ಕಾರ್ಕಳದಲ್ಲಿ ಕಾಂಗ್ರೆಸ್ ವಿಜಯೋತ್ಸವ
ಕಾರ್ಕಳ: ಮುಂಬರುವ ತಾ.ಪಂ., ಜಿ.ಪಂ. ಚುನಾವಣೆಗೆ ನಾವು ಇಂದಿನಿಂದಲೇ ಸಿದ್ಧತೆ ನಡೆಸಬೇಕಿದೆ. ಗೆಲುವಿ ವಾಗಿ ಪ್ರತಿ ಬೂತ್ ನ ಕಾರ್ಯಕರ್ತರು ಟೀಂ ಆಗಿ ಕಾರ್ಯನಿರ್ವಹಿಸಬೇಕಿದೆ ಎಂದು ಉದಯ ಶೆಟ್ಟಿ ಮುನಿಯಾಲು ತಿಳಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್‌ಗೆ ಬಹುಮತ ದೊರೆತ ಹಿನ್ನೆಲೆಯಲ್ಲಿ ಮೇ 22ರಂದು ಕಾರ್ಕಳದಲ್ಲಿ ನಡೆದ ವಿಜಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ರಾಜ್ಯದ ಮತದಾರರು ಸ್ಪಷ್ಟ ಬಹುಮತದೊಂದಿಗೆ ಸುಭದ್ರ ಸರಕಾರ ರಚಿಸುವಲ್ಲಿ ಬೆಂಬಲ ನೀಡಿದ್ದಾರೆ. ಕಾರ್ಕಳದಲ್ಲೂ ಕಾಂಗ್ರೆಸ್ ಗೆಲುವಿಗಾಗಿ ಕಾರ್ಯಕರ್ತರು ರಾತ್ರಿ ಹಗಲೆನ್ನದೆ ದುಡಿದಿದ್ದಾರೆ. ಅವರ ಶ್ರಮ ನಮ್ಮ ಮನಸ್ಸಿನಲ್ಲಿದೆ ಎಂದರು.
ಕಾರ್ಕಳದ ಕಾಂಗ್ರೆಸ್ ಕಾರ್ಯಕರ್ತರಲ್ಲಿರುವ ಹುರುಪು ಹೀಗೆಯೇ ನಿರಂತರವಾಗಿರಬೇಕು. ತಳಮಟ್ಟದಿಂದಲೇ ಪಕ್ಷವನ್ನು ಮತ್ತೆ ಸದೃಢಗೊಳಿಸುವ ಪ್ರಯತ್ನವಾಗಬೇಕು. ಸರಕಾರ ನಮ್ಮದೆ ಇರುವಾಗ ಯಾವುದಕ್ಕೂ ಭಯ ಪಡುವ ಅವಶ್ಯಕತೆಯಿಲ್ಲ ಎಂದು ಉದಯ ಶೆಟ್ಟಿ ಮುನಿಯಾಲು ಅಭಿಪ್ರಾಯಪಟ್ಟರು.
ಸರಕಾರದ ಯೋಜನೆಯನ್ನು ಪ್ರತಿ ಮನೆ ಮನೆಗೆ ತಲುಪಿಸುವ ಕಾರ್ಯ ನಾವು ಮಾಡಬೇಕಿದೆ. ನಿಮ್ಮೊಂದಿಗೆ ಸದಾ ನಾನಿದ್ದು, ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಲಿದ್ದೇನೆ ಎಂದು ಹೇಳಿದ ಉದಯ ಕುಮಾರ್ ಶೆಟ್ಟಿ ಸುನಿಲ್ ಕುಮಾರ್ ಅವರ ಅಭಿಮಾನಿಗಳಿಗೆ ಅಥವಾ ಅವರಿಗೆ ಮತ ಹಾಕಿದವರಿಗೆ ಕಾಂಗ್ರೆಸ್ ನ ಗ್ಯಾರಂಟಿ ಕಾರ್ಡ್ ಬೇಡ ಎಂದಾದಲ್ಲಿ ತಿಳಿಸಲಿ ಎಂದು ಉದಯ ಶೆಟ್ಟಿ ಹೇಳಿದರು.
ಕಾರ್ಕಳ ಹಾಗೂ ಹೆಬ್ರಿಯ ಕೆಲ ಕಾಂಗ್ರೆಸ್ ಮುಖಂಡರಿಂದ ಪಕ್ಷಕ್ಕೆ ಅನ್ಯಾಯವಾಗಿದೆ. ಈ ಮಾತನ್ನು ನಾನೀಗ ಗಟ್ಟಿಯಾಗಿ ಹೇಳುತ್ತೇನೆ ಎಂದು ಹೇಳುವ ಮೂಲಕ ಪಕ್ಷದಲ್ಲಿದ್ದು ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿಸಿ ಕೊಂಡವರಿಗೆ ಪರೋಕ್ಷವಾಗಿ ತಿವಿದರು.
ನನ್ನಿಂದ ಏನಾದ್ರೂ ತಪ್ಪಾಗಿದ್ದಲ್ಲಿ ನೇರವಾಗಿ ಅದನ್ನ ನನ್ನ ಗಮನಕ್ಕೆ ತನ್ನಿ. ಕೆಲವೊಂದು ಕಾರ್ಯಕ್ರಮದಲ್ಲಿ ಭಾಗವಹಿಸಲು ನನ್ನಿಂದ ಸಾಧ್ಯವಾಗದೇ ಇದ್ದಲ್ಲಿ ಯಾರು ಬೇಸರಿಸಬಾರದು. ನಮ್ಮ ಕಾರ್ಯಕರ್ತರು ಆರ್ಥಿಕವಾಗಿಯೂ ಬಲವಂತರಾಗಬೇಕು ಎಂದು ಹೇಳಿದ ಉದಯ ಶೆಟ್ಟಿ ಅವರು ದ್ವೇಷ ರಾಜಕೀಯ ಬೇಡ. ಕೆಲಸ ಮೂಲಕ ನಮ್ಮ ಸಾಮರ್ಥ್ಯ ಸಾಬೀತುಪಡಿಸೋಣವೆಂದರು.
ಪ್ರಾಸ್ತಾವಿಕ ಮಾತುಗಳನ್ನಾಡಿದ ಪಕ್ಷದ ವಕ್ತಾರ ಶುಭದ ರಾವ್, ಕಾರ್ಕಳ ಕಾಂಗ್ರೆಸ್‌ಗೆ ಉದಯ್ ಶೆಟ್ಟಿಯವರೆ ಶಾಸಕರು. ಇಲ್ಲಿನ ಚುನಾವಣಾ ಕಚೇರಿಯೇ ವಿಧಾನ ಸೌಧ. ಶಿಕ್ಷಣ ಸಂಸ್ಥೆಯಿಂದ 8 ಲಕ್ಷ ರೂ. ಪಡೆದು ಪುರಸಭಾ ಸದಸ್ಯರು ಹಂಚಿಕೊಂಡಿರುವ ವಿಚಾರವನ್ನು ಮುಂದಿನ ಸಾಮಾನ್ಯ ಸಭೆಯಲ್ಲಿ ಬಹಿರಂಗ ಪಡಿಸು ತ್ತೇನೆ. ಕಾರ್ಯಕರ್ತರ ನಡುವಿನ ಸಣ್ಣ ಸಣ್ಣ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ನನ್ನ ಪಕ್ಷ ಎಂದು ಎಲ್ಲರೂ ಅಭಿಮಾನದಿಂದ ದುಡಿಯುತ್ತಿದ್ದಲ್ಲಿ ಉದಯ ಶೆಟ್ಟಿ ಅವರು ವಿಧಾನ ಸೌಧದಲ್ಲಿ ಇರುತ್ತಿದ್ದರು ಎಂದರು.
ನಾನು ಚಿಲ್ಲರೆ ನಾಯಕನೇ. ನನ್ನಲ್ಲಿರುವುದು ಸ್ವಾಭಿಮಾನದಿಂದ ಸಂಪಾದನೆ ಮಾಡಿರುವ ದುಡ್ಡು. ಆದರೆ ನಿಮ್ಮಲ್ಲಿರುವುದು ಭ್ರಷ್ಟಾಚಾರದ ಹಣವೆಂದು ಶುಭದ ಹೇಳಿದರು.
ವಿಜಯೋತ್ಸವದ ಅಂಗವಾಗಿ ಪುಲ್ಕೇರಿ ಬೈಪಾಸ್ ನಿಂದ ಜೋಡುರಸ್ತೆಯಾಗಿ ಕಾಂಗ್ರೆಸ್ ಕಚೇರಿಗೆ ವಾಹನ ಜಾಥಾ ನಡೆಯಿತು. ಜಾಥಾದಲ್ಲಿ ಕಾಂಗ್ರೆಸ್ ಧ್ವಜ ರಾರಾಜಿಸುತ್ತಿತ್ತು. ಡಿಜೆ ಹಾಡಿಗೆ ಕಾರ್ಯಕರ್ತರು ಕುಣಿದು ಕುಪ್ಪಳಿಸಿದರು.
ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ದೇವಾಡಿಗ, ಕೆಪಿಸಿಸಿ ಸದಸ್ಯರಾದ ಸುರೇಂದ್ರ ಶೆಟ್ಟಿ, ನೀರೆ ಕೃಷ್ಣ ಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಶೇಖರ್ ಮಡಿವಾಳ್, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ದೀಪಕ್ ಕೋಟ್ಯಾನ್, ಜಾರ್ಜ್ ಕ್ಯಾಸ್ತಲಿನೋ, ಚಂದ್ರಹಾಸ ಸುವರ್ಣ, ಸುಪ್ರೀತ್ ಶೆಟ್ಟಿ, ಪುರಸಭಾ ಸದಸ್ಯ ಅಸ್ಪಕ್ ಅಹಮ್ಮದ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.