ಕಾಂಗ್ರೆಸ್‌ನೊಂದಿಗೆ ತನ್ನ ಪಕ್ಷವನ್ನು ವಿಲೀನಗೊಳಿಸಿದ ಬಿಜೆಪಿ ಐಟಿಸೆಲ್ ಸ್ಥಾಪಕ
ಗುವಾಹಟಿ: ಬಿಜೆಪಿ (BJP) ಐಟಿ ಸೆಲ್‌ನ ಮೊದಲ ಮುಖ್ಯಸ್ಥ ಮತ್ತು ಮಾಜಿ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯರಿಂದ ಸ್ಥಾಪಿಸಲಾದ ಅಸ್ಸಾಂನ ಪ್ರಾದೇಶಿಕ ಪಕ್ಷವಾದ ಲಿಬರಲ್ ಡೆಮಾಕ್ರಟಿಕ್ ಪಕ್ಷವು (Liberal Democratic Party) ಮಂಗಳವಾರ ಕಾಂಗ್ರೆಸ್‌ನೊಂದಿಗೆ ವಿಲೀನಗೊಂಡಿದೆ.
2024ರ ಸಾರ್ವತ್ರಿಕ ಚುನಾವಣೆಗೆ ಮುನ್ನ ಬಿಜೆಪಿ ವಿರುದ್ಧ ಒಗ್ಗಟ್ಟಿನ ನಿಲುವು ತೆಗೆದುಕೊಳ್ಳಲು ಈ ಕ್ರಮ ಅಗತ್ಯ ಎಂದು ತಮ್ಮ ಪಕ್ಷದ ಬಹುಪಾಲು ಸದಸ್ಯರು ಒಪ್ಪಿಕೊಂಡ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಎಲ್‌ಡಿಪಿ ಅಧ್ಯಕ್ಷ ಪ್ರೊದ್ಯುತ್ ಬೋರಾ (Prodyut Bora) ಹೇಳಿದ್ದಾರೆ.
“ನಮ್ಮ ಪಕ್ಷವು ಕಾಂಗ್ರೆಸ್‌ನೊಂದಿಗೆ ವಿಲೀನಗೊಳ್ಳುವ ನಿರ್ಧಾರವನ್ನು ತೆಗೆದುಕೊಂಡಿದೆ. ದೇಶವನ್ನು ಆವರಿಸಿರುವ ದ್ವೇಷ ಮತ್ತು ಅಸತ್ಯದ ಹೊದಿಕೆಯನ್ನು ಬದಲಾಯಿಸಲು ಭಾರತವು ಒಗ್ಗಟ್ಟಿನಿಂದ ವಿರೋಧವನ್ನು ವ್ಯಕ್ತಪಡಿಸುವ ಅಗತ್ಯವಿದೆ ಎಂದು ನಮ್ಮ ಪಕ್ಷದ ಸದಸ್ಯರು ಭಾವಿಸಿದ್ದು, ಇದು ಸರ್ವಾನುಮತದ ನಿರ್ಧಾರವಾಗಿದೆ. ಅವರ ಸಾಮೂಹಿಕ ನಿರ್ಧಾರಕ್ಕೆ ನಾನು ತಲೆಬಾಗುತ್ತೇನೆ” ಎಂದು ಬೋರಾ ಹೇಳಿದ್ದಾರೆ.
ದಿಲ್ಲಿಯ ಸೇಂಟ್ ಸ್ಟೀಫನ್ಸ್ ಕಾಲೇಜು ಮತ್ತು ಐಐಎಂ ಅಹಮದಾಬಾದ್‌ನ ಹಳೆಯ ವಿದ್ಯಾರ್ಥಿಯಾಗಿರುವ ಬೋರಾ 2004 ರಲ್ಲಿ ಪಕ್ಷದ ಐಟಿ ಸೆಲ್ ಸದಸ್ಯರಾಗಿ ಬಿಜೆಪಿಗೆ ಸೇರಿದ್ದರು. 2007ರಲ್ಲಿ ಅವರು ಬಿಜೆಪಿ ಐಟಿ ಸೆಲ್‌ನ ರಾಷ್ಟ್ರೀಯ ಸಂಚಾಲಕರಾದರು.