ದೋಹಾ: ಕರ್ನಾಟಕ ಮುಸ್ಲಿಂ ಕಲ್ಚರಲ್ ಅಸೋಸಿಯೇಷನ್ ವಾರ್ಷಿಕ ಸಾಮಾನ್ಯ ಸಭೆ; ನೂತನ ಪದಾಧಿಕಾರಿಗಳ ಆಯ್ಕೆ

Update: 2023-04-11 12:40 GMT

ದೋಹಾ (ಕತಾರ್): ಕರ್ನಾಟಕ ಮುಸ್ಲಿಂ ಕಲ್ಚರಲ್ ಅಸೋಸಿಯೇಷನ್ (ಕೆಎಂಸಿಎ) ತನ್ನ ವಾರ್ಷಿಕ ಸಾಮಾನ್ಯ ಸಭೆಯನ್ನು ಏಪ್ರಿಲ್ 8 ರಂದು ನಡೆಸಿತು. ಈ ಸಂದರ್ಭದಲ್ಲಿ 2023-24 ರ ಕಾರ್ಯಕಾರಿ ಸಮಿತಿಗೆ ಚುನಾವಣೆಗಳನ್ನು ನಡೆಸಲಾಯಿತು. ದೋಹಾದ MRA ರೆಸ್ಟೋರೆಂಟ್‌ನಲ್ಲಿ ನಡೆದ ಕಾರ್ಯಕ್ರಮವು ಮಾಸ್ಟರ್ ರೆಹಾನ್ ರಶೀದ್ ಅವರ ಪವಿತ್ರ ಕುರಾನ್ ಪಠಣದೊಂದಿಗೆ ಪ್ರಾರಂಭವಾಯಿತು. ಸಮಾರಂಭದ ಮುಖ್ಯಸ್ಥರಾದ ಅಬ್ದುಲ್ಲಾ ಮೊಯ್ದೀನ್‌ ಕಾರ್ಯಕ್ರಮವನ್ನು ಸುಗಮವಾಗಿ ನಡೆಸಿದರು.

2022-23 ರ ಕಾರ್ಯಕಾರಿ ಸಮಿತಿಯನ್ನು ವಿಸರ್ಜಿಸಿದ ಬಳಿಕ, ಚುನಾವಣಾ ಆಯುಕ್ತರಾದ ಅಹ್ಮದ್ ಸಯೀದ್ ಅಸ್ಸಾದಿ ಅವರು ಹೊಸ ಸಮಿತಿ ಸದಸ್ಯರನ್ನು ಆಯ್ಕೆ ಮಾಡುವ ಪ್ರಕ್ರಿಯೆಯನ್ನು ನಡೆಸಿದರು. ನೂತನ ಅಧ್ಯಕ್ಷರಾಗಿ ಸಾಕಿಬ್ ರಝಾ ಖಾನ್, ನೂತನ ಉಪಾಧ್ಯಕ್ಷರಾಗಿ ಸುಹೈಬ್ ಅಹಮದ್ ಆಯ್ಕೆಯಾಗಿದ್ದಾರೆ ಎಂದು ಕೆಎಂಸಿಎ ಪ್ರಕಟಿಸಿದೆ. 

ನೂತನ ಪ್ರಧಾನ ಕಾರ್ಯದರ್ಶಿಯಾಗಿ ಶಾಹಿಮ್ ಮಹಮ್ಮದ್ ಶೇಖ್, ನೂತನ ಖಜಾಂಚಿಯಾಗಿ ಖಲೀಲ್ ಅಹ್ಮದ್, ನೂತನ ಜಂಟಿ ಕಾರ್ಯದರ್ಶಿಯಾಗಿ ಮಹಮ್ಮದ್ ಯೂನುಸ್, ನೂತನ ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಸೈಯದ್ ಅಶ್ಫಾಕ್, ನೂತನ ಕ್ರೀಡಾ ಕಾರ್ಯದರ್ಶಿಯಾಗಿ ಶಕೀಲ್ ಮೊಹಮ್ಮದ್ ಆಯ್ಕೆಯಾಗಿದ್ದಾರೆ.

ನೂತನವಾಗಿ ಆಯ್ಕೆಯಾದ ಅಧ್ಯಕ್ಷ ಸಾಕಿಬ್ ರಝಾ ಖಾನ್ ಅವರು ಕೆಎಂಸಿಎ ಭವಿಷ್ಯದ ಯೋಜನೆಗಳನ್ನು ಮಂಡಿಸಿದರು. ನೂತನ ಕಾರ್ಯಕಾರಿ ಸಮಿತಿಯ ಮೊದಲ ಸಭೆಯಲ್ಲಿ ಶೀಘ್ರದಲ್ಲೇ ಇತರ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗುವುದು ಎಂದು ಅವರು ಹೇಳಿದರು.

ಕೆಎಂಸಿಎಯ ನಿರ್ಗಮಿತ ಅಧ್ಯಕ್ಷ ಫಯಾಝ್ ಅಹಮದ್ ಸ್ವಾಗತಿಸಿ, ನಿರ್ಗಮಿತ ಪ್ರಧಾನ ಕಾರ್ಯದರ್ಶಿ ಸುಹೈಬ್ ಅಹಮದ್ ಕಳೆದ ಒಂದು ವರ್ಷದಲ್ಲಿ ಕೆಎಂಸಿಎ ಆಯೋಜಿಸಿದ್ದ ಕಾರ್ಯಕ್ರಮಗಳ ವಾರ್ಷಿಕ ವರದಿ ವಾಚಿಸಿದರು. ಖಲೀಲ್ ಅಹ್ಮದ್ ನಿಧಿ ವರದಿ ವಾಚಿಸಿದರು.

ಅಹ್ಮದ್ ಸಯೀದ್ ಅಸ್ಸಾದಿಯವರ ವಂದನಾರ್ಪಣೆಯೊಂದಿಗೆ ಸಭೆಯು ಮುಕ್ತಾಯವಾಯಿತು. ಚುನಾವಣೆಯ ನಂತರ ರಸಪ್ರಶ್ನೆ ಸ್ಪರ್ಧೆಯನ್ನು ಏರ್ಪಡಿಸಲಾಯಿತು ಮತ್ತು ಮೊದಲ ಐದು ವಿಜೇತರಿಗೆ ಬಹುಮಾನ ನೀಡಲಾಯಿತು.

KMCA ತನ್ನ ಸದಸ್ಯರು ಮತ್ತು ಇತರ ಸಂಸ್ಥೆಗಳ ಮುಖ್ಯಸ್ಥರಿಗೆ ವಾರ್ಷಿಕ ಇಫ್ತಾರ್ ಅನ್ನು ಸಹ ಆಯೋಜಿಸಿತು, ಇದರಲ್ಲಿ ಸುಮಾರು 150 ಜನರು ಭಾಗವಹಿಸಿದ್ದರು. ಹಸನ್ ಚೌಗ್ಲೆ ಮತ್ತು ಇಖ್ಲಾಸ್ ಫರೀದ್, ಐಸಿಸಿ ಅಧ್ಯಕ್ಷ ಮಣಿಕಂಠನ್, ಐಸಿಸಿ, ಐಸಿಬಿಎಫ್ ಮತ್ತು ಐಎಸ್ಸಿ‌ ಅಧಿಕಾರಿಗಳಾದ ಸುಬ್ರಮಣಿಯನ್ ಹೆಬ್ಬಾಗಿಲು ಮತ್ತು ದೀಪಕ್ ಶೆಟ್ಟಿ ಸೇರಿದಂತೆ ಇತರ ಸಂಘಗಳ ಗಣ್ಯರು ಮತ್ತು ಸಮುದಾಯದ ಮುಖಂಡರು ಈ ಸಂದರ್ಭದಲ್ಲಿ ಶುಭ ಹಾರೈಸಿದರು. ಕರ್ನಾಟಕ ಮೂಲದ ಸಂಘಟನೆಗಳ ಮುಖಂಡರಾದ ಮಹೇಶ್ ಗೌಡ, ರವಿ ಶೆಟ್ಟಿ, ಅರುಣ್ ಕುಮಾರ್, ಡಾ.ಸಂಜಯ್ ಕುದುರಿ, ಅಬ್ದುಲ್ ರಝಾಕ್, ಇಬ್ರಾಹಿಂ ಬ್ಯಾರಿ, ಮುಮ್ತಾಜ್ ಹುಸೇನ್, ಅಬ್ದುಲ್ ರಹಿಮಾನ್ ಸಾಬ್, ಅಬ್ದುಲ್ಲಾ ಖತ್ರಿ ಮುಂತಾದವರು ಉಪಸ್ಥಿತರಿದ್ದರು.

Similar News