ದುಃಖದ ಮಡುವಿನ ಚಿತ್ರ ಕಾವ್ಯ
ಜಗತ್ತನ್ನೇ ತಲ್ಲಣಗೊಳಿಸಿ ಜನರ ಬದುಕನ್ನು ಮೂರಾಬಟ್ಟೆಯಾಗಿಸಿದ ಕೋವಿಡ್ ನಮ್ಮ ಕಾಲದ ಅತ್ಯಂತ ಭೀಕರವಾದ ವ್ಯಥೆಯನ್ನು, ಕತೆಯನ್ನು ಸೃಷ್ಟಿಸಿದ ಈ ಶತಮಾನದ ದುರಂತ ಕಾಲ. ಎರಡು ವರ್ಷಗಳ ಹಿಂದೆ ಕೋವಿಡ್ ಉಂಟು ಮಾಡಿದ ಆತಂಕ, ಅಭದ್ರತೆ, ನಿಟ್ಟುಸಿರು, ನಿತ್ರಾಣ, ಸಾವು-ನೋವುಗಳಿಗೆ ಎಲ್ಲೆಉಂಟೆ? ಯುದ್ಧವನ್ನು ಕಂಡಿರದ ನಮ್ಮ ತಲೆಮಾರು ಇಷ್ಟೊಂದು ಸಾವುಗಳನ್ನು ನೋಡಿದ ಆ ದಿನಗಳು ಮನಸ್ಸಿನಿಂದ ಅಳಿಸದಂತೆ ಅಚ್ಚಾಗಿ ಉಳಿದುಕೊಂಡಿವೆ. ನಮ್ಮ ಪೂರ್ವಿಕರು ಕಂಡ ‘ಪ್ಲೇಗ್’ನ ರೂಪದಂತೆಯೇ ಕಾಡಿದ ಕೊರೋನ ಭೀತಿಯು ಇಡೀ ಪ್ರಪಂಚನ್ನು ಅಲುಗಾಡಿಸಿದ ರೀತಿ ನೆನೆಸಿಕೊಂಡರೆ ಜೀವ ಬೆಚ್ಚಿಬೀಳುತ್ತದೆ. ತಂದೆಯ ಶವವನ್ನು ನೋಡದ ಮಗ, ಶವವನ್ನು ಮುಟ್ಟಿ ತನ್ನ ಪ್ರೀತಿಯ ಕೊನೆಯ ನಮಸ್ಕಾರಗಳನ್ನು ಹೇಳದ ಒಡ ಹುಟ್ಟಿದವರ ಸಂಕಟ, ಯಾರಾದರೂ ಸಾಯಲಿ ನಾನು ಮತ್ತು ನಮ್ಮ ಕುಟುಂಬಕ್ಕೆ ಏನೂ ಆಗದಿರಲಿ ಎಂದು ಸ್ವಕೇಂದ್ರಿತ ಸ್ವಾರ್ಥತೆಯನ್ನು ಹೆಚ್ಚು ಮಾಡಿದ ಆ ಎರಡು ವರ್ಷಗಳನ್ನು ಅನುಭವಿಸಿಯೇ ಬರೆದಂತಿರುವ ಸಂತೇಕಸಲಗೆರೆ ಪ್ರಕಾಶ್ ಅವರ ‘ನಾಲಿಗೆ ಸವೆದ ಕುರುಹುಗಳಿಲ್ಲ’ ಕವನ ಸಂಕಲನದ ತುಂಬಾ ಇದೇ ಬಗೆಯ ಸಂಕಟ ತಲ್ಲಣ.
ಸಾಹಿತ್ಯಲೋಕದಲ್ಲಿ ಈಗಾಗಲೇ ಕಥೆ, ಕವನ, ಗ್ರಾಮಚರಿತ್ರ ಕೋಶ, ಜಾನಪದ ಅಧ್ಯಯನ ಕೃತಿಗಳಿಂದ ಪರಿಚಿತರಾಗಿರುವವರು ಪ್ರಕಾಶ್. ಕೊರೋನ ಸೃಷ್ಟಿಸಿದ ಅವಾಂತರಗಳು ಇಡೀ ಜಗತ್ತಿಗೆ ಕಾಡಿರುವಾಗ ಕವಿಯು ಸುಮ್ಮನೆ ಕೂರುವುದಾದರೂ ಹೇಗೆ? ಹಾಗೆಯೇ ಜಗತ್ತಿನ ಅನೇಕ ಕಡೆಯಲ್ಲಿ ಈ ಕಾಲದ ಕಥನವನ್ನು ಹಲವರು ಹಲವು ರೀತಿಯಲ್ಲಿ ಕಟ್ಟಿಕೊಟ್ಟಿದ್ದಾರೆ.
ಇಲ್ಲಿಯೂ ಕವಿ ತನ್ನ ಕಣ್ಣ ಮುಂದೆಯೇ ನಡೆಯುತ್ತಿರುವ ಈ ಘೋರ ದುರಂತವನ್ನು ವಿಷಾದದಿಂದ ನೋಡುತ್ತಾ ತನ್ನ ಅಸಹಾಯಕ ಸ್ಥಿತಿಯನ್ನು ನೋಡಿದರೆ ಮನ ಮಿಡಿಯುತ್ತದೆ. ಕವಿ ಪರಿಸ್ಥಿತಿ, ಸಂದರ್ಭ, ಸನ್ನಿವೇಶಕ್ಕೆ ಏನೂ ಮಾಡದಿದ್ದರೂ ತನ್ನ ಭಾವ ತೀವ್ರತೆಯನ್ನು ಭಾಷೆಯಲ್ಲಿ ಹಿಡಿದು ದಾಖಲು ಮಾಡುವ ಜವಾಬ್ದಾರಿಯನ್ನು ಮಾಡಿರುವುದು ಸಹಜವಾಗಿದೆ. ಊರಿಗೆ ಊರೇ ಸಾವಿನ ಮನೆಯಾದರೆ ಅಳುವವರು ಯಾರು? ಸಂಸ್ಕಾರ ಮಾಡುವವರು ಯಾರು ಎಂಬ ಆತಂಕ ಅನುಭವಿಸಿದವರಿಗೆ ಮಾತ್ರ ಗೊತ್ತು. ಅದು ಭಾಷೆ ಚೌಕಟ್ಟನ್ನು ಮೀರಿದ ಲೋಕವೇ ಆಗಿರುತ್ತದೆ.ಹಾಗಾಗಿ ಈ ಸಂಕಲನದ ಹಲವು ಕವಿತೆಗಳು ಭಾವ ತೀವತ್ರೆಯನ್ನು ನೆನಪಿಸುವ ಕಥನ ಕಾವ್ಯದಂತೆ ಕಾಡುತ್ತವೆ. ಕಾವ್ಯ ಕಟ್ಟುವ ಕಸುಬು ಯೋಚಿಸುವ, ಚಿಂತಿಸುವ ಭಾಷೆಯನ್ನು ದುಡಿಸಿಕೊಂಡಿರುವ ನಾವೀನ್ಯತೆಯನ್ನು ನೋಡಿದಾಗ ಹೊಸಬಗೆಯ ಚಿಂತನೆಯನ್ನು ಕವಿ ಕವಿತೆಗಳಲ್ಲಿ ಹೊಮ್ಮಿಸಿದ್ದಾರೆ.
ಕೋವಿಡ್ ದುರಿತ ಕಾಲದಲ್ಲಿ ‘ಲಾಕ್‌ಡೌನ್’ ಪದ ಕೇಳಿದಾಗ ಜನ ಬೆಚ್ಚಿ ಬೀಳುತ್ತಿದ್ದರು. ಹದಿನೈದು ದಿನಕ್ಕೊಮ್ಮೆ ವಿಸ್ತಾರ ಮಾಡುತ್ತಿದ್ದ ಸರಕಾರ ಲಾಕ್‌ಡೌನ್ ತಂದಿತ್ತ ಸಂಕಟಗಳು ಅಷ್ಟಿಷ್ಟಲ್ಲ. ಇಡೀ ಮನುಕುಲವೆ ಆತಂಕದ ಬೆಂದೊಲೆಯಲ್ಲಿ ಬೇಯುತ್ತಿದ್ದಾಗ ಸರಕಾರದ ತೀರ್ಮಾನಗಳು ಹಲವರಿಗೆ ಸಂಕಟಕರವಾಗಿತ್ತು. ತುತ್ತು ಚೀಲ ತುಂಬಿಸಿಕೊಳ್ಳಲು ಪರದಾಡುತ್ತಿದ್ದ ಜನತೆ ಕಣ್ಣ ಮುಂದೆಯೇ ತಣ್ಣೀರ ಬಟ್ಟೆ ಕಟ್ಟಿಕೊಂಡು ಉಪವಾಸ ಮಾಡುತ್ತಿದ್ದುದನ್ನು ನೆನೆಸಿಕೊಂಡರೆ ಬದುಕಿನ ಕ್ರೂರತೆ ತಿಳಿಯುತ್ತದೆ.
ಸುಡುವುದೆಂದರೆ ಏನನ್ನಾ! ಕಟ್ಟಿಗೆ ಬೇಕಿಲ್ಲ
ಶವದ ಮೇಲೆ ಶವ ಇಟ್ಟರೆ ಸಾಕು ಒಡಲ ಕಿಚ್ಚಿನ
ಬೇಗೆಯಲ್ಲಿ ಬಂಧು ಬಾಂಧವರ ಸಹಿತ ಜೀವಂತ ಬೇಯುವವರು
ಇಂತಹ ಮನ ಮಿಡಿಯುವ ಕಾವ್ಯ ಶಿಲ್ಪಗಳು ಈ ಸಂಕಲನದಲ್ಲಿ ದಟ್ಟವಾಗಿ ಇವೆ. ಕವಿ ಕವಿತೆಯನ್ನು ಕಟ್ಟುವ ಧಾವಂತದಲ್ಲಿ ಬಂಧವನ್ನು ಸಡಿಲಿಸಿ ಬರೆದಿರುವ ಹಲವು ಕವಿತೆಗಳಿವೆ. ಇನ್ನು ಕೆಲವು ಗದ್ಯ ಶೈಲಿಯಲ್ಲಿ ಮಾತಿನಂತೆ ಉಳಿಯುತ್ತವೆ. ಹಲವು ಕವಿತೆಗಳು ಕಾವ್ಯ ಹಾದಿಯನ್ನು ಬೇಗ ಕಳಚಿಕೊಂಡಿವೆ. ವಸ್ತು ವೈವಿಧ್ಯತೆಯು ಸಂಕಲನದಲ್ಲಿ ಸಾಕಷ್ಟು ಇದ್ದು ಸರಿಯಾಗಿ ಜೋಡಿಸಿ ರೂಪಿಸಿದ್ದರೆ ಕವಿತೆಗೆ ಮತ್ತಷ್ಟು ಗಟ್ಟಿತನ ಬರುತ್ತಿತ್ತು. ಬರೆದದ್ದೆಲ್ಲವನ್ನು ಪ್ರಕಟಿಸಬೇಕೆಂಬ ಹಂಬಲ ಇರಬಾರದು ಕವಿ ಇದನ್ನು ಬಹು ಎಚ್ಚರದಲ್ಲಿ ನೋಡಬೇಕು.
ಒಟ್ಟಿನಲ್ಲಿ ಇಡೀ ಸಂಕಲನದಲ್ಲಿ ವಿಷಾದದ ಮಡು ಎದ್ದು ಕಾಣುತ್ತದೆ. ಭಿನ್ನ ಭಿನ್ನ ವಸ್ತುವಿನಿಂದ ಕಾವ್ಯ ಕಟ್ಟುವ ಪ್ರಕಾಶ್ ಸಂಕಲನದಲ್ಲಿ ಒಂದು ಚಿತ್ರಕ ಕಾವ್ಯವನ್ನು ತೆರೆದು ಕಣ್ಣ ಮುಂದೆ ತೋರಿಸುತ್ತಾರೆ. ಹಲವಾರು ಕವಿತೆಗಳು ಓದುಗನ ಮನಸ್ಸನ್ನು ಕಲಕುತ್ತವೆ. ನಮ್ಮನ್ನೆಲ್ಲ ಕಾಡಿದ ದುರಿತ ಕಾಲದ ನೆನಪುಗಳನ್ನು ಭಿನ್ನ ಬಗೆಯಲ್ಲಿ ಕಟ್ಟಿರುವ ಕವಿತಾ ಸಂಕಲನ ಓದುಗರ ಗಮನಸೆಳೆಯುತ್ತದೆ.
ಕೃತಿ: ನಾಲಿಗೆ ಸವೆದ ಕುರುಹುಗಳಿಲ್ಲ.
ಲೇಖಕರು: ಸಂತೆಕಸಲಗೆರೆ ಪ್ರಕಾಶ್
ಬೆಲೆ: 180 ರೂ.
ಪ್ರಕಾಶನ: ನುಡಿ ಪ್ರಕಾಶನ, ನಂ.1667, 6ನೇ ಕ್ರಾಸ್, 6ನೇ ‘ಸಿ’ ಮುಖ್ಯರಸ್ತೆ, ಹಂಪಿನಗರ, ಬೆಂಗಳೂರು-560104
ಮೊ: 9448603689