ಕುಡಿಯುವ ನೀರು ಚುನಾವಣೆಯ ವಿಷಯವಾಗಲಿ

Update: 2023-05-04 04:26 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ 

Full View

ಕರಾವಳಿ, ಮಲೆನಾಡು ಭಾಗದಲ್ಲಿ ಚುನಾವಣೆಯ ಕಾವು ಏರುತ್ತಿದೆ. ಅಮಿತ್ ಶಾ, ಪ್ರಧಾನಿ ಮೋದಿ ಸೇರಿದಂತೆ ರಾಷ್ಟ್ರಮಟ್ಟದ ನಾಯಕರ ದಂಡೇ ಆಗಮಿಸುತ್ತಿದೆ. ಬಿಸಿಲಿಗೆ ಧಗಿಸುತ್ತಿರುವ ಕರಾವಳಿಯಲ್ಲಿ ಭರವಸೆಯ ಭರ್ಜರಿ ಮಳೆ ಸುರಿಯುತ್ತಿದೆ. ಈ ಮಳೆಯಿಂದ ಬೆಳೆ ತೆಗೆಯುವಂತಿದ್ದರೆ, ಕರಾವಳಿ ಮತ್ತು ಮಲೆನಾಡು ಹಸಿರಿನಿಂದ ತುಂಬಿ ತುಳುಕುತ್ತಿತ್ತು. ನೇತ್ರಾವತಿ ದಡ ಹರಿದು ಊರಿಗೆ ಊರೇ ಮುಳುಗಿ ಹೋಗಿ ಬಿಡುತ್ತಿತ್ತು. ದುರದೃಷ್ಟವಶಾತ್, ಈ ಮಳೆ ಸುರಿಯುತ್ತಿರುವ ಹೊತ್ತಿಗೆ ಕರಾವಳಿ ಮತ್ತು ಮಲೆನಾಡು ನೀರಿಗಾಗಿ ಹಾಹಾಕಾರಗೈಯುತ್ತಿದೆ. ಕರಾವಳಿಯ ಜೀವನದಿಯಾಗಿ ಗುರುತಿಸಲ್ಪಡುತ್ತಿದ್ದ ನೇತ್ರಾವತಿ ಬರಡಾಗಿದ್ದು, ಮಕ್ಕಳು ಅದನ್ನು ಕ್ರಿಕೆಟ್ ಆಡುವ ಮೈದಾನವಾಗಿ ಬಳಕೆ ಮಾಡುತ್ತಿದ್ದಾರೆ. ಕರಾವಳಿಗೆ ಆಗಮಿಸಿದ ರಾಜಕಾರಣಿಗಳು ಈ ನೀರಿನ ಹಾಹಾಕಾರದ ಬಗ್ಗೆ ಕಿವುಡರಾಗಿದ್ದಾರೆ. ಜಿಲ್ಲೆಗೆ ಆಗಮಿಸುತ್ತಿರುವ ರಾಜಕಾರಣಿಗಳು ಎರಡು ಟ್ಯಾಂಕರ್ ನೀರಿನ ಜೊತೆಗೆ ಆಗಮಿಸುತ್ತಿದ್ದರೆ ತಾತ್ಕಾಲಿಕವಾಗಿಯಾದರೂ ಕುಡಿಯುವ ನೀರಿನ ಸಮಸ್ಯೆ ಬಗೆ ಹರಿದು ಬಿಡುತ್ತಿತ್ತು ಎನ್ನುವುದು ಸ್ಥಳೀಯರ ಮನದ ಮಾತಾಗಿದೆ.

ಕರಾವಳಿಯಲ್ಲಿ ಕುಡಿಯುವ ನೀರಿನ ಕೊರತೆಯ ಹಾಹಾಕಾರ ಇಂದು ನಿನ್ನೆಯದಲ್ಲ. ಅಭಿವೃದ್ಧಿಯ ಹೆಸರಿನಲ್ಲಿ ಮಂಗಳೂರಿಗೆ ಒಂದೊಂದೇ ಬೃಹತ್ ಯೋಜನೆಗಳು ಕಾಲಿಡುತ್ತಿದ್ದಂತೆಯೇ ಅವುಗಳ ನೀರಿನ ಅಗತ್ಯವನ್ನು ಪೂರೈಸುವ ಹೊಣೆ ಇಲ್ಲಿನ ಜೀವನದಿಯಾದ ನೇತ್ರಾವತಿಯ ಮೇಲೆ ಬಿತ್ತು. ಕೈಗಾರಿಕೆಗಳು, ಬೃಹತ್ ಉದ್ಯಮಗಳು ಹೆಚ್ಚುತ್ತಾ ಹೋದಂತೆಯೇ ನೇತ್ರಾವತಿ ಬಡಕಲಾಗುತ್ತಾ ಹೋದಳು. ಇದೇ ಸಂದರ್ಭದಲ್ಲಿ 'ಎತ್ತಿನ ಹೊಳೆ ಯೋಜನೆ' ಕರಾವಳಿಯ ಜನರ ಬದುಕಿನ ಮೇಲೆ ಬರೆಯನ್ನು ಹಾಕಿತು. ಎತ್ತಿನ ಹೊಳೆ ಯೋಜನೆಯಿಂದ ನೇತ್ರಾವತಿ ಸಂಪೂರ್ಣ ಬತ್ತಿ ಹೋದದ್ದು ಮಾತ್ರವ ಲ್ಲ, ಇಲ್ಲಿನ ಪ್ರಕೃತಿಯ ಹರಿವಿನ ಮೇಲೂ ತೀವ್ರ ಪರಿಣಾಮವನ್ನು ಬೀರಿತು. ಎತ್ತಿಹೊಳೆ ಯೋಜನೆಯಿಂದ ಕೋಲಾರದ ಭಾಗದ ಜನರಿಗೆ ಎಷ್ಟರಮಟ್ಟಿನ ಪ್ರಯೋಜನವಾಗಿದೆ ಎನ್ನುವುದು ಸ್ಪಷ್ಟವಿಲ್ಲ. ಆದರೆ ಕೋಟ್ಯಂತರ ಹಣವನ್ನು ಗುತ್ತಿಗೆದಾರರು, ರಾಜಕಾರಣಿಗಳು ಈ ಯೋಜನೆಯ ಹೆಸರಿನಲ್ಲಿ ತಮ್ಮದಾಗಿಸಿಕೊಂಡರು ಎನ್ನುವ ಆರೋಪಗಳಿವೆ. ಇದೇ ಸಂದರ್ಭದಲ್ಲಿ ಕರಾವಳಿಯ ಭಾಗದ ಜನರಿಗೆ ನೇತ್ರಾವತಿಯ ಆಶ್ರಯ ತಪ್ಪಿ ಅವರು ಕಂಗಾಲಾಗುವಂತಹ ಸ್ಥಿತಿ ನಿರ್ಮಾಣವಾಯಿತು.

ಕೊರೋನ ಲಾಕ್‌ಡೌನ್ ಕಾಲದಲ್ಲಿ ಕರಾವಳಿ ಭಾಗದಲ್ಲಿ ಕುಡಿಯುವ ನೀರಿಗೆ ಸಮಸ್ಯೆಯಾಗಲಿಲ್ಲ. ಕಾರಣ ಸ್ಪಷ್ಟ. ಎಲ್ಲ ಉದ್ಯಮಗಳು, ಹೊಟೇಲ್‌ಗಳು, ಕೈಗಾರಿಕೆಗಳು ಭಾಗಶಃ ಕಾರ್ಯಾಚರಿಸುತ್ತಿದ್ದ ಕಾರಣದಿಂದಾಗಿ ಜನಸಾಮಾನ್ಯರಿಗೆ ಕುಡಿಯುವ ನೀರಿನ ತತ್ವಾರ ಕಂಡು ಬರಲಿಲ್ಲ. ಕಳೆದ ಎರಡು ವರ್ಷಗಳ ಕಾಲ ನೀರಿನ ಬಗ್ಗೆ ಜನರ ಗೊಣಗಾಟಗಳಿರಲಿಲ್ಲ. ಇದೀಗ ಮತ್ತೆ ಜನರು ನೀರಿಗಾಗಿ ಹಪಹಪಿಸುವ ಸ್ಥಿತಿ ನಿರ್ಮಾಣವಾಗಿದೆ. ಜನಸಾಮಾನ್ಯರು ಆರೋಪಿಸುವಂತೆ, ಕೈಗಾರಿಕೆಗಳು, ಹೊಟೇಲ್ ಉದ್ಯಮಗಳು ಕನಿಷ್ಠ ತಮ್ಮ ಅಗತ್ಯಕ್ಕೆ ಬೇಕಾದಷ್ಟು ನೀರನ್ನಷ್ಟೇ ಸಂಗ್ರಹಿಸಿಟ್ಟರೆ ಈ ರೀತಿಯ ಸಮಸ್ಯೆಯನ್ನು ಎದುರಿಸಬೇಕಾಗಿರಲಿಲ್ಲ. ಆದರೆ ಬಹುತೇಕ ಬೃಹತ್ ಉದ್ಯಮಗಳು ಅಕ್ರಮವಾಗಿ ನೀರನ್ನು ದಾಸ್ತಾನು ಮಾಡುತ್ತವೆ ಎನ್ನುವುದು ಜನರ ದೂರು. ಬೃಹತ್ ಕಂಪೆನಿಗಳು ನೀರು ಸಂಗ್ರಹಿಸಿಡಲು ಅನಧಿಕೃತ ಸಂಗ್ರಹಾಗಾರವನ್ನು ಹೊಂದಿರುವ ಆರೋಪಗಳ ಕುರಿತಂತೆ ಜಿಲ್ಲಾಡಳಿತ ಗಂಭೀರ ಕ್ರಮವನ್ನು ತೆಗೆದುಕೊಂಡಿಲ್ಲ. ಜನರ ಕುಡಿಯುವ ನೀರಿನ ಅಗತ್ಯವನ್ನು ಪೂರೈಕೆ ಮಾಡಿದ ಬಳಿಕವಷ್ಟೇ ಕೈಗಾರಿಕೆಗಳಿಗೆ ನೀರನ್ನು ಒದಗಿಸಬೇಕು ಎಂದು ಜಲನೀತಿ ಹೇಳುತ್ತದೆಯಾದರೂ, ಕೈಗಾರಿಕೆಗಳಿಗೆ, ಬೃಹತ್ ಉದ್ಯಮಗಳಿಗೆ ನೀರನ್ನು ಒದಗಿಸಿದ ಬಳಿಕವೇ ಜನರ ಕುಡಿಯುವ ನೀರಿನ ಅಗತ್ಯ ಪೂರೈಸುವುದರ ಬಗ್ಗೆ ಜಿಲ್ಲಾಡಳಿತ ಯೋಚಿಸುತ್ತದೆ. ಕೃಷಿಕರ ಸಮಸ್ಯೆಯನ್ನಂತೂ ಕೇಳುವವರೇ ಇಲ್ಲ ಎನ್ನುವ ಸ್ಥಿತಿ ದಕ್ಷಿಣ ಕನ್ನಡ ಜಿಲ್ಲೆಯದ್ದು.

ಕೊರೋನೋತ್ತರ ದಿನಗಳಲ್ಲಿ ಇದೇ ಮೊದಲ ಬಾರಿಗೆ ಕರಾವಳಿ ನಗರ ಪ್ರದೇಶಗಳಲ್ಲಿ ನೀರಿನ ಸಮಸ್ಯೆ ತೀವ್ರವಾಗಿ ಕಾಡುತ್ತಿದೆ. ಬಹುತೇಕ ಬೋರ್‌ವೆಲ್‌ಗಳ ನೀರು ಕೂಡ ಬತ್ತಿವೆ. ಚುನಾವಣೆಯ ಸಂದರ್ಭದಲ್ಲಿ ಜನರು ನೀರಿನ ಕೊರತೆಯ ಬಗ್ಗೆ ಮಾತನಾಡಬಾರದು ಎನ್ನುವ ಕಾರಣಕ್ಕಾಗಿ ರಾಜಕಾರಣಿಗಳು ಅಧಿಕಾರಿಗಳಿಗೆ ಒತ್ತಡ ಹೇರಿ, ಗರಿಷ್ಠ ಮಟ್ಟದಲ್ಲಿ ನೀರನ್ನು ಒದಗಿಸುವ ಪ್ರಯತ್ನ ಪಡುತ್ತಿದ್ದಾರೆ. ಪರಿಣಾಮವಾಗಿ ಎರಡು ದಿನಕ್ಕೊಮ್ಮೆಯಾದರೂ ನಗರ ಪ್ರದೇಶದ ಜನರಿಗೆ ನೀರು ಸಿಗುತ್ತಿದೆ. ಮತದಾನ ಮುಗಿದ ಬಳಿಕ ನೀರಿನ ಕೊರತೆ ಇನ್ನಷ್ಟು ಭೀಕರವಾಗಲಿದೆ ಎನ್ನುವ ಶಂಕೆಯಿದೆ. ಇದೇ ಸಂದರ್ಭದಲ್ಲಿ ಉತ್ತರ ಕನ್ನಡ, ಚಿಕ್ಕಮಗಳೂರು ಜಿಲ್ಲೆ ಕೂಡ ನೀರಿನ ತತ್ವಾರವನ್ನು ಎದುರಿಸುತ್ತಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ 86 ಗ್ರಾಮಗಳು ನೀರಿನ ಸಮಸ್ಯೆಯನ್ನು ಎದುರಿಸುತ್ತಿದ್ದರೆ, ಉತ್ತರ ಕನ್ನಡ ಜಿಲ್ಲೆಯಲ್ಲಿಯೂ ನೀರಿನ ಅಭಾವದ ಆತಂಕವಿದೆ. ಬಿಸಿಲ ಝಳ ಹೀಗೇ ಮುಂದುವರಿದರೆ, ಉತ್ತರ ಕನ್ನಡ ಜಿಲ್ಲೆಯಲ್ಲಿ 100ಕ್ಕೂ ಅಧಿಕ ಗ್ರಾಮಗಳು ನೀರಿನ ಅಭಾವದಿಂದ ಕಂಗೆಡಬಹುದು ಎಂದು ಶಂಕಿಸಲಾಗಿದೆ.

ಎತ್ತಿನ ಹೊಳೆ ಯೋಜನೆಯನ್ನು ಕೈಗೆತ್ತಿಕೊಳ್ಳುವ ಸಂದರ್ಭದಲ್ಲೇ, ಕರಾವಳಿಯಲ್ಲಿ ನೀರಿನ ಸಮಸ್ಯೆ ಎದುರಾಗುವ ಬಗ್ಗೆ ಹಲವು ಪರಿಸರ ತಜ್ಞರು ಎಚ್ಚರಿಕೆ ನೀಡಿದ್ದರು. ಹಾಗೊಂದು ವೇಳೆ ಸಮಸ್ಯೆ ಎದುರಾದರೆ, ನೀರಿನ ಕೊರತೆಯನ್ನು ಹೇಗೆ ಸರಿದೂಗಿಸಬಹುದು ಎನ್ನುವುದರ ಬಗ್ಗೆ ಇನ್ನೂ ರಾಜಕಾರಣಿಗಳು ಗಂಭೀರವಾಗಿ ಯೋಚಿಸಿಲ್ಲ. ಕಡಲಿನ ನೀರನ್ನು ಸಂಸ್ಕರಿಸುವ ಬಗ್ಗೆ ಚರ್ಚೆಗಳು ಕೇಳಿ ಬರುತ್ತವೆಯಾದರೂ, ಇನ್ನೂ ಅದನ್ನು ಜಾರಿಗೊಳಿಸುವ ಬಗ್ಗೆ ಅಧಿಕೃತ ಹೆಜ್ಜೆಗಳನ್ನು ಇಟ್ಟಿಲ್ಲ. ನೀರಿನ ಸಮಸ್ಯೆ ಹೀಗೆಯೇ ಮುಂದುವರಿದರೆ, ಕರಾವಳಿಯ ಅಭಿವೃದ್ಧಿ ಕನಸುಗಳು ತಲೆಕೆಳಗಾಗಲಿವೆ. ಮಂಗಳೂರು, ಉಡುಪಿ ಜಿಲ್ಲೆಗಳಿಗೆ ಇನ್ನಷ್ಟು ಕೈಗಾರಿಕೆಗಳು, ಬೃಹತ್ ಕಂಪೆನಿಗಳು ಕಾಲಿಡುವ ಉತ್ಸಾಹದಲ್ಲಿವೆ. ಆದರೆ ಇವುಗಳಿಗೆ ಅತ್ಯಗತ್ಯವಾಗಿ ಪೂರೈಕೆ ಮಾಡಬೇಕಾದ ನೀರನ್ನು ಎಲ್ಲಿಂದ ಒದಗಿಸುತ್ತದೆ ಎನ್ನುವುದರ ಬಗ್ಗೆ ಸರಕಾರ ತಲೆಕೆಡಿಸುತ್ತಿಲ್ಲ.

ರಾಜಕಾರಣಿಗಳು ಕರಾವಳಿಯ ಕುಡಿಯುವ ನೀರು ಮತ್ತು ಕೃಷಿ ನೀರಿನ ಅಗತ್ಯದ ಬಗ್ಗೆ ಈ ಚುನಾವಣೆಯಲ್ಲಿ ಮಾತನಾಡಬೇಕಾಗಿದೆ. ಕೋಮುದ್ವೇಷದ ವಿಷ ಹಿಂಡಿ, ಕರಾವಳಿಯ ಜನರ ಎದೆಯೊಳಗಿರುವ ಪ್ರೀತಿಯ ಅಂತರ್ಜಲವನ್ನು ಬತ್ತಿಸಿ, ಅಲ್ಲಿ ಮತಗಳ ಬೆಳೆ ಬೆಳೆಯಲು ಹೊರಟ ಜನನಾಯಕರು, ಕರಾವಳಿಯಲ್ಲಿ ಬತ್ತುತ್ತಿರುವ ನೀರಿನ ಅಂತರ್ಜಲದ ಮಾತನಾಡುವ ನಿರೀಕ್ಷೆಯನ್ನು ಇಟ್ಟುಕೊಳ್ಳುವಂತಿಲ್ಲ. ತಮ್ಮ ಮನೆಬಾಗಿಲಿಗೆ ಮತಯಾಚಿಸಲು ಬರುವ ರಾಜಕಾರಣಿಗಳ ಮುಂದೆ ಜನರೇ ಬರಿದಾಗುತ್ತಿರುವ ನೇತ್ರಾವತಿ, ಇಂಗುತ್ತಿರುವ ಅಂತರ್ಜಲದ ಬಗ್ಗೆ ಮಾತನಾಡಬೇಕು. ಕರಾವಳಿಯ ಬೃಹತ್ ಸಭೆಗಳನ್ನುದ್ದೇಶಿಸಿ ಮಾತನಾಡಿದ ಯಾವನೇ ರಾಜಕಾರಣಿ, ಈವರೆಗೆ ಕರಾವಳಿಯ ಜನರ ನೀರಿನ ಅಗತ್ಯದ ಬಗ್ಗೆ ಮಾತನಾಡಿಲ್ಲ. ಜಲ ರಾಶಿಯ ಮಧ್ಯೆಯೇ ಇದ್ದು, ನೀರಿಗಾಗಿ ಚಡಪಡಿಸುತ್ತಿರುವ ಕರಾವಳಿ ನೀರಿನ ಕೊರತೆಯ ಬಗ್ಗೆ ಜಾಗೃತವಾಗದೇ ಇದ್ದರೆ, ಕರಾವಳಿಯ ಭವಿಷ್ಯ ಕರಾಳವಾಗಲಿದೆ.

Similar News