ಉಡುಪಿ: ವಸ್ತು ಮರು ಪಡೆಯುವ ಸೌಲಭ್ಯ ಕೇಂದ್ರ ಸ್ಥಾಪನೆ

Update: 2023-05-17 15:08 GMT

ಉಡುಪಿ, ಮೇ 17: ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ವತಿಯಿಂದ ಸ್ವಚ್ಛ ಭಾರತ್ ಮಿಷನ್ ನಗರ 2.0 ಯೋಜನೆ ಯಡಿ ನವೀಕರಿಸಿ ಮರುಬಳಸಬಹುದಾದಂತಹ ವಸ್ತುಗಳ ಉತ್ಪಾದನೆಯನ್ನು ಕಡಿಮೆಗೊಳಿಸಲು ಮತ್ತು ಸುಸ್ಥಿರ ಜೀವನ ಪದ್ಧತಿಗಳನ್ನು ಅಳವಡಿಸಿಕೊಳ್ಳುವ ಮೂಲಕ ಪರಿಸರವನ್ನು ರಕ್ಷಿಸುವ ಉದ್ದೇಶದಿಂದ ನನ್ನ ಜೀವನ ನನ್ನ ಸ್ವಚ್ಛ ನಗರ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ.

ಇದರಲ್ಲಿ ಮರುಬಳಕೆ ಮತ್ತು ಪುನರ್ ಬಳಕೆ ಕೇಂದ್ರಗಳನ್ನು, ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಒಣತ್ಯಾಜ್ಯ ಸಂಗ್ರಹಣಾ ಕೇಂದ್ರ ಅಥವಾ ಮೆಟಿರಿಯಲ್ ರೆಕವರಿ ಫೆಸಿಲಿಟಿ (ಎಂಆರ್‌ಎಫ್) ಹಾಗೂ ನಗರದ ಪ್ರಮುಖ ಸ್ಥಳಗಳಲ್ಲಿ ವಸ್ತು ಮರು ಪಡೆಯುವ ಸೌಲಭ್ಯ ಕೇಂದ್ರಗಳನ್ನು ರೆಡ್ಯೂಸ್, ರೀಯೂಸ್ ಮತ್ತು ರೀಸೈಕಲ್ ಕೇಂದ್ರಗಳಾಗಿ ಬಳಸಿ ನನ್ನಜೀವನ - ನನ್ನ ಸ್ವಚ್ಛ ನಗರ ಯೋಜನೆ ಯನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಗೊಳಿಸಲು ಉಡುಪಿ ನಗರಸಭೆಯ ವತಿಯಿಂದ ಮೇ 20ರಿಂದ ಜೂನ್ 5ರವರೆಗೆ ವಿವಿದೆಡೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. 

ಮಲ್ಪೆ ಬೀಚ್ ಹತ್ತಿರ, ಮಣ್ಣಪಳ್ಳ ಪಾರ್ಕಿನ ಹತ್ತಿರ, ಬೀಡಿನಗುಡ್ಡೆ ಒಣತ್ಯಾಜ್ಯ ಸಂಗ್ರಹಣಾ ಕೇಂದ್ರದ ಹತ್ತಿರ, ಬನ್ನಂಜೆ ಕರಾವಳಿ ಬೈಪಾಸ್ ಒಣತ್ಯಾಜ್ಯ ಸಂಗ್ರಹಣಾ ಕೇಂದ್ರದ  ಹತ್ತಿರ, ಆದಿ ಉಡುಪಿ ಮಾರ್ಕೆಟ್ ಬಳಿ, ಗಾಂಧಿ ಭವನ ಬಳಿ, ರಿಲಾಯನ್ಸ್ ಫ್ರೆಶ್ ಹತ್ತಿರ ಹಾಗೂ ಡಿ-ಮಾರ್ಟ್ ಬಳಿ ವಸ್ತು ಮರು ಪಡೆಯುವ ಸೌಲಭ್ಯಕೇಂದ್ರಗಳನ್ನು ಸ್ಥಾಪಿಸಲಾಗುವುದು.

ಸಾರ್ವಜನಿಕರು ಮೇಲ್ಕಂಡ ಕೇಂದ್ರಗಳಲ್ಲಿ ಪ್ಲಾಸ್ಟಿಕ್ ಕ್ಯಾರಿಬ್ಯಾಗ್ ಸೇರಿದಂತೆ ಆಟಿಕೆ ವಸ್ತುಗಳನ್ನು, ಬಳಸಿದ ಬಟ್ಟೆ, ದಿನ ಪತ್ರಿಕೆಗಳು, ಹಳೆಯ ಪುಸ್ತಕಗಳು ಹಾಗೂ ಎಲೆಕ್ಟ್ರಾನಿಕ್ ವಸ್ತುಗಳಂತಹ 6 ಬಗೆಯ ನವೀಕರಿಸಿ ಮರು ಬಳಸಬಹುದಾದಂತಹ ವಸ್ತುಗಳನ್ನು ಈ ಕೇಂದ್ರಗಳಿಗೆ ನೀಡಬಹುದು.

ಪರಿಸರ ರಕ್ಷಿಸುವ ಉದ್ದೇಶದ ಕಾರ್ಯಕ್ರಮದಲ್ಲಿ ನಗರಸಭೆಯೊಂದಿಗೆ ಸಹಕರಿಸುವಂತೆ ಹಾಗೂ ಭಾಗವಹಿಸಿದ ಸಾರ್ವಜನಿಕರಿಗೆ ಡಿಜಿಟಲ್ ಪ್ರಮಾಣ ಪತ್ರ ನೀಡಲಾಗುವುದು ಎಂದು ನಗರಸಭೆ ಪೌರಾಯುಕ್ತರ ಕಚೇರಿ ಪ್ರಕಟಣೆ ತಿಳಿಸಿದೆ.   

Similar News