ಕನ್ನಡಿಯ ಮೇಲೆಯೇ ವಿಶ್ವಾಸ ಕಳೆದುಕೊಂಡರೆ?
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಸುಪ್ರೀಂ ಕೋರ್ಟ್‌ನಲ್ಲಿ ಬಿಲ್ಕಿಸ್ ಬಾನು ಪ್ರಕರಣದ ಅಪರಾಧಿಗಳ ಬಿಡುಗಡೆ ಪ್ರಶ್ನಿಸುವ ಅರ್ಜಿಗಳ ಆಲಿಕೆಯ ಸಂದರ್ಭದಲ್ಲಿ ನ್ಯಾಯಮೂರ್ತಿ ಕೆ.ಎಂ. ಜೋಸೆಫ್ ನೇತೃತ್ವದಲ್ಲಿ ನ್ಯಾಯಪೀಠವು ವ್ಯಕ್ತಪಡಿಸಿದ ಅನಿಸಿಕೆಯೊಂದು ಈ ದೇಶದ ಪತ್ರಿಕಾ ಸ್ವಾತಂತ್ರದ ಚರ್ಚೆಯಾಗಿ ಬದಲಾಯಿತು. ಬಿಲ್ಕಿಸ್ ಬಾನು ಪ್ರಕರಣದ ಅಪರಾಧಿಗಳ ಬಿಡುಗಡೆ ಪ್ರಶ್ನಿಸುವ ಅರ್ಜಿಗಳ ಮುಂದಿನ ಆಲಿಕೆಯ ದಿನಾಂಕವನ್ನು ನ್ಯಾಯಾಲಯವು ಜುಲೈ 10ಕ್ಕೆ ನಿಗದಿ ಪಡಿಸಿ, ಈ ಕುರಿತ ನೋಟಿಸನ್ನು ಸುದ್ದಿ ಪತ್ರಿಕೆಗಳಲ್ಲಿ ಪ್ರಕಟಿಸುವಂತೆ ಆದೇಶಿಸಿತು. ಈ ನೋಟಿಸನ್ನು ಯಾವ ಸುದ್ದಿ ಪತ್ರಿಕೆಗಳಲ್ಲಿ ಪ್ರಕಟಿಸಬೇಕು ಎನ್ನುವ ಚರ್ಚೆಯ ಸಂದರ್ಭದಲ್ಲಿ, ನ್ಯಾಯಮೂರ್ತಿಯವರು ‘‘ಭಾರತದಲ್ಲಿ ಒಂದು ಲಕ್ಷಕ್ಕೂ ಅಧಿಕ ಸುದ್ದಿ ಪತ್ರಿಕೆಗಳಿವೆ. ಆದರೆ ಜಾಗತಿಕ ಪತ್ರಿಕಾ ಸ್ವಾತಂತ್ರ ಸೂಚ್ಯಂಕದಲ್ಲಿ ನಾವು 161ನೇ ಸ್ಥಾನದಲ್ಲಿದ್ದೇವೆ’’ ಎಂದು ಕಳವಳ ವ್ಯಕ್ತಪಡಿಸಿದ್ದರು. ಇದು ಸರಕಾರದ ಪರ ನ್ಯಾಯವಾದಿ ಅಟಾರ್ನಿ ಜನರಲ್ ತುಷಾರ್ ಮೆಹ್ತಾ ಅವರನ್ನು ತೀವ್ರ ಮುಜುಗರಕ್ಕೆ ಸಿಲುಕಿಸಿ ಅವರು ‘‘ಸೂಚ್ಯಂಕ ನೀಡುವಿಕೆಯ ಕ್ರಮ ವಿಶ್ವಾಸಾರ್ಹವಲ್ಲ’’ ಎಂದು ನ್ಯಾಯಾಲಯದಲ್ಲಿ ಸಮರ್ಥನೆ ಮಾಡಿ ಮುಖ ಉಳಿಸಿಕೊಳ್ಳುವ ಪ್ರಯತ್ನವನ್ನು ನಡೆಸಿದರು. ಬಿಲ್ಕಿಸ್ ಬಾನು ಪ್ರಕರಣದ ವಿಚಾರಣೆಗೂ, ಈ ಚರ್ಚೆಗೂ ಯಾವ ಸಂಬಂಧವೂ ಇಲ್ಲದೇ ಇದ್ದರೂ, ಕೇಂದ್ರದ ಪರವಾಗಿ ಸುಪ್ರೀಂಕೋರ್ಟ್‌ನಲ್ಲಿ ಅಟಾರ್ನಿ ಜನರಲ್ ಅವರು ಸರಕಾರವನ್ನು ಸಮರ್ಥಿಸಿದ ರೀತಿ ನಮ್ಮನ್ನಾಳುತ್ತಿರುವುದು ‘ಯಾವತ್ತೂ ಕನ್ನಡಿಯನ್ನು ನೋಡಿಕೊಳ್ಳದ ಸರಕಾರ’ ಎನ್ನುವುದನ್ನು ಮತ್ತೊಮ್ಮೆ ಸ್ಪಷ್ಟವಾಗಿಸಿದೆ.
2022ರಲ್ಲಿ ಜಾಗತಿಕ ಪತ್ರಿಕಾ ಸ್ವಾತಂತ್ರ ಸೂಚ್ಯಂಕದಲ್ಲಿ 180 ರಾಷ್ಟ್ರಗಳ ಪಟ್ಟಿಯಲ್ಲಿ ಭಾರತದ ರ್ಯಾಂಕಿಂಗ್ 150ರಿಂದ 161ಕ್ಕೆ ಕುಸಿದಿತ್ತು. ‘‘ರಿಪೋರ್ಟರ್ಸ್ ಸ್ಯಾನ್ಸ್ ಫ್ರಂಟಿಯರ್’ ತನ್ನ ಮೇ 2ರ ವರದಿಯಲ್ಲಿ ಈ ಮಾಹಿತಿಯನ್ನು ನೀಡಿತ್ತು. ಈ ವರದಿಯನ್ನು ಕೇಂದ್ರ ಸರಕಾರ ಅಂದೇ ಪ್ರಶ್ನಿಸಿತ್ತು ಮಾತ್ರವಲ್ಲ, ಈ ವರದಿಗೆ ಅನುಸರಿಸಿರುವ ವಿಧಾನದ ಬಗ್ಗೆ ಆಕ್ಷೇಪವನ್ನು ವ್ಯಕ್ತಪಡಿಸಿತ್ತು. ಕೇಂದ್ರ ಮಾಹಿತಿ ಹಾಗೂ ಪ್ರಸಾರ ಖಾತೆಯ ಸಚಿವ ಅನುರಾಗ್ ಠಾಕೂರ್ ಅವರು ಕೂಡ ಭಾರತದ ರ್ಯಾಂಕಿಂಗ್‌ಗೆ ತನ್ನ ಅಸಮ್ಮತಿಯನ್ನು ವ್ಯಕ್ತಪಡಿಸಿದ್ದರು. ಆದರೆ ಭಾರತದಲ್ಲಿ ಪತ್ರಿಕಾ ಸ್ವಾತಂತ್ರದ ಮೇಲೆ ಕೇಂದ್ರ ಸರಕಾರದ ನೇತೃತ್ವದಲ್ಲಿ ನಡೆಯುತ್ತಿರುವ ದಾಳಿಗಳು ಗುಟ್ಟಾಗಿಲ್ಲ. ಮಾಧ್ಯಮಗಳ ವಿರುದ್ಧ ಸರಕಾರ ಬಹಿರಂಗವಾಗಿಯೇ ಸಮರ ಸಾರಿದೆ. ಗುಜರಾತ್ ಹತ್ಯಾಕಾಂಡದ ವಿರುದ್ಧ ಬಿಬಿಸಿ ಸಾಕ್ಷ ಚಿತ್ರವೊಂದನ್ನು ಹೊರತಂದಾಗ ಈ ಅಂತರ್‌ರಾಷ್ಟ್ರೀಯ ಮಟ್ಟದ ಸಂಸ್ಥೆ ಏನೆಲ್ಲ ಸಮಸ್ಯೆಯನ್ನು ಎದುರಿಸಬೇಕಾಯಿತು ಎನ್ನುವುದನ್ನು ನಾವು ಕಂಡಿದ್ದೇವೆ. ಒಂದು ಕಾಲದಲ್ಲಿ ಪತ್ರಕರ್ತರ ಮೇಲೆ ನೇರ ದಾಳಿಯನ್ನು ನಡೆಸಿ ಅವರನ್ನು ಬೆದರಿಸುವ ಪ್ರಯತ್ನ ನಡೆಯುತ್ತಿದ್ದರೆ, ಇಂದು ಪತ್ರಿಕಾ ಸಂಸ್ಥೆಗಳ ಮೇಲೆಯೇ ದಾಳಿ ನಡೆಯುತ್ತಿವೆ. ಹಿಂದೆ ಪತ್ರಕರ್ತರ ಮೇಲೆ ನಡೆಯುವ ದಾಳಿಯಲ್ಲಿ ಯಾವನೋ ಒಬ್ಬ ನೇತಾರನೋ, ಗೂಂಡಾನೋ ಇದ್ದರೆ ಇಂದು ಸರಕಾರವೇ ಈ ಸಂಘಟಿತ ದಾಳಿಯ ನೇತೃತ್ವವನ್ನು ವಹಿಸಿದೆ. ಇತ್ತೀಚೆಗೆ ಟಿವಿ ಚಾನೆಲ್ ಒಂದನ್ನು ಶಾಶ್ವತವಾಗಿ ಮುಚ್ಚಿಸಲು ಹೊರಟು ನ್ಯಾಯಾಲಯದಿಂದ ತೀವ್ರ ಮುಖಭಂಗಕ್ಕೀಡಾದ ಪ್ರಕರಣವನ್ನು ನಾವು ಉದಾಹರಣೆಯಾಗಿ ತೆಗೆದುಕೊಳ್ಳೋಣ.
ದಿಲ್ಲಿ ಗಲಭೆಯಂತಹ ವರದಿಗಳನ್ನು ಪ್ರಸಾರ ಮಾಡುವಾಗ ಮಾಧ್ಯಮಗಳು ಭಾರತದಲ್ಲಿ ಎಂತಹ ಸವಾಲುಗಳನ್ನು ಎದುರಿಸಬೇಕಾಗುತ್ತದೆ ಎನ್ನುವುದನ್ನು ಈ ಪ್ರಕರಣದಲ್ಲಿ ಕಂಡುಕೊಳ್ಳಬಹುದು. ದಿಲ್ಲಿ ಗಲಭೆಯ ವಾಸ್ತವಗಳನ್ನು ಬಹುತೇಕ ಮಾಧ್ಯಮಗಳು ಮುಚ್ಚಿ ಹಾಕುತ್ತಿರುವಾಗ, ಅವುಗಳನ್ನು ಪ್ರಸಾರ ಮಾಡಲು ಧೈರ್ಯ ತೋರಿದ ಮಾಧ್ಯಮಗಳನ್ನು ಬೇರೆ ಬೇರೆ ತಂತ್ರಗಳ ಮೂಲಕ ಸರಕಾರ ಮಣಿಸಲು ಮುಂದಾಯಿತು. ಕೇರಳದ ಟಿವಿ ವಾಹಿನಿಯೊಂದನ್ನು ‘ಆಂತರಿಕ ಭದ್ರತೆ’ಯ ನೆಪವೊಡ್ಡಿ ನಿಷೇಧಿಸಲು ಹೊರಟಿತು. ಇತ್ತೀಚೆಗಷ್ಟೇ ಸರಕಾರದ ನಿರ್ಧಾರದ ವಿರುದ್ಧ ಸುಪ್ರೀಂಕೋರ್ಟ್ ತೀರ್ಪನ್ನು ನೀಡಿತು. ಸರಕಾರದ ‘ಆಂತರಿಕ ಭದ್ರತೆ’ಯ ದುರುಪಯೋಗವನ್ನು ಖಂಡಿಸಿತು. ಸರಕಾರ ಉದ್ದೇಶಪೂರ್ವಕವಾಗಿ ಒಂದು ಟಿವಿ ವಾಹಿನಿಯನ್ನು ಇಲ್ಲವಾಗಿಸಲು ನಡೆಸಿದ ಪ್ರಯತ್ನವನ್ನು ಅಟಾರ್ನಿ ಜನರಲ್ ಏನೆಂದು ಕರೆಯುತ್ತಾರೆ? ಸೂಚ್ಯಂಕದ ವಿಶ್ವಾಸಾರ್ಹತೆಯನ್ನು ಅನುಮಾನಿಸಿದಂತೆಯೇ ಸುಪ್ರೀಂಕೋರ್ಟ್‌ನ ತೀರ್ಪಿನ ವಿಶ್ವಾಸಾರ್ಹತೆಯನ್ನು ಕೂಡ ಸರಕಾರ ಅನುಮಾನಿಸುತ್ತದೆಯೆ? ಹಾಥರಸ್‌ನಲ್ಲಿ ದಲಿತ ಮಹಿಳೆಯ ಮೇಲೆ ನಡೆದ ಅತ್ಯಾಚಾರ ಕೊಲೆ ಪ್ರಕರಣವನ್ನು ವರದಿ ಮಾಡಲೆಂದು ಹೋದ ಪತ್ರಕರ್ತರನ್ನು ಬಂಧಿಸಿ ಸುಮಾರು ಎರಡು ವರ್ಷಗಳ ಕಾಲ ಜೈಲಲ್ಲಿಡುತ್ತದೆ. ಅವರಿಗೆ ಮಾನಸಿಕವಾಗಿ, ದೈಹಿಕವಾಗಿ ದೌರ್ಜನ್ಯಗಳನ್ನು ಎಸಗಿ ಅವರನ್ನು ಬಿಡುಗಡೆ ಮಾಡುತ್ತದೆ. ಅತ್ಯಾಚಾರ ಆರೋಪಿಗಳು ಸಾರ್ವಜನಿಕವಾಗಿ ಮುಕ್ತವಾಗಿ ಓಡಾಡುತ್ತಿದ್ದರೆ ಅದನ್ನು ವರದಿ ಮಾಡಲು ಹೋಗಿರುವ ಪತ್ರಕರ್ತರು ವಿಚಾರಣೆಯನ್ನು ಎದುರಿಸುತ್ತಿದ್ದಾರೆ. ಇದನ್ನು ದೇಶದ ಪತ್ರಿಕಾ ಸ್ವಾತಂತ್ರದ ಹೆಗ್ಗಳಿಕೆಯೆಂದು ಜಗತ್ತು ಭಾವಿಸಬೇಕೆ?
ಭಾರತದಲ್ಲಿ ಪತ್ರಿಕಾ ಸ್ವಾತಂತ್ರದ ದಮನ ಬೇರೆ ಬೇರೆ ರೂಪಗಳನ್ನು ಪಡೆದುಕೊಂಡಿದೆ. ಗೂಂಡಾಗಳ ಮೂಲಕ ಪತ್ರಕರ್ತರಿಗೆ ಬೆದರಿಸುವ, ಅವರ ಮೇಲೆ ದಾಳಿ ನಡೆಸುವ ಪದ್ಧತಿ ಹಳೆಯದಾಗಿದೆ. ಇದು ಪೊಲೀಸರ ಮೂಲಕ, ವಿವಿಧ ತನಿಖಾ ಸಂಸ್ಥೆಗಳ ಮೂಲಕ ಪತ್ರಿಕೆಯನ್ನು ದಮನಿಸುವ ಕಾಲ. ಎಲ್ಲಕ್ಕಿಂತ ಮುಖ್ಯವಾಗಿ ಪತ್ರಿಕೆಗಳನ್ನು ಹಣದ ಮೂಲಕ ಖರೀದಿಸುವ ಸುಲಭ ದಾರಿಯೊಂದನ್ನು ಕೂಡ ಸರಕಾರ ಕಂಡುಕೊಂಡಿದೆ. ‘ಖರೀದಿ’ಯ ಸಂದರ್ಭದಲ್ಲಿ ಪತ್ರಿಕಾ ದಮನದ ಪ್ರಶ್ನೆಯೇ ಎದುರಾಗುವುದಿಲ್ಲ. ತನ್ನ ಬೆಂಬಲಿಗ ಉದ್ಯಮಿಗಳ ಮೂಲಕ ಪತ್ರಿಕೆಯನ್ನು ಕೊಂಡುಕೊಳ್ಳುವುದು ಅಥವಾ ಅವುಗಳಿಗೆ ಆರ್ಥಿಕ ಆಮಿಶ ಒಡ್ಡುವ ಮೂಲಕ ತನ್ನ ವಿರುದ್ಧ ಮಾತನಾಡದಂತೆ ತಡೆಯುವುದಕ್ಕೆ ಅದು ಪ್ರಯತ್ನಿಸುತ್ತಿದೆ. ಮೊದಲನೆಯದಾಗಿ ಪತ್ರಿಕೆಗಳು ಲಾಭದಾಯಕವಾಗಿ ನಡೆಯುವ ಸ್ಥಿತಿ ದೇಶದಲ್ಲಿ ಇಲ್ಲ. ಬೃಹತ್ ಕಾರ್ಪೊರೇಟ್ ಶಕ್ತಿಗಳ ನೆರವಿಲ್ಲದೆ ಟಿವಿ ಚಾನೆಲ್‌ಗಳು, ಪತ್ರಿಕೆಗಳು ನಡೆಯುವುದೇ ಕಷ್ಟ ಎನ್ನುವಂತಹ ಪರಿಸ್ಥಿತಿಯಿದೆ. ಪತ್ರಿಕೆಗಳ ಉಳಿವು ಪ್ರಜಾಸತ್ತೆಯ ಉಳಿವು ಎನ್ನುವ ನೆಲೆಯಲ್ಲಿ ಸರಕಾರ ಪತ್ರಿಕೆಗಳಿಗೆ ನೆರವಾಗಬೇಕು. ಆದರೆ ಇಂದು ಸರಕಾರ ಅದನ್ನು ಉಳಿಸುವ ಬದಲು ಖರೀದಿಸುವ ಪ್ರಯತ್ನ ನಡೆಸುತ್ತಿದೆ. ಹೀಗೆ ಖರೀದಿಯಾದ ಪತ್ರಿಕೆಗಳು ತಮ್ಮ ಕೈ, ಕಾಲುಗಳನ್ನು ಸರಕಾರದ ಋಣದ ಸಂಕೋಲೆಯಲ್ಲಿ ಬಂದಿಯಾಗಿಸಿಕೊಳ್ಳಬೇಕಾಗುತ್ತದೆ. ಹೀಗೆ ಖರೀದಿಯ ರೂಪದಲ್ಲಿ ಪತ್ರಿಕೆಗಳಿಗೆ ಸರಕಾರ ಸುರಿಯುತ್ತಿರುವ ಹಣವನ್ನೇ ಇಂದು ‘ಪತ್ರಿಕಾ ಸ್ವಾತಂತ್ರ’ವೆಂದು ಭಾವಿಸಬೇಕಾಗಿದೆ. ಬಹುಶಃ ಅಟಾರ್ನಿ ಜನರಲ್ ಇದನ್ನೇ ಸುಪ್ರೀಂಕೋರ್ಟ್‌ಗೆ ಸ್ಪಷ್ಟಪಡಿಸಲು ಪ್ರಯತ್ನಿಸಿರಬೇಕು.