ರೈತರಿಗೆ ಬೀಜ, ರಸಗೊಬ್ಬರ ಮತ್ತು ಕೀಟನಾಶಕ ಕೊರತೆಯಾಗದಿರಲಿ
ಮಾನ್ಯರೇ,
ರಾಜ್ಯದಲ್ಲಿ ಕಾಲಿಡುತ್ತಿರುವ ಮುಂಗಾರು ಹಂಗಾಮಿನಲ್ಲಿ ರೈತರಿಗೆ ಬೇಕಾಗುವ ಬಿತ್ತನೆ ಬೀಜ, ರಸಗೊಬ್ಬರ ಮತ್ತು ಕೀಟನಾಶಕ ಕೊರತೆಯಾಗದಂತೆ ಕೃಷಿ ಇಲಾಖೆಯು ನೋಡಿಕೊಳ್ಳಬೇಕಾಗಿದೆ. ಬೀಜ ಮತ್ತು ರಾಜ್ಯದಲ್ಲಿ ರಸಗೊಬ್ಬರ ಮಾರಾಟಗಾರರು ಸರಿಯಾಗಿ ವಿತರಣೆ ಮಾಡಲು ಸೂಕ್ತ ಕ್ರಮ ತೆಗೆದುಕೊಳ್ಳುವುದಲ್ಲದೆ, ಕೃಷಿ ಪರಿಕರ ವ್ಯಾಪಾರಸ್ಥರು ದಾಖಲಾತಿಗಳನ್ನು ಸರಿಯಾಗಿ ನಿರ್ವಹಿಸಲು ಕ್ರಮ ತೆಗೆದುಕೊಳ್ಳಬೇಕು.
ಬೀಜ ಮತ್ತು ರಸಗೊಬ್ಬರ ಮಾರಾಟಗಾರರು ಅಂಗಡಿಯ ಮುಂದೆ ರೈತರಿಗೆ ಕಾಣುವಂತೆ ದರಪಟ್ಟಿ ಮತ್ತು ದಾಸ್ತಾನಿನ ಬಗ್ಗೆ ಮಾಹಿತಿ ಫಲಕ ಕಡ್ಡಾಯವಾಗಿ ಹಾಕಿಕೊಳ್ಳಬೇಕಾಗಿದೆ. ಕೃಷಿ ಇಲಾಖೆ ಅಧಿಕಾರಿಗಳು ಮೇಲಿಂದ ಮೇಲೆ ಬೀಜ ಮತ್ತು ರಸಗೊಬ್ಬರಗಳ ಅಂಗಡಿಗಳನ್ನು ಪರಿಶೀಲನೆ ಮಾಡಬೇಕು. ಬೀಜ, ರಸಗೊಬ್ಬರಗಳನ್ನು ಬೇರೆ ಜಿಲ್ಲೆಗಳಿಗೆ ಅನಧಿಕೃತವಾಗಿ ಸಾಗಿಸದಂತೆ ನೋಡಿಕೊಳ್ಳಬೇಕು.
ಮಾರಾಟಗಾರರು ಖರೀದಿ ಮಾಡಿದ ರೈತರಿಗೆ ಕಡ್ಡಾಯವಾಗಿ ನಿಗದಿತ ನಮೂನೆಯಲ್ಲಿ ರಸೀದಿ ನೀಡಬೇಕು. ಪೂರೈಕೆ ಮತ್ತು ವಿತರಣೆಯಲ್ಲಿ ರೈತರಿಗೆ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಕೃಷಿ ಇಲಾಖೆಯದ್ದಾಗಿದೆ. ರಾಜ್ಯಾದ್ಯಂತ ಎಲ್ಲ ಜಿಲ್ಲೆ, ತಾಲೂಕುಗಳಲ್ಲಿ ನಿಗದಿತ ಸಮಯಕ್ಕೆ ರೈತರಿಗೆ ಬಿತ್ತನೆ ಬೀಜ, ರಸಗೊಬ್ಬರವನ್ನು ವಿತರಿಸಲು ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಕೃಷಿ ಇಲಾಖೆಯ ಅಧಿಕಾರಿಗಳು ರಾಜ್ಯದ ಆಯಾ ಜಿಲ್ಲೆ, ತಾಲೂಕು ಕೇಂದ್ರಗಳಲ್ಲಿ ಸಂಚರಿಸಿ ಬೀಜ ಮತ್ತು ಗೊಬ್ಬರ ಮಾರಾಟಗಾರರಿಗೆ ಸರಕಾರದ ನಿಯಮಗಳನ್ನು ಸರಿಯಾಗಿ ಪಾಲಿಸಲು ಆದೇಶಿಸಬೇಕು. ಕೃಷಿ ಇಲಾಖೆಯು ಈ ಸಮಯದಲ್ಲಿ ಸಮಯಪಾಲನೆಯಿಂದ ರಾಜ್ಯದ ರೈತರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕಾಗಿದೆ.