ರಂಗಭೂಮಿಯಿಂದ ಪ್ರಭುತ್ವದ ಶೋಷಣೆ ಎಚ್ಚರಿಸುವ ಕಾರ್ಯ: ಪ್ರೊ.ಜಯಪ್ರಕಾಶ್ ಮಾವಿನಕುಳಿ
ಉಡುಪಿ, ಮಾ.27: ಪ್ರಭುತ್ವ ನಡೆಸುವ ಶೋಷಣೆ, ಕುತಂತ್ರದ ಬಗ್ಗೆ ಜನರನ್ನು ಎಚ್ಚರಿಸುವ ಕೆಲಸವನ್ನು ರಂಗಭೂಮಿ ಮಾಡುತ್ತಿದೆ. ಆದುದರಿಂದ ನಾಟಕಕಾರರು, ಸಾಹಿತಿಗಳನ್ನು ಕಂಡರೆ ಪ್ರಭುತ್ವಕ್ಕೆ ಭಯದ ಪ್ರೀತಿಯೇ ಹೊರತು ನಿಜವಾದ ಪ್ರೀತಿಯಲ್ಲ ಎಂದು ಹಿರಿಯ ನಾಟಕಕಾರ, ಸಾಹಿತಿ, ರಂಗ ನಿರ್ದೇಶಕ ಪ್ರೊ.ಜಯ ಪ್ರಕಾಶ್ ಮಾವಿನಕುಳಿ ಹೇಳಿದ್ದಾರೆ.
ರಂಗಭೂಮಿ ಉಡುಪಿ ವತಿಯಿಂದ ಉಡುಪಿ ಎಂಜಿಎಂ ಕಾಲೇಜು ಹಾಗೂ ಕನ್ನಡ ಮತುತಿ ಸಂಸ್ಕೃತಿ ಇಲಾಖೆ ಸಹಕಾರದೊಂದಿಗೆ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಸೋಮವಾರ ನಡೆದ ವಿಶ್ವ ರಂಗಭೂಮಿ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಹಿಂದಿನಿಂದಲೂ ಕಲೆ, ಸಾಹಿತ್ಯ, ನಾಟಕ, ರಂಗಭೂಮಿ ತಮ್ಮ ಕಲಾ ಪ್ರಕಾರಗಳ ಮೂಲಕ ಪ್ರಭುತ್ವವನ್ನು ಎದುರಿಸುತ್ತ ಬಂದಿವೆ. ನಾಟಕಕಾರರು ಮತ್ತು ರಂಗಭೂಮಿಯ ಮೇಲೆ ಸಾಕಷ್ಟು ಜವಾಬ್ದಾರಿಗಳಿವೆ. ಆದುದರಿಂದ ನಾಟಕಕಾರರು, ನಟರು ಪ್ರಭುತ್ವದ ಬಗ್ಗೆ ಸದಾ ಜಾಗೃತರಾಗಿರಬೇಕು. ವ್ಯವಸ್ಥೆಯಲ್ಲಿನ ಪ್ರಭುತ್ವವನ್ನು ಸೂಕ್ಷ್ಮ ಮನಸ್ಸಿನಿಂದ ಎಚ್ಚರಿಸಬೇಕು ಎಂದರು.
ತಂತ್ರಜ್ಞಾನ ಬೆಳೆದು ಟಿವಿ ಮಾಧ್ಯಮಗಳು ಪ್ರಭಾವಿತರಾದರೂ ಕಲೆ, ಸಾಹಿತ್ಯ ಚಟುವಟಿಕೆಗಳಿಗೆ ಯಾವುದೇ ರೀತಿಯ ದೊಡ್ಡ ಮಟ್ಟದ ಪರಿಣಾಮ ಬೀರಿಲ್ಲ. ಕರಾವಳಿ ಪ್ರದೇಶದಲ್ಲಿ ರಂಗಭೂಮಿ ಚಟುವಟಿಕೆಗಳೇ ಹೆಚ್ಚು ನಡೆಯುತ್ತಿದೆ. ಸಿನೆಮಾಕ್ಕೆ ಸಾವಿದೆ. ಆದರೆ ರಂಗಭೂಮಿಗೆ ಸಾವಿಲ್ಲ ಎಂದು ಅವರು ತಿಳಿಸಿದರು.
ರಂಗಭೂಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಹಿರಿಯ ರಂಗನಟ ಯು.ಎಂ.ಅಸ್ಲಾಂ ಹಾಗೂ ಪ್ರಭಾಕರ ಸೌಂಡ್ಸ್‌ನ ಹಿರಿಯರಾದ ಕೆ. ಪ್ರಭಾಕರ ಶೆಟ್ಟಿಗಾರ್ ಅವರಿಗೆ ವಿಶ್ವರಂಗಭೂಮಿ ಸನ್ಮಾನ ನೀಡಿ ಗೌರವಿಸಲಾಯಿತು.
ಹಾರಾಡಿ ಭೂಮಿಕಾ ಸಂಸ್ಥೆಯ ರಂಗಕರ್ಮಿ ರಾಮ್ ಶೆಟ್ಟಿ, ಎಂಜಿಎಂ ಕಾಲೇಜಿನ ಪ್ರಾಂಶುಪಾಲ ಪ್ರೊ.ಲಕ್ಷ್ಮೀ ನಾರಾಯಣ ಕಾರಂತ, ರಂಗಭೂಮಿ ಉಪಾಧ್ಯಕ್ಷ ಎನ್.ಆರ್.ಬಲ್ಲಾಳ್ ಉಪಸ್ಥಿತರಿದ್ದರು. ರಂಗಭೂಮಿ ಉಪಾಧ್ಯಕ್ಷ ಭಾಸ್ಕರ ರಾವ್ ಕಿದಿಯೂರು ಸ್ವಾಗತಿಸಿದರು.