ಖಾಲಿಸ್ತಾನ್‌ವಾದಿಗಳಿಗೆ ನೀರುಣಿಸುತ್ತಿರುವವರಾರು?
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಖಾಲಿಸ್ತಾನಿ ಬೆಂಬಲಿಗನೆಂದು ಗುರುತಿಸಿಕೊಂಡ ‘ವಾರಿಸ್ ಪಂಜಾಬ್ ದೆ’ ಸಂಘಟನೆಯ ಮುಖ್ಯಸ್ಥ ಅಮೃತ್ ಸಿಂಗ್‌ನ ಬಂಧನ ಕಾರ್ಯಾಚರಣೆ ದೇಶದಲ್ಲಿ ಸಾಕಷ್ಟು ಗದ್ದಲಗಳನ್ನು ಎಬ್ಬಿಸುತ್ತಿದೆ. ಆತನ ಬಂಧನ, ಬಳಿಕ ಪರಾರಿ, ಇದೀಗ ಪೊಲೀಸರ ಹುಡುಕಾಟ ಬೇರೆ ಬೇರೆ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಅಮೃತ ಪಾಲ್ ಸಿಂಗ್‌ನ ಬಂಧನ ಕಾರ್ಯಾಚರಣೆಯ ಅವಧಿಯಲ್ಲಿ ಪಂಜಾಬ್ ಪೊಲೀಸರು 100ಕ್ಕೂ ಅಧಿಕ ಸಿಖ್ಖರನ್ನು ಬಂಧಿಸಿದ್ದಾರೆ. ಇವರೆಲ್ಲರ ತಲೆಗೆ ಖಾಲಿಸ್ತಾನಿ ಬೆಂಬಲಿಗರು ಎನ್ನುವ ಹಣೆಪಟ್ಟಿಯನ್ನು ಕಟ್ಟಲಾಗಿದೆ. ಇದೇ ಸಂದರ್ಭದಲ್ಲಿ ಪಂಜಾಬ್‌ನಲ್ಲಿ ಮಾನವ ಹಕ್ಕು ಉಲ್ಲಂಘನೆ ಪ್ರಕರಣಗಳು ಹೆಚ್ಚುತ್ತಿವೆ ಎಂದು ಸಿಖ್ ಮುಖಂಡರು ಆರೋಪಿಸಿದ್ದಾರೆ. ಅಮೃತ್ ಸಿಂಗ್ ಮತ್ತು ಅವನ ಸಹಚರರ ಬಂಧನಕ್ಕೆ ಪೊಲೀಸರು ತಮ್ಮ ಕಾರ್ಯಾಚರಣೆಯನ್ನು ತೀವ್ರಗೊಳಿಸುತ್ತಿರುವಂತೆಯೇ, ಆ ಕಾರ್ಯಾಚರಣೆಯ ವಿರುದ್ಧ ದೇಶ ವಿದೇಶಗಳಲ್ಲಿರುವ ಸಿಖ್ ಯುವಕರು ತಮ್ಮ ಪ್ರತಿಭಟನೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ಪಂಜಾಬ್‌ನಲ್ಲಿ ಕೇಂದ್ರ ಸರಕಾರ ನಡೆಸುತ್ತಿರುವ ಹಸ್ತಕ್ಷೇಪಗಳು, ಅಲ್ಲಿನ ಜನರ ಗಾಯಗಳನ್ನು ಉಲ್ಬಣಿಸುವಂತೆ ಮಾಡುತ್ತಿದೆಯೇ ಎಂದು ಅನುಮಾನ ಪಡುವಂತೆ ಬೆಳವಣಿಗೆಗಳು ಅತಿರೇಕ ತಲಪುತ್ತಿದೆ.
ಗುಜರಾತಿನ ಇಬ್ಬರು ಕಾರ್ಪೊರೇಟ್ ಶಕ್ತಿಗಳಿಗೆ ಪೂರಕವಾಗಿ ದೇಶದ ಕೃಷಿ ನೀತಿಯನ್ನು ಸರಕಾರ ಬದಲಿಸಲು ತೊಡಗಿದ ದಿನದಿಂದಲೇ ಪಂಜಾಬ್‌ನಲ್ಲಿ ಕೇಂದ್ರ ಸರಕಾರದ ವಿರುದ್ಧ ಆಕ್ರೋಶ ಭುಗಿಲೇಳ ತೊಡಗಿತ್ತು. ದೇಶಾದ್ಯಂತ ವಿಸ್ತರಿಸಿದ ರೈತರ ಪ್ರತಿಭಟನೆಗಳ ನೇತೃತ್ವವನ್ನು ಪಂಜಾಬ್ ವಹಿಸಿತ್ತು. ದಿಲ್ಲಿಯಲ್ಲಿ ಬೀಡು ಬಿಟ್ಟ ಪಂಜಾಬ್‌ನ ರೈತರನ್ನು ‘ಖಾಲಿಸ್ತಾನಿಗಳು’ ಎಂದು ಬಿಂಬಿಸುವ ಪ್ರಯತ್ನವೂ ಕೇಂದ್ರದಿಂದ ನಡೆದಿತ್ತು. ಕಳೆದ ಶತಮಾನದ 80ರ ದಶಕದಲ್ಲಿ ಖಾಲಿಸ್ತಾನಿ ಉಗ್ರರ ವಿರುದ್ಧ ನಡೆಸಿದ್ದ ಭೀಕರ ಕಾರ್ಯಾಚರಣೆ, ಬಳಿಕ ಅಂದಿನ ಪ್ರಧಾನಿ ಇಂದಿರಾಗಾಂಧಿಯವರ ಕೊಲೆಯಲ್ಲಿ ಪರ್ಯಾವಸಾನಗೊಂಡಿತ್ತು. ಬಳಿಕ ಖಾಲಿಸ್ತಾನಿವಾದಿಗಳ ಧ್ವನಿಯೂ ಇಳಿಮುಖಗೊಂಡಿತ್ತು. ಆಗಾಗ ಪ್ರತ್ಯೇಕತಾವಾದದ ಕೂಗು ಏಳುತ್ತಿತ್ತಾದರೂ, ಅದು ಗಂಭೀರವಾಗಿ ಪರಿಗಣಿಸುವಷ್ಟೇನೂ ಇದ್ದಿರಲಿಲ್ಲ. ಆದರೆ ತಮ್ಮ ಸಂಸ್ಕೃತಿ, ಅಸ್ಮಿತೆಗೆ ಧಕ್ಕೆ ಬಂದಾಗಲೆಲ್ಲ ಪಂಜಾಬಿಗಳು ಜಾಗೃತಗೊಂಡಿದ್ದಾರೆ. ದೊಡ್ಡ ಮಟ್ಟದಲ್ಲಿ ಕೃಷಿಯನ್ನು ಆಶ್ರಯಿಸಿದ ಪಂಜಾಬ್, ಕೇಂದ್ರದ ರೈತ ವಿರೋಧಿ ನೀತಿಗಳ ವಿರುದ್ಧ ಒಂದಾಗುವುದು ಸಹಜವೇ ಆಗಿತ್ತು.
ಈ ರೈತರ ಪ್ರತಿಭಟನೆಗಳನ್ನು ದಮನಿಸಲು ಕೇಂದ್ರ ಸರಕಾರ ಅನುಸರಿಸಿದ ಕ್ರಮಗಳು, ಪಂಜಾಬ್‌ನ ರೈತರ ಕುರಿತಂತೆ ನೀಡಿದ ಹಗುರ ಹೇಳಿಕೆಗಳು ಅಲ್ಲಿರುವ ಪ್ರತ್ಯೇಕತಾವಾದಿಗಳಿಗೆ ಬಹಳಷ್ಟು ನೆರವಾಯಿತು. ಕೇಂದ್ರ ಸರಕಾರದ ನೆರಳಲ್ಲೇ ಹಿಂದುತ್ವವಾದಿಗಳು, ಹಿಂದೂ ರಾಷ್ಟ್ರವಾದಿಗಳು ಬೆಳೆಯುತ್ತಿರುವುದು ಪಂಜಾಬ್‌ನಲ್ಲಿ ಮಲಗಿದ್ದ ಖಾಲಿಸ್ತಾನ ಮತ್ತೆ ಎಚ್ಚರಗೊಳ್ಳುವುದಕ್ಕೆ ಪರೋಕ್ಷ ಕಾರಣವಾಯಿತು.ಪಂಜಾಬಿನಲ್ಲಿ ಹಿಂದುತ್ವವಾದಿಗಳು ತಳಸ್ತರದಲ್ಲಿ ಸಿಕ್ಖರ ವಿರುದ್ಧ ಬಿತ್ತುತ್ತಿರುವ ಅಸಹನೆ, ಮತ್ತೆ ಪಂಜಾಬಿಗರಲ್ಲಿ ಅಭದ್ರತೆಯನ್ನು ಸೃಷ್ಟಿಸತೊಡಗಿದೆ. ಪ್ರತ್ಯೇಕ ಖಾಲಿಸ್ತಾನದ ಬಗ್ಗೆ ಮಾತನಾಡುವುದು ದೇಶದ್ರೋಹವಾದರೆ? ಪ್ರತ್ಯೇಕ ಹಿಂದೂ ರಾಷ್ಟ್ರ ಸ್ಥಾಪನೆಯ ಬಗ್ಗೆ ಮಾತನಾಡುವುದು ಯಾಕೆ ದೇಶದ್ರೋಹವಲ್ಲ? ಸಂಘಪರಿವಾರ ಬಹಿರಂಗವಾಗಿ ಹಿಂದೂ ರಾಷ್ಟ್ರ ಸ್ಥಾಪನೆಯ ಕುರಿತಂತೆ ಮಾತನಾಡಿದಾಗಲೆಲ್ಲ ಕೇಂದ್ರ ಸರಕಾರ ವೌನವಾಗಿ ಅದನ್ನು ಬೆಂಬಲಿಸುತ್ತಿರುವುದು ಕಾಶ್ಮೀರ, ಪಂಜಾಬ್, ಈಶಾನ್ಯ ಭಾರತದ ಪ್ರತ್ಯೇಕತಾವಾದಿಗಳಿಗೆ ಪರೋಕ್ಷ ಕುಮ್ಮಕ್ಕು ನೀಡುತ್ತಿದೆ.
ಹಿಂದೂರಾಷ್ಟ್ರ ಪ್ರತಿಪಾದಕನಾಗಿದ್ದ ಗೋಡ್ಸೆಯನ್ನು ಸಾರ್ವಜನಿಕ ವೇದಿಕೆಯಲ್ಲಿ ವೈಭವೀಕರಿಸಿದರೆ, ಸರಕಾರ ಅವರ ವಿರುದ್ಧ ಯಾವುದೇ ದೇಶದ್ರೋಹದ ಕಾನೂನನ್ನು ದಾಖಲಿಸುವುದಿಲ್ಲ. ಆರೆಸ್ಸೆಸ್ ಮತ್ತು ಸಂಘಪರಿವಾರ ಮಹಾತ್ಮಾಗಾಂಧೀಜಿಯನ್ನು ಕೊಂದ ಭಯೋತ್ಪಾದಕರಿಗೆ, ಉಗ್ರವಾದಿಗಳಿಗೆ ಜೀವ ಕೊಟ್ಟಾಗ ಅವರ ಜೊತೆ ಜೊತೆಗೇ ಕಾಶ್ಮೀರದ ಅಫ್ಝಲ್ ಗುರು, ಪಂಜಾಬಿನ ಭಿಂದ್ರನ್‌ವಾಲೆಗಳು ಕೂಡ ಜೀವ ಪಡೆದುಕೊಳ್ಳುತ್ತಾರೆ ಎನ್ನುವುದನ್ನು ನಾವು ಮರೆಯಬಾರದು. ಅದನ್ನು ಮರೆತ ಫಲವಾಗಿಯೇ ಪಂಜಾಬಿನಲ್ಲಿ ಮತ್ತೆ ಖಾಲಿಸ್ತಾನ್‌ವಾದಿಗಳು ಸುದ್ದಿಯಾಗುತ್ತಿದ್ದಾರೆ. ಕಳೆದೆರಡು ವರ್ಷಗಳಿಂದ ಕಾಶ್ಮೀರದಲ್ಲಿ ಅಲ್ಲಿನ ನಾಗರಿಕರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳು ಕೂಡ ಪಂಜಾಬ್‌ನ ಜನರಲ್ಲಿ ಅಭದ್ರತೆ, ಅತೃಪ್ತಿಗಳನ್ನು ಹೆಚ್ಚಿಸುತ್ತಿದೆ. ಇವೆಲ್ಲವೂ ಪ್ರತ್ಯೇಕತಾವಾದದ ವಿಷ ವೃಕ್ಷಕ್ಕೆ ಗೊಬ್ಬರಗಳಾಗಿವೆ. ಅಮೃತ್ ಪಾಲ್ ಸಿಂಗ್ ಮತ್ತು ಆತನ ಬೆಂಬಲಿಗರ ಬಂಧನವಾಗುತ್ತಿದ್ದಂತೆಯೇ ಅದರ ವಿರುದ್ಧ ವಿದೇಶಗಳಲ್ಲಿ ಸಿಖ್ಖರು ತೀವ್ರ ಪ್ರತಿಭಟನೆಗಳನ್ನು ದಾಖಲಿಸಿದ್ದಾರೆ. ಮುಖ್ಯವಾಗಿ ಲಂಡನ್ ಮತ್ತು ಅಮೆರಿಕದಲ್ಲಿರುವ ಭಾರತೀಯ ಹೈಕಮಿಶನ್ ಮತ್ತು ಕಾನ್ಶುಲೇಟ್ ಕಚೇರಿಗಳಲ್ಲಿ ದಾಂಧಲೆಗಳನ್ನು ಎಸಗಿದ್ದಾರೆ. ಕಚೇರಿಯ ಕಿಟಕಿ, ಬಾಗಿಲುಗಳನ್ನು ಒಡೆದಿದ್ದಾರೆ. ಇದು ಆತಂಕಕಾರಿ ಬೆಳವಣಿಗೆಯಾಗಿದೆ. ಇದರ ವಿರುದ್ಧ ಭಾರತ ತನ್ನ ತೀವ್ರ ಖಂಡನೆಯನ್ನು ವ್ಯಕ್ತಪಡಿಸಿದೆ.
ಆದರೆ ಒಂದನ್ನು ಕೇಂದ್ರ ಸರಕಾರ ನೆನಪಲ್ಲಿಟ್ಟುಕೊಳ್ಳಬೇಕು. ಬಿಬಿಸಿಯು ಗುಜರಾತ್ ಹತ್ಯಾಕಾಂಡದ ವಿರುದ್ಧ ಸಾಕ್ಷಚಿತ್ರವೊಂದನ್ನು ಬಿಡುಗಡೆ ಮಾಡಿದಾಗ, ಬಿಬಿಸಿಯನ್ನು ಬೆದರಿಸುವ ಪ್ರಯತ್ನ ಕೇಂದ್ರ ಸರಕಾರದಿಂದಲೇ ನಡೆಯಿತು. ಸಂಘಪರಿವಾರದ ಪರವಾಗಿರುವ ಕೆಲವು ಕಾರ್ಯಕರ್ತರು ಲಂಡನ್‌ನಲ್ಲಿ ಬಿಬಿಸಿ ವಿರುದ್ಧ ಪ್ರತಿಭಟನೆ ನಡೆಸಿದರು. ಇದನ್ನು ಭಾರತ ಸರಕಾರ ಪರೋಕ್ಷವಾಗಿ ಬೆಂಬಲಿಸಿತು. ಬಿಬಿಸಿ ವಿರುದ್ಧ ಲಂಡನ್‌ನಲ್ಲಿರುವ ಭಾರತೀಯರು ಪ್ರತಿಭಟನೆ ಮಾಡಿದಾಗ ಅವರಿಗೆ ಎಚ್ಚರಿಕೆ ನೀಡುವ ಕೆಲಸವನ್ನು ಭಾರತ ಸರಕಾರ ಮಾಡಿದ್ದಿದ್ದರೆ, ಇದೀಗ ಖಾಲಿಸ್ತಾನ್ ಬೆಂಬಲಿಗರು ಲಂಡನ್, ಅಮೆರಿಕದಲ್ಲಿ ನಡೆಸುತ್ತಿರುವ ಪ್ರತಿಭಟನೆಗಳ ವಿರುದ್ಧ ಭಾರತದ ಖಂಡನೆಗೆ ಹೆಚ್ಚು ನೈತಿಕ ಬಲ ಬಂದು ಬಿಡುತ್ತಿತ್ತು. ಪಂಜಾಬ್ ನಿಧಾನಕ್ಕೆ ಖಾಲಿಸ್ತಾನ್‌ವಾದಿಗಳ ಕೈವಶವಾಗುತ್ತಿರುವುದರ ಹಿಂದೆ, ಕೇಂದ್ರ ಸರಕಾರ ಭಯೋತ್ಪಾದನೆಯ ಕುರಿತಂತೆ ಅನುಸರಿಸುತ್ತಿರುವ ದ್ವಂದ್ವ ನಿಲುವುಗಳ ಪಾತ್ರವಿದೆ. ಖಾಲಿಸ್ತಾನ್‌ವಾದಿ ಅಮೃತ್ ಪಾಲ್ ಸಿಂಗ್‌ನನ್ನು ಬಂಧಿಸುವುದರ ಜೊತೆ ಜೊತೆಗೇ, ದೇಶದಲ್ಲಿ ವಿಜೃಂಭಿಸುತ್ತಿರುವ ಗೋಡ್ಸೆವಾದಿಗಳನ್ನು ದಮನಿಸುವ ಕೆಲಸವೂ ಸರಕಾರದಿಂದ ನಡೆಯಬೇಕು. ಬಲಗೈಯಲ್ಲಿ ಗೋಡ್ಸೆವಾದಿಗಳನ್ನು ಪೋಷಿಸುತ್ತಾ, ಎಡಗೈಯಲ್ಲಿ ಖಾಲಿಸ್ತಾನ್‌ವಾದಿಗಳನ್ನು ದಮನಿಸಲು ಸಾಧ್ಯವಿಲ್ಲ ಎನ್ನುವ ವಾಸ್ತವವನ್ನು ಸರಕಾರ ಅರಿತುಕೊಳ್ಳಬೇಕು.