ಗೋರಕ್ಷಕರೆಂಬ ನರ ಹಂತಕರು; ಕಾನೂನು ಸುವ್ಯವಸ್ಥೆಯ ದುರವಸ್ಥೆ

Update: 2023-04-04 04:36 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ 

Full View

ರಾಜ್ಯದಲ್ಲಿ ಬೇಸಿಗೆಯ ಬಿಸಿಲಿನ ಜೊತೆಗೆ ಚುನಾವಣಾ ಪ್ರಚಾರವೂ ಕಾವೇರುತ್ತಿದೆ. ದಕ್ಷಿಣ ಭಾರತದಲ್ಲಿ ಅಧಿಕಾರದಲ್ಲಿ ಇರುವ ರಾಜ್ಯವನ್ನು ಉಳಿಸಿಕೊಳ್ಳಲು ಬಿಜೆಪಿ ಶತಾಯ ಗತಾಯ ಕಸರತ್ತುಗಳನ್ನು ನಡೆಸಿದೆ. ಆದರೆ ಮಿತಿ ಮೀರಿದ ಭ್ರಷ್ಟಾಚಾರದ ದುರ್ವಾಸನೆ, ನಲ್ವತ್ತು ಪರ್ಸೆಂಟ್ ಕಮಿಷನ್ ಹಗರಣ, ಅಸಮರ್ಥ ಆಡಳಿತದಿಂದ ಉಕ್ಕೇರಿ ಅಪ್ಪಳಿಸುತ್ತಿರುವ ಆಡಳಿತ ವಿರೋಧಿ ಅಲೆಯಿಂದ ಬಿಜೆಪಿ ಮಾತ್ರವಲ್ಲ ಅದರ ಮಾತೃಸಂಸ್ಥೆ ಆರೆಸ್ಸೆಸ್ ಕೂಡ ಕಂಗಾಲಾಗಿದೆ. ಕರ್ನಾಟಕವನ್ನು ಹೇಗಾದರೂ ಮಾಡಿ ಉಳಿಸಿಕೊಳ್ಳಲು ಜಿದ್ದಿಗೆ ಬಿದ್ದಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಮತ್ತು ಗೃಹ ಮಂತ್ರಿ ಅಮಿತ್ ಶಾ ವಾರಕ್ಕೊಮ್ಮೆ ರಾಜ್ಯಕ್ಕೆ ಭೇಟಿ ನೀಡುತ್ತಿದ್ದಾರೆ. ಬಿಜೆಪಿಯ ದುರಂತವೆಂದರೆ ಅದಕ್ಕೆ ರಾಜ್ಯದಲ್ಲಿ ಜನನಾಯಕರಿಲ್ಲ. ಇದ್ದೊಬ್ಬ ಯಡಿಯೂರಪ್ಪನವರನ್ನು ಅತ್ಯಂತ ಅವಮಾನಕಾರಿಯಾಗಿ ರಾಜೀನಾಮೆ ಕೊಡಿಸಿ ಮೂಲೆಗುಂಪು ಮಾಡಿದ ನಂತರ ಜನರ ಬಳಿ ಹೋಗಲು ಮುಖಗಳೇ ಇಲ್ಲ. ಹೀಗಾಗಿ ದೇಶದ ಪ್ರಧಾನಿಯೇ ಬಿಜೆಪಿಯ ಮಾನ ರಕ್ಷಣೆಗೆ ತಮ್ಮೆಲ್ಲ ಕೆಲಸ ಬಿಟ್ಟು ಕರ್ನಾಟಕದಲ್ಲಿ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಆದರೆ ಕರ್ನಾಟಕದ ಸಮಸ್ಯೆ ಬರೀ ಭ್ರಷ್ಟಾಚಾರದ್ದಲ್ಲ. ರಾಜ್ಯದಲ್ಲಿ ಕಾನೂನು ಆಡಳಿತವೇ ಕುಸಿದು ಬೀಳುತ್ತಿದೆ. ಧರ್ಮ ರಕ್ಷಣೆಯ ಹೆಸರಿನಲ್ಲಿ ಬಿಜೆಪಿ ಬೆಳೆಸಿದ ಗೂಂಡಾ ಸಂಸ್ಕೃತಿ ಭಯಾನಕ ಸ್ವರೂಪ ತಾಳಿದೆ. ಶುಕ್ರವಾರ ರಾತ್ರಿ ಕನಕಪುರ ತಾಲೂಕಿನ ಸಾತನೂರು ಬಳಿ ದನ ರಕ್ಷಕರೆಂಬ ಗೂಂಡಾಗಳಿಂದ ಇದ್ರೀಸ್ ಪಾಷಾ ಎಂಬ ಅಮಾಯಕ ವ್ಯಕ್ತಿಯ ಹತ್ಯೆಯಾಗಿದೆ. ಸಮೀಪದ ತೆಂಡೆಕೆರೆ ಸಂತೆಯಲ್ಲಿ ಜಾನುವಾರುಗಳನ್ನು ಖರೀದಿಸಿ ರಶೀದಿ ಸಮೇತ ಒಯ್ಯುತ್ತಿದ್ದ ಇದ್ರೀಸ್ ಪಾಷಾ ಅವರನ್ನು ಸಾತನೂರಿನ ಸರ್ಕಲ್‌ನಲ್ಲಿ ಅಡ್ಡಗಟ್ಟಿದ ಕೋಮುವಾದಿ ಸಂಘಟನೆಯ ಗೂಂಡಾಪಡೆಯ ಪುನೀತ್ ಮತ್ತು ಆತನ ಹಿಂಬಾಲಕರು ಎರಡು ಲಕ್ಷ ರೂ.ಗೆ ಬೇಡಿಕೆಯಿಟ್ಟಿದ್ದಾರೆ. ಹಣ ನೀಡದಿದ್ದಾಗ ಮಾರಕಾಸ್ತ್ರಗಳನ್ನು ತೋರಿಸಿ ಬೆದರಿಸಿ ಹಲ್ಲೆ ನಡೆಸಿ ಕೊಂದು ಹಾಕಿದ್ದಾರೆ. ಈ ಕುರಿತು ಪೊಲೀಸರಿಗೆ ದೂರು ನೀಡಲಾಗಿದೆ. ಇದ್ರೀಸ್ ಪಾಷಾ ಜೊತೆಗಿದ್ದ ಇನ್ನಿಬ್ಬರು ತಪ್ಪಿಸಿಕೊಂಡು ಪ್ರಾಣ ಉಳಿಸಿಕೊಂಡಿದ್ದಾರೆ. ಇದು ಬರೀ ಗೋರಕ್ಷಣೆಯ ಆವೇಶದ ಕೃತ್ಯವಲ್ಲ. ಚುನಾವಣೆ ಸಂದರ್ಭದಲ್ಲಿ ಕೋಮು ಉನ್ಮಾದ ಕೆರಳಿಸಿ, ಕೋಮು ಧ್ರುವೀಕರಣ ಮಾಡಿ ರಾಜಕೀಯ ಲಾಭ ಮಾಡಿಕೊಳ್ಳುವ ಮಸಲತ್ತು ಇದರಲ್ಲಿ ಅಡಗಿದೆ ಎಂಬುದು ಸುಳ್ಳಲ್ಲ. ಈ ಹತ್ಯೆಗೆ ಕಾರಣನಾದ ಪುನೀತ್ ಕ್ರಿಮಿನಲ್ ಪ್ರಕರಣಗಳ ಆರೋಪಿ. ದಕ್ಷ, ಶುದ್ಧ ಆಡಳಿತ ನೀಡಲಾಗದ ಬಿಜೆಪಿ ಇಂತಹ ಗೂಂಡಾಗಳ ಮೂಲಕ ಚುನಾವಣೆಯಲ್ಲಿ ಗೆಲ್ಲಲು ಮಸಲತ್ತು ನಡೆಸುತ್ತಿದೆ ಎಂಬ ಪ್ರತಿಪಕ್ಷ ನಾಯಕರ ಆರೋಪವನ್ನು ತಳ್ಳಿ ಹಾಕುವಂತಿಲ್ಲ.

ವಿಧಾನಸಭೆ ಚುನಾವಣೆ ಘೋಷಣೆಯಾಗುವ ಮುನ್ನ ರೌಡಿಶೀಟರ್‌ಗಳನ್ನು ಬಿಜೆಪಿ ಪಕ್ಷಕ್ಕೆ ಸ್ವಾಗತಿಸಿದ್ದು ದೊಡ್ಡ ಸುದ್ದಿಯಾಗಿತ್ತು. ಅವರೆಲ್ಲ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಆಡಳಿತ ಪಕ್ಷದ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಕಲಬುರಗಿ ಜಿಲ್ಲೆಯಲ್ಲಿ ಅಕ್ಕಿ ಕಳ್ಳ ಸಾಗಾಟ ಮಾಡಿ ಸಿಕ್ಕಿಬಿದ್ದು ಪೊಲೀಸರಿಂದ ಗಡಿಪಾರು ಮಾಡಲ್ಪಟ್ಟ ವ್ಯಕ್ತಿಯನ್ನು ಕಾಂಗ್ರೆಸ್‌ನ ಪ್ರಿಯಾಂಕ್ ಖರ್ಗೆ ಅವರ ವಿರುದ್ಧ ಬಿಜೆಪಿ ಚುನಾವಣಾ ಕಣಕ್ಕೆ ಇಳಿಸಲಿದೆ ಎಂದು ಹೇಳಲಾಗುತ್ತಿದೆ. ತೀರಾ ಇತ್ತೀಚೆಗೆ ಈತನನ್ನು ಪೊಲೀಸರು ಶಿವಮೊಗ್ಗಕ್ಕೆ ಗಡಿಪಾರು ಮಾಡಿದಾಗ ಬಿಜೆಪಿ ನಾಯಕರು ಮತ್ತು ಕೆಲ ಮಠಾಧೀಶರು ಆತನ ಗಡಿಪಾರು ಆಜ್ಞೆಯನ್ನು ವಾಪಸ್ ಪಡೆಯಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಮೇಲೆ ಒತ್ತಡ ತಂದರು. ಆದರೆ ಪೊಲೀಸರು ಅದಕ್ಕೆ ಒಪ್ಪಲಿಲ್ಲ. ಆದರೂ ಆತ ಕೋರ್ಟಿನಿಂದ ತಡೆಯಾಜ್ಞೆ ತಂದಿದ್ದಾನೆ. ಇದು ಒಂದು ಮತಕ್ಷೇತ್ರದ, ಒಂದು ಜಿಲ್ಲೆಯ ಪ್ರಶ್ನೆಯಲ್ಲ. ಕರ್ನಾಟಕದ ಹಲವು ಕಡೆ ಬಿಜೆಪಿ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಲು ಕುಖ್ಯಾತ ಗೂಂಡಾಗಳ ಮೊರೆ ಹೋಗಿದೆ ಎಂಬ ಪ್ರತಿಪಕ್ಷಗಳ ಆರೋಪಕ್ಕೆ ಸರಕಾರದಿಂದ ಉತ್ತರ ಬಂದಿಲ್ಲ. ಸಂಘಪರಿವಾರದ ಹಿನ್ನೆಲೆಯಿಂದ ಬಂದ ರಾಜ್ಯದ ಗೃಹಮಂತ್ರಿಯ ಅಸಮರ್ಥತೆ ಮತ್ತು ಹೊಣೆಗೇಡಿತನದಿಂದ ಕಾನೂನು ಸುವ್ಯವಸ್ಥೆ ಕುಸಿದು ಬೀಳುತ್ತಿದೆ.

ಚುನಾವಣಾ ಪ್ರಕ್ರಿಯೆ ಜಾರಿಯಲ್ಲಿರುವಾಗ ಇಂತಹ ಪ್ರಚೋದನಾಕಾರಿ ಘಟನೆಗಳು ನಡೆಯುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ. ಹಣ ಮತ್ತು ತೋಳ್ಬಲದ ಅಟ್ಟಹಾಸದ ಜೊತೆಗೆ ದ್ವೇಷ ಭಾಷಣಗಳ ಸುರಿಮಳೆಯಾಗುತ್ತಿದೆ. ದ್ವೇಷ ಭಾಷಣಗಳಿಗೆ ಕಡಿವಾಣ ಹಾಕಬೇಕೆಂದು ಸುಪ್ರೀಂ ಕೋರ್ಟ್ ಇತ್ತೀಚೆಗೆ ಮತ್ತೆ ಹೇಳಿದೆ. ಆದರೆ ಕರ್ನಾಟಕದ ಆಡಳಿತ ಪಕ್ಷದ ನಾಯಕರೇ ಜಾತಿ, ಧರ್ಮದ ಹೆಸರಿನಲ್ಲಿ ಪ್ರಚೋದನಾಕಾರಿ ಮಾತುಗಳನ್ನು ಆಡುತ್ತಾ ಜನರ ಸೌಹಾರ್ದ ಬದುಕಿಗೆ ಕೊಳ್ಳಿ ಇಟ್ಟು ವೋಟಿನ ಬೆಳೆಯನ್ನು ತೆಗೆಯಲು ಹೊರಟಿದ್ದಾರೆ. ವ್ಯಕ್ತಿಯ ಚಾರಿತ್ರ್ಯ ನಿರ್ಮಾಣ ಮಾಡುವುದಾಗಿ ಹೇಳಿಕೊಳ್ಳುವ ಸಂಘಟನೆ ತನ್ನ ಅಜೆಂಡಾ ಜಾರಿಗಾಗಿ ಸಮಾಜ ವಿರೋಧಿ ಶಕ್ತಿಗಳ ಮೊರೆ ಹೋಗಿದೆ.ಚುನಾವಣಾ ಗೆಲುವಿಗಿಂತ ಸಾಮಾಜಿಕ ಶಾಂತಿ ಮತ್ತು ನೆಮ್ಮದಿಯನ್ನು ಕಾಪಾಡುವುದು ಮುಖ್ಯ ಎಂದು ಸಂಬಂಧಿಸಿದವರು ತಿಳಿದುಕೊಳ್ಳಬೇಕಾಗಿದೆ.

ಕರ್ನಾಟಕಕ್ಕೆ ಚುನಾವಣಾ ಪ್ರಚಾರಕ್ಕೆ ಬರುವ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಬರೀ ರಾಹುಲ್ ಗಾಂಧಿಯವರನ್ನು, ಕಾಂಗ್ರೆಸ್‌ನವರನ್ನು ಬೈದು ಹೋದರೆ ಪ್ರಯೋಜನವಿಲ್ಲ. ಅದರ ಬದಲಿಗೆ ತಮ್ಮ ಸರಕಾರದ ಸಾಧನೆಗಳನ್ನು ಜನರಿಗೆ ವಿವರಿಸಲಿ. ತಮ್ಮ ಕಚೇರಿಯವರೆಗೆ ಬಂದಿದ್ದ ಕಾಮಗಾರಿ ಗುತ್ತಿಗೆಯಲ್ಲಿ ಶೇ. 40 ಲಂಚದ ಆರೋಪದ ದೂರಿನ ಬಗ್ಗೆ ಯಾಕೆ ಕ್ರಮ ಕೈಗೊಂಡಿಲ್ಲ ಎಂಬುದಕ್ಕೆ ಉತ್ತರ ನೀಡಲಿ. ಈ ಆರೋಪ ಸುಳ್ಳಾಗಿದ್ದರೆ ಅದನ್ನಾದರೂ ಹೇಳಲಿ. ಇಂತಹ ಆರೋಪಗಳಿಗೆ ಉತ್ತರ ನೀಡದೆ ಆಡಳಿತ ವಿರೋಧಿ ಅಲೆಯನ್ನು ಬರೀ ಲೇವಡಿ ಮಾತುಗಳಿಂದ ತಡೆಯಲು ಸಾಧ್ಯವಾಗುವುದಿಲ್ಲ.

ಒಂದೆಡೆ ದ್ವೇಷ ಭಾಷಣಗಳ ಸುರಿಮಳೆ ಆಗುತ್ತಿದ್ದರೆ ಇನ್ನೊಂದು ಕಡೆ ಬಾಡೂಟ, ಮದ್ಯ ಸಮಾರಾಧನೆ, ಸೀರೆ, ಕುಕ್ಕರ್, ಗೋಡೆ ಗಡಿಯಾರ, ಟಿವಿಗಳ ಹಂಚಿಕೆ ವ್ಯಾಪಕವಾಗಿ ನಡೆಯುತ್ತಿದೆ. ಚುನಾವಣಾ ಆಯೋಗದ ನೀತಿ ಸಂಹಿತೆ ಕಾಗದದಲ್ಲಿ ಮಾತ್ರ ಉಳಿದಿದೆ. ಮಾದರಿ ನೀತಿ ಸಂಹಿತೆ ಜಾರಿಯಲ್ಲಿದ್ದಾಗಲೂ ಪ್ರಧಾನ ಮಂತ್ರಿಗಳು ಸರಕಾರಿ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ರಾಜ್ಯಕ್ಕೆ ಬರುತ್ತಿದ್ದಾರೆ. ಚುನಾವಣಾ ಆಯೋಗ ಕೊಂಚ ಚುರುಕಾಗಬೇಕಾಗಿದೆ.

ಕರ್ನಾಟಕದ ಬಿಜೆಪಿ ಮಂತ್ರಿಗಳು ಮತ್ತು ನಾಯಕರು ಹಾಗೂ ಇತರ ಪಕ್ಷಗಳ ನಾಯಕರು ಬಹಿರಂಗ ಸಭೆಗಳಲ್ಲಿ ಆಡುವ ಮಾತುಗಳ ಬಗ್ಗೆ ಚುನಾವಣಾ ಆಯೋಗ ನಿಗಾ ಇಡಬೇಕಾಗಿದೆ. ಪ್ರಚೋದನಾಕಾರಿ ಮಾತುಗಳನ್ನು ಆಡುವವರನ್ನು ಸ್ಪರ್ಧೆಯಿಂದ ನಿರ್ಬಂಧಿಸಬೇಕಾಗಿದೆ. ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಮುಸ್ಲಿಮ್ ಮೀಸಲಾತಿ ರದ್ದತಿ ಬಗ್ಗೆ ಆಡಿದ ಮಾತುಗಳು ಕೂಡ ಆಕ್ಷೇಪಾರ್ಹವಾಗಿದ್ದವು. ಕರ್ನಾಟಕದಲ್ಲಿ ಮುಸ್ಲಿಮರ ಧಾರ್ಮಿಕ ಮೀಸಲು ರದ್ದುಗೊಳಿಸಲಾಗಿದೆ ಎಂದು ಬಹುದೊಡ್ಡ ಸುಳ್ಳನ್ನು ಅವರು ಹೇಳಿದರು. ಆದರೆ ಕರ್ನಾಟಕದಲ್ಲಿ ಮುಸ್ಲಿಮರಿಗೆ ನೀಡಲಾಗುತ್ತಿದ್ದ ಮೀಸಲಾತಿ ಧಾರ್ಮಿಕ ಮೀಸಲಾತಿ ಅಲ್ಲ. ಗೃಹ ಸಚಿವರ ಬಾಯಿಯಲ್ಲಿ ಇಂತಹ ಮಾತು ಬರಬಾರದಿತ್ತು.

ಇತ್ತೀಚೆಗೆ ಚುನಾವಣಾ ಆಯೋಗದ ಕಾರ್ಯನಿರ್ವಹಣೆಯ ಬಗ್ಗೆ ಅಲ್ಲಲ್ಲಿ ಅಸಮಾಧಾನ ವ್ಯಕ್ತವಾಗುತ್ತಿದೆ. ಅದೀಗ ಸ್ವತಂತ್ರ, ಸ್ವಾಯತ್ತ ಸಂಸ್ಥೆಯಾಗಿ ಉಳಿದಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ. ಟಿ.ಎನ್. ಶೇಷನ್ ಮುಖ್ಯ ಚುನಾವಣಾಧಿಕಾರಿಯಾಗಿದ್ದಾಗ ಅಕ್ರಮಗಳನ್ನು ಎಸಗುವ ರಾಜಕಾರಣಿಗಳಿಗೆ ಸಿಂಹಸ್ವಪ್ನವಾಗಿದ್ದರು. ಚುನಾವಣಾ ಆಯೋಗ ಮತ್ತೆ ಮುಕ್ತವಾಗಿ, ದಕ್ಷವಾಗಿ ಕಾರ್ಯನಿರ್ವಹಿಸಲಿ. ಕರ್ನಾಟಕಕ್ಕೆ ಸಂಬಂಧಿಸಿದಂತೆ ಕುಸಿದು ಬೀಳುತ್ತಿರುವ ಕಾನೂನು ಸುವ್ಯವಸ್ಥೆ ಬಗ್ಗೆ ನಿಗಾ ವಹಿಸಲಿ, ಮುಕ್ತ ಮತ್ತು ನ್ಯಾಯ ಸಮ್ಮತ ಚುನಾವಣೆ ನಡೆಯುವಂತೆ ಕ್ರಮ ಕೈಗೊಳ್ಳಲಿ.

Similar News