ಪ್ರತಿಪಕ್ಷ ಸರಕಾರಗಳನ್ನು ಅಸ್ಥಿರಗೊಳಿಸಲು ರಾಜ್ಯಪಾಲರ ದುರ್ಬಳಕೆ
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಭಾರತದಲ್ಲಿ ಇರುವುದು ಒಕ್ಕೂಟ ವ್ಯವಸ್ಥೆ. ಈ ಜನತಾಂತ್ರಿಕ ವ್ಯವಸ್ಥೆಯಲ್ಲಿ ಆಡಳಿತ ನಿರ್ವಹಣೆಯ ಸರ್ವೋಚ್ಚ ಅಧಿಕಾರ ಇರುವುದು ಚುನಾಯಿತ ಸರಕಾರಕ್ಕೆ. ಯಾವುದೇ ರಾಜ್ಯದಲ್ಲಿ ಭಿನ್ನ ಪಕ್ಷದ ಸರಕಾರವಿದೆಯೆಂದು ರಾಜ್ಯಪಾಲರನ್ನು ಬಳಸಿಕೊಂಡು ಆ ಸರಕಾರಗಳನ್ನು ದುರ್ಬಲಗೊಳಿಸುವುದು ಸರಿಯಲ್ಲ ಎಂದು ಸುಪ್ರೀಂ ಕೋರ್ಟ್ ಇತ್ತೀಚೆಗೆ ಸ್ಪಷ್ಟವಾಗಿ ಹೇಳಿದೆ.ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅವರ ನೇತೃತ್ವದ ಎರಡು ಸಂವಿಧಾನ ಪೀಠಗಳು ನೀಡಿರುವ ಎರಡು ತೀರ್ಪುಗಳು ಭಾರತದ ಒಕ್ಕೂಟ ವ್ಯವಸ್ಥೆಗೆ ಸಂಬಂಧಿಸಿದಂತೆ ಅತ್ಯಂತ ಪ್ರಾಮುಖ್ಯತೆಯನ್ನು ಪಡೆದಿವೆ.ಮಹಾರಾಷ್ಟ್ರದಲ್ಲಿ ಅಧಿಕಾರದಲ್ಲಿದ್ದ ಮಹಾ ವಿಕಾಸ್ ಅಘಾಡಿ ನೇತೃತ್ವದ ಸರಕಾರದ ಪತನ ಹಾಗೂ ಶಿವಸೇನೆಯ ಇಬ್ಭಾಗಕ್ಕೆ ಸಂಬಂಧಿಸಿದಂತೆ ನೀಡಲಾದ ತೀರ್ಪು ಆಗ ಮುಖ್ಯಮಂತ್ರಿಯಾಗಿದ್ದ ಉದ್ಧವ್ ಠಾಕ್ರೆಯವರಿಗೆ ಸಿಕ್ಕ ನೈತಿಕ ಜಯವಾಗಿದೆ.
ಮಹಾರಾಷ್ಟ್ರದಲ್ಲಿ ಉದ್ಧವ್ ಠಾಕ್ರೆಯವರ ನೇತೃತ್ವದ ಸರಕಾರ ತನ್ನಿಂದ ತಾನೇ ಉರುಳಿ ಬೀಳಲಿಲ್ಲ. ಅಲ್ಲಿನ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಮತ್ತು ವಿಧಾನಸಭಾಧ್ಯಕ್ಷ ರಾಹುಲ್ ನಾರ್ವೇಕರ್ ರಾಜಕೀಯ ಪಕ್ಷಗಳ ಕಿತ್ತಾಟದಲ್ಲಿ ಶಾಮೀಲಾಗಿ ಚುನಾಯಿತ ಸರಕಾರವನ್ನು ಉರುಳಿಸಲು ಅಕ್ಷೇಪಾರ್ಹವಾಗಿ ನಡೆದುಕೊಂಡರು. ಸಂವಿಧಾನಕ್ಕೆ ಚ್ಯುತಿ ತರುವಂತೆ ವರ್ತಿಸಿದರು ಎಂದು ಸುಪ್ರೀಂ ಕೋರ್ಟ್ ನೇರವಾಗಿ ಹೇಳಿದೆ. ಆದರೂ ಏಕನಾಥ ಶಿಂದೆ ನೇತೃತ್ವದ ಶಿವಸೇನಾ-ಬಿಜೆಪಿ ಮೈತ್ರಿ ಕೂಟ ಸರಕಾರ ಮುಂದುವರಿಯಬಹುದು ಎಂದು ಸುಪ್ರೀಂ ಕೋರ್ಟ್ ಹೇಳಿರುವುದು ಯಾಕೋ ಅರ್ಥವಾಗುತ್ತಿಲ್ಲ. ಅದೇನೇ ಇರಲಿ ಈ ತೀರ್ಪಿನಲ್ಲಿನ ಅಂಶಗಳು ಮುಂದೆ ಇಂತಹ ಸಂದರ್ಭಗಳು ಎದುರಾದಾಗ ರಾಜ್ಯಪಾಲರು ಮತ್ತು ಸ್ಪೀಕರ್ ಯಾವ ರೀತಿ ನಡೆದುಕೊಳ್ಳಬೇಕು ಎಂಬುದಕ್ಕೆ ಮಾರ್ಗ ಸೂಚಿಗಳಾಗಿರುವುದಂತೂ ಸ್ಪಷ್ಟ.
ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ಅವುಗಳದೇ ಆದ ಸಂವಿಧಾನಾತ್ಮಕ ಕಾರ್ಯ ವ್ಯಾಪ್ತಿಯಿದೆ. ಒಂದರೊಳಗೆ ಇನ್ನೊಂದು ಹಸ್ತಕ್ಷೇಪ ಮಾಡಬಾರದು. ಹಾಗೆ ಮಾಡಲು ಹೋದರೆ ರಾಜ್ಯಗಳ ಎಲ್ಲ ಅಧಿಕಾರವೂ ಕೇಂದ್ರದ ಪಾಲಾಗುವ ಅಪಾಯವಿದೆ. ಒಂದು ವೇಳೆ ಹೀಗಾದರೆ ಒಕ್ಕೂಟ ವ್ಯವಸ್ಥೆ ಮತ್ತು ಪ್ರಾತಿನಿಧ್ಯ ಆಧರಿತ ಪ್ರಜಾಪ್ರಭುತ್ವ ವ್ಯವಸ್ಥೆ ಹಾಳಾಗಿ ಹೋಗುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ದಿಲ್ಲಿಯ ಸೇವಾ ವಿಷಯಗಳ ಆಡಳಿತಾತ್ಮಕ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಕೇಂದ್ರದ ಮೋದಿ ಸರಕಾರ ಮತ್ತು ದಿಲ್ಲಿಯ ಕೇಜ್ರಿವಾಲ್ ಸರಕಾರಗಳ ನಡುವೆ ಉಂಟಾಗಿದ್ದ ವಿವಾದದ ವಿಚಾರಣೆಯನ್ನು ನಡೆಸಿದ ಸುಪ್ರೀಂ ಕೋರ್ಟ್‌ನ ಸಂವಿಧಾನ ಪೀಠವು ರಾಜ್ಯಗಳ ಅಧಿಕಾರ ವ್ಯಾಪ್ತಿಯಲ್ಲಿ ಕೇಂದ್ರದ ಹಸ್ತಕ್ಷೇಪದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದೆ.
ದಿಲ್ಲಿಯ ಲೆಫ್ಟ್ಟಿನೆಂಟ್ ಗವರ್ನರ್ ಮತ್ತು ದಿಲ್ಲಿಯ ಕೇಜ್ರಿವಾಲ್ ಸರಕಾರದ ನಡುವಿನ ಸಂಘರ್ಷ ಹೊಸದಲ್ಲ. ರಾಜ್ಯಗಳು ನಿರಾಳವಾಗಿ ಆಡಳಿತ ನಡೆಸದಂತೆ ಈ ರಾಜ್ಯಪಾಲರು ಮತ್ತು ಲೆಪ್ಟಿನೆಂಟ್ ಗವರ್ನರ್‌ಗಳು ಅಡ್ಡಗಾಲು ಹಾಕುತ್ತಲೇ ಬಂದಿದ್ದಾರೆ. ಕೇಂದ್ರದ ಮೋದಿ ಸರಕಾರವೂ ಇದಕ್ಕೆ ಕುಮ್ಮಕ್ಕು ನೀಡುತ್ತಲೇ ಬಂದಿದೆ. ದಿಲ್ಲಿಯ ಕೇಜ್ರಿವಾಲ್ ಸರಕಾರದ ಪ್ರಕರಣದಲ್ಲಿ ಕೂಡ ದಿಲ್ಲಿಯು ರಾಷ್ಟ್ರದ ರಾಜಧಾನಿಯಾಗಿರುವುದರಿಂದ ಅಧಿಕಾರಿಗಳನ್ನು ವರ್ಗಾವಣೆ ಮಾಡುವ ಅಧಿಕಾರ ತನ್ನಲ್ಲಿ ಇರಬೇಕು ಎಂದು ಕೇಂದ್ರ ಸರಕಾರವು ವಾದಿಸಿತ್ತು. ಆದರೆ ಈ ವಾದವನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ.
ಜನತಾಂತ್ರಿಕವಾಗಿ ಅಸ್ತಿತ್ವಕ್ಕೆ ಬಂದ ಚುನಾಯಿತ ಸರಕಾರಕ್ಕೆ ಅಧಿಕಾರಿಗಳನ್ನು ನಿಯಂತ್ರಿಸುವ ಅಧಿಕಾರ ಇರದಿದ್ದರೆ ಉತ್ತರದಾಯಿತ್ವ ತತ್ವ ಅರ್ಥಹೀನವಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿರುವುದು ಸೂಕ್ತವಾಗಿದೆ.
ಅಧಿಕಾರವೆಲ್ಲವೂ ಕೇಂದ್ರ ಸರಕಾರದ ಬಳಿ ಇರಬೇಕೆನ್ನುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಾದುದು. ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಗಮನಾರ್ಹವಾಗಿದೆ. ರಾಜ್ಯಗಳಲ್ಲಿ ಕೇಂದ್ರ ಸರಕಾರದ ಪ್ರತಿನಿಧಿಯಾಗಿರುವ ರಾಜ್ಯಪಾಲರು ಮತ್ತು ಲೆಫ್ಟಿನೆಂಟ್ ಗವರ್ನರ್‌ಗಳು ಕೇಂದ್ರದ ಆಡಳಿತರೂಢ ಪಕ್ಷದ ಕೈಗೊಂಬೆಗಳಂತೆ ವರ್ತಿಸುತ್ತಾರೆಂಬ ಆರೋಪ ಹೊಸದಲ್ಲ. ಈ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಗಮನಾರ್ಹವಾಗಿದೆ. ರಾಜ್ಯಗಳ ದೈನಂದಿನ ಆಡಳಿತದಲ್ಲಿ ರಾಜ್ಯಪಾಲರ ಮೂಲಕ ಕೇಂದ್ರ ಸರಕಾರ ಹಸ್ತಕ್ಷೇಪ ಮಾಡುವುದು ಸರಿಯಲ್ಲ. ಹಸ್ತಕ್ಷೇಪ ರಾಜ್ಯಪಾಲರ ಮೂಲಕವಾಗಿರಲಿ, ಕಾನೂನು ಮೂಲಕವಾಗಲಿ ಮಾಡುವುದು ಸಲ್ಲದ ನಡೆಯಾಗುತ್ತದೆ. ಇದು ಒಕ್ಕೂಟ ವ್ಯವಸ್ಥೆಗೆ ಅಪಚಾರ ಮಾಡಿದಂತಾಗುತ್ತದೆ.
ಯಾವುದೇ ರಾಜ್ಯದ ಚುನಾಯಿತ ಸರಕಾರವೊಂದರ ದೈನಂದಿನ ಆಡಳಿತದಲ್ಲಿ ಹಸ್ತಕ್ಷೇಪ ಮಾಡುವುದಾಗಲಿ, ಆ ಸರಕಾರಗಳ ಅಧಿಕಾರವನ್ನು ಮೊಟಕುಗೊಳಿಸುವುದಾಗಲಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಶೋಭೆ ತರುವುದಿಲ್ಲ. ದಿಲ್ಲಿಯ ಕೇಜ್ರಿವಾಲ್ ಸರಕಾರಕ್ಕೆ ಸಂವಿಧಾನಾತ್ಮಕವಾಗಿ ದೊರೆತ ಅಧಿಕಾರವನ್ನು ಚಲಾವಣೆ ಮಾಡಲು ಕೇಂದ್ರ ಸರಕಾರವಾಗಲಿ, ಲೆಫ್ಟಿನೆಂಟ್ ಗವರ್ನರ್ ಆಗಲಿ ಅಡ್ಡಿಯಾಗಬಾರದು. ರಾಜ್ಯಪಾಲರನ್ನು ಉಪಯೋಗಿಸಿಕೊಂಡು ಚುನಾಯಿತ ಸರಕಾರಗಳನ್ನು ದುರ್ಬಲ ಗೊಳಿಸುವ ಅಥವಾ ಉರುಳಿಸುವ ಹುನ್ನಾರ ಸರಿಯಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ಹೇಳಿದೆ. ಇದನ್ನು ಗೌರವಿಸುವುದು ಸಂಬಂಧಿಸಿದವರ ಕರ್ತವ್ಯವಾಗಿದೆ.
ಕೇಂದ್ರದಲ್ಲಿ ನರೇಂದ್ರ ಮೋದಿಯವರ ನೇತೃತ್ವದ ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬಂದ ನಂತರ ನೇಮಕವಾಗುತ್ತಿರುವ ರಾಜ್ಯಪಾಲರು ಬಿಜೆಪಿಯೇತರ ರಾಜ್ಯಗಳಲ್ಲಿ ನಡೆದುಕೊಳ್ಳುತ್ತಿರುವ ರೀತಿ ವಿವಾದಾತ್ಮಕವಾಗಿದೆ.
ಕೇರಳದ ರಾಜ್ಯಪಾಲ ಆರಿಫ್ ಮುಹಮ್ಮದ್ ಖಾನ್ ಮತ್ತು ತಮಿಳುನಾಡಿನ ರಾಜ್ಯಪಾಲ ರವಿ ಅವರು ಅಲ್ಲಿನ ಚುನಾಯಿತ ಸರಕಾರಗಳ ಜೊತೆ ನಿತ್ಯ ನಿರಂತರ ಸಂಘರ್ಷ ನಡೆಸಿದ್ದಾರೆ. ದೈನಂದಿನ ಆಡಳಿತದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ. ಇದಕ್ಕೆ ಮೋದಿ ಸರಕಾರದ ಪ್ರಚೋದನೆಯೂ ಇದೆ.
ರಾಜ್ಯಪಾಲರ ಹುದ್ದೆ ಅಗತ್ಯವೇ ಎಂಬ ಬಗ್ಗೆ ರಾಷ್ಟ್ರೀಯ ಚರ್ಚೆ ನಡೆಯ ಬೇಕಾಗಿದೆ. ರಾಜಭವನಗಳು ನಿವೃತ್ತ ರಾಜಕಾರಣಿಗಳ ಗಂಜಿ ಕೇಂದ್ರಗಳಾಗಿವೆ ಎಂಬ ಟೀಕೆಯಲ್ಲಿ ಹುರುಳಿಲ್ಲದಿಲ್ಲ. ಪ್ರಜಾಪ್ರಭುತ್ವದ ಆಶಯಗಳಿಗೆ ಧಕ್ಕೆ ಉಂಟು ಮಾಡುವ ರಾಜ್ಯಪಾಲರನ್ನು ಕೇಂದ್ರ ಸರಕಾರ ವಾಪಸು ಕರೆಯಿಸಿಕೊಳ್ಳುವುದು ಸೂಕ್ತ. ಯಾವುದೇ ರಾಜ್ಯಕ್ಕೆ ರಾಜ್ಯಪಾಲರ ನೇಮಕ ಮಾಡುವ ಮುನ್ನ ಆಯಾ ರಾಜ್ಯದ ಮುಖ್ಯಮಂತ್ರಿಗಳ ಜೊತೆ ಕೇಂದ್ರ ಸರಕಾರ ಸಮಾಲೋಚನೆ ಮಾಡುವುದು ಅಗತ್ಯವಾಗಿದೆ.