ರಾಷ್ಟ್ರೀಯ ಭದ್ರತೆಯ ದುರ್ಬಳಕೆ ಶಿಕ್ಷೆ ರಹಿತ ಅಪರಾಧವೆ?
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
‘ಮೀಡಿಯಾ ವನ್’ ಎನ್ನುವ ಮಲಯಾಳಂ ಸುದ್ದಿ ವಾಹಿನಿಯ ಮೇಲೆ ಕೇಂದ್ರ ಸರಕಾರ ವಿಧಿಸಿದ್ದ ಪ್ರಸಾರ ನಿಷೇಧವನ್ನು ಸುಪ್ರೀಂಕೋರ್ಟ್ ಬುಧವಾರ ರದ್ದುಗೊಳಿಸಿದೆ. ಈ ಸಂದರ್ಭದಲ್ಲಿ ಸುಪ್ರೀಂಕೋರ್ಟ್ ಅಭಿವ್ಯಕ್ತಿ ಸ್ವಾತಂತ್ರವನ್ನು ಎತ್ತಿ ಹಿಡಿದಿರುವುದು ಮಾತ್ರವಲ್ಲ, ‘ರಾಷ್ಟ್ರೀಯ ಭದ್ರತೆ’ಯನ್ನು ಕೇಂದ್ರ ಸರಕಾರ ಹೇಗೆ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎನ್ನುವುದರ ಕಡೆಗೂ ಬೆಳಕು ಚೆಲ್ಲಿದೆ. ಮಾಧ್ಯಮಗಳು ತನ್ನ ಮೂಗಿನ ನೇರಕ್ಕೆ ಕೆಲಸ ಮಾಡಬೇಕು ಎನ್ನುವ ಕಾರಣಕ್ಕಾಗಿ, ರಾಷ್ಟ್ರೀಯ ಭದ್ರತೆಯ ಹೆಸರಿನಲ್ಲಿ ಅವುಗಳನ್ನು ದಮನಿಸಲು ಯತ್ನಿಸುತ್ತಿರುವುದರ ಬಗ್ಗೆ ಸುಪ್ರೀಂಕೋರ್ಟ್ ಕಳವಳ ವ್ಯಕ್ತಪಡಿಸಿದೆ. ‘‘ಕಾನೂನಿನ ಅಡಿಯಲ್ಲಿ ನಾಗರಿಕರು ಹೊಂದಿರುವ ಹಕ್ಕುಗಳನ್ನು ನಿರಾಕರಿಸಲು ಸರಕಾರವು ರಾಷ್ಟ್ರೀಯ ಭದ್ರತೆಯನ್ನು ಸಾಧನವಾಗಿ ಬಳಸಿಕೊಳ್ಳುತ್ತಿದೆ’’ ಎಂದು ಸುಪ್ರೀಂಕೋರ್ಟ್ ಹೇಳಿದೆ. ‘‘ಸುದ್ದಿ ಚಾನೆಲನ್ನು ನಡೆಸಲು ನೀಡಲಾಗಿರುವ ಅನುಮತಿಯನ್ನು ನವೀಕರಿಸದಿರುವುದು ಪತ್ರಿಕಾ ಸ್ವಾತಂತ್ರದ ನಿರ್ಬಂಧವಾಗಿದೆ. ಪತ್ರಿಕಾ ಸ್ವಾತಂತ್ರವನ್ನು ಸಂವಿಧಾನದ ವಿಧಿಯಲ್ಲಿ ಹೇಳಲಾಗಿರುವ ಕಾರಣಗಳಿಗಾಗಿ ಮಾತ್ರ ನಿರ್ಬಂಧಿಸಬಹುದಾಗಿದೆ’’ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ.
‘ಮೀಡಿಯಾ ವನ್’ ಎನ್ನುವ ಚಾನೆಲ್ ವಿರುದ್ಧ ಈ ಹಿಂದೆಯೂ ಕೇಂದ್ರ ಸರಕಾರ ತನ್ನ ಕೆಂಗಣ್ಣನ್ನು ಬೀರಿತ್ತು. ದಿಲ್ಲಿ ಗಲಭೆಯ ಸಂದರ್ಭದಲ್ಲಿ ಅಲ್ಲಿನ ವಾಸ್ತವಗಳನ್ನು ಪ್ರಸಾರ ಮಾಡಿದ ಕಾರಣಕ್ಕಾಗಿ ಏಷ್ಯಾನೆಟ್ ಮತ್ತು ಮೀಡಿಯಾ ವನ್ ಚಾನೆಲ್‌ಗಳನ್ನು 48 ಗಂಟೆಗಳ ಕಾಲ ನಿಷೇಧಿಸಿತ್ತು. ಇದರ ವಿರುದ್ಧ ದೇಶಾದ್ಯಂತ ಆಕ್ರೋಶ ವ್ಯಕ್ತವಾದ ಬಳಿಕ ನಿರ್ಧಾರದಿಂದ ಹಿಂದೆ ಸರಿದಿತ್ತು. ಸೇಡಿನ ಮುಂದುವರಿದ ಭಾಗವಾಗಿಇದೀಗ, ಸುದ್ದಿ ವಾಹಿನಿಯ ನವೀಕರಣದ ಅವಧಿ ಮುಗಿಯುತ್ತಿದ್ದಂತೆಯೇ, ಮರು ನವೀಕರಣಕ್ಕೆ ‘ರಾಷ್ಟ್ರೀಯ ಭದ್ರತೆ’ಯ ಕಾರಣವನ್ನು ಮುಂದೊಡ್ಡಿ ನಿರಾಕರಿಸಿತು. ಆದರೆ ಸುಪ್ರೀಂಕೋರ್ಟ್‌ನ ಮೂಲಕ ಸರಕಾರಕ್ಕೆ ತೀವ್ರ ಮುಖಭಂಗವುಂಟಾಗಿದೆ. ಮಾಧ್ಯಮಗಳ ಧ್ವನಿ ಅಡಗಿಸುವುದಕ್ಕೆ ಬೇರೆ ಬೇರೆ ತಂತ್ರಗಳನ್ನು ಕೇಂದ್ರ ಸರಕಾರ ಅನುಸರಿಸುತ್ತಿರುವ ಈ ಸಂದರ್ಭದಲ್ಲಿ ಸುಪ್ರೀಂಕೋರ್ಟ್ ತೀರ್ಪು, ಪ್ರಜಾಸತ್ತೆಗೆ ಆನೆ ಬಲವನ್ನು ನೀಡಿದೆ. ಜೊತೆಗೆ, ‘ರಾಷ್ಟ್ರೀಯ ಭದ್ರತೆ’ಯನ್ನು ಸರಕಾರ ತನ್ನ ಮನೆಯೊಳಗಿರುವ ಅಕ್ರಮಗಳನ್ನು ಕಾಯುವ ಕಾವಲು ನಾಯಿಯ ಮಟ್ಟಕ್ಕಿಳಿಸಿರುವುದು ಇಂದು ಚರ್ಚೆಗೆ ಬರಬೇಕಾಗಿದೆ. ‘ರಾಷ್ಟ್ರೀಯ ಭದ್ರತೆ’ಯ ದುರ್ಬಳಕೆಯ ಮೂಲಕ ದೇಶವನ್ನು ಅಪಾಯಕ್ಕೆ ತಳ್ಳುವ ಕೇಂದ್ರ ಸರಕಾರದ ಪ್ರಯತ್ನವನ್ನು ಜನರು ಒಕ್ಕೊರಲಲ್ಲಿ ಪ್ರತಿಭಟಿಸುವ ಸಮಯ ಬಂದಿದೆ.
‘ದೇಶದ ಭದ್ರತೆ’ಯನ್ನು ಮುಂದಿಟ್ಟುಕೊಂಡು ರಫೇಲ್ ಹಗರಣದ ತನಿಖೆ ನಡೆಯದಂತೆ ಸರಕಾರ ನೋಡಿಕೊಂಡಿತು. ರಾಹುಲ್ ಗಾಂಧಿ ರಫೇಲ್ ಹಗರಣದ ಬಗ್ಗೆ ಧ್ವನಿಯೆತ್ತಿದಾಗ ‘ಸೇನೆಯ ನೈತಿಕ ಸ್ಥೈರ್ಯದ ಮೇಲೆ ದಾಳಿ ನಡೆಸಲಾಗುತ್ತಿದೆ’ ಎಂದು ಅವರ ಬಾಯಿ ಮುಚ್ಚಿಸುವಲ್ಲಿ ಸರಕಾರ ಯಶಸ್ವಿಯಾಯಿತು. ದಲಿತರು, ಬುಡಕಟ್ಟು ಜನರ ಹಕ್ಕುಗಳ ಬಗ್ಗೆ ಮಾತನಾಡಿದ ಕಾರಣಕ್ಕಾಗಿಯೂ ನೂರಾರು ಸಾಮಾಜಿಕ ಕಾರ್ಯಕರ್ತರನ್ನು ‘ರಾಷ್ಟ್ರೀಯ ಭದ್ರತೆ’ಯ ಹೆಸರಿನಲ್ಲಿ ಸರಕಾರ ಈಗಾಗಲೇ ಬಂಧಿಸಿದೆ. ರಾಷ್ಟ್ರೀಯ ಭದ್ರತೆಯ ಹೆಸರಿನಲ್ಲಿ ಮಾಧ್ಯಮಗಳ ನಿಯಂತ್ರಣಕ್ಕಾಗಿ ಹೊಸ ಹೊಸ ನಿಯಮಗಳನ್ನು ಜಾರಿಗೊಳಿಸಲು ಸರಕಾರ ಸಿದ್ಧತೆಯನ್ನು ನಡೆಸುತ್ತಿದೆ. ಈ ಮೂಲಕ ಕೇಂದ್ರ ಸರಕಾರ, ‘ರಾಷ್ಟ್ರೀಯ ಭದ್ರತೆ’ಯ ವ್ಯಾಖ್ಯಾನವನ್ನೇ ಬದಲಿಸಿದೆ. ರಾಷ್ಟ್ರವೆಂದರೆ ಮೋದಿ ಸರಕಾರವೆಂದು ಅದು ಪ್ರತಿಪಾದಿಸುತ್ತಿದೆ. ಸರಕಾರವನ್ನು ಟೀಕಿಸುವುದೆಂದರೆ, ದೇಶವನ್ನು ಟೀಕಿಸಿದಂತೆ. ಮೋದಿಯ ಸರಕಾರ ಅಭದ್ರತೆಯಲ್ಲಿದೆ ಎಂದರೆ ಅದರರ್ಥ ರಾಷ್ಟ್ರ ಅಭದ್ರತೆಯಲ್ಲಿದೆ. ಭ್ರಷ್ಟಾಚಾರ, ಅಕ್ರಮಗಳು ಈ ದೇಶದ ಭದ್ರತೆಗೆ ಅತಿ ದೊಡ್ಡ ಸವಾಲು. ಆದರೆ ಈಗಿನ ಸರಕಾರ, ಈ ಭ್ರಷ್ಟಾಚಾರ, ಅಕ್ರಮಗಳನ್ನು ಪ್ರಶ್ನಿಸುವುದೇ ದೇಶದ ಭದ್ರತೆಗೆ ಅಪಾಯಕಾರಿ ಎಂದು ಪ್ರತಿಪಾದಿಸಲು ಮುಂದಾಗಿದೆ.
ರಫೇಲ್ ಹಗರಣದಲ್ಲಿ ನಡೆದ ಭ್ರಷ್ಟಾಚಾರ ದೇಶದ ಭದ್ರತೆಯ ಮೇಲೆ ದೊಡ್ಡ ಮಟ್ಟದಲ್ಲಿ ಪರಿಣಾಮ ಬೀರಿದೆ. ಆದರೆ ಸರಕಾರ, ಆ ಭ್ರಷ್ಟಾಚಾರವನ್ನು ಪ್ರಶ್ನಿಸುವುದರಿಂದ ದೇಶದ ಭದ್ರತೆಗೆ ಅಪಾಯವಿದೆ ಎಂದು ಪ್ರತಿಪಾದಿಸಿ ತನ್ನ ಭ್ರಷ್ಟಾಚಾರವನ್ನು ಮುಚ್ಚಿ ಹಾಕಿತು. ಕೋಮುಗಲಭೆಗಳು ಈ ದೇಶದ ಆಂತರಿಕ ಭದ್ರತೆಗೆ ತುಂಬಲಾರದ ನಷ್ಟವನ್ನುಂಟು ಮಾಡಿದೆ. ದೇಶವನ್ನು ಒಳಗೊಳಗೆ ಇವು ದುರ್ಬಲಗೊಳಿಸುತ್ತಾ ಬಂದಿವೆ. ಇಂತಹ ಕೋಮುಗಲಭೆಗಳಲ್ಲಿ ಸರಕಾರದ ಭಾಗೀದಾರಿಕೆಯನ್ನು ಬಯಲಿಗೆಳೆದರೆ ಮಾಧ್ಯಮಗಳನ್ನೇ ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಪ್ರಯತ್ನ ನಡೆಯುತ್ತಿದೆ. ಅದಾನಿಗೆ 20,000 ಕೋಟಿ ರೂಪಾಯಿ ಎಲ್ಲಿಂದ ಬಂತು ಎನ್ನುವ ಪ್ರಶ್ನೆಯನ್ನು ವಿರೋಧ ಪಕ್ಷಗಳು ಕೇಳುತ್ತಿವೆ. ಅದಾನಿ ಶೇರು ಹಗರಣ ದೇಶದ ಆರ್ಥಿಕತೆಯ ಮೇಲೆ ಬೀರಬಹುದಾದ ದುಷ್ಪರಿಣಾಮಗಳನ್ನು ಮಾಧ್ಯಮಗಳು ತೆರೆದಿಡುತ್ತಿವೆ. ಆದರೆ ಕೇಂದ್ರ ಸರಕಾರ ಈ ಅವ್ಯವಹಾರ, ಅಕ್ರಮಗಳನ್ನು ‘ರಾಷ್ಟ್ರೀಯ ಭದ್ರತೆ’ಗೆ ಅಪಾಯವೆಂದು ಪರಿಗಣಿಸುತ್ತಿಲ್ಲ. ಇಂದು ಅದಾನಿ ದೇಶಕ್ಕಿಂತಲೂ ದೊಡ್ಡ ವ್ಯಕ್ತಿಯಾಗಿ ವಿಜೃಂಭಿಸುತ್ತಿದ್ದಾರೆ. ಅದಾನಿಯನ್ನು ಪ್ರಶ್ನಿಸುವುದು ದೇಶದ್ರೋಹವಾಗಿ ಬಿಟ್ಟಿದೆ. ದೇಶದ ಪ್ರಜಾಸತ್ತೆ ಅಪಾಯದಲ್ಲಿದೆ ಎನ್ನುವುದನ್ನು ಎಚ್ಚರಿಸುತ್ತಿರುವವರನ್ನೇ ಬಾಯಿ ಮುಚ್ಚಿಸುವ ಪ್ರಯತ್ನ ನಡೆಯುತ್ತಿದೆ.
ರಾಷ್ಟ್ರೀಯ ಭದ್ರತೆಯ ದುರ್ಬಳಕೆಯೇ ಈ ದೇಶದ ರಾಷ್ಟ್ರೀಯ ಭದ್ರತೆಯ ಮುಂದಿರುವ ಅತಿ ದೊಡ್ಡ ಸವಾಲಾಗಿದೆ. ರಾಷ್ಟ್ರೀಯ ಭದ್ರತೆಯನ್ನು ಮುಂದಿಟ್ಟುಕೊಂಡು ತನ್ನ ಅಕ್ರಮ ಭ್ರಷ್ಟಾಚಾರಗಳನ್ನು ರಕ್ಷಿಸಿಕೊಳ್ಳಲು ನೋಡುತ್ತಿರುವವರು ದೇಶವನ್ನು ವಿನಾಶದಂಚಿಗೆ ಕೊಂಡೊಯ್ಯುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ‘ರಾಷ್ಟ್ರೀಯ ಭದ್ರತೆ’ಯನ್ನು ದುರ್ಬಳಕೆ ಮಾಡುವುದು ತಪ್ಪು ಎಂದು ಸುಪ್ರೀಂಕೋರ್ಟ್ ಹೇಳಿರುವುದು ಶ್ಲಾಘನೀಯ. ಹಾಗಾದರೆ ಈ ತಪ್ಪೆನ್ನಸಗಿದವರಿಗೆ ಶಿಕ್ಷೆಯಾಗುವುದು ಬೇಡವೆ? ಅವರನ್ನು ತಡೆದು, ಕಟಕಟೆಯಲ್ಲಿ ನಿಲ್ಲಿಸುವುದು ಬೇಡವೆ? ಈ ಪ್ರಶ್ನೆಗಳಿಗೂ ಸುಪ್ರೀಂಕೋರ್ಟ್ ಉತ್ತರವನ್ನು ಕಂಡುಕೊಳ್ಳಬೇಕು.