ಉತ್ತರ ಪ್ರದೇಶದಲ್ಲಿ ಅರಾಜಕ ಪರಿಸ್ಥಿತಿ
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಕರ್ನಾಟಕವನ್ನು ಯೋಗಿ ಮಾದರಿ ರಾಜ್ಯವನ್ನಾಗಿ ಮಾಡುವುದಾಗಿ ಇಲ್ಲಿನ ಬಿಜೆಪಿ ನಾಯಕರು ಆಗಾಗ ಹೇಳುತ್ತಿರುತ್ತಾರೆ. ಮೊದಲು ಮೋದಿ ಮಾದರಿ ರಾಜ್ಯ ಎಂದು ಹೇಳುತ್ತಿದ್ದರು. ಈಗ ಯೋಗಿ ಮಾದರಿ ಎನ್ನುತ್ತಿದ್ದಾರೆ. ಇದರರ್ಥ ಇವರಿಗೆ ತಮ್ಮದೇ ಆದ ಮಾದರಿಯಾಗಲಿ, ದಾರಿಯಾಗಲಿ ಇಲ್ಲ. ಅಷ್ಟಕ್ಕೂ ಯೋಗಿ ಮಾದರಿ ಅಂದರೆ ಏನು ಎಂಬುದಕ್ಕೆ ಅಲ್ಲಿಂದ ಬಂದಿರುವ ವರದಿಗಳೇ ಸಾಕ್ಷಿಯಾಗಿವೆ. ಅಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದು ಬಿದ್ದಿದೆ. ಪೊಲೀಸರು ಮತ್ತು ಮಾಧ್ಯಮಗಳ ಪ್ರತಿನಿಧಿಗಳ ಎದುರಿಗೇ ಗುಂಡಿಕ್ಕಿ ಕೊಲ್ಲುವ ಘಟನೆಗಳು ನಡೆಯುತ್ತಿವೆ. ಮಾಜಿ ಸಂಸದ ಮತ್ತು ಪಾತಕಿ ಅತೀಕ್ ಅಹ್ಮದ್ ಮತ್ತು ಆತನ ಸಹೋದರ ಅಶ್ರಫ್ ಅಹ್ಮದ್ ಇತ್ತೀಚೆಗೆ ಪೊಲೀಸರ ವಶದಲ್ಲಿ ಇದ್ದಾಗಲೇ ಗುಂಡೇಟಿಗೆ ಬಲಿಯಾಗಿದ್ದಾರೆ. ಪ್ರಯಾಗ್‌ರಾಜ್‌ನಲ್ಲಿ ಪೊಲೀಸರ ಭದ್ರತೆಯಲ್ಲಿ ಅತೀಕ್ ಮತ್ತು ಅಶ್ರಫ್ ಅವರನ್ನು ವೈದ್ಯಕೀಯ ಪರೀಕ್ಷೆಗೆ ಕರೆದೊಯ್ಯುತ್ತಿರುವಾಗ ಪತ್ರಕರ್ತರ ಸೋಗಿನಲ್ಲಿ ಬಂದ ಮೂವರು ಏಕಾಏಕಿ ಗುಂಡಿನ ದಾಳಿ ನಡೆಸಿ ಅವರಿಬ್ಬರನ್ನು ಹತ್ಯೆ ಮಾಡಿದ್ದಾರೆ. ಈ ರೀತಿ ವಿಚಾರಣಾಧೀನ ಕೈದಿಗಳನ್ನು ಯಾರೋ ಬಂದು ಗುಂಡಿಕ್ಕಿ ಕೊಲ್ಲುವುದು ಯೋಗಿ ಮಾದರಿ ರಾಜ್ಯವಾಗಿರಬಹುದು.
ಅತೀಕ್ ಪುತ್ರ ಅಸದ್ ಅಹ್ಮದ್ ಮತ್ತು ಆತನ ಸ್ನೇಹಿತ ಗುಲಾಮ್ ಹಸನ್‌ನನ್ನು ಪೊಲೀಸರು ಮೊನ್ನೆಯಷ್ಟೇ ಎನ್‌ಕೌಂಟರ್ ಮಾಡಿ ಸಾಯಿಸಿದರು. ಇದರ ಮರುದಿನವೇ ಅತೀಕ್ ಮತ್ತು ಅಶ್ರಫ್‌ನನ್ನು ಗುಂಡಿಕ್ಕಿ ಸಾಯಿಸಲಾಗಿದೆ. ಹತ್ಯೆಗೀಡಾದವರು ಆರೋಪಿಗಳೇ ಆಗಿರಬಹುದು. ಆದರೆ ಅವರನ್ನು ವಿಚಾರಣೆ ನಡೆಸಿ ಶಿಕ್ಷೆ ಕೊಡಲು ನ್ಯಾಯಾಲಯಗಳಿಲ್ಲವೇ? ಪೊಲೀಸರು ಮತ್ತು ಯಾರೋ ದುಷ್ಕರ್ಮಿಗಳು ಆರೋಪಿಗಳಿಗೆ ಶಿಕ್ಷೆ ನೀಡಲು ಬಂದೂಕನ್ನು ಕೈಗೆತ್ತಿಕೊಂಡರೆ ನ್ಯಾಯಾಲಯಗಳಾದರೂ ಏಕಿರಬೇಕು?
ಯಾವುದೇ ಭದ್ರತಾ ಏರ್ಪಾಡು ಮಾಡದೆ ಇವರಿಬ್ಬರನ್ನು ವೈದ್ಯಕೀಯ ಚಿಕಿತ್ಸೆಗೆ ಕರೆದುಕೊಂಡು ಹೋಗಿದ್ದೇಕೇ? ಇದರ ಬಗ್ಗೆ ಮೊದಲೇ ಆಕ್ಷೇಪ ವ್ಯಕ್ತಪಡಿಸಿ ಅತೀಕ್ ಅಹ್ಮದ್ ಸುಪ್ರೀಂ ಕೋರ್ಟಿನ ಮೊರೆ ಹೊಗಿದ್ದ. ಆಗ ಸುಪ್ರೀಂ ಕೋರ್ಟ್ ರಾಜ್ಯ ಸರಕಾರ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುತ್ತದೆ ಎಂದು ಹೇಳಿತ್ತು. ಆದರೆ ಪೊಲೀಸ್ ರಕ್ಷಣೆಯಲ್ಲೇ ಇವರಿಬ್ಬರ ಹತ್ಯೆ ನಡೆದಿದೆ.
ಉತ್ತರ ಪ್ರದೇಶದಲ್ಲಿ ಎರಡನೇ ಬಾರಿ ಆದಿತ್ಯನಾಥ್ ಅಧಿಕಾರವನ್ನು ವಹಿಸಿಕೊಂಡ ನಂತರ ಎನ್‌ಕೌಂಟರ್ ಹತ್ಯೆಗಳು ಮತ್ತು ಶೂಟೌಟ್‌ಗಳು ಸಾಮಾನ್ಯವಾಗಿವೆ. ಈ ರೀತಿ ಜನರನ್ನು ಕೊಲ್ಲುವುದನ್ನೇ ಮಹಾ ಪರಾಕ್ರಮ ಎಂದು ಯೋಗಿ ಮತ್ತು ಆತನ ಶಿಷ್ಯರು ಹೇಳಿ ಕೊಳ್ಳುತ್ತಾರೆ. ಉತ್ತರ ಪ್ರದೇಶದ ಮಾದರಿಯನ್ನು ಎಲ್ಲ ರಾಜ್ಯಗಳು ಅನುಸರಿಸುವಂತೆ ಕರೆ ನೀಡುತ್ತಾರೆ. ಸ್ವತಃ ಮುಖ್ಯಮಂತ್ರಿ ಆದಿತ್ಯನಾಥ್ ‘‘ಅಪರಾಧ ಮಾಡಿದರೆ ನಿಮ್ಮನ್ನು ಹೊಡೆದು ಹಾಕುತ್ತೇವೆ’’ ಎಂದು ಬಹಿರಂಗವಾಗಿ ಹೇಳುತ್ತಾರೆ. ಆದರೆ ಅವರು ಹೊಡೆದು ಹಾಕುತ್ತಿರುವುದು ಒಂದೇ ಸಮುದಾಯದ ಜನರನ್ನು ಎಂಬುದು ಎಲ್ಲರಿಗೂ ತಿಳಿದ ಸಂಗತಿಯಾಗಿದೆ. ಆತ್ಮರಕ್ಷಣೆಯ ಹೆಸರಿನಲ್ಲಿ ಒಂದು ನಿರ್ದಿಷ್ಟ ಸಮುದಾಯದ ಜನರನ್ನು ನಕಲಿ ಎನ್‌ಕೌಂಟರ್ ಮಾಡಿ ಸಾಯಿಸಲಾಗುತ್ತಿದೆ ಎಂದು ಪ್ರತಿಪಕ್ಷಗಳ ನಾಯಕರು ಆರೋಪಗಳನ್ನು ಮಾಡುತ್ತಲೇ ಇದ್ದಾರೆ. ಎನ್‌ಕೌಂಟರ್ ವಿಷಯದಲ್ಲಿ ಉತ್ತರ ಪ್ರದೇಶದ ಸರಕಾರವು ಮಾರ್ಗಸೂಚಿಗಳನ್ನು ಪಾಲಿಸುತ್ತಿಲ್ಲ ಎಂದು ಕೇಂದ್ರ ಸರಕಾರದ ವರದಿಗಳೇ ಹೇಳುತ್ತಿವೆ.
ಯೋಗಿ ಆದಿತ್ಯನಾಥ್‌ರನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿ ಮಾಡಿದ್ದು ಆರೆಸ್ಸೆಸ್. ಸಂಘ ಪರಿವಾರಕ್ಕೆ ಇಂಥ ಸಂವಿಧಾನಕ್ಕೆ ಅಪಚಾರ ಮಾಡುವ ವ್ಯಕ್ತಿಗಳೇ ಬೇಕು. ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ನೇತೃತ್ವದ ಸರಕಾರ ಅಸ್ತಿತ್ವಕ್ಕೆ ಬಂದ ನಂತರ, ಅಂದರೆ ಕಳೆದ ಆರು ವರ್ಷಗಳಲ್ಲಿ ಪೊಲೀಸ್ ಎನ್‌ಕೌಂಟರ್‌ಗಳಲ್ಲಿ ೧೮೩ ಜನರನ್ನು ಕೊಲ್ಲಲಾಗಿದೆ ಎಂದು ಅಲ್ಲಿನ ಪೊಲೀಸ್ ಇಲಾಖೆಯೇ ಹೇಳಿಕೊಂಡಿದೆ. ಯಾವ ರಾಜ್ಯದಲ್ಲೂ ನಡೆಯದಷ್ಟು ಎನ್‌ಕೌಂಟರ್ ಹತ್ಯೆಗಳು ಅಲ್ಲಿ ನಡೆದಿವೆ. ಆದಿತ್ಯನಾಥ್ ೨೦೧೭ರಲ್ಲಿ ಅಧಿಕಾರಕ್ಕೆ ಬಂದ ಕೂಡಲೇ ಅಪರಾಧಿಗಳನ್ನು ನಿರ್ಮೂಲನೆ ಮಾಡಲು ಕರೆ ನೀಡಿದರು. ನಂತರ ಪೊಲೀಸರು ಕಾರ್ಯಾಚರಣೆಗೆ ಇಳಿದರು. ೨೦೧೭ರಲ್ಲೇ ೪೪ ಜನರನ್ನು ಎನ್‌ಕೌಂಟರ್ ಮಾಡಿ ಕೊಂದರು. ಪೊಲೀಸರ ಗುಂಡಿಗೆ ಬಲಿಯಾದವರಲ್ಲಿ ಮುಸಲ್ಮಾನರೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ ಎಂಬ ಸಮಾಜವಾದಿ ಹಾಗೂ ಬಹುಜನ ಸಮಾಜ ಪಕ್ಷಗಳ ಆರೋಪ ಸುಳ್ಳಲ್ಲ.
ಆರೋಪಿಗಳು ಅಥವಾ ಅಪರಾಧಿಗಳ ಜೊತೆಗೆ ಘರ್ಷಣೆ ನಡೆದಾಗ ಪೊಲೀಸರು ಸ್ವಯಂ ರಕ್ಷಣೆಗಾಗಿ ಗುಂಡು ಹಾರಿಸುವುದಕ್ಕೆ ಕಾನೂನಿನಲ್ಲಿ ಅವಕಾಶವಿದೆ. ಇದರ ಬಗ್ಗೆ ಆಕ್ಷೇಪವಿಲ್ಲ. ಆದರೆ ಉತ್ತರ ಪ್ರದೇಶದ ಎನ್‌ಕೌಂಟರ್‌ಗಳು ಹಾಗಿಲ್ಲ.
ಎನ್‌ಕೌಂಟರ್ ಹತ್ಯೆಗಳು ನಡೆದಾಗ ತಕ್ಷಣ ಎಫ್‌ಐಆರ್ ದಾಖಲಿಸಬೇಕು ಎಂದು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಮಾರ್ಗಸೂಚಿ ಹೇಳುತ್ತದೆ. ಎನ್‌ಕೌಂಟರ್‌ಗಳು ನಡೆದ ೪೮ ತಾಸುಗಳಲ್ಲಿ ಆಯೋಗಕ್ಕೆ ಈ ಬಗ್ಗೆ ಮಾಹಿತಿಯನ್ನು ನೀಡಬೇಕು. ಮೂರು ತಿಂಗಳ ಒಳಗಾಗಿ ತನಿಖಾ ವರದಿಗಳು ಮತ್ತು ವಿಧಿ ವಿಜ್ಞಾನ ಪರೀಕ್ಷೆಯ ವರದಿಗಳು ಮಾನವ ಹಕ್ಕುಗಳ ಆಯೋಗಕ್ಕೆ ತಲುಪಬೇಕು. ಪೊಲೀಸರಿಂದ ಅತಿರೇಕಗಳು ನಡೆದಿದ್ದರೆ ಅವರಿಗೆ ಶಿಕ್ಷೆಯಾಗಬೇಕು ಹಾಗೂ ಹತ್ಯೆಗೊಳಗಾದ ವ್ಯಕ್ತಿಯ ಕುಟುಂಬಕ್ಕೆ ಪರಿಹಾರವನ್ನು ನೀಡಬೇಕು ಎಂದು ಮಾನವ ಹಕ್ಕುಗಳ ಆಯೋಗದ ಮಾರ್ಗಸೂಚಿಗಳು ಹೇಳುತ್ತವೆ. ಆದರೆ ಉತ್ತರ ಪ್ರದೇಶದ ಆದಿತ್ಯನಾಥ್ ಸರಕಾರ ಈ ಮಾರ್ಗ ಸೂಚಿಗಳನ್ನು ಗಾಳಿಗೆ ತೂರಿದೆ.
೨೦೧೭ರಿಂದ ೨೦೨೨ರ ಮಾರ್ಚ್‌ವರೆಗಿನ ಎನ್‌ಕೌಂಟರ್‌ಗಳಲ್ಲಿ ೧೧೭ ಪ್ರಕರಣಗಳನ್ನಷ್ಟೇ ಉತ್ತರ ಪ್ರದೇಶ ಸರಕಾರವು ಮಾನವ ಹಕ್ಕುಗಳ ಆಯೋಗದ ಗಮನಕ್ಕೆ ತಂದಿದೆ. ಈ ಪ್ರಕರಣಗಳಲ್ಲಿ ೭೫ ಪ್ರಕರಣಗಳನ್ನಷ್ಟೇ ಇತ್ಯರ್ಥ ಪಡಿಸಲಾಗಿದೆ. ಉಳಿದ ಪ್ರಕರಣಗಳು ಇತ್ಯರ್ಥವಾಗಿಲ್ಲ.
ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರಕಾರ ತನ್ನ ನಾಗರಿಕರ ಮೇಲೆ ಅದರಲ್ಲೂ ಅಲ್ಪಸಂಖ್ಯಾತ ಸಮುದಾಯದ ಜನರ ಮೇಲೆ ಯುದ್ಧವನ್ನು ಸಾರಿದೆ. ಹೀಗಾಗಿ ಅಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿವೆ. ಕೇಂದ್ರದ ಮೋದಿ ಸರಕಾರವೂ ಗೊತ್ತಿದ್ದೂ ಕಣ್ಣುಮುಚ್ಚಿ ಕುಳಿತಿದೆ. ಇತ್ತೀಚಿನ ಪ್ರಯಾಗ್‌ರಾಜ್ ಘಟನೆ ಅತ್ಯಂತ ಅಮಾನವೀಯವಾದುದು ಮತ್ತು ಪೊಲೀಸ್ ರಕ್ಷಣೆಯಲ್ಲಿ ಇರುವ ಆರೋಪಿಗಳನ್ನು ಹತ್ಯೆ ಮಾಡಿದ್ದು ಅಲ್ಲಿನ ಕಾನೂನು ಸುವ್ಯವಸ್ಥೆ ಕುಸಿದಿರುವುದಕ್ಕೆ ಸ್ಪಷ್ಟ ನಿದರ್ಶನವಾಗಿದೆ. ತಕ್ಷಣ ರಾಷ್ಟ್ರಪತಿ ಮಧ್ಯಪ್ರವೇಶ ಮಾಡಿ ಕಾನೂನು ಆಡಳಿತವನ್ನು ಅಲ್ಲಿ ಮರು ಸ್ಥಾಪಿಸಲು ಕ್ರಮ ಕೈಗೊಳ್ಳಲಿ.