ಮೀಸಲಾತಿ ಆದೇಶ: ಸರಕಾರದ ವಂಚನೆ ಬಹಿರಂಗ
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಆತುರಾತುರವಾಗಿ ಮೀಸಲಾತಿಯ ಕುರಿತಂತೆ ರಾಜ್ಯ ಸರಕಾರ ತೆಗೆದುಕೊಂಡ ನಿರ್ಧಾರ, ಅದಕ್ಕೆ ತಿರುಗುಬಾಣವಾಗಿದೆ. ಮುಸ್ಲಿಮರ ಮೀಸಲಾತಿಯನ್ನು ರದ್ದು ಮಾಡಿ ಅದನ್ನು ಒಕ್ಕಲಿಗ, ಲಿಂಗಾಯತರಿಗೆ ನೀಡುವ ಮೂಲಕ ಕಾಂಗ್ರೆಸನ್ನು ಇಕ್ಕಟ್ಟಿಗೆ ಸಿಲುಕಿಸಲು ಬಿಜೆಪಿ ಯತ್ನಿಸಿತ್ತು. ಕಾಂಗ್ರೆಸ್ ಪಕ್ಷವೇನಾದರೂ ಮುಸ್ಲಿಮರ ಮೀಸಲಾತಿಯ ಪರವಾಗಿ ಮಾತನಾಡಿದರೆ ಅದು ಪರೋಕ್ಷವಾಗಿ ಒಕ್ಕಲಿಗ, ಲಿಂಗಾಯತರಿಗೆ ನೀಡಿದ ಮೀಸಲಾತಿಯ ವಿರುದ್ಧ ಮಾತನಾಡಿದ ಧ್ವನಿಯನ್ನು ಕೊಡುತ್ತಿತ್ತು. ಮುಸ್ಲಿಮರಿಂದ ಕಿತ್ತುಕೊಂಡ ಮೀಸಲಾತಿಯನ್ನು ಮರಳಿಸುತ್ತೇವೆ ಎಂದು ಕಾಂಗ್ರೆಸ್ ಮಾತನಾಡಿದರೆ, ಅದು 'ಒಕ್ಕಲಿಗರು ಮತ್ತು ಲಿಂಗಾಯತ'ರಿಗೆ ನೀಡಿದ ಮೀಸಲಾತಿಯನ್ನು ಕಿತ್ತುಕೊಳ್ಳುತ್ತೇವೆ ಎಂದೂ ಧ್ವನಿಸುತ್ತಿತ್ತು. ಇದೇ ಸಂದರ್ಭದಲ್ಲಿ, ಒಕ್ಕಲಿಗರಿಗೆ ಮತ್ತು ಲಿಂಗಾಯತರಿಗೆ ಹೆಚ್ಚುವರಿ ಮೀಸಲಾತಿಯನ್ನು ನೀಡಿದ ಸಾಧನೆಯೊಂದಿಗೆ ಚುನಾವಣೆಯನ್ನು ಎದುರಿಸಬಹುದು ಎಂದೂ ಬಿಜೆಪಿ ಲೆಕ್ಕ ಹಾಕಿತ್ತು. ಆದರೆ ರಾಜ್ಯ ಸರಕಾರದ ಆದೇಶಕ್ಕೆ ಸುಪ್ರೀಂಕೋರ್ಟ್ ಅಂಕುಶ ಹಾಕಿದೆ. ಪರಿಣಾಮವಾಗಿ ಸ್ವತಃ ರಾಜ್ಯ ಸರಕಾರವೇ ಮೇ 9ರವೆಗೆ ಹೊಸ ನೀತಿಯನ್ನು ಜಾರಿ ಮಾಡುವುದಿಲ್ಲ ಎಂದು ಸುಪ್ರೀಂಕೋರ್ಟ್‌ಗೆ ತಿಳಿಸುವಂತಾಗಿದೆ. ಅಷ್ಟೇ ಅಲ್ಲ, ಹಳೆಯ ನೀತಿಯನ್ನೇ ಮುಂದುವರಿಸುತ್ತೇವೆ ಎಂದು ನ್ಯಾಯಾಲಯಕ್ಕೆ ಭರವಸೆ ನೀಡಿದೆ. ಪರೋಕ್ಷವಾಗಿ ಸುಪ್ರೀಂಕೋರ್ಟ್ ಸರಕಾರದ ಆದೇಶಕ್ಕೆ ಮೇ 9ರವರೆಗೆ ವಿಧಿಸಿದ ತಡೆಯಾಜ್ಞೆ ಎಂದು ಇದನ್ನು ಭಾವಿಸಬೇಕು. ಒಟ್ಟಿನಲ್ಲಿ, ಮೀಸಲಾತಿಯನ್ನು ತನ್ನ ಕ್ಷುದ್ರ ರಾಜಕೀಯಕ್ಕೆ ಬಳಸಲು ಮುಂದಾದ ಬಿಜೆಪಿಗೆ ಇದು ಹಿನ್ನಡೆಯಾಗಿದೆ.
ಆದರೆ ಬಿಜೆಪಿಯ ವರಿಷ್ಠರು ಮಾತ್ರ ತಮ್ಮ ಮುಖ ಉಳಿಸುವ ಪ್ರಯತ್ನದ ಭಾಗವಾಗಿ ಸುಳ್ಳುಗಳ ಮೂಲಕ ಜನರ ದಾರಿ ತಪ್ಪಿಸುವ ಪ್ರಯತ್ನವನ್ನು ಮುಂದುವರಿಸಿದ್ದಾರೆ. ವಿಜಯಪುರದಲ್ಲಿ ಮಾತನಾಡಿದ ಕೇಂದ್ರ ಸಚಿವ ಅಮಿತ್ ಶಾ ''ಮುಸ್ಲಿಮರಿಗೆ ನೀಡಲಾಗಿದ್ದ ಮೀಸಲಾತಿಯನ್ನು ರದ್ದುಗೊಳಿಸಿ ಹೊಸ ಮೀಸಲಾತಿ ವ್ಯವಸ್ಥೆಯನ್ನು ಬಿಜೆಪಿ ಸರಕಾರ ಜಾರಿ ಮಾಡಿದೆ. ಆದರೆ ಕಾಂಗ್ರೆಸ್ ಪಕ್ಷ ಲಿಂಗಾಯತ, ಒಕ್ಕಲಿಗರ ಮೀಸಲಾತಿ ರದ್ದುಗೊಳಿಸಿ ಪುನಃ ಮುಸ್ಲಿಮರಿಗೆ ನೀಡುವುದಾಗಿ ಹೇಳುತ್ತಿದೆ. ಆದರೆ ಯಾವ ಕಾರಣಕ್ಕೂ ಬಿಜೆಪಿ ಇದನ್ನು ಸಹಿಸುವುದಿಲ್ಲ'' ಎಂಬ ಹಸಿ ಸುಳ್ಳನ್ನು ಒದರಿದ್ದಾರೆ. ''ವೋಟ್ ಬ್ಯಾಂಕ್ ಆಧರಿಸಿ ಕಾಂಗ್ರೆಸ್ ಮುಸ್ಲಿಮರಿಗೆ ಮೀಸಲಾತಿಯನ್ನು ಕೊಟ್ಟಿತ್ತು. ಬಿಜೆಪಿಯು ಮುಸ್ಲಿಮರ ಮೀಸಲಾತಿಯನ್ನು ರದ್ದುಗೊಳಿಸಿ ಲಿಂಗಾಯತ, ಒಕ್ಕಲಿಗ, ತಳವಾರ, ಪರಿವಾರದ ದಲಿತ ಸಮುದಾಯಕ್ಕೆ ಮೀಸಲಾತಿ ಕಲ್ಪಿಸಿದೆ. ಇದು ಮಾಡಿದ್ದು ಒಳ್ಳೆಯದೆ? ಕೆಟ್ಟದೆ?'' ಎಂದು ಅವರು ಪ್ರಶ್ನಿಸಿದ್ದಾರೆ. ನಿಜಕ್ಕೂ ಬಿಜೆಪಿ ನ್ಯಾಯಬದ್ಧವಾಗಿಯೇ ಮಾಡಿದ್ದಿದ್ದರೆ ಸುಪ್ರೀಂಕೋರ್ಟ್‌ನಲ್ಲಿ ತನ್ನ ನಿರ್ಧಾರವನ್ನು ತಡೆ ಹಿಡಿಯಲು ಬಿಜೆಪಿ ಯಾಕೆ ಒಪ್ಪಿಕೊಂಡಿತು? ಈ ಪ್ರಶ್ನೆಯನ್ನು ಅಮಿತ್ ಶಾ ಚುನಾವಣೆಯ ಪ್ರಚಾರದ ಸಂದರ್ಭದಲ್ಲಿ ಮುಚ್ಚಿಟ್ಟಿದ್ದಾರೆ. ಇಂದು ಬಿಜೆಪಿಯ ನಿರ್ಧಾರವನ್ನು ಯಾವುದೇ ಪಕ್ಷಗಳು ಪ್ರಶ್ನಿಸಿಲ್ಲ. ಬದಲಿಗೆ ಸುಪ್ರೀಂಕೋರ್ಟ್ ಅದನ್ನು ವಿಚಾರಣೆ ನಡೆಸುತ್ತಿದೆ. ಸರಕಾರ ನಿಜಕ್ಕೂ ನ್ಯಾಯಬದ್ಧವಾಗಿ ನಿರ್ಧಾರವನ್ನು ತೆಗೆದುಕೊಂಡಿದೆ ಎಂದಾದರೆ ಅದು ನ್ಯಾಯಾಲಯದಲ್ಲಿ ವಿಚಾರಣೆಯನ್ನು ಮುಂದೂಡಲು ಯಾಕೆ ಒತ್ತಾಯಿಸುತ್ತಿದೆ? ಎನ್ನುವ ಪ್ರಶ್ನೆಗೆ ಅಮಿತ್ ಶಾ ಉತ್ತರಿಸಬೇಕಾಗಿದೆ.
ಒಂದೆಡೆ ಚುನಾವಣೆಯ ಬೀದಿಯಲ್ಲಿ ನಾವು ಮುಸ್ಲಿಮರ ಮೀಸಲಾತಿಯನ್ನು ರದ್ದುಗೊಳಿಸಿದ್ದೇವೆ ಎಂದು ಬಿಜೆಪಿ ಹೇಳುತ್ತಿದೆ. ಅತ್ತ ನ್ಯಾಯಾಲಯದಲ್ಲಿ, ನಮ್ಮ ಆದೇಶವನ್ನು ಮೇ 9ರವರೆಗೆ ತಡೆ ಹಿಡಿಯುತ್ತೇವೆ ಎಂದು ಸರಕಾರ ಒಪ್ಪಿಕೊಂಡಿದೆ. ಓಟ್ ಬ್ಯಾಂಕ್ ಆಧರಿಸಿದ ಮುಸ್ಲಿಮರ ಮೀಸಲಾತಿಯನ್ನು ರದ್ದುಗೊಳಿಸಿ ಜನರಿಗೆ ನ್ಯಾಯ ನೀಡಿದ್ದೇವೆ ಎಂದು ಹೇಳುವ ಬಿಜೆಪಿ, ಮುಸ್ಲಿಮರಿಗೆ ಮೀಸಲಾತಿಯನ್ನು ನೀಡಿರುವುದು ಹಿಂದುಳಿದ ವರ್ಗಗಳ ಆಯೋಗ ಹಮ್ಮಿಕೊಂಡ ಸಮೀಕ್ಷೆಯ ಆಧಾರದಲ್ಲಿ ಎನ್ನುವುದನ್ನು ಮರೆ ಮಾಚುತ್ತಿದೆ. ಮೀಸಲಾತಿಯ ಹೆಸರಿನಲ್ಲಿ ಹುಟ್ಟಿಸಿ ಹಾಕಿದ ಗೊಂದಲದಲ್ಲಿ ಬಿಜೆಪಿ ಸ್ವತಃ ಸಿಲುಕಿ ಒದ್ದಾಡುತ್ತಿದೆ. ಮೀಸಲಾತಿ ಕುರಿತ ನಿರ್ಧಾರದಿಂದ ಚುನಾವಣೆಯಲ್ಲಿ ಲಾಭ ಪಡೆಯಬಹುದು ಎನ್ನುವ ಅದರ ಲೆಕ್ಕಾಚಾರಗಳು ತಲೆಕೆಳಗಾಗಿರುವುದು ಸ್ಪಷ್ಟವಾಗಿದೆ. ಆದುದರಿಂದಲೇ, ಅಮಿತ್ ಶಾ ಹತಾಶೆಯ ಹೇಳಿಕೆಯನ್ನು ಸಾರ್ವಜನಿಕವಾಗಿ ನೀಡುತ್ತಿದ್ದಾರೆ. ಈ ಮೀಸಲಾತಿಯನ್ನು ಬಿಜೆಪಿ ತೆಗೆದು ಹಾಕಿದ ಕ್ರಮ ಸಂವಿಧಾನ ಬಾಹಿರವಾದುದು ಎಂದು ವಿರೋಧ ಪಕ್ಷಗಳು ಹೇಳುತ್ತಿವೆಯೇ ಹೊರತು, ಲಿಂಗಾಯತ ಅಥವಾ ಒಕ್ಕಲಿಗರಿಗೆ ಮೀಸಲಾತಿಯನ್ನು ನೀಡಿರುವುದು ತಪ್ಪು ಎಂದು ಹೇಳುತ್ತಿಲ್ಲ. ಇಂದು ಮೀಸಲಾತಿ ಕಿತ್ತು ಹಾಕಿರುವುದು ತಪ್ಪು ಅಥವಾ ಸರಿ ಎಂದು ಹೇಳುವ ಅಧಿಕಾರವಿರುವುದು ಸುಪ್ರೀಂಕೋರ್ಟಿಗೆ. ಇದೀಗ ಸುಪ್ರೀಂಕೋರ್ಟ್ ಸರಕಾರದ ನಿರ್ಧಾರವನ್ನು ಪ್ರಶ್ನಿಸಿದೆ. ಇದನ್ನು ಬಿಜೆಪಿ ಹೇಗೆ ಸ್ವೀಕರಿಸುತ್ತದೆ? ಸರಕಾರದ ನಿರ್ಧಾರ ತಪ್ಪು ಎಂದು ಸುಪ್ರೀಂಕೋರ್ಟ್ ಹೇಳಿದರೆ, ಅದರ ವಿರುದ್ಧವೂ ತನ್ನ ಆಕ್ರೋಶವನ್ನು ವ್ಯಕ್ತಪಡಿಸುತ್ತದೆಯೆ? ಸುಪ್ರೀಂಕೋರ್ಟ್‌ನ ಆದೇಶವನ್ನು ವಿರೋಧಿಸುತ್ತದೆಯೆ?
ತನ್ನದೇ ಆದೇಶವನ್ನು ಸರಕಾರ ಒಂದೆಡೆ ಅಮಾನತುಗೊಳಿಸಿ, ಚುನಾವಣೆಯ ಪ್ರಚಾರದ ಸಂದರ್ಭದಲ್ಲಿ, ಲಿಂಗಾಯತರಿಗೆ ಮತ್ತು ಒಕ್ಕಲಿಗರಿಗೆ ಮೀಸಲಾತಿ ಹೆಚ್ಚಿಸಿದ್ದೇವೆ ಎಂದು ಹೇಳುತ್ತಿರುವುದು ದೊಡ್ಡ ವಂಚನೆಯಾಗಿದೆ. ಚುನಾವಣಾ ಪ್ರಚಾರ ನಡೆಯುತ್ತಿರುವ ಸಂದರ್ಭದಲ್ಲಿ ಸುಪ್ರೀಂಕೋರ್ಟ್‌ನಲ್ಲಿ ಮೀಸಲಾತಿ ವಿಚಾರಣೆಗೆ ಬರುವುದು ಬಿಜೆಪಿಗೆ ಬೇಕಾಗಿಲ್ಲ. ಯಾಕೆಂದರೆ ಒಂದು ವೇಳೆ ವಿಚಾರಣೆ ನಡೆಸಿ ಸುಪ್ರೀಂಕೋರ್ಟ್ ''ಸರಕಾರದ ಆದೇಶ ಸಂವಿಧಾನ ಬಾಹಿರ'' ಎಂದು ಘೋಷಿಸಿದಲ್ಲಿ, ಬಿಜೆಪಿಗೆ ಬಹುದೊಡ್ಡ ಹಿನ್ನಡೆಯಾಗುತ್ತದೆ. ಮೀಸಲಾತಿಯ ಹೆಸರಿನಲ್ಲಿ ಒಕ್ಕಲಿಗರು ಮತ್ತು ಲಿಂಗಾಯತರಿಗೆ ಮಾಡಿದ ವಂಚನೆ ಬಹಿರಂಗವಾಗುತ್ತದೆ. ಮುಸ್ಲಿಮರ ಮೀಸಲಾತಿ ಅವರಿಗೆ ದಕ್ಕಿದ್ದೇ ಆದರೆ, ಧರ್ಮಾಧಾರಿತ ಮೀಸಲಾತಿಯನ್ನು ರದ್ದುಗೊಳಿಸಿದ್ದೇವೆ ಎನ್ನುವ ಅದರ ದ್ವೇಷ ರಾಜಕಾರಣಕ್ಕೂ ದೊಡ್ಡ ಹಿನ್ನಡೆಯಾಗುತ್ತದೆ. ಈ ಕಾರಣದಿಂದಲೇ ಸದ್ಯಕ್ಕೆ, ಚುನಾವಣೆ ನಡೆಯುವವರೆಗೆ ವಿಚಾರಣೆ ಮುಂದೂಡಿದರೆ ಸಾಕಾಗಿದೆ. ಆದುದರಿಂದಲೇ, ಮೇ 9ರವರೆಗೆ ತನ್ನದೇ ಆದೇಶವನ್ನು ತಡೆ ಹಿಡಿಯಲು ಅದು ಒಪ್ಪಿಕೊಂಡಿದೆ.
ಚುನಾವಣೆ ನಡೆದ ಆನಂತರ ಸುಪ್ರೀಂಕೋರ್ಟ್ ಯಾವ ತೀರ್ಪು ನೀಡಿದರೂ ಅದಕ್ಕೆ ದೊಡ್ಡ ವ್ಯತ್ಯಾಸವಾಗುವುದಿಲ್ಲ. ಒಳ ಮೀಸಲಾತಿಯ ವಿಷಯದಲ್ಲೂ ಇದೇ ತಂತ್ರವನ್ನು ರಾಜ್ಯ ಸರಕಾರ ಹೂಡಿತ್ತು. ಚುನಾವಣೆ ಇನ್ನೇನೂ ಘೋಷಣೆಯಾಗುತ್ತದೆ, ಸರಕಾರದ ಅವಧಿ ಮುಗಿಯುತ್ತದೆ ಎನ್ನುವ ಹೊತ್ತಿನಲ್ಲಿ ಒಳ ಮೀಸಲಾತಿಯ ಬಗ್ಗೆ ನಿರ್ಧಾರವನ್ನು ತೆಗೆದುಕೊಂಡಿತು. ಆದರೆ ಇದರಿಂದ ದಲಿತರಿಗೆ ಯಾವುದೇ ಲಾಭವಾಗಲಿಲ್ಲ. ಆದರೆ ಕೊನೆಯಲ್ಲಿ ಬಿಜೆಪಿಯ ತಂತ್ರ ಅದಕ್ಕೆ ತಿರುಗಿ ಹೊಡೆಯಿತು. ಬಿಜೆಪಿಯ ಆದೇಶದ ವಿರುದ್ಧ ದಲಿತರೇ ತಿರುಗಿ ಬಿದ್ದರು. ಯಾವ ಪಕ್ಷಕ್ಕೆ 'ಮೀಸಲಾತಿ'ಯ ಬಗ್ಗೆ , ಸಾಮಾಜಿಕ ನ್ಯಾಯದ ಪರಿಕಲ್ಪನೆಯ ಬಗ್ಗೆ ನಂಬಿಕೆ ಇಲ್ಲವೋ ಆ ಪಕ್ಷ ಯಾವುದೇ ಶೋಷಿತ ಸಮುದಾಯಕ್ಕೆ ನ್ಯಾಯವನ್ನು ನೀಡುತ್ತೇನೆ ಎಂದು ಹೊರಟಾಗ ಅನ್ಯಾಯವಲ್ಲದೆ ಇನ್ನೇನೂ ಸಂಭವಿಸಲು ಸಾಧ್ಯವಿಲ್ಲ. ಬಿಜೆಪಿ ಸರಕಾರದ ಮೀಸಲಾತಿ ಆದೇಶದಿಂದ ಏಕಕಾಲದಲ್ಲಿ ಮುಸ್ಲಿಮರಿಗೆ, ದಲಿತರಿಗೆ, ಲಿಂಗಾಯತರಿಗೆ, ಒಕ್ಕಲಿಗರಿಗೆ ಅನ್ಯಾಯವಾಗಿದೆ ಮತ್ತು ಅನ್ಯಾಯವನ್ನು ಮುಚ್ಚಿ ಹಾಕಲು ಇದೀಗ ಸುಪ್ರೀಂಕೋರ್ಟ್ ನಲ್ಲಿ ರಾಜ್ಯ ಸರಕಾರ ನಾಟಕವಾಡುತ್ತಿದೆ.