ಮಣಿಪುರ: ಸರಕಾರವೇ ಹಚ್ಚಿದ ಬೆಂಕಿ?
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ತನ್ನದೇ ಸಾಂಸ್ಕೃತಿಕ ಹಿರಿಮೆಯನ್ನು, ಸ್ವಂತಿಕೆಯನ್ನು ಹೊಂದಿರುವ ಮಣಿಪುರ ಸದಾ ಸುದ್ದಿಯಲ್ಲಿರುವ ರಾಜ್ಯ. ಸೇನೆಯ ವಿಶೇಷಾಧಿಕಾರ ಮತ್ತು ದೌರ್ಜನ್ಯಗಳಿಗಾಗಿ ಹಲವು ದಶಕಗಳ ಕಾಲ ಸುದ್ದಿಯಲ್ಲಿತ್ತು. ಪ್ರಭುತ್ವದ ವಿರುದ್ಧ ಸದಾ ಆತಂಕ, ಶಂಕೆ ಮಣಿಪುರದ ಜನರ ಆಳದಲ್ಲಿದೆ. ಆದುದರಿಂದಲೇ ಇಲ್ಲಿ ಹಿಂಸಾಚಾರ ಸ್ಫೋಟಿಸಲು ಸಣ್ಣ ಸಣ್ಣ ಕಾರಣಗಳು ಸಾಕಾಗಿ ಬಿಡುತ್ತದೆ. ಇದೀಗ ಮಣಿಪುರದಲ್ಲಿ ಅಲ್ಲಿನ ಮೇಟಿ ಸಮುದಾಯ ಮತ್ತು ಕುಕಿ ಸಮುದಾಯಗಳ ನಡುವೆ ಭುಗಿಲೆದ್ದ ಸಂಘರ್ಷ ಭಾರೀ ಸಾವು ನೋವುಗಳಿಗೆ ಕಾರಣವಾಗಿದೆ. 50ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದು, 200ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಸಾವಿರಾರು ಮಂದಿ ನಿರ್ವಸಿತರಾಗಿದ್ದಾರೆ. ಮಣಿಪುರದಲ್ಲಿ 355ನೇ ವಿಧಿಯನ್ನು ಹೇರಿಕೆ ಮಾಡಲಾಗಿದ್ದು, ಕಾನೂನು ಸುವ್ಯವಸ್ಥೆಯನ್ನು ಮರು ಸ್ಥಾಪಿಸುವ ಕೇಂದ್ರ ಮತ್ತು ರಾಜ್ಯ ಸರಕಾರಗಳ ಪ್ರಯತ್ನ ಇನ್ನೂ ಪೂರ್ಣ ಪ್ರಮಾಣದಲ್ಲಿ ಯಶಸ್ವಿಯಾಗಿಲ್ಲ. ಕೇಂದ್ರದಲ್ಲಿ ಮತ್ತು ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರಕಾರವಿದ್ದರೂ ಈ ಹಿಂಸಾಚಾರವನ್ನು ನಿಯಂತ್ರಿಸುವಲ್ಲಿ ಮುಖ್ಯಮಂತ್ರಿ ಬಿರೇಂದ್ರ ಸಿಂಗ್ ವಿಫಲರಾಗಿದ್ದಾರೆ. ಇಷ್ಟಕ್ಕೂ ಮುಖ್ಯಮಂತ್ರಿ ಬಿರೇಂದ್ರ ಸಿಂಗ್ ಅವರು ಮೇಟಿ ಸಮುದಾಯಕ್ಕೆ ಸೇರಿದವರಾಗಿರುವುದರಿಂದ, ನಡೆಯುವ ಹಿಂಸಾಚಾರದ ಕಳಂಕ ಅವರ ಮೈಗೂ ಅಂಟಿಕೊಂಡಿದೆ.
ಮಣಿಪುರದಲ್ಲಿ ನಾಗಾ-ಕುಕಿ ಬುಡಕಟ್ಟು ಜನರಿಗಿದ್ದ ಎಸ್‌ಟಿ ಸ್ಥಾನಮಾನವನ್ನು ಇಲ್ಲಿನ ಬಹುಸಂಖ್ಯಾತರಾಗಿರುವ ಮೇಟಿ ಸಮುದಾಯಕ್ಕೂ ನೀಡಬೇಕು ಎನ್ನುವ ಮಣಿಪುರ ಹೈಕೋರ್ಟ್‌ನ ಆದೇಶ ಹೊರ ಬಿದ್ದುದೇ ಈ ಹಿಂಸಾಚಾರಕ್ಕೆ ಮುಖ್ಯ ಕಾರಣ ಎನ್ನಲಾಗಿದೆ. ಮಣಿಪುರದಲ್ಲಿ ಕುಕಿ ಬುಡಕಟ್ಟು ಸಮುದಾಯಕ್ಕೆ ಹೋಲಿಸಿದರೆ ಮೇಟಿ ಸಮುದಾಯ ದೊಡ್ಡ ಸಂಖ್ಯೆಯಲ್ಲಿದೆ. ರಾಜಕೀಯವಾಗಿ ಮತ್ತು ಆರ್ಥಿಕವಾಗಿ ಈ ಸಮುದಾಯ ಹೆಚ್ಚು ಪ್ರಾತಿನಿಧ್ಯವನ್ನು ಹೊಂದಿದೆ ಎನ್ನಲಾಗುತ್ತಿದೆ. ಆದರೆ ಮಣಿಪುರದ ಗುಡ್ಡ ಗಾಡು ಪ್ರದೇಶಗಳಲ್ಲಿ ತಮ್ಮ ನಿಯಂತ್ರಣವನ್ನು ಸಾಧಿಸಬೇಕಾದರೆ ಮೇಟಿ ಸಮುದಾಯಕ್ಕೆ ದಲಿತ ಸ್ಥಾನಮಾನ ಪಡೆಯುವುದು ಅನಿವಾರ್ಯವಾಗಿದೆ. ಈ ಮೂಲಕ ತಮ್ಮ ಜನಸಂಖ್ಯೆಗೆ ಪೂರಕವಾಗಿ ನೆಲದ ಮೇಲೆ ಅಧಿಕಾರವನ್ನು ಚಲಾಯಿಸಬಹುದಾಗಿದೆ. ಇತ್ತೀಚೆಗೆ ಅಲ್ಲಿನ ರಾಜ್ಯ ಸರಕಾರ ಅರಣ್ಯಭೂಮಿಯ ಮೇಲೆ ನಡೆಸಿದ ದಾಳಿ, ಸ್ಥಳೀಯರ ಒತ್ತುವರಿ ಇತ್ಯಾದಿಗಳು ಬುಡಕಟ್ಟು ಜನರೊಳಗೆ ಸಾಕಷ್ಟು ಅಸಮಾಧಾನವನ್ನು ಸೃಷ್ಟಿಸಿತ್ತು. ತಮ್ಮ ಅಸ್ತಿತ್ವದ ಮೇಲೆ ದಾಳಿಯೊಂದು ಸರಕಾರದ ನೇತೃತ್ವದಲ್ಲಿ ಸಂಘಟಿತವಾಗುತ್ತಿದೆ ಎನ್ನುವ ಆತಂಕ ಅವರೊಳಗಿತ್ತು.
ಈ ಬುಡಕಟ್ಟು ಸಮುದಾಯಗಳಲ್ಲಿ ಬಹುತೇಕರು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡವರು ಎನ್ನುವುದೂ ಗಮನಾರ್ಹ. ಮೇಟಿ ಸಮುದಾಯಕ್ಕೆ ಎಸ್‌ಟಿ ಸ್ಥಾನಮಾನ ತಮ್ಮ ಮೇಲೆ ಭವಿಷ್ಯದಲ್ಲಿ ನಡೆಯಲಿರುವ ಇನ್ನಷ್ಟು ದಾಳಿಗೆ ಒಂದು ಪೂರ್ವ ಸಿದ್ಧತೆ ಎನ್ನುವ ಭಯ, ಆತಂಕ ಕುಕಿ ಬುಡಕಟ್ಟು ಜನರಲ್ಲಿ ವ್ಯಾಪಕವಾಗ ತೊಡಗಿತು. ಹೈಕೋರ್ಟ್ ಆದೇಶವನ್ನು ಕುಕಿ ಸಮುದಾಯ ತೀವ್ರವಾಗಿ ಪ್ರತಿಭಟಿಸುವುದಕ್ಕೂ ಇದು ಕಾರಣವಾಗಿದೆ. ಈಗಾಗಲೇ ರಾಜಕೀಯ, ಆರ್ಥಿಕ ಪ್ರಾತಿನಿಧ್ಯದಲ್ಲಿ ಬಲಿಷ್ಠ ಸಮುದಾಯವೆಂದೇ ಗುರುತಿಸಿಕೊಂಡಿರುವ ಮೇಟಿ, ಎಸ್‌ಟಿ ಸ್ಥಾನಮಾನ ಪಡೆದುಕೊಂಡರೆ, ಇಲ್ಲಿನ ಬುಡಕಟ್ಟು ಸಮುದಾಯದ ಮೇಲೆ ಬೇರೆ ಬೇರೆ ನೆಲೆಗಳಲ್ಲಿ ಇನ್ನಷ್ಟು ತೀವ್ರವಾದ ದಾಳಿಗಳು ಆರಂಭವಾಗಬಹುದು ಎನ್ನುವ ಭಯದಿಂದ, ಮೇಟಿ ಸಮುದಾಯಕ್ಕೆ ಎಸ್‌ಟಿ ಸ್ಥಾನಮಾನ ನೀಡುವುದರ ವಿರುದ್ಧ ಕುಕಿ ಸಂಘಟನೆಗಳು ಪ್ರತಿಭಟನಾ ಸಭೆಗಳನ್ನು ಹಮ್ಮಿಕೊಂಡವು. ಈ ಪ್ರತಿಭಟನೆ ಅಂತಿಮವಾಗಿ ಎರಡು ಸಮುದಾಯಗಳ ನಡುವಿನ ನೇರ ಮುಖಾಮುಖಿ ಸಂಘರ್ಷಕ್ಕೆ ಕಾರಣವಾಯಿತು ಎನ್ನುವುದು ಸ್ಥಳೀಯರ ಅಭಿಮತ.
ಸ್ಥಳೀಯ ಬುಡಕಟ್ಟು ಸಂಘಟನೆಗಳು ಈ ಹಿಂಸಾಚಾರಕ್ಕೆ ರಾಜ್ಯ ಸರಕಾರವನ್ನು ನೇರವಾಗಿ ಹೊಣೆ ಮಾಡಿದೆ. ಈ ಹಿಂಸಾಚಾರಗಳ ಸಂದರ್ಭದಲ್ಲಿ ಚರ್ಚುಗಳ ಮೇಲೆ ನೇರ ದಾಳಿಗಳು ನಡೆದಿವೆ. ಅತಿ ಹೆಚ್ಚು ಸಾವು ನೋವುಗಳು ಸಂಭವಿಸಿರುವುದು ಕುಕಿ ಸಮುದಾಯಗಳ ಜನರದ್ದು . ಕುಕಿ ಬುಡಕಟ್ಟಿನ 30 ಮಂದಿ ಮೃತರಾಗಿದ್ದು 130ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ಕುಕಿ ಸಂಘಟನೆಗಳು ಆರೋಪಿಸಿವೆ. ಮೇಟಿ ಸಮುದಾಯವನ್ನು ಭಾವನಾತ್ಮಕವಾಗಿ ಪ್ರಚೋದಿಸಿ ಅವರನ್ನು ಬುಡಕಟ್ಟು ಜನರ ಮೇಲೆ ಎತ್ತಿ ಕಟ್ಟುತ್ತಿದೆ ಎನ್ನುವುದು ಸಂಘಟನೆಗಳ ಇನ್ನೊಂದು ಪ್ರಮುಖ ಆರೋಪ. ಎಲ್ಲಕ್ಕಿಂತ ಮುಖ್ಯವಾಗಿ ಮೇಟಿ ಸಮುದಾಯಗಳ ನಡುವೆ ಸಂಘಪರಿವಾರ 'ಹಿಂದುತ್ವದ ವಿಷ ಬೀಜ'ಗಳನ್ನು ಬಿತ್ತುತ್ತಿವೆ. ಕುಕಿ ಉಗ್ರಗಾಮಿ ಸಂಘಟನೆಗಳು ಗ್ರಾಮಗಳ ಮೇಲೆ ದಾಳಿ ನಡೆಸಿದಾಗ ಅದನ್ನು 'ಕುಕಿ ಉಗ್ರರಿಂದ ಹಿಂದೂ ಗ್ರಾಮಗಳ ಮೇಲೆ ದಾಳಿ' ಎಂದು ಬಿಂಬಿಸುವ ಪ್ರಯತ್ನವನ್ನೂ ಹಿಂದುತ್ವವಾದಿ ಸಂಘಟನೆಗಳು ನಡೆಸಿದವು. ಅಲ್ಲಿನ ಸಂಘರ್ಷಗಳನ್ನು ಕ್ರಿಶ್ಚಿಯನ್ ವರ್ಸಸ್ ಹಿಂದೂಗಳ ನಡುವಿನ ಹೋರಾಟವಾಗಿ ಪರಿವರ್ತಿಸುವ ಪ್ರಯತ್ನ ನಡೆಯುತ್ತಿದೆ ಎನ್ನುವ ಆರೋಪಗಳನ್ನು ಕುಕಿ ಸಂಘಟನೆಗಳು ಮಾಡುತ್ತಿವೆ. ಮಣಿಪುರದ ಹಿಂಸಾಚಾರದಲ್ಲಿ ಸರಕಾರದ ವೈಫಲ್ಯವನ್ನು ಸರಕಾರದ ಭಾಗವಾಗಿರುವ ಶಾಸಕರೇ ಎತ್ತಿ ತೋರಿಸುತ್ತಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಸರಕಾರದ ಕೈವಾಡವನ್ನು ಸ್ಥಳೀಯರು ಗುರುತಿಸುತ್ತಿದ್ದಾರೆ.
ತುಳಿತಕ್ಕೊಳಗಾಗಿರುವ, ಸಾಮಾಜಿಕ ಅಸಮಾನತೆಗಳಿಂದ ನೊಂದಿರುವ ಸಮುದಾಯಗಳನ್ನು ಮೇಲೆತ್ತುವುದಕ್ಕಾಗಿ ಮೀಸಲಾತಿಗಳನ್ನು, ದಲಿತ ಸ್ಥಾನಮಾನಗಳನ್ನು ಸಂವಿಧಾನ ಕೊಟ್ಟಿದೆ. ಅವುಗಳನ್ನು ತನ್ನ ಭಾವನಾತ್ಮಕ ರಾಜಕೀಯಗಳಿಗೆ ದುರ್ಬಳಕೆ ಮಾಡಿದಾಗ ಏನಾಗಬಹುದು ಎನ್ನುವುದಕ್ಕೆ ಉದಾಹರಣೆಯಾಗಿದೆ ಮಣಿಪುರ. ಇತ್ತೀಚೆಗೆ ಕರ್ನಾಟಕದಲ್ಲೂ, ಈ ಮೀಸಲಾತಿಗಳನ್ನು ಮುಂದಿಟ್ಟು ಸಮುದಾಯಗಳ ನಡುವೆ ಬಿರುಕು ಬಿತ್ತುವುದಕ್ಕೆ ಬಿಜೆಪಿ ಸರಕಾರ ಪ್ರಯತ್ನಿಸಿತ್ತು. ಮುಸ್ಲಿಮರಿಗೆ ಸಂವಿಧಾನಬದ್ಧವಾಗಿ ನೀಡಲಾಗಿರುವ ಮೀಸಲಾತಿಯನ್ನು ಅಸಾಂವಿಧಾನಿಕ ಮಾರ್ಗದಲ್ಲಿ ಕಿತ್ತು ಹಾಕಿರುವುದು ಮಾತ್ರವಲ್ಲ, ಆ ಮೀಸಲಾತಿಯನ್ನು ಒಕ್ಕಲಿಗ, ಲಿಂಗಾಯತ ಸಮುದಾಯಕ್ಕೆ ಸರಕಾರ ಹಂಚಿತು. ಈ ಮೂಲಕ ಈ ನಾಡಿನಲ್ಲಿರುವ ಮುಸ್ಲಿಮರು, ಲಿಂಗಾಯತರು, ಒಕ್ಕಲಿಗರ ನಡುವೆ ಸಂಘರ್ಷಗಳನ್ನು ಸೃಷ್ಟಿಸುವುದಷ್ಟೇ ಸರಕಾರದ ಉದ್ದೇಶವಾಗಿತ್ತು.
ಸರಕಾರಕ್ಕೆ ಬೇಕಾಗಿದ್ದುದು ಮೀಸಲಾತಿಯ ಮೂಲಕ ಜನರನ್ನು ಉದ್ಧರಿಸುವುದಲ್ಲ. ಮೀಸಲಾತಿಗಾಗಿ ಪರಸ್ಪರ ಕಚ್ಚಾಡಿಸಿ ಸಮಾಜವನ್ನು ಒಡೆದು ಚುನಾವಣೆಗೆ ತಮಗೆ ಪೂರಕವಾದ ವಾತಾವರಣವನ್ನ ಸೃಷ್ಟಿಸುವುದು. ಸರಕಾರದ ಈ ದುರಾಲೋಚನೆಯನ್ನು ಅರ್ಥ ಮಾಡಿಕೊಂಡ ಮುಸ್ಲಿಮರು, ಒಕ್ಕಲಿಗರು ಮತ್ತು ಲಿಂಗಾಯತರು ತಾಳ್ಮೆಯಿಂದ, ಮುತ್ಸದ್ದಿತನದಿಂದ ನಡೆದುಕೊಂಡರು. ಆದರೆ ಒಳ ಮೀಸಲಾತಿಗೆ ಸಂಬಂಧಿಸಿದಂತೆ ದಲಿತರ ಒಂದು ಗುಂಪು ತಾಳ್ಮೆಯನ್ನು ಕಳೆದುಕೊಂಡು ಸರಕಾರದ ನಿರ್ಧಾರದ ವಿರುದ್ಧ ಬೀದಿಗಿಳಿದು ಪ್ರತಿಭಟನೆ ಮಾಡಿತು. ಪೊಲೀಸರ ಜೊತೆಗೆ ಸಂಘರ್ಷಗಳು ನಡೆದವು. ಮಣಿಪುರದಂತಹ ಸೂಕ್ಷ್ಮ ಪ್ರದೇಶದಲ್ಲಿ ಮೀಸಲಾತಿ, ದಲಿತ ಸ್ಥಾನಮಾನಗಳನ್ನು ತನ್ನ ರಾಜಕೀಯಕ್ಕೆ ದುರ್ಬಳಕೆ ಮಾಡಲು ಹೊರಟ ಪರಿಣಾಮವನ್ನು ಅಲ್ಲಿನ ಜನರು ಅನುಭವಿಸು ತ್ತಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬರದೇ ಇದ್ದರೆ ರಾಜ್ಯದಲ್ಲಿ ಗಲಭೆಗಳಾಗುತ್ತವೆ ಎಂದು ಅಮಿತ್ ಶಾ ಕರ್ನಾಟಕದಲ್ಲಿ ಬೆದರಿಸಿದ್ದರು. ಮಣಿಪುರದಲ್ಲಿ ಬಿಜೆಪಿ ಅಧಿಕಾರಲ್ಲಿದೆ. ಆದರೂ ಅದು ಹೊತ್ತಿ ಉರಿಯಿತು. ಅಪಾರ ಸಾವು ನೋವುಗಳು ಸಂಭವಿಸಿದವು. ಇದರ ಹೊಣೆಯನ್ನು ಗೃಹ ಸಚಿವ ಅಮಿತ್ ಶಾ ಹೊತ್ತುಕೊಂಡು ರಾಜೀನಾಮೆ ನೀಡುತ್ತಾರೆಯೆ? ಎಂದು ಮಣಿಪುರದ ಜನರು ಕೇಳುತ್ತಿದ್ದಾರೆ. ಆದರೆ, ಕರ್ನಾಟಕದ ಚುನಾವಣೆಯ ಗದ್ದಲದಲ್ಲಿ ಮೈ ಮರೆತಿರುವ ಅಮಿತ್ ಶಾ ಅವರಿಗೆ ಮಣಿಪುರದ ಜನರ ಪ್ರಶ್ನೆಗಳು ಕೇಳಿಸುತ್ತಿಲ್ಲ.