ತೆಲಂಗಾಣದ 'ಅಸಂವಿಧಾನಿಕ' ಮುಸ್ಲಿಂ ಕೋಟಾ ರದ್ದುಪಡಿಸುತ್ತೇವೆ: ಅಮಿತ್ ಶಾ
ಹೈದರಾಬಾದ್: ಈ ವರ್ಷ ನಡೆಯಲಿರುವ ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಲ್ಲಿ ಬಿಆರ್‌ಎಸ್ ನೇತೃತ್ವದ ರಾಜ್ಯ ಸರ್ಕಾರದ "ಅಸಂವಿಧಾನಿಕ" ಮುಸ್ಲಿಂ ಕೋಟಾವನ್ನು ರದ್ದುಪಡಿಸಲಿದೆ ಎಂದು ಕೇಂದ್ರ ಗೃಹಸಚಿವ ಅಮಿತ್ ಶಾ ಹೇಳಿದ್ದಾರೆ.
"ಶಿಕ್ಷಣ ಸಂಸ್ಥೆಗಳಲ್ಲಿ ಮುಸ್ಲಿಂ ಮೀಸಲಾತಿಯನ್ನು ನಾವು ರದ್ದುಪಡಿಸಲಿದ್ದೇವೆ. ಕೋಟಾಗಳು ದಲಿತರು, ಬುಡಕಟ್ಟು ಜನಾಂಗದವರು ಮತ್ತು ಹಿಂದುಳಿದ ವರ್ಗಗಳ ಸಂವಿಧಾನಾತ್ಮಕ ಹಕ್ಕುಗಳು. ಅವರು ಇದರ ಪ್ರಯೋಜನ ಪಡೆಯುವುದನ್ನು ನಾವು ಖಾತರಿಪಡಿಸಲಿದ್ದೇವೆ" ಎಂದು ರ್ಯಾಲಿಯೊಂದರಲ್ಲಿ ತಿಳಿಸಿದರು. ಕೆ.ಚಂದ್ರಶೇಖರ ರಾವ್ ಸರ್ಕಾರ ಮುಸ್ಲಿಂ ಕೋಟಾವನ್ನು ಶೇಕಡ 4ರಿಂದ ಶೇಕಡ 12ಕ್ಕೆ ಹೆಚ್ಚಿಸಲು ಮುಂದಾಗಿದೆ.
ಮೇ 10ರಂದು ನಡೆಯುವ ಚುನಾವಣೆ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಮುಸ್ಲಿಮರಿಗೆ ನೀಡುತ್ತಿದ್ದ ಶೇಕಡ 4ರ ಕೋಟಾ ರದ್ದುಪಡಿಸಿತ್ತು ಹಾಗೂ ಇದ್ನು ವೀರಶೈವ ಲಿಂಗಾಯಿತ ಹಾಗೂ ಒಕ್ಕಲಿಗ ಸಮುದಾಯಕ್ಕೆ ಹಂಚಿಕೆ ಮಾಡಿತ್ತು.
ಬಿಜೆಪಿ ಸರ್ಕಾರದ ಕ್ರಮದ ವಿರುದ್ಧ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆ ಆರಂಭಿಸಿರುವ ಸುಪ್ರೀಂಕೋರ್ಟ್, "ಮೇಲ್ನೋಟಕ್ಕೆ ಇದು ದೋಷಪೂರಿತ" ಎಂದು ಅಭಿಪ್ರಾಯಪಟ್ಟಿತ್ತು.
ಚೆವೆಲ್ಲಾದಲ್ಲಿ ನಡೆದ ರ್ಯಾಲಿಯಲ್ಲಿ ಮಾತನಾಡಿದ ಶಾ, ಬಿಆರ್‌ಎಸ್‌ನ ವಿಸ್ತರಣಾ ಯೋಜನೆಯನ್ನು ವಿರೋಧಿಸಿದರು. ದೇಶದಲ್ಲಿ ಪ್ರಧಾನಿ ಹುದ್ದೆ ಖಾಲಿ ಇಲ್ಲ. ನರೇಂದ್ರ ಮೋದಿ 2024ರ ಚುನಾವಣೆಯಲ್ಲಿ ಸುಲಭವಾಗಿ ಅಧಿಕಾರ ಉಳಿಸಿಕೊಳ್ಳಲಿದ್ದಾರೆ ಎಂದು ಹೇಳಿದರು.