ಪೊಲೀಸರಿಗೆ ಅಗತ್ಯವಾಗಿರುವ ಮಾನಸಿಕ ಕ್ಷಮತೆ

Update: 2023-05-17 04:31 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ 

Full View

ಪೊಲೀಸ್ ಪಡೆಯನ್ನು ಸಬಲೀಕರಣಗೊಳಿಸುವ ನಿಟ್ಟಿನಲ್ಲಿ ಅಸ್ಸಾಮಿನ ಡಿಜಿಪಿ ಮಹತ್ತರ ಆದೇಶವೊಂದನ್ನು ಹೊರಡಿಸಿದ್ದಾರೆ. 'ಐಪಿಎಸ್ ಮತ್ತು ಎಪಿಎಸ್ ಅಧಿಕಾರಿಗಳು ಸೇರಿದಂತೆ ಅಸ್ಸಾಮಿನ ಎಲ್ಲ ಪೊಲೀಸ್ ಸಿಬ್ಬಂದಿ ಮೂರು ತಿಂಗಳೊಳಗೆ ದೈಹಿಕ ಕ್ಷಮತೆಯನ್ನು ಪಡೆಯಬೇಕು, ಇಲ್ಲವಾದರೆ ಸ್ವಯಂ ನಿವೃತ್ತರಾಗಬೇಕು' ಎಂದು ಅಸ್ಸಾಂ ಡಿಜಿಪಿ ಆದೇಶವನ್ನು ಹೊರಡಿಸಿದ್ದಾರೆ. ವೈಯಕ್ತಿಕ ಆರೋಗ್ಯ ಸಮಸ್ಯೆಯ ಕಾರಣವಿಲ್ಲದೆ ಯಾರಾದರೂ ಬೊಜ್ಜು ಹೊಂದಿರುವ, ಅತಿ ತೂಕ ಹೊಂದಿದ್ದರೆ ಆಗಸ್ಟ್ 15ರ ಒಳಗೆ ದೈಹಿಕ ಕ್ಷಮತೆಯನ್ನು ಪಡೆಯಬೇಕು ಎಂದು ಅವರು ಆದೇಶದಲ್ಲಿ ಸ್ಪಷ್ಟಪಡಿಸಿದ್ದಾರೆ. ಸಾಧಾರಣವಾಗಿ ಸೇನೆ ಮತ್ತು ಪೊಲೀಸ್ ಇಲಾಖೆಗಳಲ್ಲಿ ಉದ್ಯೋಗವನ್ನು ಪಡೆಯಬೇಕಾದರೆ ದೈಹಿಕ ಕ್ಷಮತೆ ಪ್ರಮುಖ ಅರ್ಹತೆಯಾಗಿರುತ್ತದೆ. ಆ ಹುದ್ದೆಯ ಸ್ವರೂಪವೇ ಅಂತಹದು. ಸೇನೆಯಲ್ಲಿ ಸೇರ್ಪಡೆಗೊಂಡ ಅಭ್ಯರ್ಥಿ ದಿನವೂ ದೈಹಿಕ ಕಸರತ್ತುಗಳನ್ನು ಮಾಡುವುದು ಕಡ್ಡಾಯವಾಗಿರುವುದರಿಂದ ಹುದ್ದೆಗೆ ಸೇರುವ ಸಂದರ್ಭದಲ್ಲಿದ್ದ ಕ್ಷಮತೆಯನ್ನು ಕೊನೆಯವರೆಗೂ ಉಳಿಸಿಕೊಳ್ಳುತ್ತಾನೆ. ಆದರೆ ಪೊಲೀಸ್ ಇಲಾಖೆಗೆ ಸೇರ್ಪಡೆಗೊಂಡ ಬಳಿಕ, ತಮ್ಮ ದೈಹಿಕ ಕ್ಷಮತೆಯ ಬಗ್ಗೆ ನಿರ್ಲಕ್ಷ ವಹಿಸುವವರೇ ಅಧಿಕ. ಹುದ್ದೆ ಸೇರ್ಪಡೆಗೆ ದೈಹಿಕ ಕ್ಷಮತೆ ಅತ್ಯಗತ್ಯ ಎಂದಾದ ಮೇಲೆ, ಆ ದೈಹಿಕ ಕ್ಷಮತೆಯನ್ನು ಬಳಿಕವೂ ಉಳಿಸಿಕೊಳ್ಳುವುದು ಅತ್ಯಗತ್ಯ ಎನ್ನುವುದನ್ನು ಬಹುತೇಕ ಪೊಲೀಸ್ ಸಿಬ್ಬಂದಿ ಮರೆತು ಬಿಡುತ್ತಾರೆ.

ಭಾರತದಲ್ಲಿ ಪೊಲೀಸ್ ಸಿಬ್ಬಂದಿಯ ದೈಹಿಕ ಕ್ಷಮತೆ ಸದಾ ಟೀಕೆಗೆ ಗುರಿಯಾಗುತ್ತಾ ಬಂದಿದೆ. ಭಾರತೀಯ ಸಿನೆಮಾಗಳಲ್ಲೂ ಪೊಲೀಸ್ ಸಿಬ್ಬಂದಿಯನ್ನು 'ತಮಾಷೆ'ಯಾಗಿ ಬಿಂಬಿಸುವುದೇ ಅಧಿಕ. ಬೊಜ್ಜು ಪೊಲೀಸ್ ಇಲಾಖೆಯ ಅತಿ ದೊಡ್ಡ ಸಮಸ್ಯೆ. ಕೆಲವು ವರ್ಷಗಳ ಹಿಂದೆ ಸರಕಾರೇತರ ಸಂಸ್ಥೆಯೊಂದು ಪೊಲೀಸರ ದೈಹಿಕ ಕ್ಷಮತೆಯ ಬಗ್ಗೆ ಅಧ್ಯಯನ ನಡೆಸಿದಾಗ, ಶೇ. 95ರಷ್ಟು ಸಿಬ್ಬಂದಿ ದೈಹಿಕ ಕ್ಷಮತೆಯ ಕೊರತೆಯನ್ನು ಎದುರಿಸುತ್ತಿರುವುದು ಬೆಳಕಿಗೆ ಬಂತು. ಅಧಿಕ ತೂಕ ಮೇಲಧಿಕಾರಿಗಳಲ್ಲಿ ಶೇ. 14ರಷ್ಟಿದ್ದರೆ, ತಳಸ್ತರದ ಸಿಬ್ಬಂದಿಯಲ್ಲಿ ಶೇ. 28ರಷ್ಟಿತ್ತು. ಪೊಲೀಸ್ ಪೇದೆಗಳಂತೂ ಆರೋಗ್ಯದ ವಿಷಯದಲ್ಲಿ ತೀರಾ ನಿರ್ಲಕ್ಷ ವಹಿಸಿರುವುದು ಬೆಳಕಿಗೆ ಬಂತು. ಈ ಸಿಬ್ಬಂದಿಯಲ್ಲಿ ಬೆನ್ನು ನೋವು, ಕೀಲುನೋವಿನಂತಹ ರೋಗಗಳಿಗೆ ಶೇ. 31 ಮಂದಿ ಬಲಿಯಾಗಿದ್ದರೆ, ಅಧಿಕ ರಕ್ತದೊತ್ತಡದಿಂದ ಶೇ. 15 ಮಂದಿ ನರಳುತ್ತಿದ್ದರು. ಶೇ.11 ಮಂದಿ ಸಕ್ಕರೆೆ ಕಾಯಿಲೆಯಿಂದ ಬಳಲುತ್ತಿದ್ದರು. 40 ವರ್ಷ ತಲುಪುವಷ್ಟರಲ್ಲಿ ಪೊಲೀಸ್ ಸಿಬ್ಬಂದಿ ಅಸ್ತಮಾದಂತಹ ಕಾಯಿಲೆಗಳಿಗೂ ಒಳಗಾಗುತ್ತಾರೆ ಎಂದು ವರದಿ ಹೇಳುತ್ತದೆ. ಪೊಲೀಸ್ ಅಧಿಕಾರಿಗಳಿಗಿಂತ ಹೆಚ್ಚಿನ ಮಾನಸಿಕ ಮತ್ತು ದೈಹಿಕ ಒತ್ತಡಗಳನ್ನು ಈ ಸಿಬ್ಬಂದಿ ಅನುಭವಿಸುತ್ತಿರುವುದೇ ಅನಾರೋಗ್ಯಗಳಿಗೆ ಮುಖ್ಯ ಕಾರಣ ಎಂದು ಊಹಿಸಲಾಗಿದೆ.

ಪೊಲೀಸ್ ಪೇದೆಗಳ ದೈಹಿಕ ಕ್ಷಮತೆಯನ್ನು ಅಣಕಿಸುವುದು, ಟೀಕಿಸುವುದು ಬಹಳ ಸುಲಭ. ಆದರೆ, ಭಾರತದಲ್ಲಿ ಈ ಸಿಬ್ಬಂದಿಯ ಮೇಲೆ ಹೇರಲಾಗುವ ಜವಾಬ್ದಾರಿ, ಅವರು ವೃತ್ತಿಯ ಸಂದರ್ಭದಲ್ಲಿ ಎದುರಿಸಬೇಕಾದ ಸಂಘರ್ಷಗಳು ನೇರವಾಗಿ ಅವರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ. ಮೇಲಧಿಕಾರಿಗಳ ಆದೇಶಗಳು, ನಿಂದನೆಗಳು, ಸಾರ್ವಜನಿಕವಾಗಿ ದುಷ್ಕರ್ಮಿಗಳನ್ನು ಎದುರಿಸಬೇಕಾದ ಒಳಗಿನ ಆತಂಕಗಳು, ವೃತ್ತಿಯ ಅಭದ್ರತೆ ಇವೆಲ್ಲ ಅವರ ಮನಸ್ಸಿನ ಮೇಲೆ ಭಾರೀ ಒತ್ತಡವನ್ನು ಹಾಕುತ್ತವೆ. ಸಾಮಾಜಿಕವಾಗಿಯೂ ಪೊಲೀಸರು ಸಾರ್ವಜನಿಕರಿಂದ ಟೀಕೆಗಳನ್ನು ಎದುರಿಸುತ್ತಲೇ ಇರಬೇಕಾಗುತ್ತದೆ. ವೃತ್ತಿಯ ಕಾರಣದಿಂದ ಅವರಿಗೆ ಶ್ಲಾಘನೆಗಳಿಗಿಂತ ನಿಂದನೆಗಳು ಸಿಗುವುದೇ ಅಧಿಕ. ಪೊಲೀಸರು ಈ ಕಾರಣದಿಂದಲೇ ಅತಿ ಬೇಗ ಮದ್ಯದ ರುಚಿಯನ್ನು ಹತ್ತಿಸಿಕೊಳ್ಳುತ್ತಾರೆ. ಒತ್ತಡದಿಂದ ಪಾರಾಗುವುದಕ್ಕಿರುವ ಒಂದೇ ದಾರಿ ಮದ್ಯ ಸೇವನೆ ಎಂದು ಭಾವಿಸಿದ ಪೊಲೀಸ್ ಸಿಬ್ಬಂದಿ ಇಲಾಖೆಯಲ್ಲಿ ದೊಡ್ಡ ಸಂಖ್ಯೆಯಲ್ಲಿದ್ದಾರೆ.

ಒಮ್ಮೆ ಮದ್ಯದ ಚಟಕ್ಕೆ ಬಿದ್ದರೆ ಅದು ದೇಹದ ಮೇಲೆ ಮಾತ್ರವಲ್ಲ ಅವರ ವೃತ್ತಿಯ ಮೇಲೂ ದುಷ್ಪರಿಣಾಮಗಳನ್ನು ಬೀರುತ್ತದೆ. ತಳಸ್ತರದಲ್ಲಿರುವ ಪೊಲೀಸ್ ಸಿಬ್ಬಂದಿಯಲ್ಲಿ ಬಡ ಕುಟುಂಬದಿಂದ, ಶೋಷಿತ ಸಮುದಾಯದಿಂದ ಬಂದಿರುವವರು ಅಧಿಕ. ವೃತ್ತಿಯನ್ನು ನಿರ್ವಹಿಸುವ ಸಂದರ್ಭದಲ್ಲಿ ಅವರಿಗೆ ಹೊತ್ತು ಹೊತ್ತಿಗೆ ಕಟ್ಟು ನಿಟ್ಟಾಗಿ ಆಹಾರವನ್ನು ಸೇವಿಸುವ ಅವಕಾಶವೂ ಇರುವುದಿಲ್ಲ. ಜಂಕ್‌ಫುಡ್‌ಗಳನ್ನು ಸೇವಿಸುವುದು ಅವರಿಗೆ ಅನಿವಾರ್ಯವಾಗಿ ಬಿಡುತ್ತದೆ. ಇವೆಲ್ಲ ಕಾರಣದಿಂದಾಗಿ ಬೇಗ ತಮ್ಮ ಆರೋಗ್ಯವನ್ನು ಕಳೆದುಕೊಳ್ಳುತ್ತಾರೆ. ಆದುದರಿಂದ ಏಕಾಏಕಿ 'ದೈಹಿಕ ಕ್ಷಮತೆಯನ್ನು ಬೆಳೆಸಿಕೊಳ್ಳಿ' ಎಂದು ಆದೇಶಿಸುವ ಜೊತೆಜೊತೆಗೆ, ಪೊಲೀಸ್ ಇಲಾಖೆ ಅದಕ್ಕೆ ಪೂರಕವಾದ, ಅಗತ್ಯವಾದ ವಾತಾವರಣವನ್ನೂ ಅವರಿಗೆ ಒದಗಿಸಿಕೊಡಬೇಕಾಗಿದೆ. ದೈಹಿಕ ಆರೋಗ್ಯದಷ್ಟೇ ಮಾನಸಿಕ ಆರೋಗ್ಯವೂ ಮುಖ್ಯವಾದುದು. ಸದ್ಯಕ್ಕೆ ಅಸ್ಸಾಂ ಮಾತ್ರವಲ್ಲ, ಇಡೀ ದೇಶದ ಪೊಲೀಸರ ಮಾನಸಿಕ ಆರೋಗ್ಯ ಕ್ಷಮತೆಯ ಬಗ್ಗೆ ಸಂಬಂಧಪಟ್ಟವರು ಕಾಳಜಿ ವಹಿಸಬೇಕಾಗಿದೆ.

ಇತ್ತೀಚಿನ ದಿನಗಳಲ್ಲಿ ಪೊಲೀಸರು ಜಾತಿವಾದಿಗಳು, ಕೋಮುವಾದಿಗಳಾಗಿ ವೃತ್ತಿಯನ್ನು ನಿರ್ವಹಿಸುವ ಮೂಲಕ ಸುದ್ದಿಯಲ್ಲಿದ್ದಾರೆ. ಅವರ ಮಾನಸಿಕ ಆರೋಗ್ಯದ ಕ್ಷಮತೆ ಇಳಿಮುಖವಾಗುತ್ತಿರುವುದರ ಸಂಕೇತ ಇದು. ಪೊಲೀಸರ ಮಾನಸಿಕ ಆರೋಗ್ಯದ ಕ್ಷಮತೆಯ ಬಗ್ಗೆ ಕಾಳಜಿ ವಹಿಸಿದಾಗ ಅದು ನಿಧಾನಕ್ಕೆ ಅವರ ದೈಹಿಕ ಕ್ಷಮತೆಯ ಮೇಲೆ ಪರಿಣಾಮ ಬೀರಬಹುದೇನೋ. ಇತ್ತೀಚೆಗೆ ಅಸ್ಸಾಮಿನ ನಿರ್ವಸಿತ ಪ್ರತಿಭಟನಾಕಾರರ ಮೇಲೆ ಪೊಲೀಸರು ನಡೆಸಿದ ದೌರ್ಜನ್ಯ, ಗೋಲಿಬಾರನ್ನು ಈ ಸಂದರ್ಭದಲ್ಲಿ ಸ್ಮರಿಸಬಹುದು. ಪೊಲೀಸರು ಮಾನಸಿಕ ಆರೋಗ್ಯವನ್ನು ಕೆಡಿಸಿಕೊಂಡರೆ ಏನಾಗಬಹುದು ಎನ್ನುವುದಕ್ಕೆ ಇದು ಉದಾಹರಣೆ. ದೇಶಾದ್ಯಂತ ಸಂಘಪರಿವಾರದ ದುಷ್ಕರ್ಮಿಗಳು ಪೊಲೀಸರ ಪರೋಕ್ಷ ಬೆಂಬಲದಿಂದಲೇ, ಅಮಾಯಕರ ಮೇಲೆ ವಿಜೃಂಭಿಸುತ್ತಿದ್ದಾರೆ. ಇತ್ತೀಚೆಗೆ ಮಂಡ್ಯದಲ್ಲಿ ಪೊಲೀಸರ ಸಮ್ಮುಖದಲ್ಲೇ ನಕಲಿ ಗೋರಕ್ಷಕರು ಸೇರಿ ಅಮಾಯಕನೊಬ್ಬನನ್ನು ಕೊಂದು ಹಾಕಿದ್ದರು. ಮಾನಸಿಕ ಆರೋಗ್ಯವನ್ನು ಸುಧಾರಿಸದೆ ಬರೀ ದೈಹಿಕ ಕ್ಷಮತೆಯಿಂದ ಪೊಲೀಸ್ ವೃತ್ತಿಗೆ ನ್ಯಾಯವನ್ನು ನೀಡಲು ಸಾಧ್ಯವಿಲ್ಲ ಎನ್ನುವುದನ್ನು ಪೊಲೀಸ್ ಇಲಾಖೆ ಅರ್ಥ ಮಾಡಿಕೊಳ್ಳು ವುದು ಇಂದಿನ ಅಗತ್ಯವಾಗಿದೆ.

Similar News