ಭಾರತಕ್ಕೆ ಜನಸಂಖ್ಯೆ ಸಮಸ್ಯೆಯಾಗಿದೆಯೆ?
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಕೊನೆಗೂ ಚೀನಾವನ್ನು ಭಾರತ ಹಿಂದಿಕ್ಕಿದೆ. ಜಗತ್ತಿನಲ್ಲೇ ಅತಿ ಹೆಚ್ಚು ಜನಸಂಖ್ಯೆಯ ದೇಶ ಎನ್ನುವ ಅದರ ಹೆಗ್ಗಳಿಕೆಯನ್ನು ಭಾರತ ಕಿತ್ತುಕೊಂಡಿದೆ. ಹಲವು ದಶಕಗಳಿಂದ ‘‘ಭಾರತ ಶೀಘ್ರವೇ ಜನಸಂಖ್ಯೆಯಲ್ಲಿ ಚೀನಾವನ್ನು ಮೀರಿಸಲಿದೆ’’ ಎನ್ನುವ ಬೆದರಿಕೆಯನ್ನು ನಾವು ಎದುರಿಸುತ್ತಾ ಬಂದಿದ್ದೇವೆ. ಚೀನಾದ ಜೊತೆಗೆ ಹಲವು ವಲಯಗಳಲ್ಲಿ ತೀವ್ರ ಸ್ಪರ್ಧೆಯನ್ನು ನಡೆಸುತ್ತಿರುವ ಈ ಸಂದರ್ಭದಲ್ಲಿ, ಜನಸಂಖ್ಯೆಯ ವಿಷಯದಲ್ಲಿ ಚೀನಾವನ್ನು ಹಿಂದಿಕ್ಕಿರುವುದನ್ನು ಸಂಭ್ರಮಿಸಬೇಕೋ, ಕಳವಳ ಪಡಬೇಕೋ ಎನ್ನುವ ಗೊಂದಲದಲ್ಲಿದೆ ಭಾರತ. ಯಾಕೆಂದರೆ, ‘ಜನಸಂಖ್ಯೆ’ಯ ಬಗ್ಗೆ ಜಗತ್ತಿನ ನಿಲುವು ಹಿಂದಿನಂತೆ ಈಗ ಇಲ್ಲ. ಇಲ್ಲಿರುವ ಜನಸಂಖ್ಯೆಯೇ ಬಡತನ, ನಿರುದ್ಯೋಗಗಳಿಗೆ ಕಾರಣ ಎಂದು ನಮ್ಮ ರಾಜಕಾರಣಿಗಳು ಈಗಲೂ ನಂಬಿಸುತ್ತಿದ್ದಾರೆ. ಜನಸಂಖ್ಯೆಯ ಇಳಿಕೆ ಒಂದು ದೇಶದ ಉದ್ಯೋಗ, ಅಭಿವೃದ್ಧಿಯನ್ನು ಹೆಚ್ಚಿಸುತ್ತದೆ ಎಂದಾದರೆ, ತನ್ನ ಸಾಧನೆಗಾಗಿ ಚೀನಾ ಸಂಭ್ರಮಿಸಬೇಕಾಗಿತ್ತು. ಹೆಚ್ಚಿರುವ ಜನಸಂಖ್ಯೆಗಾಗಿ ಭಾರತ ಕಳವಳ ವ್ಯಕ್ತಪಡಿಸುತ್ತಿರುವಂತೆಯೇ, ಅತ್ತ ಚೀನಾ ಕೂಡ ಇಳಿಕೆಯಾಗಿರುವ ತನ್ನ ಜನಸಂಖ್ಯೆಗಾಗಿ ಕಳವಳ ವ್ಯಕ್ತಪಡಿಸುತ್ತಿದೆ. ಏರುತ್ತಿರುವ ಜನಸಂಖ್ಯೆಗೆ ಆತಂಕ ವ್ಯಕ್ತಪಡಿಸಿ ಚೀನಾ ತನ್ನ ಜನಸಂಖ್ಯಾ ನೀತಿಯನ್ನು 1986ರ ಹೊತ್ತಿಗೆ ಕಠೋರಗೊಳಿಸಿತು. ಒಂದಕ್ಕಿಂತ ಅಧಿಕ ಮಕ್ಕಳನ್ನು ಹೆರುವುದನ್ನೇ ಅಪರಾಧವಾಗಿಸಿತು. ಮಕ್ಕಳನ್ನು ಹೆರದ ದಂಪತಿಯನ್ನು ಪ್ರೋತ್ಸಾಹಿಸಿತು. ಇದರ ಪರಿಣಾಮವಾಗಿ ಆ ದೇಶದಲ್ಲಿ ಜನಸಂಖ್ಯೆಯಲ್ಲಿ ಅಸಮತೋಲನ ಸೃಷ್ಟಿಯಾಯಿತು. ದೇಶದಲ್ಲಿ ಯುವಕರ ಸಂಖ್ಯೆಗಿಂತ ಮುದುಕರ ಸಂಖ್ಯೆ ಹೆಚ್ಚಾಯಿತು. ವೃದ್ಧರನ್ನು ಸಾಕುವ ಹೊಣೆಗಾರಿಕೆ ಸರಕಾರದ ಮೇಲೆ ಬಿತ್ತು.
ಕೆಲವು ವರ್ಷಗಳಿಂದ ಈ ಸಮಸ್ಯೆ ಚೀನಾದಲ್ಲಿ ಬಿಗಡಾಯಿಸಿದೆ. ಕಳೆದ ವರ್ಷ ಚೀನಾ ದೇಶದಲ್ಲಿ ಜನನ ಸಂಖ್ಯೆ ದಾಖಲೆ ಪ್ರಮಾಣದಲ್ಲಿ ಇಳಿಕೆಯಾಗಿದೆ. ಚೀನಾ ಈ ಬಗ್ಗೆ ಹಲವು ವರ್ಷಗಳ ಹಿಂದೆಯೇ ಎಚ್ಚೆತ್ತುಕೊಂಡಿತ್ತು. 2016ರಲ್ಲಿ ಅದು ತನ್ನ ಒಂದು ಮಗು ನೀತಿಯಿಂದ ಹಿಂದೆ ಸರಿದು, ಎರಡು ಮಕ್ಕಳಿಗೆ ವಿಸ್ತರಿಸಿತು. 2021ರಲ್ಲಿ ತನ್ನ ನೀತಿಯನ್ನು ಇನ್ನೂ ಸಡಿಲಗೊಳಿಸಿ ಮೂರು ಮಕ್ಕಳನ್ನು ಹೊಂದಲು ಅವಕಾಶ ನೀಡಿತು. ಮಾತ್ರವಲ್ಲ, ಹೆಚ್ಚಿನ ಮಕ್ಕಳನ್ನು ಹಡೆಯಲು ತಾಯಂದಿರಿಗೆ ಪ್ರೋತ್ಸಾಹಗಳನ್ನು ನೀಡತೊಡಗಿತು. ಆದರೆ ಸರಕಾರದ ಪ್ರಯತ್ನ ಫಲಕೊಡುತ್ತಿಲ್ಲ. ಜನಸಂಖ್ಯೆಯ ಇಳಿಕೆಯಲ್ಲಿ ಭಾರತಕ್ಕಿಂತ ಹೆಚ್ಚಿನ ಸಾಧನೆ ತೋರಿಸಿರುವುದು ಚೀನಾಕ್ಕೆ ಸಂತಸವನ್ನು ತಂದಿಲ್ಲದೇ ಇರುವಾಗ, ವಿಶ್ವದಲ್ಲೇ ಜನಸಂಖ್ಯೆಯಲ್ಲಿ ನಂ. 1 ಸ್ಥಾನವನ್ನು ತನ್ನದಾಗಿಸಿಕೊಂಡಿರುವ ಭಾರತದ ಮುಂದಿನ ನಡೆ ಹೇಗಿರಬೇಕು ಎನ್ನುವುದರ ಬಗ್ಗೆ ಸಾಕಷ್ಟು ಗೊಂದಲಗಳಿವೆ. ಜನಸಂಖ್ಯಾ ನಿಯಂತ್ರಣಕ್ಕಾಗಿ ಭಾರತ ಕಠಿಣ ಕಾನೂನುಗಳನ್ನು ಜಾರಿಗೊಳಿಸಬೇಕು ಎನ್ನುವ ಆಗ್ರಹ ಇಂದು ನಿನ್ನೆಯದಲ್ಲ. ಈ ಬಗ್ಗೆ ಆಗಾಗ ಗಂಭೀರ ಚರ್ಚೆಗಳು ನಡೆಯುತ್ತಾ ಬಂದಿವೆ. ಭಾರತದಲ್ಲಿ ಜನಸಂಖ್ಯಾ ಕಾನೂನು ಜಾರಿಗೆ ರಾಜಕೀಯ ಮುಖವೂ ಇದೆ. ದೇಶದಲ್ಲಿ ಮುಸ್ಲಿಮರು ಜನಸಂಖ್ಯೆ ಹೆಚ್ಚಳಕ್ಕೆ ಕಾರಣವಾಗಿದ್ದಾರೆ ಎನ್ನುವ ತಪ್ಪು ಮಾಹಿತಿಯನ್ನು ಮುಂದಿಟ್ಟುಕೊಂಡು ರಾಜಕಾರಣಿಗಳು ಜನಸಂಖ್ಯೆಯ ಬಗ್ಗೆ ಮಾತನಾಡುತ್ತಿದ್ದಾರೆ.
ತಮ್ಮ ದ್ವೇಷ ರಾಜಕಾರಣಕ್ಕಾಗಿಯಷ್ಟೇ ಈ ವಿಷಯವನ್ನು ಅವರು ದೇಶದ ಮುಂದಿಡುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಮುಸ್ಲಿಮರೊಳಗೆ ಜನಸಂಖ್ಯೆ ಇಳಿಮುಖವಾಗುತ್ತಿದೆ ಎನ್ನುವ ಸತ್ಯವನ್ನು ಮುಚ್ಚಿ ಟ್ಟು ಅವರು ಚರ್ಚೆ ನಡೆಸುತ್ತಿದ್ದಾರೆ. ರಾಜಕೀಯವನ್ನು ಬದಿಗಿಟ್ಟು ಭಾರತದ ಜನಸಂಖ್ಯೆ ನಿಜಕ್ಕೂ ಸಮಸ್ಯೆಯೋ ಅಥವಾ ಸಂಪನ್ಮೂಲವೋ ಎನ್ನುವುದನ್ನು ಮುಕ್ತ ಮನಸ್ಸಿನಿಂದ ಚರ್ಚಿಸುವುದಕ್ಕೆ ನಮ್ಮ ನಾಯಕರಿಗೆ ಸಾಧ್ಯವಾಗುತ್ತಿಲ್ಲ. ಇಷ್ಟಕ್ಕೂ ಕಠಿಣ ಜನಸಂಖ್ಯಾ ನೀತಿಯನ್ನು ಜಾರಿಗೊಳಿಸುವುದರಿಂದ ಸಮಸ್ಯೆಯನ್ನು ಪರಿಹರಿಸಲು ಸಾಧ್ಯವಿಲ್ಲ ಎನ್ನುವುದಕ್ಕೆ ಉದಾಹರಣೆಯಾಗಿ ನಮ್ಮ ಮುಂದೆ ಚೀನಾ ಇದೆ. ಇಂತಹ ನೀತಿಯನ್ನು ಜಾರಿಗೊಳಿಸುವಾಗ ಎದುರಾಗುವ ಸಮಸ್ಯೆಗಳನ್ನು ಅಧ್ಯಯನ ಮಾಡಲು ನಾವು ಚೀನಾವನ್ನು ಕೈಮರವಾಗಿ ಬಳಸಿಕೊಳ್ಳಬೇಕು. ಚೀನಾ ಇಂದು ಎದುರಿಸುತ್ತಿರುವ ಸಮಸ್ಯೆಗಳನ್ನು ಭವಿಷ್ಯದಲ್ಲಿ ನಾವು ಎದುರಿಸಿದ್ದೇ ಆದರೆ ಅದಕ್ಕೆ ಭಾರೀ ಬೆಲೆಯನ್ನು ತೆರಬೇಕಾಗುತ್ತದೆ. ಒಂದು ಕಾಲದಲ್ಲಿ ಚೀನಾ ವಿಶ್ವದ ಅತಿ ಹೆಚ್ಚು ಜನಸಂಖ್ಯೆಯ ದೇಶವೆಂದು ಗುರುತಿಸಲ್ಪಟ್ಟಾಗ, ಆ ಜನಸಂಖ್ಯೆಯನ್ನು ಅದು ತನ್ನ ಆರ್ಥಿಕತೆಗೆ ಪೂರಕವಾಗಿ ಹೇಗೆ ಬಳಸಿಕೊಂಡಿತು ಎನ್ನುವುದನ್ನು ಈ ಸಂದರ್ಭದಲ್ಲಿ ಭಾರತ ಸ್ಮರಿಸಿಕೊಳ್ಳಬೇಕು. ಇದೇ ಸಂದರ್ಭದಲ್ಲಿ ಜನಸಂಖ್ಯೆಯ ಇಳಿಕೆ ಚೀನಾಕ್ಕೆ ಯಾಕೆ ಸಂಭ್ರಮವನ್ನು ತಂದಿಲ್ಲ, ಅದರ ಅಭಿವೃದ್ಧಿಗೆ ಈ ಇಳಿಕೆಯೂ ಯಾಕೆ ಮಾರಕವಾಗುತ್ತಿದೆ ಎನ್ನುವುದರ ಬಗ್ಗೆ ಭಾರತ ಆಲೋಚಿಸಬೇಕು.
ಭಾರತದ ಬಡತನ, ನಿರುದ್ಯೋಗಗಳಿಗೆ ಜನಸಂಖ್ಯೆ ಕಾರಣ ಎನ್ನುವುದು ರಾಜಕಾರಣಿಗಳು ತಮ್ಮ ಹೊಣೆಗಾರಿಕೆಯಿಂದ ನುಣುಚಿಕೊಳ್ಳಲು ಮುಂದಿಡುತ್ತಿರುವ ವಾದ. ಭಾರತದ ಭೂಪ್ರದೇಶ, ಇಲ್ಲಿರುವ ನೈಸರ್ಗಿಕ ಸಂಪನ್ಮೂಲ, ಖನಿಜ ಸಂಪತ್ತು ಇವೆಲ್ಲವುಗಳಿಗೆ ಹೋಲಿಸಿದರೆ ಭಾರತಕ್ಕೆ ಜನಸಂಖ್ಯೆ ಇನ್ನೂ ಭಾರವಾಗಿಲ್ಲ. ದುರದೃಷ್ಟವಶಾತ್ ಸಂಪನ್ಮೂಲವಾಗಿ ಗುರುತಿಸಲ್ಪಡಬೇಕಾಗಿದ್ದ ಈ ಜನಸಂಖ್ಯೆ, ನಮ್ಮನ್ನಾಳುವವರ ಬೇಜವಾಬ್ದಾರಿಯಿಂದ ಸಮಸ್ಯೆಯಾಗಿ ಪರಿವರ್ತನೆಗೊಂಡಿದೆ. ಒಂದೆಡೆ ದೇಶ ಅಪೌಷ್ಟಿಕತೆ, ಬಡತನಕ್ಕಾಗಿ ಗುರುತಿಸಲ್ಪಡುತ್ತಿದೆ. ಇನ್ನೊಂದೆಡೆ ದೇಶದ ಹತ್ತಿಪ್ಪತ್ತು ಮಂದಿ ಬಿಲಿಯಾಧಿಪತಿಗಳಾಗಿ ವಿಶ್ವದಲ್ಲಿ ಗುರುತಿಸಲ್ಪಡುತ್ತಿದ್ದಾರೆ.
ಶೇ. 1ರಷ್ಟು ಇರುವ ಶ್ರೀಮಂತರ ಬಳಿ ದೇಶದ ಒಟ್ಟು ಸಂಪತ್ತಿನ ಶೇ. 40ರಷ್ಟು ಸಂಪತ್ತು ಹಂಚಿಕೆಯಾಗಿದೆ ಎನ್ನುವುದನ್ನು ಅಂತಾರಾಷ್ಟ್ರೀಯ ವರದಿ ಹೇಳುತ್ತದೆ. ಈ ದೇಶದ ಒಟ್ಟು ಜನಸಂಖ್ಯೆಯ ಅರ್ಧದಷ್ಟು ಜನರು ದೇಶದಲ್ಲಿರುವ ಶೇ. 3ರಷ್ಟು ಸಂಪತ್ತನ್ನು ಹಂಚಿಕೊಂಡಿದ್ದಾರೆ. ವಿಪರ್ಯಾಸವೆಂದರೆ, ಕೊರೋನದಿಂದಾಗಿ ಭಾರತದ ಆರ್ಥಿಕತೆ ಸಂಪೂರ್ಣ ನೆಲಕಚ್ಚಿತು. ಬಡವರು ಇನ್ನಷ್ಟು ಬಡವರಾದರು. ಮಧ್ಯಮವರ್ಗ ನೆಲೆ ಕಳೆದುಕೊಂಡಿತು. ಆದರೆ ಇದೇ ಸಂದರ್ಭದಲ್ಲಿ ಈ ದೇಶದ ಬಿಲಿಯಾಧೀಶರು ಇನ್ನಷ್ಟು ಶ್ರೀಮಂತರಾದರು. ಇದರಿಂದ ಸ್ಪಷ್ಟವಾಗುವುದೆಂದರೆ, ಜನರಿಗೆ ಹಂಚುವುದಕ್ಕೆ ಈ ದೇಶದಲ್ಲಿ ಸಂಪತ್ತಿನ ಕೊರತೆಯಿಲ್ಲ. ಈ ದೇಶದ ಸಂಪತ್ತನ್ನು ಕೆಲವೇ ಕೆಲವು ಜನರು ತಮ್ಮಲ್ಲಿ ಬಚ್ಚಿಟ್ಟುಕೊಂಡಿದ್ದಾರೆ. ಊಟದ ಪಂಕ್ತಿಯಲ್ಲಿ ನೂರು ಜನರು ಕೂತಿದ್ದಾರೆ. ಒಬ್ಬನ ಬಟ್ಟಲಲ್ಲಿ 90 ಜನರಿಗಾಗುವಷ್ಟು ಅನ್ನವಿದೆ. ಉಳಿದ 99 ಜನರು 10ಜನರ ಅನ್ನವನ್ನು ಹಂಚಿಕೊಂಡು ತಿನ್ನಬೇಕು. ಇದು ಭಾರತದ ಸ್ಥಿತಿ. ಪಂಕ್ತಿಗೆ ಇನ್ನೊಬ್ಬ ಸೇರಿಕೊಂಡರೆ ಅವನನ್ನು ಅಪರಾಧಿಯನ್ನಾಗಿ ನೋಡಲಾಗುತ್ತದೆ. ಹೊಸದಾಗಿ ಸೇರ್ಪಡೆಗೊಂಡ ವ್ಯಕ್ತಿಯಿಂದಾಗಿ ಅನ್ನದ ಕೊರತೆಯಾಗುತ್ತಿದೆ ಎಂದು ವ್ಯಾಖ್ಯಾನಿಸಲಾಗುತ್ತಿದೆ. ಆದರೆ 90 ಜನರ ಅನ್ನವನ್ನು ಒಬ್ಬನೇ ತನ್ನ ಬಟ್ಟಲಲ್ಲಿ ಶೇಖರಿಸಿಕೊಂಡಿರುವುದು ಚರ್ಚೆಗೆ ಬರುವುದಿಲ್ಲ. ಯಾವಾಗ ಆ ಒಬ್ಬನ ಬಟ್ಟಲ ಅನ್ನವನ್ನು ಎಲ್ಲರಿಗೂ ಸಮಾನವಾಗಿ ವಿತರಿಸುವ ಆರ್ಥಿಕ ನೀತಿ ಜಾರಿಗೆ ಬರುತ್ತದೆಯೋ ಆಗ ಇರುವ ಎಲ್ಲರೂ ಸಂತೃಪ್ತಿಯಿಂದ ಉಣ್ಣುವುದಕ್ಕೆ ಸಾಧ್ಯ. ಅಲ್ಲಿರುವವರು ಆಗ ಸಮಸ್ಯೆಯಾಗುವುದಿಲ್ಲ, ಬದಲಿಗೆ ಸಂಪನ್ಮೂಲವಾಗುತ್ತಾರೆ.
ಈ ದೇಶದಲ್ಲಿರುವ ಅಗ್ರ 100 ಭಾರತೀಯ ಬಿಲಿಯನೇರ್‌ಗಳಿಗೆ ಶೇ. 2.5 ತೆರಿಗೆ ವಿಧಿಸಿದರೆ ಅಥವಾ ಮೇಲಿನ ಸ್ತರದಲ್ಲಿರುವ ಹತ್ತು ಬಿಲಿಯನೇರ್‌ಗಳಿಗೆ ಶೇ. 5ರಷ್ಟು ತೆರಿಗೆಯನ್ನು ವಿಧಿಸಿದರೆ, ಶಾಲೆ ತ್ಯಜಿಸಿರುವ ಎಲ್ಲ ಮಕ್ಕಳನ್ನು ಮರಳಿ ಶಾಲೆಗೆ ಸೇರಿಸಲು ಬೇಕಾದ ಹಣವನ್ನು ಸಂಗ್ರಹಿಸಬಹುದು ಎನ್ನುವುದನ್ನು ಆಕ್ಸ್‌ಫಾಮ್ ವರದಿ ಹೇಳುತ್ತದೆ. ಈ ದೇಶದ ಅತಿ ಶ್ರೀಮಂತರ ಮೇಲೆ ತೆರಿಗೆ ವಿಧಿಸುವ ಮೂಲಕ ಭಾರತದಲ್ಲಿ ಸಂಪನ್ಮೂಲಗಳನ್ನು ಹಂಚುವ ಕೆಲಸವನ್ನು ಮಾಡಬಹುದು, ದೇಶದ ಹಲವು ಸಮಸ್ಯೆಗಳಿಗೆ ಈ ಮೂಲಕ ಹಣ ಹೊಂದಿಸಬಹುದು ಎಂದು ಸರಕಾರಕ್ಕೆ ಒತ್ತಾಯಿಸಿದೆ. ಆದರೆ ಸರಕಾರಕ್ಕೆ ಜನಸಂಖ್ಯೆಯ ಹೆಸರಿನಲ್ಲಿ ರಾಜಕೀಯ ನಡೆಸುವುದು ಮುಖ್ಯವಾಗಿದೆಯೇ ಹೊರತು, ಈ ದೇಶದ ಜನಸಂಖ್ಯೆಯನ್ನು ಸಂಪನ್ಮೂಲವಾಗಿಸುವ ಇಚ್ಛಾಶಕ್ತಿ ಇಲ್ಲ. ಇದುವೇ ಭಾರತದ ಇಂದಿನ ಸಮಸ್ಯೆಗೆ ಮುಖ್ಯ ಕಾರಣ.