ಮುಂದೆ ಅಪಾಯಕಾರಿ ತಿರುವಿದೆ; ಬಿಜೆಪಿಯ ಹಿರಿಯರಿಗೆ ಎಚ್ಚರಿಕೆ!

Update: 2023-04-14 04:25 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ 

Full View

ರಾಜ್ಯ ಬಿಜೆಪಿ ಅಪಾಯಕಾರಿ ತಿರುವನ್ನು ತೆಗೆದುಕೊಳ್ಳುತ್ತಿದೆ. ನಿಧಾನಕ್ಕೆ ಬಿಜೆಪಿಯ ನಿಯಂತ್ರಣಾ ಚಕ್ರ ಲಿಂಗಾಯತರಿಂದ ಬ್ರಾಹ್ಮಣ ಶಕ್ತಿಯ ಕೈಗೆ ವರ್ಗಾವಣೆಯಾಗುತ್ತಿದೆ. ಬಿಜೆಪಿ ಬಿಡುಗಡೆ ಮಾಡಿರುವ ಮೊದಲ ಪಟ್ಟಿಯಿಂದ ಅದು ಈಗಾಗಲೇ ಸ್ಪಷ್ಟವಾಗಿದೆ. ಈ ಪಟ್ಟಿಯಲ್ಲಿ ಲಿಂಗಾಯತ ಮತ್ತು ಒಕ್ಕಲಿಗ ಅಭ್ಯರ್ಥಿಗಳು ಮುಂಚೂಣಿಯಲ್ಲಿದ್ದಾರಾದರೂ, ರಾಜ್ಯದಲ್ಲೇ ಅತಿ ಕಡಿಮೆ ಸಂಖ್ಯೆಯಲ್ಲಿರುವ ಬ್ರಾಹ್ಮಣ ಸಮುದಾಯದ 12 ಅಭ್ಯರ್ಥಿಗಳಿಗೆ ಟಿಕೆಟ್ ನೀಡಲಾಗಿದೆ. ಇದು ಇನ್ನೂ ಮೊದಲ ಪಟ್ಟಿ ಎನ್ನುವುದನ್ನು ನೆನಪಿನಲ್ಲಿಡಬೇಕು. ಬ್ರಾಹ್ಮಣ ಸಮುದಾಯದ ಜನಸಂಖ್ಯೆಗೆ ಹೋಲಿಸಿದರೆ ಅವರಿಗೆ ಸಿಕ್ಕಿರುವುದು ಸಿಂಹಪಾಲು. ಲಿಂಗಾಯತ, ಒಕ್ಕಲಿಗ ಅಭ್ಯರ್ಥಿಗಳಲ್ಲಿ ನಾಯಕತ್ವ ಗುಣಲಕ್ಷಣಗಳಿರುವ ಎಲ್ಲರನ್ನೂ ವಯಸ್ಸಿನ ಹಿರಿತನ ಅಥವಾ ಇನ್ನಿತರ ಕಾರಣಗಳನ್ನು ಮುಂದೊಡ್ಡಿ ನಯವಾಗಿ ಬದಿಗೆ ಸರಿಸಲಾಗಿದೆ. ಬ್ರಾಹ್ಮಣ ಸಮುದಾಯದಲ್ಲಿ ಮುಂಚೂಣಿಯಲ್ಲಿರುವ ಹಲವು 'ಸಜ್ಜನ ನಾಯಕ'ರನ್ನು ಉಳಿಸಿಕೊಳ್ಳಲಾಗಿದೆ.

ಬಿಜೆಪಿಯೊಳಗೆ ಶೂದ್ರ ಸಮುದಾಯದಿಂದ ಬಂದ ನಾಯಕರಿಗೆ 'ಸಜ್ಜನ ನಾಯಕ' ಎಂದು ಗುರುತಿಸಿಕೊಳ್ಳುವ ಅವಕಾಶವಿರುವುದಿಲ್ಲ. ಬಿಜೆಪಿಯನ್ನು ಕಟ್ಟಿ ಬೆಳೆಸಿದ, ಬಿಜೆಪಿಯ ಪಾಲಿಗೆ ಅನಿವಾರ್ಯವಾಗಿದ್ದ ಹಿರಿಯ ನಾಯಕರೆಲ್ಲ ಈ ಬಾರಿಯ ಚುನಾವಣಾ ಫಲಿತಾಂಶದ ಬಳಿಕ ಮೂಲೆಗುಂಪಾಗಲಿದ್ದಾರೆ. ಬಿಜೆಪಿಯೊಳಗಿನ ಚುಕ್ಕಾಣಿಗಾಗಿ ಲಿಂಗಾಯತ ಮತ್ತು ಬ್ರಾಹ್ಮಣ ಶಕ್ತಿ ಕೇಂದ್ರಗಳ ನಡುವಿನ ತಿಕ್ಕಾಟ ಇಂದು ನಿನ್ನೆಯದಲ್ಲ. ಬ್ರಾಹ್ಮಣ ಲಾಬಿಯ ಹಿಂದೆ ಆರೆಸ್ಸೆಸ್ ನಿಂತಿದ್ದರೆ, ಲಿಂಗಾಯತ ಶಕ್ತಿಯ ನೇತೃತ್ವವನ್ನು ಯಡಿಯೂರಪ್ಪ ವಹಿಸಿಕೊಂಡಿದ್ದರು. ಅವರ ಬೆನ್ನಿಗೆ ಲಿಂಗಾಯತ ಮಠಗಳು ನಿಂತಿದ್ದವು. ರಾಜ್ಯಾದ್ಯಂತ ಬಿಜೆಪಿಯನ್ನು ಸಂಘಟಿಸಿ, ಕಟ್ಟಿ ಬೆಳೆಸಿದ ಹೆಗ್ಗಳಿಕೆ ಯಡಿಯೂರಪ್ಪ ಮತ್ತು ಅವರ ಹಿಂಬಾಲಕರಿಗೆ ಸೇರಬೇಕು. ರಾಜ್ಯ ಬಿಜೆಪಿಯೆನ್ನುವುದು ಲಿಂಗಾಯತ ಮತ್ತು ಒಕ್ಕಲಿಗ ನಾಯಕರು ಸೇರಿ ಕಟ್ಟಿದ ಹುತ್ತ. ಆದರೆ ಹುತ್ತಗಳಿರುವುದು ಅಂತಿಮವಾಗಿ ನಾಗರಗಳ ವಾಸಕ್ಕೆ ಎನ್ನುವುದು ಗೆದ್ದಲಿಗೆ ತಿಳಿದಿರುವುದಿಲ್ಲ.

ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬರುತ್ತಿದ್ದಂತೆಯೇ, ಆರೆಸ್ಸೆಸ್ ಒಳಗಿರುವ ಬ್ರಾಹ್ಮಣ್ಯ ಶಕ್ತಿ ಮುಖ್ಯಮಂತ್ರಿ ಸ್ಥಾನಕ್ಕೆ ಕಣ್ಣು ಹಾಕಿತು.ದಿವಂಗತ ಅನಂತಕುಮಾರ್ ಅವರು ದಿಲ್ಲಿಯ ವರಿಷ್ಠರ ಬಲದಿಂದ ಮುಖ್ಯಮಂತ್ರಿಯಾಗಲು ಗರಿಷ್ಠ ಪ್ರಯತ್ನ ನಡೆಸಿದರು. ಯಡಿಯೂರಪ್ಪ ರ ಬೆನ್ನಿಗೆ ಲಿಂಗಾಯತ ಸ್ವಾಮೀಜಿಗಳು ಬಲವಾಗಿ ನಿಲ್ಲದೇ ಇದ್ದಿದ್ದರೆ, ಯಡಿಯೂರಪ್ಪ ಜಾಗದಲ್ಲಿ ಅನಂತಕುಮಾರ್ ಅಥವಾ ಸಂತೋಷ್ ಇಂದು ಕಂಗೊಳಿಸಿ ಬಿಡುತ್ತಿದ್ದರು. ಬಿಜೆಪಿಯಲ್ಲಿ ತನ್ನ ಸ್ಥಾನಮಾನವನ್ನು ಗಟ್ಟಿಯಾಗಿಸಿಕೊಳ್ಳಲು ಲಿಂಗಾಯತ ಧರ್ಮವನ್ನು ಯಡಿಯೂರಪ್ಪ ಸರ್ವ ರೀತಿಯಲ್ಲಿ 'ಬಳಸಿ'ಕೊಂಡರು. ಒಂದು ರೀತಿಯಲ್ಲಿ ಲಿಂಗಾಯತ ಧರ್ಮವನ್ನು ಆರೆಸ್ಸೆಸ್‌ನ ವೈದಿಕ ಶಕ್ತಿಗಳಿಗೆ ಬಲಿಕೊಟ್ಟರು. ಇಷ್ಟು ಮಾಡಿದ ಬಳಿಕವೂ ಯಡಿಯೂರಪ್ಪ ಅವರನ್ನು ಐದು ವರ್ಷ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಲು ಆರೆಸ್ಸೆಸ್ ಅನುವು ಮಾಡಿಕೊಡಲಿಲ್ಲ. ಅವರು ನೆಮ್ಮದಿಯಿಂದ ಆಡಳಿತ ನಡೆಸದಂತೆ ಆರೆಸ್ಸೆಸ್ ಭಾರೀ ಕಿರುಕುಳವನ್ನು ನೀಡಿತು. ಇದನ್ನು ಸ್ವತಃ ಯಡಿಯೂರಪ್ಪ ಅವರೇ ಒಪ್ಪಿಕೊಂಡಿದ್ದಾರೆ.

ಯಡಿಯೂರಪ್ಪ ಅವರನ್ನು ಒಂದು ಹಂತದಲ್ಲಿ ಬದಿಗೆ ಸರಿಸಿ ಆರೆಸ್ಸೆಸ್ ಬಿಜೆಪಿಯನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳುವ ಪ್ರಯತ್ನ ನಡೆಸಿದಾಗ ಯಡಿಯೂರಪ್ಪ ಪಕ್ಷ ತೊರೆದು ಕೆಜೆಪಿಯನ್ನು ಕಟ್ಟಿದರು. ಅವರೊಂದಿಗೆ ರಾಜ್ಯದ ಲಿಂಗಾಯತ ಮತಗಳೂ ವರ್ಗಾವಣೆಗೊಂಡವು. ಯಡಿಯೂರಪ್ಪ ಇಲ್ಲದ ಬಿಜೆಪಿ ರಾಜ್ಯದಲ್ಲಿ ಸಂಪೂರ್ಣ ಮಣ್ಣು ಮುಕ್ಕಿತು. ಇದರಿಂದ ಎಚ್ಚೆತ್ತುಕೊಂಡ ದಿಲ್ಲಿ ವರಿಷ್ಠರು ಮತ್ತೆ ಯಡಿಯೂರಪ್ಪರನ್ನು ಪಕ್ಷಕ್ಕೆ ಆಹ್ವಾನಿಸಿದರು. ಕೊನೆಗೂ ಬಿಜೆಪಿಯ ಶಕ್ತಿ ಕೇಂದ್ರವಾಗಿ ಯಡಿಯೂರಪ್ಪ ಮತ್ತು ಅವರ ಬೆನ್ನಿಗೆ ನಿಂತ ಲಿಂಗಾಯತ ಮಠಗಳನ್ನು ಒಪ್ಪಿಕೊಳ್ಳಬೇಕಾಯಿತು. ಇದರ ನಡುವೆಯೇ ಆರೆಸ್ಸೆಸ್ ಪ್ರಹ್ಲಾದ್ ಜೋಷಿ, ತೇಜಸ್ವಿ ಸೂರ್ಯ, ಸಂತೋಷ್ ಮೂಲಕ ಬಿಜೆಪಿಯನ್ನು ನಿಯಂತ್ರಿಸುವ ಪ್ರಯತ್ನ ಮುಂದುವರಿಸುತ್ತಲೇ ಬಂತು. ಯಡಿಯೂರಪ್ಪ ಅವರ ಸ್ವಯಂ ನಿವೃತ್ತಿಯ ಕ್ಷಣಗಳಿಗಾಗಿ ಅದು ಕಾಯುತ್ತಿತ್ತು. ಇದೀಗ ಆ ಸುದೀರ್ಘ ಕಾಯುವಿಕೆ ಫಲಕೊಡುವ ಹಂತಕ್ಕೆ ಬಂದು ನಿಂತಿದೆ. ಯಡಿಯೂರಪ್ಪ ಅವರು ರಾಜಕೀಯ ನಿವೃತ್ತಿಯಾದ ಬೆನ್ನಿಗೇ ಅವರ ತಲೆಮಾರಿನ ಎಲ್ಲ ನಾಯಕರನ್ನು ನಿವಾರಿಸುವ ಪ್ರಯತ್ನ ನಡೆದಿದೆ. ಈಶ್ವರಪ್ಪ, ಜಗದೀಶ್ ಶೆಟ್ಟರ್ ಸೇರಿದಂತೆ ಹಲವು ಹಿರಿಯರು ಈ ಬಾರಿ ಟಿಕೆಟ್ ತಪ್ಪಿಸಿಕೊಂಡಿದ್ದಾರೆ. ಕೆಲವರು ಅದಕ್ಕಾಗಿ ತಮ್ಮ ಆಘಾತವನ್ನು ವ್ಯಕ್ತಪಡಿಸಿದ್ದಾರೆ. ಆದರೆ ರಾಜ್ಯ ಬಿಜೆಪಿ ಲಿಂಗಾಯತ ಹೆದ್ದಾರಿಯಿಂದ ಆರೆಸ್ಸೆಸ್‌ನ ಅಗ್ರಹಾರದ ಕಡೆಗೆ ಅಪಾಯಕಾರಿ ತಿರುವೊಂದನ್ನು ತೆಗೆದುಕೊಳ್ಳುತ್ತಿರುವುದನ್ನು ಈ ಹಿರಿಯರು ಗಮನಿಸಲೇಬೇಕಾಗಿದೆ.
 
ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ದೂರವಿಡುವ ಸಂದರ್ಭದಲ್ಲಿ ಲಿಂಗಾಯತ ಸಮುದಾಯಕ್ಕೆ ಸೇರಿದ ಶೆಟ್ಟರ್, ಬೊಮ್ಮಾಯಿ ಸೇರಿದಂತೆ ಹಲವು ಲಿಂಗಾಯತ ಪ್ರಮುಖರನ್ನು ಬಿಜೆಪಿ ಬಳಸಿಕೊಂಡಿದೆ. ಯಡಿಯೂರಪ್ಪರ ವರ್ಚಸ್ಸಿಗೆ ಹೋಲಿಸಿದರೆ, ಇವರೆಲ್ಲ ಬೇಕೆಂದಾಗ ಬಳಸಿ ಎಸೆಯಬಹುದಾದ ಬಾಳೆಯೆಲೆಗಳು ಎನ್ನುವುದು ಕೇಶವಕೃಪಾಕ್ಕೆ ಚೆನ್ನಾಗಿ ಗೊತ್ತಿದೆ. ವಯಸ್ಸನ್ನು ಮುಂದಿರಿಸಿ ಯಡಿಯೂರಪ್ಪ ಅವರಿಂದ 'ರಾಜಕೀಯ ನಿವೃತ್ತಿ' ಘೋಷಿಸುವಲ್ಲಿ ಕೇಶವ ಕೃಪಾ ಇದೀಗ ಯಶಸ್ವಿಯಾಗಿದೆ. ಯಡಿಯೂರಪ್ಪ ಇನ್ನು ಮುಂದೆ ತನ್ನ ಪುತ್ರನ ಮೂಲಕ ಬಿಜೆಪಿಯಲ್ಲಿ ಚದುರಂಗದ ಕಾಯಿಯನ್ನು ಮುನ್ನಡೆಸಲಿದ್ದಾರೆ. ಯಡಿಯೂರಪ್ಪ ಇಲ್ಲದ ನಿರ್ವಾತ ಜಾಗದಲ್ಲಿ ಕೇಶವ ಕೃಪಾ ತನ್ನ ಜನರನ್ನು ತುಂಬಿಸಿ ಭವಿಷ್ಯದಲ್ಲಿ ರಾಜ್ಯ ಬಿಜೆಪಿಯನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಈ ಬಾರಿಯ ಚುನಾವಣೆಯಲ್ಲಿ ಸಿದ್ಧತೆ ನಡೆಸುತ್ತಿದೆ. ಚುನಾವಣೆಯ ಗೆಲುವಿಗಿಂತಲೂ, ಈ ಅಪಾಯಕಾರಿ ತಿರುವನ್ನು ಯಶಸ್ವಿಯಾಗಿ ದಾಟುವುದು ಬಿಜೆಪಿ ವರಿಷ್ಠರ ನಿಜವಾದ ಗುರಿ.

ಒಮ್ಮೆ ರಾಜ್ಯ ಬಿಜೆಪಿಯ ಶಕ್ತಿ ಕೇಂದ್ರವಾಗಿ ಪೂರ್ಣ ಪ್ರಮಾಣದಲ್ಲಿ ಆರೆಸ್ಸೆಸ್ ಗುರುತಿಸಿಕೊಂಡರೆ, ನಿಧಾನಕ್ಕೆ ಯಡಿಯೂರಪ್ಪ, ಶೆಟ್ಟರ್ ಮೊದಲಾದವರ ಜಾಗದಲ್ಲಿ ಸೂರ್ಯ, ಸೂಲಿಬೆಲೆಗಳು ತುಂಬಿ ರಾಜ್ಯವನ್ನು ಅಧ್ವಾನಗೊಳಿಸಲಿದ್ದಾರೆ. ಒಟ್ಟಿನಲ್ಲಿ ರಾಜ್ಯವನ್ನು ಉತ್ತರಪ್ರದೇಶವಾಗಿಸುವ ಆರೆಸ್ಸೆಸ್‌ನ ನಾಯಕರ ಕನಸಿಗೆ ರೆಕ್ಕೆ ಬಂದಿದೆ. ಕ್ರಿಮಿನಲ್‌ಗಳಿಗೆ, ಭ್ರಷ್ಟರಿಗೆ ಟಿಕೆಟ್ ನೀಡಲು ಅದು ಯಾವ ರೀತಿಯಲ್ಲೂ ಹಿಂಜರಿಕೆ ತೋರಿಸಿಲ್ಲ. ಇದೇ ಸಂದರ್ಭದಲ್ಲಿ ಕೋಮು ಹಿಂಸಾಚಾರದಲ್ಲಿ ಗುರುತಿಸಿಕೊಂಡಿರುವ ಶೂದ್ರ ಸಮುದಾಯದ ಯುವಕರಿಗೂ ಆದ್ಯತೆಯನ್ನು ನೀಡಿದೆ. ಇವರೆಲ್ಲರನ್ನು ಆರೆಸ್ಸೆಸ್‌ನೊಳಗಿರುವ ಬ್ರಾಹ್ಮಣ್ಯ ಶಕ್ತಿ ಮುಂದಿನ ದಿನಗಳಲ್ಲಿ ನಿಯಂತ್ರಿಸಲಿದೆ. ಒಟ್ಟಿನಲ್ಲಿ ಈ ಬಾರಿಯ ಚುನಾವಣೆ ಮುಗಿಯುವ ಹೊತ್ತಿಗೆ ಬಿಜೆಪಿಯ ಶಕ್ತಿಕೇಂದ್ರವಾಗಿ ಲಿಂಗಾಯತ ಮಠಗಳ ಬದಲಿಗೆ ಕೇಶವಕೃಪಾ ಅಧಿಕೃತವಾಗಿ ಗುರುತಿಸಿಕೊಳ್ಳಲಿದೆ

Similar News