ಸೇನಾಪತಿಯಿಲ್ಲದೆ ಯುದ್ಧ ಎದುರಿಸುತ್ತಿರುವ ಬಿಜೆಪಿ

Update: 2023-04-17 04:39 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ 

Full View

ಯುದ್ಧ ಘೋಷಣೆಯಾಗಿದೆ. ಆದರೆ ಯುದ್ಧವನ್ನು ಮುನ್ನಡೆಸುವ ಸೇನಾಪತಿ ಯಾರು ಎನ್ನುವುದರ ಬಗ್ಗೆ ಬಿಜೆಪಿಯೊಳಗೆ ಗೊಂದಲ ಬಗೆ ಹರಿದಿಲ್ಲ. ಬಿಜೆಪಿಯ ರಾಜ್ಯಾಧ್ಯಕ್ಷರಾಗಿ ನಳಿನ್ ಕುಮಾರ್ ಕಟೀಲು ಕಾರ್ಯ ನಿರ್ವಹಿಸುತ್ತಿದ್ದಾರಾದರೂ, ಅವರ ಹಿಂದೆ ನಿಂತು ಬಾಣ ಬಿಡುವ ಅರ್ಜುನ ಯಾರು? ಎನ್ನುವುದು ಇನ್ನೂ ಅಂತಿಮವಾಗಿಲ್ಲ. ಶಂಖ ಊದಿದ ಬೆನ್ನಿಗೇ ಬಿಜೆಪಿಯ ಹಿರಿಯ ನಾಯಕರು ಒಬ್ಬೊಬ್ಬರಾಗಿ ಶಸ್ತ್ರತ್ಯಾಗ ಮಾಡುತ್ತಿದ್ದಾರೆ. ಅಥವಾ ವಿರೋಧಿ ಪಾಳಯವನ್ನು ಸೇರುತ್ತಿದ್ದಾರೆ. ಈಶ್ವರಪ್ಪ ರಾಜಕೀಯ ನಿವೃತ್ತಿಯನ್ನು ಪಡೆದಿದ್ದಾರೆ. ಅವರ ಪುತ್ರನಿಗೆ ಟಿಕೆಟ್ ಸಿಗದೇ ಇದ್ದರೆ, ಅವರು ಬಿಜೆಪಿಯ ವಿರುದ್ಧವೇ ಬಿಲ್ಲನ್ನು ಎದೆಯೇರಿಸಲಿದ್ದಾರೆ. ಸವದಿ ಕಾಂಗ್ರೆಸ್ ಸೇರಿ ಬಿಜೆಪಿಯ ವಿರುದ್ಧ ಬಾಣವನ್ನು ಹೂಡಿಯಾಗಿದೆ. ಜಗದೀಶ್ ಶೆಟ್ಟರ್ ಕೂಡ ಬಿಜೆಪಿ ಅಂಗಡಿಯ ಶಟರ್ ಎಳೆಯುವ ಮಾತನ್ನಾಡಿದ್ದಾರೆ. ಸದ್ಯದ ಬಿಜೆಪಿಯೊಳಗಿನ ರಾಜಕೀಯ ಬೆಳವಣಿಗೆಗಳನ್ನು ಅವರು 'ಲಿಂಗಾಯತ-ಬ್ರಾಹ್ಮಣ'ರ ನಡುವಿನ ಸಂಘರ್ಷವಾಗಿ ವಿಶ್ಲೇಷಿಸಿದ್ದಾರೆ. ಬಿಜೆಪಿಯು ಲಿಂಗಾಯತ ಸಮುದಾಯದ ನಾಯಕರನ್ನು ಮೂಲೆಗುಂಪು ಮಾಡಲು ಯತ್ನಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ. ಬಿಜೆಪಿಯನ್ನು ಕಟ್ಟಿ ಬೆಳೆಸಿದ ಹಲವು ಹಿರಿಯ ನಾಯಕರು ಬಿಜೆಪಿಯಲ್ಲಿ ಇದ್ದೂ ಇಲ್ಲದಂತಿದ್ದಾರೆ. ಕೆಲವರಂತೂ ಬಿಜೆಪಿಯೊಳಗಿದ್ದೇ ಬಿಜೆಪಿಯನ್ನು ಸೋಲಿಸುವ ಸಂಚು ನಡೆಸುತ್ತಿದ್ದರೆ, ಇನ್ನು ಕೆಲವರು ಗಾಳಿ ಬಂದತ್ತ ತೂಗುತ್ತಿದ್ದಾರೆ. ಸಮರ್ಪಣಾ ಭಾವದಿಂದ ಬಿಜೆಪಿಯೊಳಗೆ ತೊಡಗಿಸಿಕೊಳ್ಳುವ ಉತ್ಸಾಹವನ್ನು ಅವರು ಕಳೆದುಕೊಂಡಿದ್ದಾರೆ. ಆರೆಸ್ಸೆಸ್ ಬಿಜೆಪಿಯೊಳಗೆ ದೊಡ್ಡದೊಂದು ಶಸ್ತ್ರಕ್ರಿಯೆಗೆ ಇಳಿದಿದೆ. ತನಗೆ ಬೇಡವಾದುದನ್ನು ಕತ್ತರಿಸಿ ಎಸೆಯುತ್ತಿದೆ. ಕತ್ತರಿಸಿದ ಆ ಭಾಗಕ್ಕೆ ತನ್ನ ಸಂಗ್ರಹದಲ್ಲಿರುವ ಕ್ಯಾನ್ಸರ್ ತುಂಡುಗಳನ್ನು ಎಲ್ಲಿಗೆ, ಹೇಗೆಲ್ಲ ಜೋಡಿಸಬಹುದು ಎನ್ನುವುದನ್ನು ಅದು ಯೋಚಿಸುತ್ತಿದೆ.

ಸದ್ಯಕ್ಕೆ ರಾಜ್ಯ ಬಿಜೆಪಿಯು ಯಡಿಯೂರಪ್ಪ ಅವರ ನೇತೃತ್ವದಲ್ಲಿ ಚುನಾವಣೆ ಎದುರಿಸುತ್ತಿದೆ ಎಂದು ನಂಬಿಸಲಾಗಿದೆ. ತನ್ನ ಮಗನ ಮೂಲಕ ಬಿಜೆಪಿಯೊಳಗೆ ನಿಯಂತ್ರಣವನ್ನು ಸಾಧಿಸಿಕೊಳ್ಳುವ ಗುರಿಯನ್ನಿಟ್ಟು ಅವರು ವರಿಷ್ಠರು ಕೊಟ್ಟ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ. ಬಿಜೆಪಿಯ ಮರುಸಂಘಟನೆಯಲ್ಲಿ ಪೂರ್ಣ ಪ್ರಮಾಣದಲ್ಲಿ ತೊಡಗಿಕೊಳ್ಳುವ ಇರಾದೆ ಅವರಿಗೆ ಇದ್ದಂತಿಲ್ಲ. ಬಿಜೆಪಿ ಈ ಹಿಂದೆ ಅವರಿಗೆ ಎರಡೆರಡು ಬಾರಿ ವಂಚಿಸಿದೆ. ಪಕ್ಷವನ್ನು ಕಟ್ಟಿ ಬೆಳೆಸಿ, ಅಧಿಕಾರಕ್ಕೇರಿಸಿದ ಹೆಗ್ಗಳಿಕೆ ಯಡಿಯೂರಪ್ಪರದ್ದಾಗಿದ್ದರೂ ಅವರನ್ನು ಪೂರ್ಣಾವಧಿ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಲು ಬಿಜೆಪಿ ವರಿಷ್ಠರು ಅವಕಾಶ ನೀಡಲಿಲ್ಲ. ಈ ಕಾರಣಕ್ಕಾಗಿಯೇ ಒಮ್ಮೆ ಬಿಜೆಪಿಯನ್ನು ತೊರೆದು ಹೊಸ ಪಕ್ಷವನ್ನು ಕಟ್ಟಬೇಕಾಯಿತು. ಯಡಿಯೂರಪ್ಪರ ಬೆನ್ನಿಗಿರುವ ಲಿಂಗಾಯತ ಲಾಬಿಗೆ ಮಣಿದು, ಯಡಿಯೂರಪ್ಪರನ್ನು ಅನಿವಾರ್ಯವಾಗಿ ಬಿಜೆಪಿ ವರಿಷ್ಠರು ಸಹಿಸಿಕೊಂಡಿದ್ದಾರೆ. ಬಿಜೆಪಿಯ 'ಬಳಸಿ ಎಸೆಯುವ' ತಂತ್ರದ ಅರಿವಿದ್ದೇ ಯಡಿಯೂರಪ್ಪ ಈ ಬಾರಿ ಹೆಜ್ಜೆಯಿಡುತ್ತಿದ್ದಾರೆ.ಎರಡೆರಡು ಬಾರಿ ಬೆನಿಗ್ನೆ ಚೂರಿ ಹಾಕಿಸಿಕೊಂಡಿರುವ ಯಡಿಯೂರಪ್ಪ ಇನ್ನೊಮ್ಮೆ ತಾನಾಗಿಯೇ ಬೆನ್ನನ್ನು ಬಿಜೆಪಿ ವರಿಷ್ಠರಿಗೆ ಒಪ್ಪಿಸಲಾರರು. ಸದ್ಯದ ಬಿಜೆಪಿಯೊಳಗಿನ ಹಾಹಾಕಾರಗಳನ್ನು ಯಡಿಯೂರಪ್ಪ ಸಂಭ್ರಮಿಸುತ್ತಿರುವಂತಿದೆ. ಈಶ್ವರಪ್ಪ, ಸವದಿ, ಶೆಟ್ಟರ್ ಮೊದಲಾದವರೆಲ್ಲ ಜೊತೆ ಸೇರಿ ಒಂದು ಕಾಲದಲ್ಲಿ ಇದೇ ಯಡಿಯೂರಪ್ಪ ಅವರಿಗೆ ವಂಚಿಸಿದ್ದರು. ಯಡಿಯೂರಪ್ಪ ಅವರ ಕೈಯಿಂದ ಅಧಿಕಾರವನ್ನು ನಿರ್ದಯವಾಗಿ ಕಿತ್ತು ಆ ಸ್ಥಾನವನ್ನು ಅಲಂಕರಿಸಿದ್ದರು. ಇಂದು ಶೆಟ್ಟರ್, ಈಶ್ವರಪ್ಪ ಯಡಿಯೂರಪ್ಪ ಸ್ಥಾನದಲ್ಲಿ ನಿಂತಿದ್ದಾರೆ.

ಶೆಟ್ಟರ್ ರಾಜೀನಾಮೆಯನ್ನು ''ಪಕ್ಷಕ್ಕೆ ಮಾಡಿದ ದ್ರೋಹ. ಜನರು ಅವರನ್ನು ಕ್ಷಮಿಸಲಾರರು' ಎಂದು ವ್ಯಾಖ್ಯಾನಿಸಿದ್ದಾರೆ. ಯಡಿಯೂರಪ್ಪ ಅವರು ಬಿಜೆಪಿಗೆ ರಾಜೀನಾಮೆ ನೀಡಿ, ಕೆಜೆಪಿಯನ್ನು ಕಟ್ಟಿದಾಗ ಶೆಟ್ಟರ್ ಅವರು ಕೂಡ ಇದೇ ಹೇಳಿಕೆಯನ್ನು ನೀಡಿದ್ದರು. ಕೆಲವು ತಿಂಗಳ ಹಿಂದೆ ಯಡಿಯೂರಪ್ಪ ರಾಜಕೀಯ ನಿವೃತ್ತಿ ಘೋಷಿಸಿದಾಗ, ಈಶ್ವರಪ್ಪ, ಶೆಟ್ಟರ್ ಮೊದಲಾದ ನಾಯಕರು ತಮ್ಮ ದಾರಿ ಸುಗಮವಾಯಿತು ಎಂದು ಭಾವಿಸಿದ್ದರೇ ಹೊರತು, ಅವರ ಸ್ಥಿತಿ ತಮಗೂ ಒದಗಬಹುದು ಎಂದು ಊಹಿಸಿರಲಿಲ್ಲ. ಇಂದು ಶೆಟ್ಟರ್, ಈಶ್ವರಪ್ಪ ಕಾಲ ಬುಡಕ್ಕೆ ನೀರು ಬಂದಿದೆ. ಯಡಿಯೂರಪ್ಪ ಆಘಾತಕ್ಕೊಳಗಾದವರಂತೆ ಅಭಿನಯಿಸುತ್ತಿದ್ದಾರೆ. ಈ ಎಲ್ಲ ಬೆಳವಣಿಗೆಗಳ ಹಿಂದೆ ಆರೆಸ್ಸೆಸ್‌ನ ಪಾತ್ರದ ಕುರಿತು ಅವರಿಗೆ ಚೆನ್ನಾಗಿಯೇ ಅರಿವಿದೆ. ಆಂಗ್ಲ ಪತ್ರಿಕೆಯೊಂದಕ್ಕೆ ಸಂದರ್ಶನವನ್ನು ನೀಡಿರುವ ಯಡಿಯೂರಪ್ಪ ''ಹಿಜಾಬ್, ಹಲಾಲ್ ಕಟ್ ಮೊದಲಾದ ವಿವಾದಗಳು ಅನಗತ್ಯ. ನಾನದನ್ನು ಬೆಂಬಲಿಸುವುದಿಲ್ಲ' ಎಂದು ಸ್ಪಷ್ಟಪಡಿಸಿದ್ದಾರೆ. ಇದು ಆರೆಸ್ಸೆಸ್‌ಗೆ ಅವರು ರವಾನಿಸಿರುವ ಸಂದೇಶವಾಗಿದೆ.

''ಆರೆಸ್ಸೆಸ್‌ನ ದ್ವೇಷ ರಾಜಕಾರಣದ ಜೊತೆಗೆ ನಾನಿಲ್ಲ' ಎನ್ನುವ ಯಡಿಯೂರಪ್ಪ ಹೇಳಿಕೆಯಿಂದ, ಆರೆಸ್ಸೆಸ್ ಬೆರಳಲ್ಲಿ ತೋರಿಸಿದ್ದನ್ನು ನಡುಬಗ್ಗಿ ಸಿ ಮಾಡುತ್ತಾ ಬಂದಿರುವ ಬೊಮ್ಮಾಯಿಯವರಿಗೂ ಮುಜುಗರವಾಗಿದೆ. ಬಿಜೆಪಿ ಬಹುಮತವನ್ನು ತನ್ನದಾಗಿಸಿಕೊಂಡರೆ ತಾನಾಗಲಿ, ತನ್ನ ಮಗನಾಗಲಿ ಮುಖ್ಯಮಂತ್ರಿಯಾಗಲು ಸಾಧ್ಯವಿಲ್ಲ ಎನ್ನುವುದು ನಿಚ್ಚಳವಿರುವಾಗ, ಯಡಿಯೂರಪ್ಪ ಯಾಕಾದರೂ ಇನ್ನೊಬ್ಬರನ್ನು ಮುಖ್ಯಮಂತ್ರಿಯಾಗಿಸಲು ತನ್ನ ಮೈ ಕೈ ಕೆಸರು ಮಾಡಿಕೊಳ್ಳುತ್ತಾರೆ? ಆರೆಸ್ಸೆಸ್ ನಡೆಸುವ ತೆರೆ ಮರೆಯ ದ್ವೇಷ ರಾಜಕಾರಣಕ್ಕೆ ಹೆಗಲು ನೀಡುತ್ತಾರೆ? ನಾಳೆ ಅಗತ್ಯ ಬಿದ್ದರೆ ಬಿಜೆಪಿಯ ಒಂದು ಗುಂಪಿನ ಜೊತೆಗೆ ಸಿಡಿದು ಇತರ ಜಾತ್ಯತೀತ ಪಕ್ಷದ ಜೊತೆಗೆ ಕೈಜೋಡಿಸುವ ಸಂದರ್ಭಕ್ಕೂ ಅವರು ಸಿದ್ಧರಾಗಿ ಕೂತಿದ್ದಾರೆ.

ಸದ್ಯಕ್ಕೆ ಯಡಿಯೂರಪ್ಪ ಕೌರವರ ಸೇನಾಧಿಪತ್ಯವನ್ನು ವಹಿಸಿಕೊಂಡ ಭೀಷ್ಮನ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಕುರುಕ್ಷೇತ್ರದಲ್ಲಿ ಭೀಷ್ಮ ಕೌರವರ ಗೆಲುವಿಗಾಗಿ ಯುದ್ಧ ಮಾಡಲೇ ಇಲ್ಲ. ಆತನಿಗೆ ಪಾಂಡವರ ಮೇಲೆ ಒಲವು. ದುರ್ಯೋಧನನ ಪ್ರೀತಿ ಪಾತ್ರ ಶಕುನಿ ಮಾಮ ಕೂಡ ಕೌರವರ ನಾಶವನ್ನೇ ಬಯಸುತ್ತಿದ್ದ. ಒಂದು ಕಾಲದಲ್ಲಿ ತನ್ನ ಬೆನ್ನಿಗೆ ಇರಿದ ಸಹೋದ್ಯೋಗಿಗಳ ಇಂದಿನ ರಾಜೀನಾಮೆ ಪ್ರಹಸನಗಳನ್ನು ಆನಂದಿಸುತ್ತಾ, ಯಡಿಯೂರಪ್ಪ ಅವರು ರಾಜಕೀಯ ದಾಳಗಳನ್ನು ಹಾಕುತ್ತಿದ್ದಾರೆ. ಒಂದು ರೀತಿಯಲ್ಲಿ ಯಡಿಯೂರಪ್ಪ ಅವರೇ ಬಿಜೆಪಿಯ ಪತನಕ್ಕೆ ಮುನ್ನುಡಿ ಬರೆಯುತ್ತಿದ್ದಾರೆ. ಇತ್ತ ಸಂಚಿನ ಮನೆಯಲ್ಲಿ ಕುಳಿತು ಆರೆಸ್ಸೆಸ್ ವಿರೋಧಿಗಳೆಡೆಗೆ ಬಿಡುತ್ತಿರುವ ಬಾಣಗಳು ಬಿಜೆಪಿಯೊಳಗಿನ ಹಿರಿಯರನ್ನೇ ಇರಿಯುತ್ತಾ ಸಾಗುತ್ತಿವೆ. ಬಿಜೆಪಿ ಈ ಬಾರಿ ಪಡೆದುಕೊಳ್ಳುವುದಕ್ಕಿಂತ, ಕಳೆದುಕೊಳ್ಳುವುದೇ ಅಧಿಕ ಎನ್ನುವುದು ದಿನದಿಂದ ದಿನಕ್ಕೆ ಸ್ಪಷ್ಟವಾಗುತ್ತಿದೆ. ಬಹುಶಃ ಬಿಜೆಪಿಯನ್ನು ರಾಜ್ಯದಲ್ಲಿ ಹೊಸದಾಗಿ ತನ್ನ ಮೂಗಿನ ನೇರಕ್ಕೆ ಕಟ್ಟುವುದಕ್ಕೆ, ಬಿಜೆಪಿ ಈ ಬಾರಿ ನೆಲಸಮವಾಗುವುದು ಆರೆಸ್ಸೆಸ್‌ನ ಅಗತ್ಯವೂ ಕೂಡ ಆಗಿರಬಹುದು.

Similar News