ಪುತ್ರನನ್ನು ಅಬುಧಾಬಿಯ ಯುವರಾಜನಾಗಿ ನೇಮಿಸಿದ ಯುಎಇ ಅಧ್ಯಕ್ಷ ಶೇಖ್‌ ಮುಹಮ್ಮದ್‌ ಬಿನ್‌ ಝಾಯೆದ್‌

Update: 2023-03-30 07:30 GMT

ದುಬೈ: ಸಂಯುಕ್ತ ಅರಬ್‌ ಸಂಸ್ಥಾನದ ಅಧ್ಯಕ್ಷ ಶೇಖ್‌ ಮುಹಮ್ಮದ್‌ ಬಿನ್‌ ಝಾಯೆದ್‌ ಅಲ್‌ ನಹ್ಯಾನ್‌ ಅವರು ತಮ್ಮ ಹಿರಿಯ ಪುತ್ರ ಶೇಖ್‌ ಖಾಲಿದ್‌ ಬಿನ್‌ ಮುಹಮ್ಮದ್‌ ಬಿನ್‌ ಝಾಯೆದ್‌ ಅವರನ್ನು ಅಬುಧಾಬಿಯ ಯುವರಾಜನನ್ನಾಗಿ ನೇಮಿಸಿದ್ದಾರೆ.

ಅಬುಧಾಬಿಯ ಆಡಳಿತಗಾರರೂ ಆಗಿರುವ ಶೇಖ್‌ ಮುಹಮ್ಮದ್‌ ತಮ್ಮ ಸಹೋದರ ಶೇಖ್‌ ಮನ್ಸೂರ್‌ ಬಿನ್‌ ಝಾಯೆದ್‌ ಅಲ್‌ ನಹ್ಯಾನ್‌ ಅವರನ್ನು ದುಬೈ ದೊರೆ ಶೇಖ್‌ ಮುಹಮ್ಮದ್‌ ಬಿನ್‌ ರಶೀದ್‌ ಅಲ್‌ ಮಖ್ತೂಮ್‌  ಅವರಂತೆಯೇ  ಸಂಯುಕ್ತ ಅರಬ್‌ ಸಂಸ್ಥಾನದ ಉಪಾಧ್ಯಕ್ಷರನ್ನಾಗಿ ನೇಮಿಸಿದ್ದಾರೆ.

ಐವತ್ತೆರಡು ವರ್ಷದ ಶೇಖ್‌ ಮನ್ಸೂರ್‌ ಅವರು ಮ್ಯಾಂಚೆಸ್ಟರ್‌ ಸಿಟಿ ಫುಟ್ಬಾಲ್‌ ಕ್ಲಬ್‌ ಮಾಲಕರಾಗಿದ್ದಾರೆ.

ಸಂಯುಕ್ತ ಅರಬ್‌ ಸಂಸ್ಥಾನದ ರಾಷ್ಟ್ರೀಯ ಭದ್ರತಾ ಸಲಹೆಗಾರ ಹಾಗೂ ಎಡಿಕ್ಯು ಸಾವರಿನ್‌ ವೆಲ್ತ್‌ ಫಂಡ್‌ ಇದರ ಅಧ್ಯಕ್ಷರೂ ಆಗಿರುವ ಶೇಖ್‌ ತಹ್ನೌನ್‌ ಬಿನ್‌ ಝಾಯೆದ್‌ ಅಲ್‌ ನಹ್ಯಾನ್‌ ಅವರನ್ನು ಅಬುಧಾಬಿಯ ಉಪ ಆಡಳಿತಗಾರನಾಗಿ ನೇಮಿಸಲಾಗಿದೆ.  ಅಧ್ಯಕ್ಷರ  ಇನ್ನೊಬ್ಬ ಸಹೋದರ ಹಂಝ ಬಿನ್‌ ಝಾಯೆದ್‌ ಕೂಡ ಅಬುಧಾಬಿಯ ಉಪ ಆಡಳಿತಗಾರರಾಗಿದ್ದಾರೆ.

ಶೇಖ್‌ ಖಾಲಿದ್‌ ಅವರನ್ನು ಈ ಹಿಂದೆ ದೇಶದ ಗುಪ್ತಚರ ಏಜನ್ಸಿ ಅಧ್ಯಕ್ಷರನ್ನಾಗಿ 2016 ರಲ್ಲಿ ನೇಮಿಸಲಾಗಿತ್ತು.

Similar News