ಅರಣ್ಯವನ್ನು ಸ್ಥಳೀಯರಿಂದ ದೂರವಾಗಿಸುವ ಯತ್ನ
ಇಂದು ವಿಶ್ವ ಅರಣ್ಯ ದಿನ
‘ಜನರು ಅರಣ್ಯವನ್ನು ಬಳಸುವುದರಿಂದ, ಅದರ ಗುಣಮಟ್ಟ ಕಡಿಮೆಯಾಗುತ್ತದೆ. ಅರಣ್ಯಗಳ ಬಳಕೆಯನ್ನು ನಿರ್ಬಂಧಿಸಿದರೆ, ಜೈವಿಕ ವೈವಿಧ್ಯದ ಸಂರಕ್ಷಣೆ ಸಾಧ್ಯ’ ಎನ್ನುವ ಸಂರಕ್ಷಣ ತಜ್ಞರ ಚಿಂತನೆ ನಿಜವೆ? ಉತ್ತರ ಕನ್ನಡ ಜಿಲ್ಲೆಯಲ್ಲಿ ಉಪ್ಪಾಗೆ(ಗಾರ್ಸಿನಿಯಾ ಗುಮ್ಮಿಗಟ್ಟ)ಯನ್ನು ಅತಿಯಾಗಿ ಕಟಾವು ಮಾಡುತ್ತಿರುವುದರಿಂದ, ಅದು ‘ನಿರ್ವಂಶವಾಗುತ್ತಿದೆ’ ಎನ್ನುವುದು ಅರಣ್ಯಾಧಿಕಾರಿಗಳು ಹಾಗೂ ನಗರ ಮೂಲದ ಪರಿಸರ ಸಂರಕ್ಷಕರ ದೂರು. ಆದರೆ, ಇಂತಹ ತೀರ್ಪು ಮರಮಟ್ಟು ಅಲ್ಲದ ಅರಣ್ಯ ಉತ್ಪನ್ನ(ಎನ್‌ಟಿಎಫ್‌ಪಿ)ಗಳಿಗೆ ಸಂಬಂಧಿಸಿದ ಜಾಗತಿಕ ಅಧ್ಯಯನಕ್ಕೆ ಪೂರಕವಾಗಿಲ್ಲ. ‘ಎನ್‌ಟಿಎಫ್‌ಪಿ ಸಂಗ್ರಹ ಅಮೆಜಾನ್ ಕಾಡಿನ ಸಂರಕ್ಷಣೆಗೆ ನೆರವಾಗಿದೆ. ಅರಣ್ಯ ಕಟಾವಿಗೆ ಇದು ಪರ್ಯಾಯವಾಗಿದ್ದು, ಸ್ಥಳೀಯರಿಗೆ ದೀರ್ಘಾವಧಿ ಸುಸ್ಥಿರ ಆದಾಯ ನೀಡುತ್ತದೆ’ ಎಂಬ ವಾದವಿದೆ. ಈ ವಾದ ಜಗತ್ತಿನೆಲ್ಲೆಡೆ ಎನ್‌ಟಿಎಫ್‌ಪಿ ಸಂಗ್ರಹ ಕುರಿತ ಹಲವು ಅಧ್ಯಯನಗಳನ್ನು ಪ್ರೋತ್ಸಾಹಿಸಿತು. ಆದರೆ, ಬಡ ಹಾಗೂ ಭೂಹೀನರು ಎನ್‌ಟಿಎಫ್‌ಪಿ ಸಂಗ್ರಹಿಸುವುದು ಅಪಾಯಕರ ಎಂದು ಭಾರತದ ಪ್ರಭಾವಶಾಲಿ ವಿಜ್ಞಾನಿಗಳು ತಡೆಯೊಡ್ಡುತ್ತಿದ್ದಾರೆ.
ಜಗತ್ತಿನೆಲ್ಲೆಡೆಯ ಪರಿಸರ ಬರಹಗಳು ಹೇಳುವುದು- ಹಣ್ಣುಗಳನ್ನು ಸಂಗ್ರಹಿಸಲಾಗಿದೆಯೇ ಎನ್ನುವುದು ಮುಖ್ಯವಲ್ಲ; ಬದಲಾಗಿ, ಮರ ಹಾಗೂ ಅರಣ್ಯ ಉಳಿದುಕೊಂಡಿತೇ ಎನ್ನುವುದು ಮುಖ್ಯ. ಮರಗಳ ಕಟಾವಿನಿಂದ ಪರಿಸರಕ್ಕೆ ಹಾನಿ ಆಗುತ್ತದೆಯೇ ಹೊರತು ಹಣ್ಣುಗಳ ಸಂಗ್ರಹದಿಂದಲ್ಲ. ಹೀಗಿದ್ದರೂ, ಅರಣ್ಯಾಧಿಕಾರಿಗಳು-ಪರಿಸರ ಸಂರಕ್ಷಕರು ಇದನ್ನು ಒಪ್ಪಲು ಸಿದ್ಧವಿಲ್ಲ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆಗಾಲ ಆರಂಭವಾಗುತ್ತಿದ್ದಂತೆಯೇ ಉಪ್ಪಾಗೆ ಸಂಗ್ರಹ ಚುರುಕುಗೊಳ್ಳುತ್ತದೆ. ಸಣ್ಣ ರೈತರು ಪಕ್ಕದ ಕಾಡಿನಲ್ಲಿ ಉಪ್ಪಾಗೆ ಸಂಗ್ರಹಿಸುತ್ತಾರೆ ಮತ್ತು ಶ್ರೀಮಂತರು ಹೊರಗಿನ ಜನರನ್ನು ನೇಮಿಸಿಕೊಂಡು ಸಂಗ್ರಹ ಕಾರ್ಯ ನಡೆಸುವುದೂ ಇದೆ. ಕರಾವಳಿ ಪ್ರದೇಶದಿಂದ ಜನರು ಆಗಮಿಸಿ, ಹಲವು ದಿನ ಠಿಕಾಣಿ ಹೂಡಿ, ಹಣ್ಣು ಸಂಗ್ರಹಿಸುತ್ತಾರೆ. ತಾತ್ಕಾಲಿಕವಾಗಿ ಹೂಡಿದ ಉರುವಲು ಒಲೆಗಳಲ್ಲಿ ಉಪ್ಪಾಗೆಯನ್ನು ಒಣಗಿಸುತ್ತಾರೆ. ಬಹಳಷ್ಟು ಜನರಿಗೆ ಉಪ್ಪಾಗೆ ಹೆಚ್ಚುವರಿ ಆದಾಯದ ಮೂಲವಾಗಿದ್ದು, ರಾಜ್ಯದ ಒಡೆತನದ ಕಾಡುಗಳು ಇದಕ್ಕೆ ನೆರವಾಗುತ್ತವೆ. ಜನಸಾಮಾನ್ಯರು ಕಾಡಿನ ಪ್ರವೇಶ ಹಾಗೂ ಹಣ್ಣಿನ ಸಂಗ್ರಹದ ಹಕ್ಕು ಹೊಂದಿದ್ದಾರೆಯೇ ಎನ್ನುವುದು ಗಳಿಕೆಯನ್ನು ನಿರ್ಧರಿಸುತ್ತದೆ. ಆದರೆ, ಹೆಚ್ಚು ಲಾಭ ಆಗುವುದು ಅಧಿಕ ಭೂಮಿ ಹಾಗೂ ಸೊಪ್ಪಿನ ಬೆಟ್ಟ ಇರುವ ಶ್ರೀಮಂತರಿಗೆ. ಶ್ರೀಮಂತ ರೈತರು ಹಣ್ಣು ಮಾಗುವವರೆಗೆ ಕಾಯ್ದು ಆನಂತರ ಕಟಾವು ಮಾಡುವುದರಿಂದ, ಅವರಿಗೆ ಹೆಚ್ಚು ದರ ದೊರೆಯುತ್ತದೆ. ಆ ಕಾಡುಗಳನ್ನು ಅವರು ಗುತ್ತಿಗೆ ಪಡೆದಿರುವುದರಿಂದ, ಬೇರೆಯವರಿಗೆ ಅಲ್ಲಿ ಪ್ರವೇಶವಿರುವುದಿಲ್ಲ. ಎನ್‌ಟಿಎಫ್‌ಪಿಗಳು ಬಡ ಜನರಿಗೆ ಹೆಚ್ಚು ಉಪಯುಕ್ತ ಎನ್ನುವ ನನ್ನ ಓದು-ನಿರೀಕ್ಷೆಗೆ ಇದು ತದ್ವಿರುದ್ಧವಾಗಿದೆ.
ಸಿರ್ಸಿಯ ಅರಣ್ಯಗಳಲ್ಲಿ ಉಪ್ಪಾಗೆಯ ಸಂಕ್ಷಿಪ್ತ ವಿವರ ಇಂತಿದೆ. ಉಪ್ಪಾಗೆ ಮರ ಬೇಸಿಗೆಯ ಆರಂಭದಲ್ಲಿ ಹೂ ಬಿಡುತ್ತದೆ. ಸಣ್ಣ ಗಾತ್ರದ ವಾಡೆ ಹುಳ(ವೀವಿಲ್)ಗಳು ಪರಾಗಸ್ಪರ್ಶ ಮಾಡುತ್ತವೆ. ಇದೇ ಹೊತ್ತಿನಲ್ಲಿ ಅರಳುವ ಅಡಿಕೆ ಹೂಗಳಿಗೂ ಇದೇ ಕೀಟಗಳಿಂದ ಪರಾಗಸ್ಪರ್ಶ ನಡೆಯುತ್ತದೆ. ಮಳೆಗಾಲದ ಆರಂಭ(ಜೂನ್)ದಲ್ಲಿ ಉಪ್ಪಾಗೆ ಪಕ್ವವಾಗುತ್ತದೆ. ಹಣ್ಣು ಅಂದಾಜು 80 ಗ್ರಾಂ ಇರಲಿದ್ದು, ಮುಕ್ಕಾಲು ಭಾಗ ತಿರುಳು ಹಾಗೂ ಉಳಿಕೆ ಬೀಜ-ತೊಗಟೆ. ಜೂನ್ ಹಾಗೂ ಆಗಸ್ಟ್ ನಡುವೆ ಹಣ್ಣುಗಳು ಹಂತಹಂತವಾಗಿ ಪಕ್ವವಾಗುತ್ತವೆ. ಇದರಿಂದ, ಪ್ರತಿದಿನ ಸಣ್ಣ ಪ್ರಮಾಣದಲ್ಲಿ ಹಣ್ಣು ದೊರೆಯುತ್ತದೆ. ಪುನುಗಿನ ಬೆಕ್ಕು ಹಾಗೂ ಮಂಗಗಳನ್ನು ಆಕರ್ಷಿಸಲು ಪ್ರಕೃತಿ ಆಯ್ದುಕೊಂಡ ವಿಕಾಸ ತಂತ್ರ ಇದಾಗಿದ್ದು, ಅವು ಹಣ್ಣನ್ನು ತಿಂದು, ತೊಗಟೆ ಹಾಗೂ ಬೀಜವನ್ನು ಹಾಗೆಯೇ ಬಿಡುತ್ತವೆ. ಬೀಜವನ್ನು ದೂರ ಪ್ರದೇಶದಲ್ಲಿ ಹರಡುತ್ತವೆ. ತಾಯಿ ಮರದಿಂದ ದೂರ ಹೋಗುವ ಇಂಥ ಬೀಜಗಳು ಮೊಳಕೆಯೊಡೆದು ಸಸಿಯಾಗುವ ಸಾಧ್ಯತೆ ಹೆಚ್ಚುತ್ತದೆ. ಪ್ರಾಣಿಗಳಿಗೆ ಉಪ್ಪಾಗೆಯ ತೊಗಟೆಯಲ್ಲಿ ಆಸಕ್ತಿಯಿಲ್ಲ. ಆದರೆ, ಮನುಷ್ಯರಿಗೆ ಅದೇ ಮುಖ್ಯ. ಇಂಥ ಸರಳ ವಿಭಾಗೀಕರಣದಿಂದ ಪ್ರಾಣಿಗಳಿಗೆ ಸಿಹಿಯಾದ ತಿರುಳು, ಮನುಷ್ಯರಿಗೆ ಹುಳಿ ತೊಗಟೆ ಹಾಗೂ ಬೀಜಗಳು ಹರಡಿ ಹೋಗುವ ಮೂಲಕ ಮರಗಳ ಸಂಖ್ಯೆ ವೃದ್ಧಿಸುತ್ತದೆ. ದೊಡ್ಡ ಗಾತ್ರದ ಬೀಜಗಳು ಮೊಳಕೆ ಒಡೆಯಲು ಏಳು ತಿಂಗಳು ತೆಗೆದುಕೊಳ್ಳಲಿದ್ದು, ಸಸಿಗಳು ತೇವಾಂಶಭರಿತ ಕಾಡಿನಲ್ಲಿ ಬೆಳವಣಿಗೆಗೆ ಅಗತ್ಯವಾದ ಬೆಳಕು ಸಿಗುವವರೆಗೆ, ದೀರ್ಘ ಕಾಲ ಇರಲು ಇದು ನೆರವಾಗುತ್ತದೆ.
ಕಾಯಿಗಳು ಪಕ್ವವಾಗಿ ನೆಲಕ್ಕೆ ಬೀಳುವವರೆಗೆ ಇಲ್ಲವೇ ಪ್ರಾಣಿಗಳು ತಿಂದು ತೊಗಟೆ ಎಸೆಯುವವರೆಗೆ ಕಟಾವು ಮಾಡುವವರು ಕಾಯ್ದಿದ್ದರೆ, ಯಾವುದೇ ಸಮಸ್ಯೆ ಆಗುತ್ತಿರಲಿಲ್ಲ; ಪ್ರಾಣಿಗಳಿಗೆ ಪೋಷಕಾಂಶ ದೊರೆಯುತ್ತಿತ್ತು, ಎಲ್ಲರಿಗೂ ಲಾಭವಾಗುತ್ತಿತ್ತು. ಆದರೆ, ರಾಜ್ಯ ನಿಯಂತ್ರಿತ ಅರಣ್ಯಗಳಲ್ಲಿ ಇದು ಸಂಭವಿಸುವುದಿಲ್ಲ. ಅರಣ್ಯ ಇಲಾಖೆಯು ಗುತ್ತಿಗೆದಾರರಿಗೆ ಹಣ್ಣಿನ ಗುತ್ತಿಗೆ ನೀಡುತ್ತದೆ ಮತ್ತು ಅವರು ಹಣ್ಣನ್ನು ಸಂಗ್ರಹಿಸುತ್ತಾರೆ. ಕಟಾವಿನ ಸಂದರ್ಭದಲ್ಲಿ ಹತ್ತಿರ ಹಾಗೂ ದೂರದ ಊರುಗಳಿಂದ ಜನ ಆಗಮಿಸುತ್ತಾರೆ. ಉಪ್ಪಾಗೆ ಒಮ್ಮೆಲೇ ಹಣ್ಣಾಗದೆ ಇರುವುದರಿಂದ, ಹಣ್ಣು, ಕಾಯಿ ಎನ್ನದೆ ಎಲ್ಲವನ್ನೂ ಕೀಳುತ್ತಾರೆ. ಹಣ್ಣಾಗದೆ ಇರುವವಕ್ಕೆ ಕಡಿಮೆ ಬೆಲೆ ಸಿಗುತ್ತದೆ. ಬಲಿಯದ ಬೀಜಗಳಿಂದ ಪುನರುತ್ಪಾದನೆ ಸಾಧ್ಯವಿಲ್ಲದ್ದರಿಂದ, ಮರಗಳ ಸಂಖ್ಯೆ ಕ್ರಮೇಣ ಕಡಿಮೆಯಾಗುತ್ತದೆ. ರಾಜ್ಯದ ನಿಯಂತ್ರಣದಲ್ಲಿರುವ ಅರಣ್ಯಗಳಿಗೆ ಸ್ಥಳೀಯರಿಗೆ ಪ್ರವೇಶ ಲಭ್ಯವಾಗಿದ್ದಲ್ಲಿ ಹಾಗೂ ಗ್ರಾಮಸಭೆಗಳಿಗೆ ಅರಣ್ಯಗಳ ನಿಯಂತ್ರಣಾಧಿಕಾರ ನೀಡಿದ್ದರೆ, ಹಣ್ಣು ಕಟಾವಿನ ಸೂಕ್ತ ಮೇಲುಸ್ತುವಾರಿ ಹಾಗೂ ಆದಾಯ ಹಂಚಿಕೆ ಸಾಧ್ಯವಿತ್ತು. ಅರಣ್ಯಗಳು ರಾಜ್ಯದ ಹಿಡಿತದಲ್ಲಿರುವುದರಿಂದ, ಗ್ರಾಮಸ್ಥರು ಹಣ್ಣಿನ ಕಟಾವಿಗೆ ಸಂಬಂಧಿಸಿದಂತೆ ನಿಯಮ ರೂಪಿಸುವಂತಿಲ್ಲ. ಹೀಗಾಗಿ, ಪಕ್ವವಾದವು, ಕಸುಗಾಯಿ ಸೇರಿದಂತೆ ಎಲ್ಲವನ್ನೂ ಕೀಳಲಾಗುತ್ತದೆ. ನಾನು ಮಾತಾಡಿದ ಅಕ್ಕಪಕ್ಕದ ಹಳ್ಳಿಗಳ ಗ್ರಾಮಸ್ಥರು, ದೂರದಿಂದ ಆಗಮಿಸುವವರನ್ನು ತಡೆಯಲು ಸಾಧ್ಯವಿಲ್ಲ ಎನ್ನುತ್ತಾರೆ. ಈ ಅರಣ್ಯಗಳು ಎಲ್ಲರಿಗೂ ತೆರೆದುಕೊಂಡಿರುವುದರಿಂದ ಹಾಗೂ ನಿಯಂತ್ರಣದಲ್ಲಿ ವಿಕೇಂದ್ರೀಕರಣ ಇಲ್ಲದೆ ಇರುವುದರಿಂದ, ಹಣ್ಣಿನ ಕಟಾವು ಸಮರ್ಪಕವಾಗಿಲ್ಲ.
ಸೊಪ್ಪಿನ ಬೆಟ್ಟವು ಕುಟುಂಬವೊಂದರ ನಿಯಂತ್ರಣದಲ್ಲಿರುತ್ತದೆ. ಇಲ್ಲಿ ತೊಗಟೆ ಮತ್ತು ಹಣ್ಣನ್ನು ರೈತರು ಸಂಗ್ರಹಿಸುತ್ತಾರೆ ಹಾಗೂ ಮುಕ್ತ ಅರಣ್ಯಕ್ಕೆ ಹೋಲಿಸಿದರೆ, ಇಲ್ಲಿ ಬೀಜ ಹಾಗೂ ಸಸಿಗಳ ಸಂಖ್ಯೆ ಹೆಚ್ಚು ಇರುತ್ತದೆ. ಹಣ್ಣನ್ನು ಯಾವಾಗ ಮತ್ತು ಹೇಗೆ ಕೀಳಬೇಕು ಎಂಬುದನ್ನು ನಿರ್ಧರಿಸುವ ಹಕ್ಕು ಇರುವುದರಿಂದ, ಪರಿಸರಕ್ಕೆ ಉಪಯುಕ್ತವಾದ ಕಟಾವಿಗೆ ದಾರಿ ಮಾಡಿಕೊಟ್ಟಿತು. ಸೊಪ್ಪಿನ ಬೆಟ್ಟಗಳು ವ್ಯಕ್ತಿಯೊಬ್ಬರ ನಿಯಂತ್ರಣದಲ್ಲಿರುವುದರಿಂದ ಅಸಮಾನ ಭೂಮಿ ಬಳಕೆಯ ಮಾದರಿ ಹಾಗೂ ಅದು ಸಾಮಾನ್ಯ ಆಸ್ತಿ ಹಕ್ಕುಗಳನ್ನು ಪ್ರತಿಫಲಿಸುವುದಿಲ್ಲ. ಆದರೆ, ಕಾಯ್ದಿಟ್ಟ ಕಾಡು, ವನ್ಯಜೀವಿ ಮೃಗಾಲಯಗಳು ಹಾಗೂ ರಾಷ್ಟ್ರೀಯ ಉದ್ಯಾನಗಳ ಕೇಂದ್ರೀಕೃತ ನಿರ್ವಹಣೆ ವ್ಯವಸ್ಥೆಗಳಿಗೆ ಹೋಲಿಸಿದರೆ, ಹೆಚ್ಚು ವಿಕೇಂದ್ರೀಕೃತ ನಿರ್ವಹಣೆ ವ್ಯವಸ್ಥೆಗಳು ಸಾಮಾಜಿಕ/ಪಾರಿಸಾರಿಕವಾಗಿ ಅಧಿಕ ಸುಸ್ಥಿರವಾದ ಫಲಶ್ರುತಿ ನೀಡುತ್ತವೆ ಎಂದು ಸೊಪ್ಪಿನ ಬೆಟ್ಟಗಳ ಉದಾಹರಣೆಯನ್ನು ಬಳಸಿಕೊಂಡು ವಾದಿಸಬಹುದು. ಸ್ಥಳೀಯ ನಿರ್ವಹಣೆ ಇಲ್ಲದೆ ಇರುವುದರಿಂದ, ಅರಣ್ಯಗಳು ಕಳೆಗಳಿಂದ ತುಂಬಿಹೋಗಿವೆ, ಪ್ಲಾಂಟೇಷನ್‌ಗಳಾಗಿ ಪರಿವರ್ತಿತವಾಗಿವೆ ಅಥವಾ ಗಣಿಗಾರಿಕೆ ಇಲ್ಲವೇ ಮೂಲಸೌಲಭ್ಯ ನಿರ್ಮಾಣ ಯೋಜನೆಗಳಿಗೆ ನೀಡಲಾಗಿದೆ.
ಸ್ಥಳೀಯರಿಗೆ ಅರಣ್ಯದ ಹಕ್ಕುಗಳನ್ನು ಖಾತ್ರಿಗೊಳಿಸುವ ಅರಣ್ಯ ಹಕ್ಕುಗಳ ಕಾಯ್ದೆ(ಎಫ್‌ಆರ್‌ಎ) ಸಂಸತ್ತಿನಲ್ಲಿ ಅಂಗೀಕಾರಗೊಂಡು 15 ವರ್ಷ ಕಳೆದಿದ್ದರೂ, ಅನುಷ್ಠಾನ ತೃಪ್ತಿಕರವಾಗಿಲ್ಲ. ಈ ಪ್ರಗತಿಪರ ಕಾಯ್ದೆಯು ಅರಣ್ಯವಾಸಿಗಳಿಗೆ ಕೃಷಿ ಹಾಗೂ ಸಾಮುದಾಯಿಕ ಅರಣ್ಯ ಹಕ್ಕುಗಳನ್ನು ನೀಡುವ ಗುರಿ ಹೊಂದಿದ್ದು, ದೇಶದಲ್ಲಿ ಅರಣ್ಯಗಳ ನಿರ್ವಹಣೆಯನ್ನು ಪ್ರಜಾಸತ್ತಾತ್ಮಕಗೊಳಿಸುವಿಕೆಯ ಮುನ್ಸೂಚನೆ ಎನ್ನಲಾಗಿತ್ತು. ಬಡ ಹಾಗೂ ಬದಿಗೊತ್ತಲ್ಪಟ್ಟ ಅರಣ್ಯವಾಸಿಗಳ ಬದುಕನ್ನು ಇನ್ನಷ್ಟು ದುರ್ಬರಗೊಳಿಸಲು ವನ್ಯಜೀವಿ ಸಂರಕ್ಷಣಾವಾದಿಗಳು ಎಫ್‌ಆರ್‌ಎ ವಿರುದ್ಧ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ವಿಚಾರಣೆ ನಡೆಯುತ್ತಿದೆ. ಎನ್‌ಟಿಎಫ್‌ಪಿ ಅರಣ್ಯಕ್ಕೆ ಹಾನಿಕರ ಎಂಬ ವಾದಕ್ಕೆ ಪೂರಕವಾಗಿ, ತಿದ್ದಿದ, ತಮಗೆ ಬೇಕಾದ ಸಾಕ್ಷ್ಯಗಳನ್ನು ನ್ಯಾಯಾಲಯಕ್ಕೆ ನೀಡಿದ್ದಾರೆ. ಇದು ದೇಶದಲ್ಲಿ ಪ್ರಕಟಗೊಂಡಿರುವ ಸಂಶೋಧನೆಗಳ ಫಲಿತಾಂಶಗಳಿಗೆ ತದ್ವಿರುದ್ಧವಾಗಿದೆ. ನನಗೆ ಅನ್ನಿಸುವಂತೆ, ದೇಶದಲ್ಲಿ ಅರಣ್ಯಗಳು ಹಾಗೂ ಪಶ್ಚಿಮ ಘಟ್ಟದ ಪ್ರಜಾಸತ್ತಾತ್ಮಕ ನಿರ್ವಹಣೆಯು ಸುತ್ತಿ ಬಳಸಿ ಬರುವ ಮಾರ್ಗವಾಗಿರಲಿದ್ದು, ನಾವು ಊಹಿಸಿದ್ದಕ್ಕಿಂತ ಹೆಚ್ಚು ಸವಾಲಿನದಾಗಿರಲಿದೆ. ಪಶ್ಚಿಮ ಘಟ್ಟದ ಸಾಮಾಜಿಕ, ಸಾಂಸ್ಕೃತಿಕ, ಪಾರಿಸಾರಿಕ ಆಲೋಚನೆಗಳು ಒಂದಕ್ಕೊಂದು ಹೆಣೆದುಕೊಂಡ ಹೋರಾಟವನ್ನು ಜೀವಂತವಾಗಿಡುವುದು ಇನ್ನಷ್ಟು ಕ್ಲಿಷ್ಟವಾಗಲಿದೆ