ಕನ್ನಡ ಭಾಷೆಗೆ ಅಗ್ನಿ ಪರೀಕ್ಷೆ!
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಕೇಂದ್ರೀಯ ಮೀಸಲು ಪಡೆ ನೇಮಕಾತಿಗಾಗಿನ ಕಂಪ್ಯೂಟರ್ ಆಧಾರಿತ ಪರೀಕ್ಷೆಯಲ್ಲಿ ಹಿಂದಿ, ಇಂಗ್ಲಿಷ್ ಭಾಷೆಗಷ್ಟೇ ಕೇಂದ್ರ ಸರಕಾರ ಅನುಮತಿ ನೀಡಿರುವುದನ್ನು ದಕ್ಷಿಣ ಭಾರತ ರಾಜ್ಯಗಳು ಪ್ರತಿಭಟಿಸಿವೆ. ಸಿಪಿಆರ್‌ಎಫ್‌ನ 9,212 ಹುದ್ದೆಗಳಿಗೆ ಈ ಪರೀಕ್ಷೆಯನ್ನು ನಡೆಸಲಾಗಿತ್ತು. ಈ ಹುದ್ದೆಗಳಲ್ಲಿ 466 ಕರ್ನಾಟಕಕ್ಕೆ ಸೇರಿವೆ. ಆದರೆ ಈ ಹುದ್ದೆಯ ಪರೀಕ್ಷೆಯನ್ನು ಬರೆಯಬೇಕಾದರೆ ಕನ್ನಡಿಗರು ಇಂಗ್ಲಿಷ್ ಹೊರತು ಪಡಿಸಿದರೆ ಹಿಂದಿಯನ್ನೇ ನೆಚ್ಚಿಕೊಳ್ಳಬೇಕು. ಒಂದೆಡೆ ಕೇಂದ್ರ ಸರಕಾರ ಪ್ರಾದೇಶಿಕ ಭಾಷೆಗಳ ಬಗ್ಗೆ ಬೆಣ್ಣೆ ಮಾತುಗಳನ್ನು ಆಡುತ್ತಿವೆ. ಬ್ಯಾಂಕಿಂಗ್ ಪರೀಕ್ಷೆಗಳು ಮಾತ್ರವಲ್ಲದೆ, ಕೇಂದ್ರದ ಸುಪರ್ದಿಯಲ್ಲಿರುವ ಎಲ್ಲ ನೇಮಕಾತಿಗಳಿಗೆ ಎಲ್ಲ ಪ್ರಾದೇಶಿಕ ಭಾಷೆಗಳಲ್ಲಿ ಬರೆಯುವ ಅವಕಾಶವಿದೆ ಎನ್ನುವುದನ್ನು ಪದೇ ಪದೇ ಹೇಳುತ್ತಾ ಬಂದಿದೆ. ಸಿಬ್ಬಂದಿ ನೇಮಕಾತಿ ಆಯೋಗ ನಡೆಸುವ ಪರೀಕ್ಷೆಗಳಲ್ಲಿ ಕನ್ನಡದಲ್ಲೂ ಬರೆಯಬಹುದು ಎನ್ನುವ ಆದೇಶ ಹೊರ ಬಿದ್ದಿದ್ದು ಇದರಿಂದ ಕನ್ನಡಿಗರಿಗೆ ಅನುಕೂಲವಾಗುತ್ತದೆ ಎಂಬ ಹೇಳಿಕೆಯನ್ನು ಕೇಂದ್ರ ಸರಕಾರ ನೀಡಿತ್ತು. ಆದರೆ ಒಂದೆಡೆ ಪ್ರಾದೇಶಿಕ ಭಾಷೆಗಳಿಗೆ ಅವಕಾಶ ನೀಡಿದಂತೆ ನಟಿಸುತ್ತಲೇ ಮತ್ತೊಂದೆಡೆ ಕೇಂದ್ರದ ನೇಮಕಾತಿಗಳ ಹೆಸರಿನಲ್ಲಿ ಹಿಂದಿಯನ್ನು ಪ್ರಾದೇಶಿಕ ಭಾಷೆಗಳ ಮೇಲೆ ಹೇರುವ ಪ್ರಯತ್ನವನ್ನು ಕೇಂದ್ರ ಸರಕಾರ ನಡೆಸುತ್ತಿದೆ.
ಕೇಂದ್ರದ ನೇಮಕಾತಿಗಳನ್ನು ನಡೆಸುವ ಸಂದರ್ಭದಲ್ಲಿ ಸರಕಾರ ಒಂದನ್ನು ಸ್ಪಷ್ಟವಾಗಿ ನೆನಪಿನಲ್ಲಿಟ್ಟುಕೊಳ್ಳಬೇಕು. ಹಿಂದಿ ಈ ದೇಶದ ಬಹುತೇಕರ ಮಾತೃ ಭಾಷೆಯಲ್ಲ. ಜೊತೆಗೆ, ಈ ದೇಶದ ರಾಷ್ಟ್ರಭಾಷೆಯೂ ಹಿಂದಿಯಲ್ಲ. ಕೇಂದ್ರದ ನೇಮಕಾತಿಯ ಸಂದರ್ಭದಲ್ಲಿ ಪರೀಕ್ಷೆಗಳಿಗೆ ಹಿಂದಿ ಅಥವಾ ಇಂಗ್ಲಿಷ್ ಎನ್ನುವ ಆಯ್ಕೆಯನ್ನು ಮುಂದಿಟ್ಟಾಗ ಅದರ ಸಂಪೂರ್ಣ ಅನುಕೂಲವನ್ನು ಹಿಂದಿ ಮಾತೃಭಾಷಿಗರು ತಮ್ಮದಾಗಿಸಿಕೊಳ್ಳುತ್ತಾರೆ. ಹಿಂದಿ ಅರಿಯದ ಭಾಷಿಗರು ಒಂದೋ ಇಂಗ್ಲಿಷನ್ನು ಆಯ್ದುಕೊಳ್ಳಬೇಕು. ಇಲ್ಲವೇ, ತಮ್ಮದಲ್ಲದ ಹಿಂದಿಯಲ್ಲಿ ಪರೀಕ್ಷೆ ಬರೆಯಲು ಪ್ರಯತ್ನಿಸಬೇಕು. ಎರಡೂ ಪರಕೀಯ ಭಾಷೆಗಳೇ ಆಗಿವೆ. ಇಂತಹ ಸಂದರ್ಭದಲ್ಲಿ ದಕ್ಷಿಣ ಭಾರತದ ಬಹುತೇಕ ಅಭ್ಯರ್ಥಿಗಳು ಪರೀಕ್ಷೆಗಾಗಿ ಇಂಗ್ಲಿಷ್ ಭಾಷೆಯನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ಆದರೆ ಉತ್ತರ ಭಾರತೀಯರು ತಮ್ಮ ಮಾತೃ ಭಾಷೆಯಾಗಿರುವ ಹಿಂದಿಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಅಂತಿಮವಾಗಿ ಪರೀಕ್ಷೆಯಲ್ಲಿ ಮಾತೃ ಭಾಷೆಯಲ್ಲಿ ಬರೆಯಲು ಅವಕಾಶವನ್ನು ಪಡೆದ ಹಿಂದಿ ಭಾಷಿಗರೇ ಹುದ್ದೆಯಲ್ಲಿ ಪಾರಮ್ಯವನ್ನು ಸಾಧಿಸುತ್ತಾರೆ. ಇದರ ಪರಿಣಾಮವೆಂದರೆ, ದಕ್ಷಿಣ ಭಾರತದ ವಿವಿಧ ಇಲಾಖೆಗಳಲ್ಲಿ ಉತ್ತರ ಭಾರತದ ಅಭ್ಯರ್ಥಿಗಳು ಅವಕಾಶಗಳನ್ನು ತಮ್ಮದಾಗಿಸಿಕೊಳ್ಳುತ್ತಾರೆ.
ಉತ್ತರ ಭಾರತೀಯರಿಗೆ ಅವರ ಮಾತೃ ಭಾಷೆಯಲ್ಲಿ ಬರೆಯಲು ಅವಕಾಶವಿದೆ ಎಂದಾದರೆ, ದಕ್ಷಿಣ ಭಾರತದ ಜನರಿಗೇಕೆ ಅವರ ಮಾತೃ ಭಾಷೆಯಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುತ್ತಿಲ್ಲ? ಎನ್ನುವ ಪ್ರಶ್ನೆಯನ್ನು ಕನ್ನಡಿಗರೂ ಸೇರಿದಂತೆ ಹಿಂದೀಯೇತರ ಭಾಷಿಗರು ಕೇಳುತ್ತಿದ್ದಾರೆ. ಭಾರತದ ಮೇಲೆ ಎಲ್ಲ ಭಾಷಿಗರಿಗೂ ಸಮಾನ ಹಕ್ಕುಗಳಿವೆ ಎಂದಾದ ಮೇಲೆ ಹಿಂದಿ ಮಾತನಾಡುವವರಿಗೆ ವಿಶೇಷ ಮಣೆಯನ್ನು ಯಾಕೆ ಹಾಕಲಾಗುತ್ತಿದೆ? ಒಂದೋ, ಈ ದೇಶದ ಎಲ್ಲರಿಗೂ ಏಕ ಭಾಷೆಯಲ್ಲಿ ಪರೀಕ್ಷೆಯನ್ನು ನಡೆಸಲಿ. ಈಗಾಗಲೇ ಇಂಗ್ಲಿಷ್ ಭಾಷೆಯನ್ನು ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಜನರು ಸ್ವೀಕರಿಸಿರುವುದರಿಂದ, ಸರಕಾರವೂ ಇಂಗ್ಲಿಷ್ ಭಾಷೆಯಲ್ಲಿ ಪರೀಕ್ಷೆ ನಡೆಸುವುದನ್ನು ಮಾನ್ಯ ಮಾಡಿರುವುದರಿಂದ, ಇಂಗ್ಲಿಷ್ ಭಾಷೆಯನ್ನೇ ಪರೀಕ್ಷೆಗೆ ಕಡ್ಡಾಯ ಮಾಡಬೇಕು. ಆಗ ಅಭ್ಯರ್ಥಿಗಳ ಪ್ರತಿಭೆಯನ್ನು ಸಮಾನವಾಗಿರುವ ಮಾನದಂಡದಲ್ಲಿ ಅಳೆಯಲು ಸಾಧ್ಯವಾಗುತ್ತದೆ. ಆದರೆ, ಹಿಂದಿ ಮತ್ತು ಇಂಗ್ಲಿಷ್ ಎರಡು ಭಾಷೆಗಳ ಆಯ್ಕೆಯನ್ನು ಮುಂದಿಟ್ಟಾಗ, ಹಿಂದಿ ಮಾತೃ ಭಾಷಿಗರಿಗೆ ಅನುಕೂಲವನ್ನು ಮಾಡಿಕೊಟ್ಟಂತಾಗುತ್ತದೆ.
ಆಗ, ಇತರ ಭಾಷೆಗಳಿಗೆ ಅವಕಾಶ ಯಾಕಿಲ್ಲ ಎನ್ನುವ ಪ್ರಶ್ನೆ ಏಳುತ್ತದೆ? ಇಂಗ್ಲಿಷ್‌ನ ಜೊತೆಗೆ ಹಿಂದಿಯನ್ನು ಮುಂದಿಡುವ ಮೂಲಕ, ಪರೋಕ್ಷವಾಗಿ ಕೇಂದ್ರ ಸರಕಾರ ಹಿಂದಿಯ ಹಿರಿಮೆಯನ್ನು ಇತರ ಪ್ರಾದೇಶಿಕ ಭಾಷೆಗಳ ಮೇಲೆ ಹೇರುತ್ತಿದೆ ಎನ್ನುವುದು ದಕ್ಷಿಣ ಭಾರತೀಯರ ಆರೋಪವಾಗಿದೆ. ಮುಂದಿನ ದಿನಗಳಲ್ಲಿ ಇಂತಹ ಪರೀಕ್ಷೆಗಳಿಗಾಗಿ ಹಿಂದಿಯನ್ನು ಕಲಿತುಕೊಳ್ಳುವುದು ಅನಿವಾರ್ಯ ಎನ್ನುವಂತಹ ಮನಸ್ಥಿತಿಯನ್ನು ಈ ಭಾಗದಲ್ಲಿ ಬಿತ್ತುವುದು, ನಿಧಾನಕ್ಕೆ ಹಿಂದಿ ಕಲಿಕೆಯನ್ನು ದಕ್ಷಿಣ ಭಾರತೀಯರಿಗೆ ಅನಿವಾರ್ಯವಾಗಿಸುವುದು ಕೇಂದ್ರ ಸರಕಾರದ ಹುನ್ನಾರವಾಗಿದೆ. ಆದುದರಿಂದ, ಸಿಆರ್‌ಪಿಎಫ್ ಪರೀಕ್ಷೆಯೆನ್ನುವುದು ಕರ್ನಾಟಕದ ಪಾಲಿಗೆ ಕನ್ನಡ ಭಾಷೆಯ ಅಳಿವು ಉಳಿವಿನ ಪರೀಕ್ಷೆಯಾಗಿದೆ.
ಬ್ಯಾಂಕ್‌ಗಳು ವಿಲೀನವಾದ ಬಳಿಕ, ದಕ್ಷಿಣ ಭಾರತದ ಬ್ಯಾಂಕ್‌ಗಳ ಆಯಕಟ್ಟಿನ ಸ್ಥಾನಗಳಿಗೆ ಹಿಂದಿ ಭಾಷೆಯನ್ನಾಡುವ ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ. ಪರಿಣಾಮವಾಗಿ ನಮ್ಮದೇ ಬ್ಯಾಂಕಿನಲ್ಲಿ ನಾವು ಪರಕೀಯರಾಗಿ ವ್ಯವಹರಿಸಬೇಕಾಗಿದೆ. ಕನ್ನಡ ಗ್ರಾಹಕರಿಗೆ ಹಿಂದಿ ಭಾಷಿಗ ಸಿಬ್ಬಂದಿ ‘‘ಹಿಂದಿ ಕಲಿತುಕೊಂಡು ಬನ್ನಿ’’ ಎಂದು ಗದರಿಸುವಷ್ಟು ಬೆಳೆದು ಬಿಟ್ಟಿದ್ದಾರೆ. ರೈಲ್ವೆ ಇಲಾಖೆಯಲ್ಲೂ ಹಿಂದಿ ಭಾಷಿಗರೇ ತುಂಬಿ ಬಿಟ್ಟಿದ್ದಾರೆ. ಹಿಂದಿ ಭಾಷೆ ತಿಳಿಯದ ಕನ್ನಡಿಗರು ರೈಲ್ವೇ ಸಿಬ್ಬಂದಿ ಮುಂದೆ ಮಾತು ಬಾರದ ಮೂಕರಂತಾಗಿದ್ದಾರೆ. ಈವರೆಗೆ ಇಂಗ್ಲಿಷ್ ಗೊತ್ತಿಲ್ಲದೆ ಕೀಳರಿಮೆ ಅನುಭವಿಸುತ್ತಿದ್ದ ಕನ್ನಡಿಗರು ಇದೀಗ ಹಿಂದಿ ತಿಳಿಯದೆ ಕೀಳರಿಮೆ ಅನುಭವಿಸುವಂತಹ ಸ್ಥಿತಿ ನಿರ್ಮಾಣವಾಗಿದೆ. ಯಾವುದೇ ಹುದ್ದೆಗೆ ಹಿಂದಿ ಭಾಷೆ ತಿಳಿದಿರುವುದು ಒಂದು ಅರ್ಹತೆಯನ್ನಾಗಿಸಿ ನಿಧಾನಕ್ಕೆ ಕರ್ನಾಟಕದ ವಿವಿಧ ಉದ್ಯಮ ವಲಯಗಳಿಗೆ ಉತ್ತರ ಭಾರತೀಯರನ್ನು ತುರುಕುವುದು ಕೇಂದ್ರ ಸರಕಾರದ ಹುನ್ನಾರ. ಈ ಮೂಲಕ ಉತ್ತರ ಭಾರತದ ನಿರುದ್ಯೋಗ ಸಮಸ್ಯೆಗಳನ್ನು ನಿವಾರಿಸುವುದಕ್ಕೆ ಹೊರಟಿದೆ.
ಒಂದನ್ನು ನಾವು ನೆನಪಿನಲ್ಲಿಟ್ಟುಕೊಳ್ಳಬೇಕು. ಆರೋಗ್ಯ, ಶಿಕ್ಷಣ, ಅಭಿವೃದ್ಧಿಯಲ್ಲಿ ದಕ್ಷಿಣ ಭಾರತದ ರಾಜ್ಯಗಳನ್ನು ಸರಿಗಟ್ಟಲು ಉತ್ತರ ಭಾರತದ ರಾಜ್ಯಗಳಿಗೆ ಸಾಧ್ಯವಾಗಿಲ್ಲ. ಹಿಂದಿ ಗೊತ್ತಿಲ್ಲದ ಕೇರಳ ಶಿಕ್ಷಣ, ಅಭಿವೃದ್ಧಿ ಕ್ಷೇತ್ರದಲ್ಲಿ ಮಾಡಿರುವ ಸಾಧನೆಗಳನ್ನು ಕೇಂದ್ರ ಸರಕಾರವೇ ಗುರುತಿಸಿದೆ. ಆಂಧ್ರ ಮತ್ತು ಕರ್ನಾಟಕ ಐಟಿ ಬಿಟಿಗಳಿಗಾಗಿ ವಿಶ್ವ ಮಟ್ಟದಲ್ಲಿ ಗುರುತಿಸಿಕೊಂಡಿದೆ. ತಂತ್ರಜ್ಞಾನ ಕ್ಷೇತ್ರದಲ್ಲಿ ತಮಿಳುನಾಡು ಕೂಡ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಬೆಳೆದು ನಿಂತಿದೆ. ಆಸ್ಕರ್‌ನಂತಹ ಪ್ರತಿಷ್ಠಿತ ಪ್ರಶಸ್ತಿಗಳನ್ನು ಪಡೆಯುವ ಮೂಲಕ ದಕ್ಷಿಣ ಭಾರತೀಯರು ವಿಶ್ವ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಅಭಿವೃದ್ಧಿಗೂ ಹಿಂದಿ ಭಾಷೆಗೂ ಯಾವ ಸಂಬಂಧವೂ ಇಲ್ಲ ಎನ್ನುವುದನ್ನು ಈ ಮೂಲಕ ದಕ್ಷಿಣ ಭಾರತೀಯರು ಸಾಬೀತು ಮಾಡಿದ್ದಾರೆ.
ಹಿಂದಿ ಬಹುಸಂಖ್ಯಾತ ಪ್ರದೇಶವಾಗಿರುವ ಉತ್ತರ ಪ್ರದೇಶ, ಬಿಹಾರದಂತಹ ರಾಜ್ಯಗಳು ಯಾಕೆ ಹಿಂದುಳಿದಿವೆ? ಮತ್ತು ಆ ಭಾಷೆಯನ್ನು ಇದೀಗ ದಕ್ಷಿಣ ಭಾರತದ ಮೇಲೆ ಯಾಕೆ ಹೇರಲು ಮುಂದಾಗಿದೆ ಎನ್ನುವುದನ್ನು ಕೇಂದ್ರ ಸರಕಾರವೇ ವಿವರಿಸಬೇಕು. ಕೇಂದ್ರ ಸರಕಾರದ ಸುಪರ್ದಿಯಲ್ಲಿ ನಡೆಯುವ ಯಾವುದೇ ನೇಮಕಾತಿ ಪರೀಕ್ಷೆಗಳನ್ನು ಹಿಂದಿ ಭಾಷೆಯಲ್ಲಿ ಬರೆಯಲು ಅವಕಾಶವಿದೆಯೆಂದಾದರೆ ಇತರ ಎಲ್ಲ ಪ್ರಾದೇಶಿಕ ಭಾಷೆಗಳಲ್ಲೂ ಬರೆಯಲು ಅವಕಾಶವಿರಬೇಕು. ಅಥವಾ ದೇಶದಲ್ಲಿರುವ ಎಲ್ಲರೂ ಇಂಗ್ಲಿಷ್ ಭಾಷೆಯಲ್ಲೇ ಪರೀಕ್ಷೆಯನ್ನು ಎದುರಿಸುವಂತಾಗಲಿ. ದಕ್ಷಿಣ ಭಾರತದ ರಾಜ್ಯಗಳು ಈ ನಿಟ್ಟಿನಲ್ಲಿ ಒಂದಾಗಿ ಹಿಂದಿ ಭಾಷೆಯ ಹೇರಿಕೆಯ ವಿರುದ್ಧ ತಮ್ಮ ಪ್ರತಿರೋಧವನ್ನು ವ್ಯಕ್ತಪಡಿಸಬೇಕಾಗಿದೆ.