಣ ಅದಾನಿ ಸಂಸ್ಥೆಯಲ್ಲಿ ಹೂಡಿಕೆಯಾಗಿದೆ. ಇಂತಹ ಸಂಸ್ಥೆಯ ಮೇಲೆ ಆರೋಪಗಳು ಕೇಳಿ ಬಂದಾಗ ಆ ಆರೋಪಗಳ ಸತ್ಯಾಸತ್ಯತೆಯನ್ನು ಸರಕಾರ ತನಿಖೆಗೊಳಪಡಿಸಬೇಕು. ಯಾಕೆಂದರೆ, ಆರೋಪ ನಿಜವೇ ಆಗಿದ್ದರೆ ಅದರಿಂದ ದೇಶದ ಆರ್ಥಿಕತೆಗೆ ಭಾರೀ ಹೊಡೆತ ಬೀಳುವ ಸಾಧ್ಯತೆಗಳಿವೆ. ಆದರೆ ದೇಶದ ಹಿತಾಸಕ್ತಿಗಿಂತ ಅದಾನಿ ಸಂಸ್ಥೆಯ ಹಿತಾಸಕ್ತಿಯೇ ಮುಖ್ಯ ಎಂಬಂತೆ ಕೇಂದ್ರ ಸರಕಾರ ವರ್ತಿಸಿತು. ಮಾತ್ರವಲ್ಲ, ಅದಾನಿಯ ಮೇಲೆ ಕೇಳಿ ಬರುತ್ತಿರುವ ಆರೋಪಗಳನ್ನೂ ದೇಶದ ವಿರುದ್ಧ ನಡೆಸುತ್ತಿರುವ ಸಂಚು ಎಂದು ಕರೆಯಿತು. ಈ ದೇಶವೆಂದರೆ ಅದಾನಿಯಲ್ಲ. ಅದಾನಿಯಿಂದ ದೇಶದ ಆರ್ಥಿಕತೆಗಾಗಿರುವ ಹಾನಿಯನ್ನು ಮುಚ್ಚಿ ಹಾಕುವುದೇ ದೇಶದ ವಿರುದ್ಧ ನಡೆಸುತ್ತಿರುವ ನಿಜವಾದ ಸಂಚು ಎನ್ನುವುದನ್ನು ಕೇಂದ್ರಕ್ಕೆ ಜನರು ದೊಡ್ಡ ಧ್ವನಿಯಲ್ಲಿ ಹೇಳುತ್ತಿದ್ದಾರಾದರೂ ಕೇಂದ್ರ ಸರಕಾರ ಅದಕ್ಕೆ ಕಿವುಡಾಗಿದೆ. ಇದೀಗ ದೇಶವೆಂದರೆ ಕೇಂದ್ರ ಸರಕಾರ ಎನ್ನುವ ತನ್ನ ಪ್ರತಿಪಾದನೆಯನ್ನು ಅದು ಮುಂದುವರಿಸಿದೆ. ಭಾರತದ ಪ್ರಜಾಸತ್ತೆ ಆತಂಕದಲ್ಲಿದೆ ಎಂದು ರಾಹುಲ್ ಗಾಂಧಿಯವರು ವಿದೇಶದಲ್ಲಿ ಮಾಡಿದ ಭಾಷಣವನ್ನು ಮುಂದಿಟ್ಟುಕೊಂಡು ಧಾರವಾಡದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ''ರಾಹುಲ್ ಅವರು ವಿದೇಶದಲ್ಲಿ ಮಾಡಿರುವ ಭಾಷಣದಿಂದ ಭಾರತಕ್ಕೆ, ಬಸವಣ್ಣನಿಗೆ ಅಪಚಾರವಾಗಿದೆ'' ಎಂದು ದೂರಿಕೊಂಡಿದ್ದಾರೆ.

ತನ್ನ ಮೇಲಿನ ಆರೋಪವನ್ನು ದೇಶದ ಮೇಲಿನ ಆರೋಪವಾಗಿ ಪರಿವರ್ತಿಸಿರುವ ನರೇಂದ್ರ ಮೋದಿಯವರು ಆ ಮೂಲಕ ದೇಶಕ್ಕೂ, ಬಸವಣ್ಣನಿಗೂ ಏಕಕಾಲದಲ್ಲಿ ಅಪಚಾರಗೈದಿದ್ದಾರೆ. ದೇಶದಲ್ಲಿ ಪ್ರಜಾತಂತ್ರ ಆತಂಕದಲ್ಲಿದೆ ಎಂದು ರಾಹುಲ್‌ಗಾಂಧಿ ಆರೋಪ ಮಾಡಿದ್ದೇ ಆದರೆ, 'ದೇಶದಲ್ಲಿ ಪ್ರಜಾತಂತ್ರ ಆತಂಕದಲ್ಲಿಲ್ಲ' ಎಂದು ಸ್ಪಷ್ಟ ಪಡಿಸಿ ತನ್ನ ಸರಕಾರದ ಮರ್ಯಾದೆಯನ್ನು ಪ್ರಧಾನಿ ಮೋದಿಯವರು ಕಾಪಾಡಿಕೊಳ್ಳಬೇಕು. ಆದರೆ ತನ್ನ ರಕ್ಷಣೆಗಾಗಿ ಬಸವಣ್ಣರನ್ನು ಮುಂದಿಡುವುದು, ದೇಶವನ್ನು ಗುರಾಣಿಯಾಗಿಸುವುದು , ರಾಹುಲ್ ಗಾಂಧಿ ಆರೋಪಗಳಿಗೆ ಉತ್ತರಿಸಲಾಗದ ಅವರ ಹತಾಶೆಯನ್ನಷ್ಟೇ ಹೇಳುತ್ತದೆ. ದೇಶದಲ್ಲಿ ಪ್ರಜಾಸತ್ತೆ ಅಪಾಯದಲ್ಲಿದೆ ಎನ್ನುವ ಆರೋಪ ಮಾಡುತ್ತಿರುವುದು ರಾಹುಲ್‌ಗಾಂಧಿ ಮಾತ್ರವಲ್ಲ. ಬಿಬಿಸಿ ಪ್ರಕರಣದಲ್ಲಿ ವಿಶ್ವದ ಹಲವು ರಾಷ್ಟ್ರಗಳು ಭಾರತದ ಕ್ರಮದ ವಿರುದ್ಧ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿವೆ. ಅಷ್ಟೇ ಏಕೆ, ಇತ್ತೀಚೆಗಷ್ಟೇ ಫ್ರೀಡಂ ಹೌಸ್ ಬಿಡುಗಡೆ ಮಾಡಿರುವ ತನ್ನ ವರದಿಯಲ್ಲಿ, ಭಾರತದ ಸ್ವಾತಂತ್ರ ಅಪಾಯದಲ್ಲಿದೆ ಎನ್ನುವ ಅಂಶವನ್ನು ಬಹಿರಂಗಪಡಿಸಿದೆ. 2023ರ ತನ್ನ ಆವೃತ್ತಿಯಲ್ಲಿ 'ಫ್ರೀಡಂ ಇನ್ ದ ವರ್ಲ್ಡ್' ವರದಿಯಲ್ಲಿ ಭಾರತದ ವಿವಿಧ ಕ್ಷೇತ್ರಗಳಲ್ಲಿ ಸ್ವಾತಂತ್ರ ಹೇಗೆ ಇಕ್ಕಟ್ಟಿಗೆ ಸಿಲುಕಿಕೊಂಡಿದೆ ಎನ್ನುವ ಅಂಶವನ್ನು ಅದು ವಿವರವಾಗಿ ಹೇಳಿದೆ. ಪತ್ರಿಕಾ ಸ್ವಾತಂತ್ರದ ದಮನ, ದುರ್ಬಲಗೊಂಡಿರುವ ಆರ್‌ಟಿಐ, ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ವಿಫಲವಾಗಿರುವ ಲೋಕಾಯುಕ್ತ, ದೇಶದ ಮುಸ್ಲಿಮರಲ್ಲಿ ಹೆಚ್ಚಿರುವ ಆತಂಕ, ಹೆಚ್ಚುತ್ತಿರುವ ದಲಿತರ ಮೇಲಿನ ದೌರ್ಜನ್ಯಗಳು ಇವೆಲ್ಲವುಗಳನ್ನು ಇಟ್ಟುಕೊಂಡು ಭಾರತದಲ್ಲಿ ಪೂರ್ಣ ಪ್ರಮಾಣದ ಸ್ವಾತಂತ್ರವಿಲ್ಲ ಎನ್ನುವ ಅಂಶವನ್ನು ಅದು ಬಹಿರಂಗಪಡಿಸಿದೆ. ರಾಹುಲ್ ಗಾಂಧಿಯ ಮಾತುಗಳನ್ನು ಪಕ್ಕಕ್ಕಿಡೋಣ. ವಿಶ್ವದ ವಿವಿಧ ಸರಕಾರೇತರ ಸಂಸ್ಥೆಗಳು, ಮಾನವ ಹಕ್ಕು ಸಂಘಟನೆಗಳು, ವಿಶ್ವ ಸಂಸ್ಥೆ ಭಾರತದ ಕುರಿತಂತೆ ವ್ಯಕ್ತಪಡಿಸುತ್ತಿರುವ ಆತಂಕಗಳ ಬಗ್ಗೆ ಪ್ರಧಾನಿ ಮೋದಿಯವರು ಏನು ಉತ್ತರಿಸುತ್ತಾರೆ? ಪ್ರಜಾಸತ್ತೆಯ ಮೂಲಕ ವಿಶ್ವಕ್ಕೆ ಹಲವು ರೀತಿಯಲ್ಲಿ ಮಾರ್ಗದರ್ಶಿ ದೇಶವಾಗಿದ್ದ ಭಾರತವನ್ನು ಈ ಸ್ಥಿತಿಗೆ ತಲುಪಿಸಿದವರು ಯಾರು? ಪ್ರಧಾನಿ ಮೋದಿಯವರು ಆತ್ಮವಿಮರ್ಶೆ ಮಾಡಿಕೊಳ್ಳಬೇಕಾದ ಸಮಯ ಬಂದಿದೆ.

ಹಾಥರಸ್ ಪ್ರಕರಣದಲ್ಲಿ ಸಂತ್ರಸ್ತೆಯ ಮೇಲೆ ಅತ್ಯಾಚಾರ ನಡೆದೇ ಇಲ್ಲ ಎಂದು ಘೋಷಣೆಯಾದಾಗ ಈ ದೇಶಕ್ಕೂ, ಬಸವಣ್ಣನವರ ತತ್ವಕ್ಕೂ ಅಪಚಾರವಾಯಿತು. ಗುಜರಾತ್ ಹತ್ಯಾಕಾಂಡದಲ್ಲಿ ಅಮಾಯಕ ಮಹಿಳೆಯರನ್ನು ಅತ್ಯಾಚಾರಗೈದು ಕೊಂದ ಆರೋಪಿಗಳು ಸರಕಾರದ ನೇತೃತ್ವದಲ್ಲಿ ಬಿಡುಗಡೆಯಾದಾಗ ದೇಶಕ್ಕೆ ಅಪಮಾನವಾಯಿತು. ಯುಎಪಿಎ ಕಾಯ್ದೆಯಡಿಯಲ್ಲಿ ಈ ದೇಶದ ಮಾನವಹಕ್ಕು ಹೋರಾಟಗಾರರು, ಸಾಮಾಜಿಕ ಕಾರ್ಯಕರ್ತರು, ಪತ್ರಕರ್ತರನ್ನು ಜೈಲಿಗೆ ತಳ್ಳಿದಾಗ ದೇಶಕ್ಕೆ ಅವಮಾನವಾಯಿತು. ದೇಶದಲ್ಲಿ ಹೆಚ್ಚುತ್ತಿರುವ ದಲಿತರ ಮೇಲಿನ ದೌರ್ಜನ್ಯಗಳಿಂದ ದೇಶಕ್ಕೆ ಅಪಮಾನವಾಗುತ್ತಿದೆ. ಗೋರಕ್ಷಣೆಯ ಹೆಸರಿನಲ್ಲಿ ಈ ದೇಶದ ಕಾನೂನನ್ನು ಬೀದಿ ಗೂಂಡಾಗಳು ಕೈಗೆತ್ತಿಕೊಳ್ಳುವ ಮೂಲಕ ದೇಶಕ್ಕೆ ಅಪಮಾನವಾಗುತ್ತಿದೆ. ಈ ಸಾಲು ಸಾಲು ಅಪಮಾನಗಳಿಂದ ದೇಶವನ್ನು ರಕ್ಷಿಸುವುದು ಇಂದಿನ ಕರ್ತವ್ಯವಾಗಿದೆ. ಪ್ರಧಾನಿ ಮೋದಿಯವರು ಈ ಅಪಮಾನಗಳಿಂದ ದೇಶವನ್ನು ರಕ್ಷಿಸುವ ದಾರಿಯನ್ನು ಕಂಡುಕೊಳ್ಳಬೇಕು. ಇಲ್ಲವಾದರೆ ಜನರೇ ಆ ದಾರಿಯನ್ನು ಹುಡುಕಿಕೊಳ್ಳುವ ದಿನ ಬರಬಹುದು.

Similar News