ಮೋದಿ-ಅದಾನಿ ಲಿಂಕ್‌ಗೆ ಜನ ತೆರಬೇಕಾದ ದಂಡ?
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಈ ದೇಶದ ನಾಗರಿಕನಾದವನು ಆಧಾರ್ ಕಾರ್ಡ್ ಹೊಂದುವುದು ಕಡ್ಡಾಯವೆ? ಎನ್ನುವ ಪ್ರಶ್ನೆಗೆ ಈವರೆಗೆ ಸರಕಾರ ಸ್ಪಷ್ಟವಾಗಿ ಉತ್ತರವನ್ನು ನೀಡಿಲ್ಲ. ಆಧಾರ್ ಕಾರ್ಡ್ ಕಡ್ಡಾಯವಲ್ಲ ಎಂದು ಹೇಳುತ್ತಲೇ ಅದನ್ನು ವಿವಿಧ ವಲಯಗಳಲ್ಲಿ ಹಂತ ಹಂತವಾಗಿ ಹೇರುತ್ತಾ ಬಂದಿದ್ದು, ಇದೀಗ ಆಧಾರ್ ಕಾರ್ಡ್‌ನ್ನು ದೇಶ ಮಾನಸಿಕವಾಗಿ ಒಪ್ಪಿಕೊಂಡಿದೆ. ಆಧಾರ್ ಕಾರ್ಡ್ ಇಲ್ಲ ಎನ್ನುವ ಕಾರಣಕ್ಕಾಗಿ ಬಿಪಿಎಲ್ ಕಾರ್ಡ್‌ದಾರರಿಗೆ ಅಕ್ಕಿಯಂತಹ ಅಗತ್ಯ ವಸ್ತುಗಳನ್ನು ನೀಡದೆ ಬಡವರು ಹಸಿವಿನಿಂದ ಸಾಯುವಂತಹ ಸ್ಥಿತಿಯನ್ನು ಸರಕಾರ ನಿರ್ಮಾಣ ಮಾಡಿತ್ತು. ಗ್ಯಾಸ್ ಸಿಲಿಂಡರ್‌ನ ಸಬ್ಸಿಡಿ ಕಿತ್ತುಕೊಳ್ಳುವುದಕ್ಕೂ ಈ 'ಆಧಾರ್'ನ್ನು ನೆಪವಾಗಿ ಬಳಸಿಕೊಂಡಿತು. ಆಧಾರ್ ಕಾರ್ಡ್ ಲಿಂಕ್ ಮಾಡಿಸದವರಿಗೆ ಸಬ್ಸಿಡಿ ಇಲ್ಲ ಎನ್ನುವ ಅಘೋಷಿತ ನಿಯಮವೊಂದನ್ನು ಜಾರಿಗೊಳಿಸಿ, ಜನರನ್ನು ಗೊಂದಲಕ್ಕೆ ತಳ್ಳಿ ಹಲವರ ಸಬ್ಸಿಡಿಗಳನ್ನು ಕಿತ್ತುಕೊಂಡು, ಕೆಲವರಿಗಷ್ಟೇ ಹಣವನ್ನು ಬ್ಯಾಂಕಿಗೆ ಹಾಕಿದಂತೆ ಮಾಡಿ ಕೊನೆಗೂ ಶಾಶ್ವತವಾಗಿ ಸಬ್ಸಿಡಿಯನ್ನು ಸರಕಾರ ಕಿತ್ತುಕೊಂಡಿತು. ಆಧಾರ್ ಕಾರ್ಡ್‌ನ ಮೂಲಕ ಜನಸಾಮಾನ್ಯರ ಬೆನ್ನಿಗೆ ಇರಿಯುವ ಸರಕಾರದ ಕೃತ್ಯ ಮುಂದುವರಿದಿದೆ.
ಆರಂಭದಲ್ಲಿ ಬ್ಯಾಂಕ್ ವ್ಯವಹಾರಗಳಿಗೆ ಪಾನ್‌ಕಾರ್ಡ್‌ನ ಅಗತ್ಯವಿದ್ದಿರಲಿಲ್ಲ. ಇಂದು ಪಾನ್‌ಕಾರ್ಡ್ ಇಲ್ಲದೆ ಬ್ಯಾಂಕ್ ವ್ಯವಹಾರಗಳು ನಡೆಯುವಂತೆಯೇ ಇಲ್ಲ. ಬ್ಯಾಂಕ್ ವ್ಯವಹಾರಗಳಲ್ಲೂ ಆಧಾರ್ ಅತ್ಯಂತ ಜಾಣತನದಿಂದ ಮೂಗು ತೂರಿಸಿತು. ಸರಕಾರ ಮೊದಲು ಬ್ಯಾಂಕ್‌ಗಳ ಮೂಲಕ ಆಧಾರ್ ಕಡ್ಡಾಯಗೊಳಿಸುವ ಪ್ರಯತ್ನ ನಡೆಸಿತು. ಜನಸಾಮಾನ್ಯರು ಪ್ರತಿಭಟಿಸತೊಡಗಿದಂತೆಯೇ ಬ್ಯಾಂಕ್‌ಗಳಿಗೆ ಆಧಾರ್ ಕಡ್ಡಾಯವಲ್ಲ ಎಂದು ಸರಕಾರ ಸ್ಪಷ್ಟೀಕರಣ ನೀಡಿತು. ಇದೇ ಸಂದರ್ಭದಲ್ಲಿ ಪಾನ್‌ಕಾರ್ಡ್‌ಗೆ ಆಧಾರ್ ಕಾರ್ಡನ್ನು ಜೋಡಿಸುವುದು ಕಡ್ಡಾಯಗೊಳಿಸಿತು. ಬ್ಯಾಂಕ್ ವ್ಯವಹಾರಗಳಿಗೆ ಪಾನ್‌ಕಾರ್ಡ್ ಕಡ್ಡಾಯವಾಗಿರುವುದರಿಂದ, ಆಧಾರ್ ಕಾರ್ಡ್ ಕೊನೆಗೂ ಬ್ಯಾಂಕ್‌ವ್ಯವಹಾರಗಳಿಗೆ ಅನಿವಾರ್ಯವಾಗಿ ಬಿಟ್ಟಿತು. ಸರಕಾರ ಜನರ ಬೆನ್ನಿಗಿರಿಯುವ ಕೃತ್ಯವನ್ನು ಇಲ್ಲಿಗೆ ನಿಲ್ಲಿಸಲಿಲ್ಲ. ಇದೀಗ ಆಧಾರ್-ಪಾನ್‌ಕಾರ್ಡ್ ಜೋಡಿಸುವ ಹೆಸರಿನಲ್ಲಿ ಜನರನ್ನು ಹಾಡಹಗಲೇ ದೋಚುವ ಕಾರ್ಯಕ್ಕೆ ಶುರು ಹಚ್ಚಿದೆ. ಆಧಾರ್-ಪಾನ್‌ಕಾರ್ಡನ್ನು ಈವರೆಗೆ ಜೋಡಿಸದೆ ಇರುವವರು ಅವುಗಳನ್ನು ಜೋಡಿಸಲೇ ಬೇಕಾದರೆ 1,000 ರೂ.ಯನ್ನು ದಂಡವಾಗಿ ಪಾವತಿಸಬೇಕಾಗಿದೆ. ಈ ದೇಶದಲ್ಲಿ ಕೋಟ್ಯಂತರ ಜನರಲ್ಲಿ ಆಧಾರ್ ಕಾರ್ಡ್ ಮತ್ತು ಪಾನ್‌ಕಾರ್ಡ್‌ಗಳೇ ಇಲ್ಲ. ಹೀಗಿರುವ ಸಂದರ್ಭದಲ್ಲಿ ಆಧಾರ್ ಕಾರ್ಡ್ ಮತ್ತು ಪಾನ್‌ಕಾರ್ಡ್‌ಗೆ ಮದುವೆ ಮಾಡಿಸಿ, ಜನರಿಂದ ದಕ್ಷಿಣೆ ಕಿತ್ತುಕೊಳ್ಳಲು ಮುಂದಾಗಿದೆ.
ಆಧಾರ್ ಕಾರ್ಡ್ ಕಡ್ಡಾಯದ ಬಗ್ಗೆಯೇ ಅಸ್ಪಷ್ಟತೆಯಿರುವಾಗ ಆಧಾರ್ ಕಾರ್ಡನ್ನು ಪಾನ್‌ಕಾರ್ಡ್‌ಗೆ ಜೋಡಿಸುವ ವಿಷಯದಲ್ಲಿ ಸರಕಾರ ಯಾಕೆ ಇಷ್ಟೊಂದು ಆತುರ ವ್ಯಕ್ತಪಡಿಸುತ್ತಿದೆ? ಐಟಿ ಸಲ್ಲಿಕೆಯ ಸಂದರ್ಭದಲ್ಲಿ ಪಾನ್‌ಕಾರ್ಡ್‌ಗೆ ಆಧಾರ್ ಜೋಡಿಸುವುದು ಅನಿವಾರ್ಯವೆಂದಾದರೆ ಜನಸಾಮಾನ್ಯರು ತಮ್ಮ ಅಗತ್ಯಕ್ಕನುಗುಣವಾಗಿ ಸಮಯ ಸಂದರ್ಭ ಬಂದಾಗ ಜೋಡಿಸುತ್ತಾರೆ. ಸರಕಾರವೇ ಮುಂದೆ ನಿಂತು ಪಾನ್‌ಕಾರ್ಡ್-ಆಧಾರ್‌ಕಾರ್ಡನ್ನು ಜೋಡಿಸಲು ಅವಸರದ ಪೌರೋಹಿತ್ಯ ವಹಿಸಿರುವುದೇಕೆ? ಆರಂಭದಲ್ಲಿ ಮಾರ್ಚ್ 31ರ ಒಳಗೆ 1,000 ರೂ. ತೆತ್ತು ಕಾರ್ಡ್‌ಗಳನ್ನು ಜೋಡಿಸಲು ಸರಕಾರ ಹೇಳಿತ್ತು. ಅಷ್ಟೇ ಅಲ್ಲ, ಮಾರ್ಚ್ 31ರೊಳಗೆ ಜೋಡಿಸದೇ ಇದ್ದಲ್ಲಿ 10,000 ರೂ. ದಂಡ ವಿಧಿಸುವ ವದಂತಿಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ಹರಡಿತು. ಪಾನ್‌ಕಾರ್ಡ್ ಹೊಂದಿಲ್ಲದ ಜನರಲ್ಲೂ ಈ ವದಂತಿ ಆತಂಕವನ್ನು ಸೃಷ್ಟಿಸಿತು. ಮಾರ್ಚ್ 31ರೊಳಗೆ ಜೋಡಿಸದೇ ಇದ್ದರೆ, 10,000 ರೂ. ದಂಡ ತೆರುವ ಸ್ಥಿತಿ ಎದುರಾಗಬಹುದು ಎಂದು ಏಕಾಏಕಿ ಜನರು ಪಾನ್‌ಕಾರ್ಡ್-ಆಧಾರ್‌ಕಾರ್ಡ್ ಹಿಡಿದುಕೊಂಡು ಕಚೇರಿಯಿಂದ ಕಚೇರಿಗೆ ಅಲೆಯ ತೊಡಗಿದರು. ಇದೀಗ ಜೋಡಣೆಯ ಗಡುವನ್ನು ಜೂ. 30ರವರೆಗೆ ವಿಸ್ತರಿಸಿದೆ. ಆದರೆ 1,000 ದಂಡ ವಿಧಿಸಿರುವುದನ್ನು ಹಿಂದೆಗೆದುಕೊಂಡಿಲ್ಲ. ಜೂ.30ರೊಳಗೆ ಜೋಡಿಸದೇ ಇದ್ದರೆ ಮುಂದೆ 10,000 ರೂ. ದಂಡ ತೆರಬೇಕಾದೀತು ಎನ್ನುವ ಆತಂಕದಿಂದ ಇದೀಗ ಜನರು ತುರ್ತಾಗಿ ಆಧಾರ್-ಪಾನ್‌ಕಾರ್ಡ್ ಜೋಡಿಸಲು ಮುಂದಾಗುವಂತೆ ಮಾಡಿದೆ. ಬರೇ ಒಂದು ತಿಂಗಳಲ್ಲಿ ದೇಶಾದ್ಯಂತ ಸಾವಿರಾರು ಕೋಟಿ ರೂ.ಯನ್ನು ಈ ಮೂಲಕ ಜನಸಾಮಾನ್ಯರಿಂದ ಅಕ್ಷರಶಃ ದರೋಡೆ ನಡೆಸಲು ಸರಕಾರ ಯೋಜನೆ ರೂಪಿಸಿದೆ. ಭಾಗಶಃ ಯಶಸ್ವಿಯಾಗಿದೆ.
ಆಧಾರ್ ಕಾರ್ಡ್ ಪಡೆಯಲು ಹಣ ಪಾವತಿಸಬೇಕಾಗಿಲ್ಲ. ಪಾನ್‌ಕಾರ್ಡ್ ಪಡೆಯುವುದಕ್ಕೂ ಆರಂಭದಲ್ಲಿ ಕೇವಲ ನೂರು ರೂ. ವೆಚ್ಚ ಮಾಡಿದರೆ ಸಾಕಿತ್ತು. ಈಗ 250 ರೂ. ಪಾವತಿಸಬೇಕು. ಆದರೆ ಇವೆರಡನ್ನು ಜೋಡಿಸಬೇಕೆಂದರೆ 1,000 ರೂ. ದಂಡ ತೆರಬೇಕು. ಈ ವಿಪರ್ಯಾಸದ ಕುರಿತಂತೆ ಜನಸಾಮಾನ್ಯರು ಈಗಾಗಲೇ ತೀವ್ರ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ. ಆಧಾರ್‌ಕಾರ್ಡನ್ನು ಮುಂದಿಟ್ಟು ಜನಸಾಮಾನ್ಯರ ಸವಲತ್ತುಗಳನ್ನು ಕಿತ್ತುಕೊಳ್ಳತೊಡಗಿದ್ದ ಸರಕಾರ, ಇದೀಗ ಆಧಾರನ್ನು ಮುಂದಿಟ್ಟುಕೊಂಡು ಹಣವನ್ನು ಸಂಗ್ರಹಿಸಲು ಮುಂದಾಗಿದೆ. ಕನಿಷ್ಠ 10 ಕೋಟಿ ಜನರು ಮುಂದಿನ ಒಂದು ತಿಂಗಳಲ್ಲಿ ಆಧಾರ್-ಪಾನ್‌ಕಾರ್ಡ್ ಜೋಡಿಸಲು ಮುಂದಾದರೆ ಸರಕಾರ ಸಂಗ್ರಹಿಸುವ ಹಣವಾದರೂ ಎಷ್ಟು? ಕೊರೋನ ಸಂದರ್ಭದಲ್ಲಿ ಸರಕಾರ 'ಪಿಎಂ ಕೇರ್' ಹೆಸರಲ್ಲಿ ಸಂಗ್ರಹಿಸಿದ ಹಲವು ಸಾವಿರ ಕೋಟಿ ರೂ.ಯ ಉಸ್ತುವಾರಿ ಯಾರದು ಎನ್ನುವುದು ಸ್ಪಷ್ವವಾಗದೆ ಜನರು ಗೊಂದಲ ದಲ್ಲಿದ್ದಾರೆ. ಇದೀಗ ಪಾನ್‌ಕಾರ್ಡ್-ಆಧಾರ್ ಕಾರ್ಡ್‌ನ ಹೆಸರಲ್ಲಿ ಸಂಗ್ರಹವಾಗುವ ಸಾವಿರಾರು ಕೋಟಿ ರೂ. ಯಾರ 'ಕೇರ್'ಗೆ ಬಳಸಲ್ಪಡುತ್ತದೆ ಎಂದು ಜನರು ಸಾರ್ವಜನಿಕವಾಗಿ ಪ್ರಶ್ನಿಸತೊಡಗಿದ್ದಾರೆ. ಸರಕಾರ ಉತ್ತರಿಸಬೇಕಾಗಿದೆ.
ಸರಕಾರ ತೆರಿಗೆಗಳ ಮೇಲೆ ತೆರಿಗೆಗಳನ್ನು ವಿಧಿಸುತ್ತಾ ಎಲ್ಲ ಉದ್ಯಮಗಳನ್ನು, ಜನರ ಆರ್ಥಿಕ ಸ್ಥಿತಿಯನ್ನು ಚಿಂತಾಜನಕ ಸ್ಥಿತಿಗೆ ತಂದು ನಿಲ್ಲಿಸಿದೆ. ಹಣದುಬ್ಬರದಿಂದ ದೈನಂದಿನ ಬದುಕು ಜರ್ಜರಿತವಾಗಿದೆ. ಇಂತಹ ಸಂದರ್ಭದಲ್ಲಿ ಜನರನ್ನು ಆಧಾರ್ ಜೋಡಣೆ ಹೆಸರಲ್ಲಿ ಬ್ಲಾಕ್‌ಮೇಲ್ ಮಾಡಿ ಹಣದೋಚಲು ಸರಕಾರ ಮುಂದಾಗಿರುವುದು ನಿಜಕ್ಕೂ ಆತಂಕಕಾರಿಯಾಗಿದೆ. ಚುನಾವಣೆ ಹತ್ತಿರ ಬರುತ್ತಿದೆಯೆನ್ನುವ ಆತಂಕವೂ ಸರಕಾರವನ್ನು ಕಾಡುತ್ತಿರುವಂತಿಲ್ಲ. ಆ ಬಗ್ಗೆ ಎಳ್ಳಷ್ಟು ಆತಂಕವಿದ್ದರೂ ಇಂತಹದೊಂದು ದರೋಡೆಗೆ ಸರಕಾರ ಇಳಿಯುತ್ತಿರಲಿಲ್ಲ. ಇದರ ಬೆನ್ನಿಗೇ, ಎಪ್ರಿಲ್ 1ರಿಂದ ಮರ್ಚಂಟ್ ಯುಪಿಐ ವಹಿವಾಟುಗಳಿಗೆ ಶೇ. 1.1ರವರೆಗೆ ಶುಲ್ಕವನ್ನು ವಿಧಿಸಲು ಮುಂದಾಗಿದೆ. ಮಗದೊಂದೆಡೆ ಎಪ್ರಿಲ್ 1ರಿಂದ ಅಗತ್ಯ ಔಷಧಗಳ ಬೆಲೆ ಶೇ. 12ರಷ್ಟು ಏರಿಕೆಯಾಗಲಿದೆ. ಕೊರೋನೋತ್ತರ ದಿನಗಳಲ್ಲಿ ಇತರ ರೋಗಿಗಳ ಅಳಲನ್ನು ಕೇಳುವವರೇ ಇಲ್ಲ ಎನ್ನುವ ಸಂದರ್ಭದಲ್ಲಿ ಅತ್ಯಗತ್ಯ ಔಷಧಿಗಳ ಬೆಲೆಯೇರಿಕೆ ಜನರನ್ನು ಇನ್ನಷ್ಟು ರೋಗಗ್ರಸ್ತರನ್ನಾಗಿಸಲಿದೆ.
ದರೋಡೆ ಮಾಡು ವುದು ಸರಕಾರದ ಹಕ್ಕು, ದರೋಡೆಗೊಳಗಾಗುವುದು ನನ್ನ ಕರ್ತವ್ಯ ಎಂದು ತಿಳಿದು ಕೊಂಡ ಜನರಿರುವವರೆಗೆ ಈ ಹಗಲು ದರೋಡೆಯನ್ನು ತಡೆಯುವುದು ಕಷ್ಟ. ರಾಮ ಮಂದಿರ, ಲವ್‌ಜಿಹಾದ್, ಮೀಸಲಾತಿ, ಉರಿಗೌಡ-ನಂಜೇಗೌಡ ಮೊದಲಾದ ವಿಷಯಗಳನ್ನು ಹರಿಯಬಿಟ್ಟು ಜನರನ್ನು ಭಾವನಾತ್ಮಕವಾಗಿ ವಿಸ್ಮತಿಗೆ ತಳ್ಳಿ ಜನರ ಕತ್ತು ಕುಯ್ಯುವ ಕೆಲಸಕ್ಕೆ ಮುಂದಾಗಿದೆ ಸರಕಾರ. ಜನರ ಮೂರ್ಖತನದ ಬಗ್ಗೆ ಅಗಾಧ ಭರವಸೆಯಿದ್ದ ಕಾರಣ ದಿಂದಲೇ ಚುನಾವಣೆಯ ಹೊತ್ತಿನಲ್ಲಿ ಇಷ್ಟೊಂದು ಧೈರ್ಯದಿಂದ ಜನರ ಲೂಟಿಗಿಳಿದಿದೆ. ಜನರು ಎಚ್ಚೆತ್ತು ಒಂದಾಗಿ ಸರಕಾರವನ್ನು ಪ್ರಶ್ನಿಸುವ ಸಮಯ ಬಂದಿದೆ. ಆಧಾರ್-ಪಾನ್‌ಕಾರ್ಡ್ ಜೋಡಣೆಯ ಲೂಟಿಯಲ್ಲೇನಾದರೂ ಸರಕಾರ ಯಶಸ್ವಿಯಾದರೆ, ಇದೇ ಆಧಾರ್ ನ್ನು ರೇಷನ್ ಕಾರ್ಡ್‌ಗಳಿಗೆ ಜೋಡಿಸುವುದು ಕೂಡ ಅನಿವಾರ್ಯವಾಗಿಸಿ ಅದರ ಹೆಸರಲ್ಲಿ ಜನರಿಂದ ಹಣವನ್ನು ಕಕ್ಕಿಸುವ ಸಾಧ್ಯತೆಗಳು ಇಲ್ಲದಿಲ್ಲ. ಇವೆಲ್ಲವೂ ಮೋದಿ-ಅದಾನಿ 'ಲಿಂಕ್'ಗೆ ನಾವು ತೆರಬೇಕಾದ ದಂಡವೆ ಎಂದು ಜನರು ಕೇಳುವಂತಾಗಿದೆ.