ದುಬೈ ವಸತಿ ಕಟ್ಟಡದಲ್ಲಿ ಭಾರೀ ಬೆಂಕಿ: ನಾಲ್ವರು ಭಾರತೀಯರು ಸೇರಿದಂತೆ 16 ಮಂದಿ ಮೃತ್ಯು
ದುಬೈ: ದುಬೈನ ವಸತಿ ಕಟ್ಟಡವೊಂದರಲ್ಲಿ ಭಾರೀ ಬೆಂಕಿ ಕಾಣಿಸಿಕೊಂಡ ಪರಿಣಾಮ ಮೃತಪಟ್ಟ 16 ಜನರಲ್ಲಿ ಕೇರಳದ ದಂಪತಿ ಸೇರಿದಂತೆ ಕನಿಷ್ಠ ನಾಲ್ವರು ಭಾರತೀಯರು ಸೇರಿದ್ದಾರೆ. ಒಂಬತ್ತು ಮಂದಿ ಗಾಯಗೊಂಡಿದ್ದಾರೆ ಎಂದು ಮಾಧ್ಯಮ ವರದಿಯೊಂದು ರವಿವಾರ ತಿಳಿಸಿದೆ.
ದುಬೈನ ಅಲ್ ರಾಸ್‌ನಲ್ಲಿರುವ ಕಟ್ಟಡವೊಂದರಲ್ಲಿ ಶನಿವಾರ ಮಧ್ಯಾಹ್ನ 12.35 ಕ್ಕೆ ಬೆಂಕಿ ಕಾಣಿಸಿಕೊಂಡ ಬಗ್ಗೆ ದುಬೈ ಸಿವಿಲ್ ಡಿಫೆನ್ಸ್ ಆಪರೇಷನ್ ರೂಮ್‌ಗೆ ತಿಳಿಸಲಾಗಿದೆ ಎಂದು ಗಲ್ಫ್ ನ್ಯೂಸ್ ವರದಿ ಮಾಡಿದೆ.
ಕಟ್ಟಡದ ನಾಲ್ಕನೇ ಮಹಡಿಯಲ್ಲಿ ಭಾರೀ ಬೆಂಕಿ ಕಾಣಿಸಿಕೊಂಡಿತು ಹಾಗೂ ಇತರ ಪ್ರದೇಶಗಳಿಗೆ ಹರಡಲು ಆರಂಭಿಸಿತು ಎಂದು ಪತ್ರಿಕೆ ಹೇಳಿದೆ.
ದುಬೈ ಸಿವಿಲ್ ಡಿಫೆನ್ಸ್ ಪ್ರಧಾನ ಕಛೇರಿಯ ತಂಡವು ಬೆಂಕಿಯ ಸ್ಥಳಕ್ಕೆ ಆಗಮಿಸಿ ಕಟ್ಟಡದಲ್ಲಿನ ನಿವಾಸಿಗಳನ್ನು ಸ್ಥಳಾಂತರಿಸಲು ಆರಂಭಿಸಿತು.
ಪೋರ್ಟ್ ಸಯೀದ್ ಅಗ್ನಿಶಾಮಕ ಠಾಣೆ ಹಾಗೂ ಹಮ್ರಿಯಾ ಅಗ್ನಿಶಾಮಕ ಠಾಣೆಯ ತಂಡಗಳನ್ನು ಸಹ ಕರೆಸಲಾಯಿತು.
ಮಧ್ಯಾಹ್ನ 2:42ಕ್ಕೆ (ಸ್ಥಳೀಯ ಕಾಲಮಾನ) ಬೆಂಕಿ ನಂದಿಸಲಾಯಿತು ಎಂದು ಪತ್ರಿಕೆ ತಿಳಿಸಿದೆ.
ಕಟ್ಟಡಕ್ಕೆ ಸಾಕಷ್ಟು ಸುರಕ್ಷತಾ ವ್ಯವಸ್ಥೆಯ ಕೊರತೆ ಇತ್ತು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಬೆಂಕಿಯ ಕಾರಣಗಳ ಬಗ್ಗೆ ವಿವರವಾದ ವರದಿಯನ್ನು ನೀಡಲು ಅಧಿಕಾರಿಗಳು ಸಮಗ್ರ ತನಿಖೆ ನಡೆಸುತ್ತಿದ್ದಾರೆ ಎಂದು ದುಬೈ ಸಿವಿಲ್ ಡಿಫೆನ್ಸ್ ವಕ್ತಾರರು ತಿಳಿಸಿದ್ದಾರೆ.