ಸಿಬಿಐ ಸೇರಿದಂತೆ ತನಿಖಾ ಸಂಸ್ಥೆಗಳ ದುರ್ಬಳಕೆ

Update: 2023-04-11 04:15 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ 

Full View

ಕೇಂದ್ರೀಯ ತನಿಖಾ ಸಂಸ್ಥೆ(ಸಿಬಿಐ)ಗೆ ಈಗ ಅರವತ್ತು ವರ್ಷ. ಈ ಅರವತ್ತು ವರ್ಷಗಳಲ್ಲಿ ಅದು ನಡೆದು ಬಂದ ದಾರಿಯನ್ನು ಗಮನಿಸಿದರೆ ಅದು ಹಲವಾರು ಬದಲಾವಣೆಗಳನ್ನು ಕಂಡು ತನ್ನ ಸ್ವರೂಪವನ್ನು ಮಾರ್ಪಾಡು ಮಾಡಿಕೊಂಡಿದೆ. ಹಲವಾರು ಸ್ವರೂಪದ ಅಪರಾಧಗಳನ್ನು ತನಿಖೆಗೆ ಒಳಪಡಿಸುವ ಅಧಿಕಾರವನ್ನು ಪಡೆದು ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದೆ. ಆದರೆ ಅದು ಸ್ವತಂತ್ರ, ನಿಷ್ಪಕ್ಷ ತನಿಖಾ ಸಂಸ್ಥೆ ಎಂದು ಕರೆಯುವುದು ಸಮರ್ಥನೀಯವೆನಿಸುವುದಿಲ್ಲ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಇತ್ತೀಚೆಗೆ ಸಿಬಿಐ ಸಂಸ್ಥೆಯ ಸಾಧನೆಯ ಬಗ್ಗೆ ಹೊಗಳುತ್ತ ''ಸಿಬಿಐ ಸತ್ಯ ಮತ್ತು ನ್ಯಾಯಕ್ಕೆ ಹೆಸರಾಗಿದೆ'' ಎಂದರು. ಸಿಬಿಐ ತನ್ನ ದಕ್ಷತೆ ಮತ್ತು ಕಾರ್ಯ ವೈಖರಿಯಿಂದ ಜನರ ವಿಶ್ವಾಸವನ್ನು ಸಂಪಾದಿಸಿದೆ ಎಂದು ಮೋದಿಯವರು ಹೇಳಿದರು. ಸಿಬಿಐಗೆ ಮೋದಿಯವರು ನೀಡಿರುವ ಪ್ರಮಾಣ ಪತ್ರದ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಕೇಂದ್ರದಲ್ಲಿ ಅಧಿಕಾರದಲ್ಲ್ಲಿರುವ ಪಕ್ಷ ಕೇಂದ್ರೀಯ ತನಿಖಾ ಸಂಸ್ಥೆಯನ್ನು ತನ್ನ ಹಿತಾಸಕ್ತಿಯ ರಕ್ಷಣೆಗೆ ದುರ್ಬಳಕೆ ಮಾಡಿಕೊಳ್ಳುತ್ತಾ ಬಂದಿದೆ ಎಂಬ ಆರೋಪ ಹೊಸದಲ್ಲ. ಆದರೆ ನರೇಂದ್ರ ಮೋದಿಯವರ ನೇತೃತ್ವದ ಬಿಜೆಪಿ ಸರಕಾರದ ಕಾಲಾವಧಿಯಲ್ಲಿ ಸಿಬಿಐ ಸಂಸ್ಥೆಯನ್ನು ದುರುಪಯೋಗ ಮಾಡಿಕೊಂಡಷ್ಟು ಹಿಂದಿನ ಯಾವ ಸರಕಾರಗಳೂ ಮಾಡಿಕೊಂಡಿಲ್ಲ.

 ಇಂತಹ ದುರ್ಬಳಕೆಯ ಕುರಿತು ಕಾಂಗ್ರೆಸ್ ಸೇರಿದಂತೆ ಹದಿನಾಲ್ಕು ಪ್ರಮುಖ ವಿರೋಧ ಪಕ್ಷಗಳು ಇತ್ತೀಚೆಗೆ ಸುಪ್ರೀಂ ಕೋರ್ಟಿಗೆ ಅರ್ಜಿಯನ್ನು ಸಲ್ಲಿಸಿದ್ದವು. ಈ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿತ್ತು. ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿಯವರು ಸಿಬಿಐ ಸಂಸ್ಥೆಯನ್ನು ಸಮರ್ಥಿಸಿಕೊಳ್ಳುತ್ತ ''ಯಾರೇ ಟೀಕೆ ಮಾಡಲಿ ಸಿಬಿಐ ತನ್ನ ಕೆಲಸವನ್ನು ಮುಂದುವರಿಸಬೇಕು'' ಎಂದು ಹೇಳಿದರು. ಸಿಬಿಐ ಬಗ್ಗೆ ಪ್ರತಿಪಕ್ಷಗಳು ಸಲ್ಲಿಸಿದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಈಗ ತಿರಸ್ಕರಿಸಿರಬಹುದು. ಆದರೆ ಹತ್ತು ವರ್ಷಗಳ ಹಿಂದೆ ಇದೇ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಆರ್.ಎಂ. ಲೋಧಾ ಸಿಬಿಐ ಸಂಸ್ಥೆಯನ್ನು 'ಪಂಜರದ ಗಿಳಿ' ಎಂದು ಕರೆದಿದ್ದರು. ಅಷ್ಟೇ ಅಲ್ಲ ''ತನ್ನ ಯಜಮಾನನ ದನಿಯಲ್ಲಿ ಮಾತಾಡುವ ಸಂಸ್ಥೆ'' ಎಂದು ಹೇಳಿದ್ದರು.ಸುಪ್ರೀಂ ಕೋರ್ಟ್ ನ್ಯಾಯಾಧೀಶರು ಆಗ ಹೇಳಿದ ಮಾತು ಈಗಲೂ ಅತ್ಯಂತ ಪ್ರಸಕ್ತವಾಗಿದೆಯೆಂದರೆ ಅತಿಶಯೋಕ್ತಿಯಲ್ಲ.

ನರೇಂದ್ರ ಮೋದಿಯವರ ನೇತೃತ್ವದ ಬಿಜೆಪಿ ಸರಕಾರವು ಸಿಬಿಐ ಮಾತ್ರವಲ್ಲ ಜಾರಿ ನಿರ್ದೇಶನಾಲಯ ಮತ್ತು ರಾಷ್ಟ್ರೀಯ ತನಿಖಾ ಸಂಸ್ಥೆಯಂಥ ಹಲವಾರು ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡಷ್ಟು ಹಿಂದಿನ ಯಾವ ಸರಕಾರಗಳೂ ಮಾಡಿಕೊಂಡಿಲ್ಲ. ಭಿನ್ನಾಭಿಪ್ರಾಯ ಹೊಂದಿರುವ ಪ್ರತಿಪಕ್ಷ ನಾಯಕರನ್ನು, ಚಿಂತಕರನ್ನು, ಲೇಖಕರನ್ನು ಹತ್ತಿಕ್ಕಿ ಬಾಯಿ ಮುಚ್ಚಿಸಲು ಮೋದಿ ಸರಕಾರ ತನಿಖಾ ಸಂಸ್ಥೆಗಳನ್ನು ಮನ ಬಂದಂತೆ ದುರುಪಯೋಗ ಮಾಡಿಕೊಳ್ಳುತ್ತಾ ಬಂದಿದೆ. ಅಷ್ಟೇ ಅಲ್ಲ ಯಾವುದೇ ರಾಜ್ಯದಲ್ಲಿ ಚುನಾವಣೆ ನಡೆದು ಬಿಜೆಪಿಯೇತರ ಪಕ್ಷದ ಸರಕಾರ ಇಲ್ಲವೇ ಸಂಯುಕ್ತ ರಂಗ ಅಲ್ಲಿ ಜಯಶಾಲಿಯಾಗಿ ಸರಕಾರವನ್ನು ರಚಿಸಿದರೆ ಚುನಾಯಿತ ಶಾಸಕರನ್ನು ಹೆದರಿಸಲು ಆಮಿಷಗಳನ್ನು ಒಡ್ಡುವುದು ಮಾತ್ರವಲ್ಲ ಸಿಬಿಐನಂತಹ ತನಿಖಾ ಸಂಸ್ಥೆಗಳನ್ನು ಬಳಸಿಕೊಳ್ಳುತ್ತಾ ಬಂದಿರುವುದು ಗುಟ್ಟಿನ ಸಂಗತಿಯಲ್ಲ. ಹೀಗೆ ತನಿಖಾ ಸಂಸ್ಥೆಗಳನ್ನು ಸ್ವಪಕ್ಷದ ಹಿತಾಸಕ್ತಿಯ ರಕ್ಷಣೆಗಾಗಿ ದುರುಪಯೋಗ ಮಾಡಿಕೊಂಡವರೇ ಈಗ ಅದಕ್ಕೆ ಪ್ರಮಾಣ ಪತ್ರ ನೀಡುತ್ತಿರುವುದು ಆತ್ಮವಂಚನೆ ಮಾತ್ರವಲ್ಲ ಜನ ವಂಚನೆಯಾಗಿದೆ.

ವಾಸ್ತವವಾಗಿ ಯಾವುದೇ ಅಪರಾಧ ಪ್ರಕರಣವನ್ನು ತನಿಖೆಗೆ ಒಳಪಡಿಸುವ ಅಧಿಕಾರವನ್ನು ಕೇಂದ್ರ ಸರಕಾರ ಹೊಂದಿದೆ. ಈ ಅಧಿಕಾರವನ್ನು ಬಳಸಿಕೊಂಡು ಕೇಂದ್ರದ ಮೋದಿಯವರ ನೇತೃತ್ವದ ಬಿಜೆಪಿ ಸರಕಾರ ಪ್ರತಿಪಕ್ಷಗಳ ಮತ್ತು ಜನಪರ ಸಂಘಟನೆಗಳ ಬಾಯಿ ಮುಚ್ಚಿಸಲು ಹೊರಟಿರುವುದು ಸಮರ್ಥನೀಯವಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರಕಾರದ ಲೋಪ ದೋಷಗಳನ್ನು ಟೀಕಿಸುವ ಮತ್ತು ವಿಮರ್ಶಿಸುವ ಹಕ್ಕು ಪ್ರತಿಪಕ್ಷಗಳು ಮತ್ತು ಜನಪರ ಸಂಘಟನೆಗಳಿಗೆ ಇದೆ. ಮೋದಿ ಸರಕಾರ ಈ ಜನತಾಂತ್ರಿಕ ಹಕ್ಕುಗಳನ್ನೇ ದಮನ ಮಾಡಲು ಹೊರಟಿರುವುದು, ಅದಕ್ಕಾಗಿ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಸರ್ವಾಧಿಕಾರಿ ಧೋರಣೆಗೆ ಸಾಕ್ಷಿಯಾಗಿದೆ. ಇದು ಬರೀ ಆರೋಪವಲ್ಲ. ಮೋದಿಯವರ ನೇತೃತ್ವದ ಬಿಜೆಪಿ ಸರಕಾರ ಬಂದ ನಂತರ ತನಿಖಾ ಸಂಸ್ಥೆಗಳು ದಾಖಲಿಸಿಕೊಂಡ ಬಹುತೇಕ ಪ್ರಕರಣಗಳು ಪ್ರತಿಪಕ್ಷ ನಾಯಕರ ಮೇಲೆ ಎಂಬುದು ಸುಳ್ಳಲ್ಲ. ಸೈದ್ಧಾಂತಿಕವಾಗಿ ಬಿಜೆಪಿ ಮತ್ತು ಸಂಘಪರಿವಾರದ ನಿಲುವನ್ನು ಒಪ್ಪದ ಹಲವಾರು ವಿರೋಧ ಪಕ್ಷಗಳ ನಾಯಕರು ಮತ್ತು ಜನಪರ ಸಂಘಟನೆಗಳ ಕಾರ್ಯಕರ್ತರು ಸೆರೆಮನೆ ಸೇರಿದ್ದಾರೆ. ಸಿಬಿಐ ದಾಳಿ, ತನಿಖೆಗೆ ಗುರಿಯಾಗಿದ್ದಾರೆ. ಇವರಲ್ಲಿ ಕೆಲವರು ಬಿಜೆಪಿ ಸೇರಿ ತನಿಖಾ ಸಂಸ್ಥೆಗಳಿಂದ ದೋಷಮುಕ್ತರಾಗಿ, 'ಶುದ್ಧ ಹಸ್ತ'ರಾಗಿ ಬದಲಾಗಿದ್ದಾರೆ. ತನಿಖಾ ಸಂಸ್ಥೆಗಳ ಕಿರುಕುಳ ಮತ್ತು ಹಿಂಸೆಯಿಂದ ಪಾರಾಗಲು ಬಿಜೆಪಿಯನ್ನು ಸೇರುವುದೊಂದೇ ಏಕೈಕ ದಾರಿ ಎಂಬಂತಾಗಿದೆ.

ಸಿಬಿಐ ಹೆಸರಿಗೆ ಸ್ವಾಯತ್ತ ಸಂಸ್ಥೆಯಾಗಿದೆ. ಆದರೆ ಕೇಂದ್ರ ಸರಕಾರ ಯಾವುದೇ ತನಿಖೆಯನ್ನು ಸಿಬಿಐಗೆ ವಹಿಸಿದರೂ ಸಂಪೂರ್ಣವಾಗಿ ಮತ್ತು ಸ್ವತಂತ್ರವಾಗಿ ತನಿಖೆಯನ್ನು ನಡೆಸುವ ಅಧಿಕಾರವನ್ನು ಸಿಬಿಐಗೆ ನೀಡಿಲ್ಲ. ಯಾವುದೇ ಸಚಿವಾಲಯ ಯಾವುದೇ ಹಗರಣದಲ್ಲಿ ಪಾಲ್ಗೊಂಡಿದ್ದರೆ ಅಂಥ ಪ್ರಕರಣಗಳಲ್ಲಿ ತನಿಖೆ ನಡೆಸುವ ಮುನ್ನ ಸಿಬಿಐ ಸರಕಾರದ ಪೂರ್ವಾನುಮತಿಯನ್ನು ಪಡೆಯ ಬೇಕಾಗುತ್ತದೆ. ಕೇಂದ್ರ ಸರಕಾರದ ಇಲಾಖೆಗಳು ಮತ್ತು ಸಚಿವಾಲಯಗಳಲ್ಲಿ ಇರುವ ಜಂಟಿ ಕಾರ್ಯದರ್ಶಿ ಮತ್ತು ಅದಕ್ಕಿಂತ ಉನ್ನತ ಹುದ್ದೆಯನ್ನು ಹೊಂದಿರುವ ಯಾವ ಅಧಿಕಾರಿಯ ವಿರುದ್ಧವೂ ಸಿಬಿಐ ನೇರವಾಗಿ ವಿಚಾರಣೆಯನ್ನು ನಡೆಸುವಂತಿಲ್ಲ. ಸರಕಾರ ಪೂರ್ವಾನುಮತಿ ನೀಡದಿದ್ದರೆ ತನಿಖೆಯನ್ನು ಕೈ ಬಿಡಬೇಕಾಗುತ್ತದೆ. ಇದರಿಂದ ಕೇಂದ್ರ ಸರಕಾರ ಹೆಚ್ಚು ಅಧಿಕಾರವನ್ನು ಹೊಂದಿರುವುದು ಸ್ಪಷ್ಟವಾಗುತ್ತದೆ.

ಸಿಬಿಐಗೆ ಸಂಬಂಧಿಸಿದಂತೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ಹೊಂದಿರುವ ಅಧಿಕಾರ ವ್ಯಾಪ್ತಿಯ ಬಗ್ಗೆ ಆಗಾಗ ಪರಸ್ಪರ ಕಿತ್ತಾಟಗಳು ನಡೆದಿವೆ. ತನಿಖಾ ಸಂಸ್ಥೆಗಳು ಯಾವ ಪ್ರದೇಶದಲ್ಲಿ ಯಾವ ರೀತಿಯಲ್ಲಿ ಕಾರ್ಯನಿರ್ವಹಿಸಬೇಕೆಂಬ ಬಗ್ಗೆ ನಿರ್ದೇಶನ ನೀಡುವ ಅಧಿಕಾರ ಕೇಂದ್ರ ಸರಕಾರಕ್ಕಿದೆ. ಈ ಪರಮಾಧಿಕಾರದ ಬಗ್ಗೆ ಆಗಾಗ ಆಕ್ಷೇಪಗಳು ವ್ಯಕ್ತವಾಗಿವೆ.

 ತನಿಖೆಗೆ ಸಂಬಂಧಿಸಿದಂತೆ ಬಹುತೇಕ ಬಿಜೆಪಿಯೇತರ ರಾಜ್ಯ ಸರಕಾರಗಳು ಸಿಬಿಐ ಗೆ ನೀಡಿದ್ದ ಸಾಮಾನ್ಯ ಅನುಮತಿಯನ್ನು ವಾಪಸ್ ಪಡೆದಿವೆ. ಕೇರಳ, ಪಶ್ಚಿಮ ಬಂಗಾಳ, ಛತ್ತೀಸ್‌ಗಡ, ರಾಜಸ್ಥಾನ ಮುಂತಾದ ರಾಜ್ಯಗಳು ಸಿಬಿಐಗೆ ನೀಡಿರುವ ಅನುಮತಿಯನ್ನು ವಾಪಸ್ ಪಡೆದ ರಾಜ್ಯಗಳಲ್ಲಿ ಪ್ರಮುಖವಾಗಿವೆ. ಕೇಂದ್ರ ಸರಕಾರ ತನಿಖಾ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಂಡಿರದಿದ್ದರೆ ಈ ಅಹಿತಕರ ಪರಿಸ್ಥಿತಿ ಬರುತ್ತಿರಲಿಲ್ಲ.

 ಇತ್ತೀಚಿನ ವರ್ಷಗಳಲ್ಲಿ ಸಿಬಿಐ ತನಿಖೆ ನಡೆಸಿದ ಪ್ರಕರಣಗಳಲ್ಲಿ ಆರೋಪಿಗಳಿಗೆ ಶಿಕ್ಷೆಯಾದ ಪ್ರಕರಣಗಳು ತುಂಬಾ ಕಡಿಮೆ. ಇದರರ್ಥ ಸಿಬಿಐಯ ಉದ್ದೇಶ ನ್ಯಾಯಕೊಡಿಸುವುದಕ್ಕಿಂತಲೂ ರಾಜಕೀಯ, ಸೈದ್ಧಾಂತಿಕ ಭಿನ್ನಾಭಿಪ್ರಾಯ ಹೊಂದಿದವರಿಗೆ ಕಿರುಕುಳ ಕೊಡುವುದಾಗಿದೆ ಎಂಬುದಕ್ಕೆ ಹಲವಾರು ಉದಾಹರಣೆಗಳಿವೆ. ಹೀಗಾಗಿ ಸಿಬಿಐಯನ್ನು ಪ್ರಧಾನಿ ಮೋದಿಯವರು ಸಮರ್ಥಿಸಿರುವುದಕ್ಕಿಂತ ಸಿಬಿಐ ಬಗ್ಗೆ ಪ್ರತಿಪಕ್ಷ ನಾಯಕರು ಮತ್ತು ಜನಪರ ಹಾಗೂ ಮಾನವ ಹಕ್ಕುಗಳ ಪರ ಹೋರಾಟಗಾರರು ಹೇಳಿರುವ ಮಾತುಗಳು ಹೆಚ್ಚು ಸೂಕ್ತವಾಗಿವೆ.

Similar News