ಟೆಹ್ರಾನ್ ಮೇಲಿನ ಉಗ್ರರ ದಾಳಿಗೆ ಅಮೆರಿಕದ ಬೆಂಬಲ: ಇರಾನ್ ನ್ಯಾಯಾಲಯ ತೀರ್ಪು

Update: 2023-04-26 18:06 GMT

ಟೆಹ್ರಾನ್, ಎ.26: ಇರಾನ್ ರಾಜಧಾನಿ ಟೆಹ್ರಾನ್ ಮೇಲೆ 2017ರಲ್ಲಿ ಐಸಿಸ್ ದಾಳಿ ನಡೆಸಿದೆ ಎಂದು ಪ್ರತಿಪಾದಿಸಿದ್ದ ಅಮೆರಿಕದ ವಿರುದ್ಧ  ಇರಾನ್ ನ ನ್ಯಾಯಾಲಯ 312.9 ದಶಲಕ್ಷ ಕೋಟಿ ಡಾಲರ್ ದಂಡ ವಿಧಿಸಿದೆ.

‌ಈ ಉಗ್ರರ ದಾಳಿಗೆ ಅಮೆರಿಕದ ಪಿತೂರಿ ಮತ್ತು ಪ್ರಚೋದನೆ ಕಾರಣವಾಗಿದೆ ಎಂದು ಇರಾನ್ ನ ನ್ಯಾಯಾಲಯದ ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಕನಿಷ್ಟ 18 ಮಂದಿಯ ಸಾವಿಗೆ ಮತ್ತು 50 ಮಂದಿ ಗಾಯಗೊಳ್ಳಲು ಕಾರಣವಾದ 2017ರ ದಾಳಿಯಲ್ಲಿ ಅಮೆರಿಕದ ಅಧಿಕಾರಿಗಳು ಯಾವುದೇ ಪಾತ್ರವನ್ನು ಹೊಂದಿದ್ದಾರೆ ಎಂಬ ನ್ಯಾಯಾಲಯದ ಆರೋಪವನ್ನು ಸಾಬೀತುಪಡಿಸುವ ಯಾವುದೇ ನೇರ ಪುರಾವೆಯನ್ನು ಇರಾನ್ ನ ಪತ್ರಿಕೆಗಳ ವರದಿಯಲ್ಲಿ ಉಲ್ಲೇಖಿಸಿಲ್ಲ. ಈ ದಾಳಿಯಲ್ಲಿ ಬಂದೂಕುಧಾರಿಗಳು ಆಯತುಲ್ಲಾ ರೂಹುಲ್ಲಾ ಖಾಮಿನೈಯವರ ಸಮಾಧಿ ಹಾಗೂ ಸಂಸತ್ತಿನ ಮೇಲೆ ದಾಳಿ ನಡೆಸಿದ್ದಲ್ಲದೆ ಸಂಸತ್ತಿನ ಮೇಲೆ ಹಲವು ಗಂಟೆ ಮುತ್ತಿಗೆ ಹಾಕಿದ್ದರು.

ನ್ಯಾಯಾಲಯದ ಆದೇಶವನ್ನು ಉಲ್ಲೇಖಿಸಿದ `ಇರ್ನಾ' ಸುದ್ಧಿಸಂಸ್ಥೆಯ ವರದಿಯಲ್ಲಿ `ಅಮೆರಿಕ ಸರಕಾರ, ಮಾಜಿ ಅಧ್ಯಕ್ಷರಾದ ಜಾರ್ಜ್ ಬುಷ್ ಮತ್ತು ಬರಾಕ್ ಒಬಾಮಾ, ಸಿಐಎ. ಅಮೆರಿಕ ಸೇನೆಯ ಸೆಂಟ್ರಲ್ ಕಮಾಂಡ್, ವಿತ್ತ ಸಚಿವಾಲಯ ಹಾಗೂ ಇತರರನ್ನು ಮೊಕದ್ದಮೆಯಲ್ಲಿ ಹೆಸರಿಸಲಾಗಿದೆ. ಭಯೋತ್ಪಾದಕರ ಗುಂಪುಗಳನ್ನು ಸಂಘಟಿಸುವಲ್ಲಿ ಮತ್ತು ನಿರ್ದೇಶಿಸುವಲ್ಲಿ ಈ ದೇಶದ ಸರಕಾರ ಮತ್ತು ಅಧಿಕಾರಿಗಳ ಮುಖ್ಯ ಪಾತ್ರವನ್ನು ಆಧರಿಸಿ ಈ ಅಪರಾಧಗಳನ್ನು ಅಮೆರಿಕಕ್ಕೆ ಆರೋಪಿಸಲಾಗಿದೆ ಎಂದು `ಇರ್ನಾ' ವರದಿ ಮಾಡಿದೆ ಮತ್ತು ಅಮೆರಿಕದ ಕೆಲವು ಅಧಿಕಾರಿಗಳ ಭಾಷಣವನ್ನು ಇದಕ್ಕೆ ಪುರಾವೆಯಾಗಿ ನೀಡಿದೆ.

2016ರ ಅಧ್ಯಕ್ಷೀಯ ಪ್ರಚಾರದ ಸಂದರ್ಭದಲ್ಲಿ ಡೊನಾಲ್ಡ್ ಟ್ರಂಪ್ ಅವರು ಒಬಾಮಾರನ್ನು ಐಸಿಸ್ ನ ಸ್ಥಾಪಕ ಎಂದು ಬಣ್ಣಿಸಿದ್ದರು. ಇರಾನ್ನ ಸರ್ವೋಚ್ಛ ಮುಖಂಡರ ವಿರುದ್ಧ , ಮಧ್ಯಪ್ರಾಚ್ಯದಾದ್ಯಂತ ಒಬಾಮಾ ಪಿತೂರಿ ಸಿದ್ಧಾಂತವನ್ನು ಮುನ್ನಡೆಸಿದ್ದಾರೆ ಎಂದು ಟ್ರಂಪ್ ಆರೋಪಿಸಿದ್ದರು. ಈ ಹೇಳಿಕೆಯನ್ನು ಇರಾನ್ ನ್ಯಾಯಾಲಯ ಆಧಾರವಾಗಿ ಒದಗಿಸಿದೆ.

ಅಮೆರಿಕದ ಅಧಿಕಾರಿಗಳು ಸ್ಥಂಭನೆಗೊಳಿಸಿರುವ ಇರಾನ್ ಸೆಂಟ್ರಲ್ ಬ್ಯಾಂಕ್ನ ಸುಮಾರು 2 ಶತಕೋಟಿ ಡಾಲರ್ ಆಸ್ತಿಗಳನ್ನು ಬಿಡುಗಡೆ ಮಾಡುವಂತೆ ಸೂಚಿಸಬೇಕು ಎಂಬ ಇರಾನ್ನ ಆಗ್ರಹವನ್ನು ವಿಶ್ವಸಂಸ್ಥೆಯ ಉನ್ನತ ನ್ಯಾಯಾಲಯ ತಳ್ಳಿಹಾಕಿದೆ.

Similar News