ಭ್ರಷ್ಟರನ್ನು ಪ್ರಶ್ನಿಸುವುದೇ ಅಪರಾಧವಾದರೆ?
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
‘ಭಾರತದ ಪ್ರಜಾಪ್ರಭುತ್ವ ಆತಂಕದಲ್ಲಿದೆ’ ಎಂದು ರಾಹುಲ್‌ಗಾಂಧಿ ಲಂಡನ್‌ನಲ್ಲಿ ಮಾಡಿದ ಭಾಷಣವನ್ನು ಕೇಂದ್ರ ಸರಕಾರ ಅನುಮೋದಿಸಲು ಹೊರಟಿದೆ. ಭಾಷಣವೊಂದರಲ್ಲಿ, ‘ಯಾವುದೋ ಸರ್ ನೇಮ್ ಹೊಂದಿರುವ ಸಮುದಾಯವನ್ನು ನಿಂದಿಸಿದ್ದಾರೆ’ ಎಂದು ವಿರೋಧ ಪಕ್ಷದ ಪ್ರಮುಖನೊಬ್ಬನಿಗೆ ನ್ಯಾಯಾಲಯವೊಂದು ಎರಡು ವರ್ಷ ಶಿಕ್ಷೆಯನ್ನು ವಿಧಿಸುತ್ತದೆ. ಹಾಗೆ ಶಿಕ್ಷೆ ವಿಧಿಸಿದ ಮರುದಿನವೇ ಆ ನಾಯಕನ ಸಂಸತ್ ಸದಸ್ಯತ್ವ ರದ್ದಾಗುತ್ತದೆ. ಇಷ್ಟಕ್ಕೂ ರಾಹುಲ್ ಗಾಂಧಿಯವರು ಪ್ರಶ್ನಿಸಿರುವುದಾದರೂ ಯಾರನ್ನು? ಈ ದೇಶಕ್ಕೆ ಸಹಸ್ರಾರು ಕೋಟಿ ರೂ.ಗಳನ್ನು ವಂಚಿಸಿ ವಿದೇಶದಲ್ಲಿ ಅಡಗಿ ಕುಳಿತ ಗುಜರಾತಿನ ಭ್ರಷ್ಟ ಉದ್ಯಮಿಗಳನ್ನು. ದೇಶದ ಬ್ಯಾಂಕುಗಳನ್ನು ದಿವಾಳಿಯಾಗಿಸಿ ಇದೀಗ ವಿದೇಶಗಳಲ್ಲಿ ಮಜಾ ಉಡಾಯಿಸುತ್ತಿರುವವರನ್ನು. ರಾಹುಲ್ ಗಾಂಧಿ ಟೀಕಿಸಿದ ಉದ್ಯಮಿಯ ಸರ್ ನೇಮ್ ‘ಮೋದಿ’ ಎಂದಾಗಿರುವುದೇ ಬಹುದೊಡ್ಡ ಅಪರಾಧವಾಗಿ ಬಿಟ್ಟಿತು. ದೇಶಕ್ಕೆ ವಂಚಿಸಿ ಪರಾರಿಯಾಗಿರುವ ಬಹುತೇಕ ಉದ್ಯಮಿಗಳ ಸರ್‌ನೇಮ್ ‘ಮೋದಿ’ ಎಂದೇ ಯಾಕಿದೆ? ಎನ್ನುವ ಪ್ರಶ್ನೆ, ಈ ದೇಶಕ್ಕೆ ‘ಮೋದಿಗಳು’ ಸಹಸ್ರಾರು ಕೋಟಿ ರೂ. ವಂಚಿಸಿರುವುದಕ್ಕಿಂತ ದೊಡ್ಡ ಅಪರಾಧವಾಗಿ ಹೋಯಿತು. ದೇಶದ ಸಂಪತ್ತನ್ನು ಲೂಟಿ ಹೊಡೆಯುವುದಕ್ಕಿಂತಲೂ ದೊಡ್ಡ ಅಪರಾಧ, ಅದನ್ನು ಪ್ರಶ್ನಿಸುವುದು ಎನ್ನುವುದು ರಾಹುಲ್ ಗಾಂಧಿ ಪ್ರಕರಣದ ಮೂಲಕ ಸಾಬೀತಾಗಿದೆ.
ಗುಜರಾತಿನ ಒಂದು ನಿರ್ದಿಷ್ಟ ಸರ್ ನೇಮ್ ಹೊಂದಿರುವ ಸಮುದಾಯವನ್ನು ‘ಕಳ್ಳರು’ ಎಂದು ಕರೆಯಲಾಗಿದೆ ಎನ್ನುವುದು ರಾಹುಲ್ ಮೇಲಿರುವ ಆರೋಪ. ಆದರೆ ಈ ದೇಶದಲ್ಲಿ ಒಂದು ನಿರ್ದಿಷ್ಟ ಧರ್ಮಕ್ಕೆ ಸೇರಿದ ಅಮಾಯಕರು ತಮ್ಮ ಧರ್ಮದ ಕಾರಣಕ್ಕಾಗಿಯೇ ‘ಭಯೋತ್ಪಾದಕರು’ ಎಂದು ಈ ದೇಶದಲ್ಲಿ ಬಿಜೆಪಿಯ ನಾಯಕರಿಂದ ಪ್ರತಿನಿತ್ಯ ನಿಂದನೆಗೊಳಗಾಗುತ್ತಿದ್ದಾರೆ. ಹಾಗೆ ನಿಂದಿಸುತ್ತಿರುವ ಯಾವುದೇ ರಾಜಕೀಯ ನಾಯಕರಿಗೆ ಯಾವುದೇ ರೀತಿಯ ಶಿಕ್ಷೆಯಾಗಿಲ್ಲ. ಒಂದು ಧರ್ಮದ ಹೆಸರನ್ನು ಉಲ್ಲೇಖಿಸಿ, ಆ ಧರ್ಮದ ಅಮಾಯಕ ಜನರನ್ನು ಹತ್ಯೆಗೈಯಲು ರಾಜಕೀಯ ಮುಖಂಡರೆಂದು ಕರೆಸಿಕೊಂಡವರು ಬಹಿರಂಗವಾಗಿ ಪದೇ ಪದೇ ಕರೆ ನೀಡುತ್ತಿದ್ದಾರೆ. ದಿಲ್ಲಿ ಗಲಭೆಯ ಸಂದರ್ಭದಲ್ಲಿ ಈ ಕರೆಯನ್ನು ಯಥಾವತ್ ಅನುಷ್ಠಾನಕ್ಕಿಳಿಸಲಾಯಿತು. ವಿಪರ್ಯಾಸವೆಂದರೆ, ಈ ವರೆಗೆ ಹತ್ಯೆಗೆ ಕರೆ ನೀಡಿದ ನಾಯಕನನ್ನು ಕಾಟಾಚಾರಕ್ಕೂ ಬಂಧಿಸಿಲ್ಲ. ಅಷ್ಟೇ ಏಕೆ? ದಲಿತರನ್ನು ನೀವು ಸಾರ್ವಜನಿಕವಾಗಿ ನಿಂದಿಸಬಹುದು. ಅವರ ಜಾತಿಯ ಕಾರಣಕ್ಕೇ ಅವರನ್ನು ಕಳ್ಳರೆಂದು ಶಂಕಿಸಬಹುದು. ಅವರ ಹೆಣ್ಣು ಮಕ್ಕಳ ಮೇಲೆ ನಡೆದ ಅತ್ಯಾಚಾರವನ್ನು ಬಹಿರಂಗವಾಗಿ ಸಮರ್ಥಿಸಬಹುದು. ಆದರೆ ಈ ದೇಶಕ್ಕೆ ಕೋಟ್ಯಂತರ ರೂ. ವಂಚಿಸಿದ ಒಬ್ಬ ಭ್ರಷ್ಟನನ್ನು ಸಾರ್ವಜನಿಕವಾಗಿ ಟೀಕಿಸಿದರೆ, ವ್ಯಂಗ್ಯವಾಡಿದರೆ ಅದು ಒಂದು ಸಮುದಾಯದ ನಿಂದನೆಯಾಗಿ ಒಬ್ಬ ನಾಯಕನ ಸಂಸತ್ ಸದಸ್ಯತ್ವವೇ ವಜಾ ಗೊಳ್ಳುವಂತಹ ಗಂಭೀರ ಪ್ರಕರಣವಾಗಿ ಬಿಡುತ್ತದೆ.
ಈ ಪ್ರಕರಣದಿಂದ, ಈ ಸರಕಾರ ಯಾರ ಮೂಲಕ ನಿಯಂತ್ರಿಸಲ್ಪಡುತ್ತಿದೆ ಎನ್ನುವುದು ವಿಶ್ವಕ್ಕೇ ಗೊತ್ತಾಗಿದೆ. ರಾಹುಲ್ ಭಾಷಣದಿಂದ ಈ ದೇಶಕ್ಕೆ ಅಪಮಾನವಾಗಿತ್ತೋ, ಇಲ್ಲವೋ ಆದರೆ, ರಾಹುಲ್ ವಿರುದ್ಧ ಕೇಂದ್ರ ಸರಕಾರ ನಡೆಸುತ್ತಿರುವ ಮಸಲತ್ತಿನಿಂದ ಈ ದೇಶದ ಪ್ರಜಾಸತ್ತೆಗೆ ಬಹಳಷ್ಟು ಹಾನಿಯಾಗಿದೆ. ರಾಹುಲ್ ಗಾಂಧಿಗೆ ಇದು ಅನಿರೀಕ್ಷಿತವಾಗಿರಲಿಲ್ಲ. ಕೋರ್ಟ್ ತೀಪುರ್ ಹೊರ ಬೀಳುವ ಮೊದಲೇ ಅವರನ್ನು ಅಸಾಂವಿಧಾನಿಕ ದಾರಿಯ ಮೂಲಕ ಸಂಸತ್ತಿನಿಂದ ಹೊರಗಿಡುವ ಪ್ರಯತ್ನ ನಡೆಯುತ್ತಿತ್ತು. ಭಾರತದಲ್ಲಿ ಬಾಲ ಬಿಚ್ಚುತ್ತಿರುವ ಸರ್ವಾಧಿಕಾರದ ವಿರುದ್ಧ ಲಂಡನ್‌ನಲ್ಲಿ ಮಾತನಾಡಿದ್ದಾರೆ ಎನ್ನುವ ನೆಪವನ್ನು ಮುಂದಿಟ್ಟುಕೊಂಡು, ಸಂಸತ್‌ನಲ್ಲಿ ಅವರು ಮಾತನಾಡುವುದನ್ನು ತಡೆಯಲು ಯೋಜನೆ ಸಿದ್ಧಗೊಂಡಿತ್ತು. ಲಂಡನ್‌ನಲ್ಲಿ ಭಾರತದ ವಿರುದ್ಧ ಮಾತನಾಡಿದ್ದಾರೆ ಎನ್ನುವುದು ಕೂಡ ನೆಪವೇ ಆಗಿತ್ತು. ನಿಜಕ್ಕೂ ಸರಕಾರಕ್ಕೆ ಆತಂಕವಿದ್ದುದು, ಅವರು ಅದಾನಿ ಹಗರಣದ ವಿರುದ್ಧ ಪ್ರಶ್ನೆಗಳನ್ನು ಎತ್ತುತ್ತಾರೆ ಎನ್ನುವುದು. ಹಿಂಡನ್ ಬರ್ಗ್ ವರದಿಯ ಬಳಿಕ ಅದಾನಿಯ ಬಂಡವಾಳ ಒಂದೊಂದಾಗಿ ಬಹಿರಂಗವಾಗುತ್ತಿದ್ದಂತೆಯೇ, ಅದಾನಿಯ ಜೊತೆ ಜೊತೆಗೇ ನರೇಂದ್ರ ಮೋದಿಯವರ ಮುಖವಾಡವೂ ಕಳಚತೊಡಗಿತ್ತು. ಕೇಂದ್ರ ಸರಕಾರವನ್ನು ನಿಯಂತ್ರಿಸುತ್ತಿರುವುದೇ ಅದಾನಿ ಬಳಗ ಎನ್ನುವ ಆರೋಪವಿರುವಾಗ, ಅದಾನಿಯ ವಿರುದ್ಧದ ದಾಳಿ ಸರಕಾರದ ವಿರುದ್ಧದ ದಾಳಿಯೇ ಆಗಿರುತ್ತದೆ. ಆದುದರಿಂದಲೇ, ಸರಕಾರಕ್ಕೆ ರಾಹುಲ್ ಸಂಸತ್‌ನಲ್ಲಿ ಮಾತನಾಡುವುದು ಬೇಡವಾಗಿತ್ತು. ಅದಾನಿ ಪ್ರಕರಣದ ಜೊತೆಗೆ ಕೇಂದ್ರ ಸರಕಾರ ಶಾಮೀಲಾಗಿರುವ ಆರ್ಥಿಕ ಅವ್ಯವಹಾರಗಳು ಬಹಿರಂಗವಾಗುವ ಭಯದಿಂದ ರಾಹುಲ್‌ಗಾಂಧಿಯನ್ನು ಸದನದಿಂದಲೇ ಹೊರಗಿಡುವ ಪ್ರಯತ್ನವನ್ನು ಸರಕಾರ ನಡೆಸಿತು. ನ್ಯಾಯಾಲಯದ ತೀರ್ಪು ಕೇಂದ್ರದ ಉದ್ದೇಶಕ್ಕೆ ಪೂರಕವಾಗಿ ಹೊರಬಂತು.
ಬಿಜೆಪಿ ಮತ್ತು ಸಂಘಪರಿವಾರದ ದ್ವೇಷ ಭಾಷಣಗಳಿಂದ ಭಾರತ ಗಾಯಗೊಂಡು ನರಳುತ್ತಿರುವ ಸಂದರ್ಭದಲ್ಲಿ ‘ಭಾರತ್ ಜೋಡೊ’ ಕಾಲ್ನಡಿಗೆಯ ಮೂಲಕ ದೇಶಾದ್ಯಂತ ಸಂಚರಿಸಿ, ಮನಸ್ಸುಗಳನ್ನು ಒಂದಾಗಿಸಲು ಪ್ರಯತ್ನ ಪಟ್ಟು ರಾಹುಲ್ ಯಶಸ್ವಿಯಾಗಿರುವುದು ಬಿಜೆಪಿಗೆ ತೀವ್ರ ಇರಿಸುಮುರಿಸು ಸೃಷ್ಟಿಸಿತ್ತು. ಭಾರತ್ ಜೋಡೊ ಸಂದರ್ಭದಲ್ಲಿ ಅವರು ಆರೆಸ್ಸೆಸ್ ಮತ್ತು ಅದಾನಿ-ಅಂಬಾನಿಗಳ ವಿರುದ್ಧ ನೇರವಾಗಿ ದಾಳಿ ನಡೆಸಿರುವುದು ಕೂಡ, ಸರಕಾರಕ್ಕೆ ಮರ್ಮಾಘಾತವನ್ನುಂಟು ಮಾಡಿತ್ತು. ವಿರೋಧ ಪಕ್ಷದ ಯಾವುದೇ ನಾಯಕರು ಅಷ್ಟು ನೇರವಾಗಿ, ತೀವ್ರವಾಗಿ ದಾಳಿಯನ್ನು ನಡೆಸಿರಲಿಲ್ಲ. ರಾಹುಲ್‌ಗಾಂಧಿ ನಿಧಾನಕ್ಕೆ ಜನಪ್ರಿಯರಾಗುತ್ತಿರುವುದು, ಸಾರ್ವಜನಿಕವಾಗಿ ಬೆಳೆಯುತ್ತಿರುವುದು ಬಿಜೆಪಿ ನಾಯಕರಿಗಿಂತ ಆರೆಸ್ಸೆಸ್ ಮತ್ತು ಅದಾನಿ ಬಳಗಕ್ಕೆ ಆತಂಕಕಾರಿ ವಿಷಯವಾಗಿತ್ತು. ಆದುದರಿಂದಲೇ ರಾಹುಲ್‌ರನ್ನು ಬಗ್ಗು ಬಡಿಯಲು ಒಳದಾರಿಯನ್ನು ಬಳಸಿಕೊಳ್ಳಲಾಗಿದೆ. ಆದರೆ ಇದು ರಾಹುಲ್ ವಿರೋಧಿಗಳಿಗೆ ತಿರುಗುಬಾಣವಾಗುವ ಎಲ್ಲ ಲಕ್ಷಣಗಳೂ ಕಾಣುತ್ತಿವೆ.
ರಾಹುಲ್‌ಗಾಂಧಿಗೆ ಜೈಲು ಶಿಕ್ಷೆ ಘೋಷಣೆಯಾಗುತ್ತಿದ್ದಂತೆಯೇ ಅವರು ದೇಶದ ಕೇಂದ್ರ ಬಿಂದುವಾಗಿ ಬಿಟ್ಟಿದ್ದಾರೆ. ಮೋದಿ ಸರಕಾರ ರಾಹುಲ್ ಗಾಂಧಿಗೆ ಹೆದರಿರುವುದು ಕೂಡ ಈ ಮೂಲಕ ಬಟಾ ಬಯಲಾಗಿದೆ. ದೇಶಕ್ಕೆ ವಂಚನೆಗೈದ ಲಲಿತ್ ಮೋದಿ, ನೀರವ್ ಮೋದಿಯಂತಹ ಖಳರನ್ನು ಪ್ರಶ್ನಿಸುವುದು ತಪ್ಪೆ ? ಎಂದು ಸಾರ್ವಜನಿಕರು ದೊಡ್ಡ ಧ್ವನಿಯಲ್ಲಿ ಕೇಳುವಂತಾಗಿದೆ. ಎದುರಾಗಿರುವ ಸವಾಲನ್ನು ರಾಹುಲ್‌ಗಾಂಧಿ ಅಷ್ಟೇ ಧೈರ್ಯದಿಂದ ಸ್ವೀಕರಿಸಿದ್ದಾರೆ. ಭ್ರಷ್ಟರ ವಿರುದ್ಧ ದ ಹೋರಾಟಕ್ಕೆ ಸ್ಪಷ್ಟ ರೂಪ ಕೊಡಲು ಈ ಬೆಳವಣಿಗೆಯನ್ನು ಅವರು ಎಷ್ಟರ ಮಟ್ಟಿಗೆ ಬಳಸಿಕೊಳ್ಳುತ್ತಾರೆ ಎನ್ನುವುದರ ಆಧಾರದಲ್ಲಿ ಅವರ ರಾಜಕೀಯ ಭವಿಷ್ಯ ನಿಂತಿದೆ. ಯಾಕೆಂದರೆ ಜೈಲು ಈ ದೇಶಕ್ಕೆ ಹತ್ತು ಹಲವು ನಾಯಕರನ್ನು ಕೊಟ್ಟಿದೆ. ಈ ದೇಶವನ್ನು ಸರ್ವನಾಶ ಮಾಡುತ್ತಿರುವ ಭ್ರಷ್ಟರನ್ನು ಪ್ರಶ್ನಿಸಿದ ಕಾರಣಕ್ಕಾಗಿ ಜೈಲು ಸೇರುವುದರಿಂದ, ರಾಹುಲ್ ಕಳೆದುಕೊಳ್ಳುವುದಕ್ಕಿಂತ ಬಹಳಷ್ಟನ್ನು ಪಡೆದುಕೊಳ್ಳಲಿದ್ದಾರೆ. ಶಂಕಿತ ಭಯೋತ್ಪಾದಕಿಯೆನ್ನುವ ಕಳಂಕ ಹೊತ್ತ ಪ್ರಜ್ಞಾ ಸಿಂಗ್ ಠಾಕೂರ್‌ನಂತಹವರಿಗೆ ಪ್ರವೇಶಿಸಲು ಅವಕಾಶವಿರುವ ಸಂಸತ್‌ನಿಂದ ಕೆಲಕಾಲ ಹೊರಗಿದ್ದು ಜನರ ನಡುವೆ ಬೆರೆಯುವುದರಲ್ಲೇ ರಾಹುಲ್‌ಗಾಂಧಿಗೆ ಒಳಿತಿದೆ.