ಸಂತ ಸಂಸ್ಕೃತಿ ನಾಶಕ್ಕೆ ಸಂಘ ಪರಿವಾರದ ಹುನ್ನಾರ

Update: 2023-05-29 06:52 GMT

ಮೇ ಸಾಹಿತ್ಯ ಸಮ್ಮೇಳನದ ವಿಶೇಷವೆಂದರೆ ಇದರ ಮುಖ್ಯ ಸಂಘಟಕರಾದ ಬಸವರಾಜ ಸೂಳಿಬಾವಿ ಸಮ್ಮೇಳನದ ಖರ್ಚಿಗಾಗಿ ಎಂದೂ ಬಂಡವಾಳಶಾಹಿಗಳಿಂದ, ಸೈದ್ಧಾಂತಿಕ ವಿರೋಧಿ ರಾಜಕಾರಣಿಗಳಿಂದ ನಿಧಿಯನ್ನು ಸಂಗ್ರಹಿಸುವುದಿಲ್ಲ. ಸಮಾನ ಮನಸ್ಕ ಸ್ನೇಹಿತರು ಮತ್ತು ಸಂಘಟನೆಗಳಿಂದ ಮತ್ತು ಜನ ಸಾಮಾನ್ಯರಿಂದ ಪೈಸೆ ,ಪೈಸೆ ಸಂಗ್ರಹ ಮಾಡಿ ಸಮ್ಮೇಳನ ಮಾಡುತ್ತಾರೆ ಮತ್ತು ಸಮ್ಮೇಳನದ ನಂತರ ಸಮ್ಮೇಳನದ ಖರ್ಚುವೆಚ್ಚಗಳ ಪಟ್ಟಿಯನ್ನು ಜಾಲ ತಾಣದ ಮೂಲಕ ಬಹಿರಂಗಪಡಿಸುತ್ತಾರೆ. ಈ ಪಾರದರ್ಶಕತೆಯೇ  ಮೇ ಸಾಹಿತ್ಯ ಸಮ್ಮೇಳನದ ಯಶಸ್ಸಿನ ಗುಟ್ಟು.

ಬಿಜಾಪುರದ ಮೇ ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಂಡು ದಿಕ್ಸೂಚಿ ಭಾಷಣ ಮಾಡಿದ ಬಾಬಾಸಾಹೇಬರ ಮೊಮ್ಮಗ ಮಾತ್ರವಲ್ಲ ವಿಚಾರವಾದಿ ಹೋರಾಟಗಾರ ಡಾ.ಪ್ರಕಾಶ್ ಅಂಬೇಡ್ಕರ್ ಆಡಿದ ಒಂದೊಂದು ಮಾತುಗಳು ಭಾರತದ ಇಂದಿನ ಅಪಾಯಕಾರಿ ಪರಿಸ್ಥಿತಿಯ ಮೇಲೆ ಬೆಳಕು ಚೆಲ್ಲಿದವು. ಎರಡು ದಿನಗಳ ಈ ಸಮ್ಮೇಳನದಲ್ಲಿ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಆಸಕ್ತಿಯಿಂದ ಉಪನ್ಯಾಸಕರ ಮಾತುಗಳನ್ನು ಆಲಿಸಿದ್ದು ಈ ಬಾರಿಯ ವಿಶೇಷವಾಗಿತ್ತು.

ನಿಧಾನವಾಗಿ ಮಾತು ಆರಂಭಿಸಿದ ಡಾ. ಪ್ರಕಾಶ್ ಅಂಬೇಡ್ಕರ್  ‘‘ಭಾರತದಲ್ಲಿ ಸಂತ ಸಂಸ್ಕೃತಿ ಮತ್ತು ಸಂಘ ಸಂಸ್ಕೃತಿಗಳ ನಡುವೆ ಸಂಘರ್ಷ ನಡೆದಿದೆ. ಹಿಂದೂ ಎಂಬ ಶಬ್ದದಲ್ಲಿ ಎರಡು ಸಂಸ್ಕೃತಿಗಳು ಅಡಕವಾಗಿವೆ. ಒಂದು ಸಂತ ಸಂಸ್ಕೃತಿ, ಇನ್ನೊಂದು ಸಂಘ ಪರಿವಾರದ ವೈದಿಕ ಸಂಸ್ಕೃತಿ.ಸಂಘ ಸಂಸ್ಕೃತಿಯಲ್ಲಿ ಯೋಚನೆಗೆ ಅವಕಾಶವಿಲ್ಲ.ಅಭಿವ್ಯಕ್ತಿ ಸ್ವಾತಂತ್ರ್ಯವಿಲ್ಲ. ಪ್ರಶ್ನೆ ಕೇಳುವುದು ಅಪರಾಧ.ಸರ್ವಾಧಿಕಾರಿ ಸಂಘ ಸಂಸ್ಕೃತಿಯ ರಕ್ತಗುಣ.ಆದರೆ ಸಂತ ಸಂಸ್ಕೃತಿಯಲ್ಲಿ ಶಾಂತಿ, ಸಹೋದರತ್ವ, ಸೌಹಾರ್ದ, ಸಹನೆ ಇದೆ. ಚಾರ್ವಾಕರಿಂದ ಹಿಡಿದು ಬಸವಣ್ಣ, ತುಕಾರಾಮ, ಪೆರಿಯಾರ್ ರಾಮಸ್ವಾಮಿ ನಾಯ್ಕರ ವರೆಗೆ ಇರುವುದು ಸಂತ ಸಂಸ್ಕೃತಿ. ಇವರೆಡು ಸಂಸ್ಕೃತಿಗಳು ಈಗ ಮುಖಾ ಮುಖಿಯಾಗಿವೆ’’ ಎಂದು ಹೇಳಿದರು

ಮೇ ಸಾಹಿತ್ಯ ಸಮ್ಮೇಳನದಲ್ಲಿ ಗಮನ ಸೆಳೆದ ಮಾತುಗಳನ್ನು ಆಡಿದ ಇನ್ನೊಬ್ಬರೆಂದರೆ ನಟರಾಜ ಬೂದಾಳ, ‘ಬೌದ್ಧ, ಸೂಫಿ, ಶರಣ ಪರಂಪರೆಯಲ್ಲಿ ಪ್ರಜಾತಂತ್ರದ ಆಶಯಗಳು’ ಎಂಬ ವಿಷಯದ ಬಗ್ಗೆ ಮಾತನಾಡಿದ ಬೂದಾಳ ‘‘ದೇಶವನ್ನು ಧಾರ್ಮಿಕ ಸಂವಿಧಾನ ನಿಯಂತ್ರಿಸುತ್ತಿದೆಯೋ ಅಥವಾ ಸಂವಿಧಾನ ನಿಯಂತ್ರಿಸುತ್ತಿದೆಯೋ ಎಂಬುದು ತಿಳಿಯದಾಗಿದೆ. ನ್ಯಾಯವಾಗಿ ಸಂವಿಧಾನ ನಮ್ಮ ಜೀವನ ವಿಧಾನವಾಗಬೇಕಾಗಿತ್ತು.ಆದರೆ ಆಗಿಲ್ಲ ಇದು ನಮ್ಮ ಮುಂದಿರುವ ಬಹುದೊಡ್ಡ ಸವಾಲಾಗಿದೆ’’ ಎಂದರು.

‘‘ಸುಳ್ಳು, ಪೊಳ್ಳು ತತ್ವಜ್ಞಾನಗಳಿಂದ ಕೂಡಿದ ಪುಸ್ತಕಗಳಿಂದ ಜನಸಾಮಾನ್ಯರನ್ನು ನಿಯಂತ್ರಿಸಲಾಗುತ್ತಿದೆ. ಬಹುತ್ವ, ಜನತಾಂತ್ರಿಕತೆ, ಜಾತ್ಯತೀತ ತೆಗಳನ್ನು ಜತನದಿಂದ ಕಾಪಾಡಿಕೊಂಡು ಹೋಗಬೇಕಾಗಿದೆ  ಎಂದು ಹೇಳಿದ ಬೂದಾಳ ಸಂವಿಧಾನದ ಉಳಿವು ಬಹುತ್ವ ಭಾರತದ ಉಳಿವು’’ ಎಂದರು.

ತಮ್ಮ ಅಂಕಣ ಬರಹಗಳ ಮೂಲಕ ಜನಮನ ಸೆಳೆದಿರುವ ಎ.ನಾರಾಯಣ ಅವರು ‘ಸಂವಿಧಾನದ ಪರಿಕಲ್ಪನೆ ಮತ್ತು ಅಂಬೇಡ್ಕರ್ ಕನಸುಗಳು’ ಎಂಬ ವಿಷಯದ ಮೇಲೆ ಮಾತನಾಡುತ್ತಾ,   ‘‘ಸಂವಿಧಾನಕ್ಕಿಂತ ದೊಡ್ಡ ಧರ್ಮ ಗ್ರಂಥ ದೇಶದಲ್ಲಿ ಯಾವುದೂ ಇಲ್ಲ. ಅದನ್ನು ನಮ್ಮ ಮಕ್ಕಳಿಗೆ ತಿಳಿಸುವ ಕೆಲಸ ಮಾಡಬೇಕು’’ ಎಂದು ಹೇಳಿದರು. ಸಂವಿಧಾನದ ನಾಲ್ಕು ಭಾಗಗಳನ್ನು ಅಂಬೇಡ್ಕರ್ ಅವರು ಬರೆದಿದ್ದಾರೆ ಎನ್ನುವ ಕಾರಣಕ್ಕಾಗಿ ಇನ್ನೂ ಅದು ಉಳಿದುಕೊಂಡಿದೆ. ಇಲ್ಲದಿದ್ದರೆ ಈ ಅಂಶಗಳು ಉಳಿಯುತ್ತಿರಲಿಲ್ಲ.ಅಂಬೇಡ್ಕರ್ ಅವರ ಸಮುದಾಯ ದೊಡ್ಡ ಪ್ರಮಾಣದಲ್ಲಿ ಇದೆ ಎನ್ನುವ ಇನ್ನೊಂದು ಕಾರಣಕ್ಕಾಗಿ ಸಂವಿಧಾನ ಸುರಕ್ಷಿತವಾಗಿ ಉಳಿದಿದೆ ಎಂಬ ನಾರಾಯಣರ ಮಾತುಗಳು ಗಮನ ಸೆಳೆದವು. ಸಂವಿಧಾನವನ್ನು ಪ್ರಶ್ನಿಸುವವರು, ಸಂವಿಧಾನವನ್ನು ನಂಬದವರು ಹೇಗೆ ದೇಶ ಭಕ್ತರಾಗಲು ಸಾಧ್ಯ? ಎಂದು ನಾರಾಯಣ ನುಡಿದರು.

ಸಮ್ಮೇಳನದಲ್ಲಿ ಪಾಲ್ಗೊಳ್ಳಲು ದಿಲ್ಲಿಯಿಂದ ಬಂದಿದ್ದ ಪುರುಷೋತ್ತಮ ಬಿಳಿಮಲೆಯವರು ‘‘ಮಹಾತ್ಮಾ ಗಾಂಧಿಯವರ ಹತ್ಯೆಗೆ ಮುಖ್ಯ ಕಾರಣ ಅವರ ಮುಸಲ್ಮಾನ ಪ್ರೇಮ ಮಾತ್ರವಲ್ಲ, ಜಾತಿ ವ್ಯವಸ್ಥೆಯ ಬುಡಕ್ಕೆ ಅವರು ಕೈ ಹಾಕಿದ್ದು’’ ಎಂದರು.

‘ಆಸ್ಮಿತೆ ರಾಜಕಾರಣ’ದ ಗೋಷ್ಠಿಯಲ್ಲಿ ಮಾತನಾಡಿದ ಹಿರಿಯ ಪತ್ರಕರ್ತ ಬಿ.ಎಂ.ಹನೀಫ್ ‘‘ಪ್ರಜಾಪ್ರಭುತ್ವದಲ್ಲಿ ಎಲ್ಲರನ್ನೂ ಒಗ್ಗಟ್ಟಿನಿಂದ  ಜೊತೆಗೆ ಕರೆದುಕೊಂಡು ಹೋಗುವ ವ್ಯವಸ್ಥೆಯಾಗಬೇಕು. ಆದರೆ ರಾಜಕೀಯವಾಗಿ ಮುಸಲ್ಮಾನರನ್ನು ಹಿಡಿದಿಡಲಾಗಿದೆ’’ ಎಂದರು. ‘‘ಕೇಂದ್ರ ಸಚಿವ ಸಂಪುಟದಲ್ಲಿ ಒಬ್ಬ ಮುಸಲ್ಮಾನನೂ ಇಲ್ಲ. ರಾಜ್ಯದ ಜನಸಂಖ್ಯೆಯಲ್ಲಿ ಶೇ.೨೪ರಷ್ಟು ಮುಸಲ್ಮಾನರಿದ್ದರೂ ಹಿಂದಿನ ಬಿಜೆಪಿ ಸರಕಾರದಲ್ಲಿ ಮುಸ್ಲಿಮ್ ಸಮುದಾಯದ ಒಬ್ಬ ಮಂತ್ರಿಯೂ ಇರಲಿಲ್ಲ. ಇದೇ ರೀತಿ ದೇಶದ ಹದಿನಾರು ರಾಜ್ಯಗಳ ಸಚಿವ ಸಂಪುಟಗಳಲ್ಲಿ ಒಬ್ಬ ಮುಸ್ಲಿಮನೂ ಇಲ್ಲ. ಇದನ್ನು ಪ್ರಜಾಪ್ರಭುತ್ವ ಸರಕಾರ ಎಂದು ಹೇಗೆ ಕರೆಯುವುದು’’ ಎಂದು ಪ್ರಶ್ನಿಸಿದರು.

ಮೇ ಸಾಹಿತ್ಯ ಸಮ್ಮೇಳನದ ವಿಶೇಷವೆಂದರೆ ಇದರ ಮುಖ್ಯ ಸಂಘಟಕರಾದ ಬಸವರಾಜ ಸೂಳಿಬಾವಿ ಸಮ್ಮೇಳನದ ಖರ್ಚಿಗಾಗಿ ಎಂದೂ ಬಂಡವಾಳಶಾಹಿಗಳಿಂದ, ಸೈದ್ಧಾಂತಿಕ ವಿರೋಧಿ ರಾಜಕಾರಣಿಗಳಿಂದ ನಿಧಿಯನ್ನು ಸಂಗ್ರಹಿಸುವುದಿಲ್ಲ. ಸಮಾನ ಮನಸ್ಕ ಸ್ನೇಹಿತರು ಮತ್ತು ಸಂಘಟನೆಗಳಿಂದ ಮತ್ತು ಜನ ಸಾಮಾನ್ಯರಿಂದ ಪೈಸೆ ,ಪೈಸೆ ಸಂಗ್ರಹ ಮಾಡಿ ಸಮ್ಮೇಳನ ಮಾಡುತ್ತಾರೆ. ಮತ್ತು ಸಮ್ಮೇಳನದ ನಂತರ ಸಮ್ಮೇಳನದ ಖರ್ಚುವೆಚ್ಚಗಳ ಪಟ್ಟಿಯನ್ನು ಜಾಲ ತಾಣದ ಮೂಲಕ ಬಹಿರಂಗ ಪಡಿಸುತ್ತಾರೆ. ಈ ಪಾರದರ್ಶಕತೆಯೇ  ಮೇ ಸಾಹಿತ್ಯ ಸಮ್ಮೇಳನದ ಯಶಸ್ಸಿನ ಗುಟ್ಟು.

ಮೇ ಸಾಹಿತ್ಯ ಸಮ್ಮೇಳನದ ಇನ್ನೊಂದು ವಿಶೇಷವೆಂದರೆ ಸಂಘ ಪರಿವಾರದ ಕೋಮುವಾದವನ್ನು ವಿರೋಧಿಸುವ ಸಮಾನ ಮನಸ್ಕ ಸಂಘಟನೆಗಳು ಮತ್ತು ವ್ಯಕ್ತಿಗಳನ್ನು ಒಳಗೊಂಡ ವಿಶಾಲ ವೇದಿಕೆ ಇದು. ಎಲ್ಲಾ ದಲಿತಪರ, ರೈತಪರ ಸಂಘಟನೆಗಳು ಮತ್ತು ಚಿಂತಕರು, ಲೇಖಕರು ಇಲ್ಲಿ ಒಂದೇ ವೇದಿಕೆಯಲ್ಲಿ ಸೇರುತ್ತಾರೆ.

ಈ ಸಲದ ಮೇ ಸಾಹಿತ್ಯ ಸಮ್ಮೇಳನದ ಯಶಸ್ಸಿನ ಶ್ರೇಯಸ್ಸು ಬಸವರಾಜ ಸೂಳಿಬಾವಿ ಅವರ ಜೊತೆಗೆ ಅನಿಲ ಹೊಸಮನಿ, ಪ್ರಭುಗೌಡ ಪಾಟೀಲ, ಜೆ.ಎಸ್.ಪಾಟೀಲ, ಭಗವಾನ ರೆಡ್ಡಿ ಮತ್ತಿತರ ಬಿಜಾಪುರದ ಗೆಳೆಯರಿಗೆ ಸಲ್ಲುತ್ತದೆ.

ಮೇ ಸಾಹಿತ್ಯ ಸಮ್ಮೇಳನದ ಯಶಸ್ಸಿನ ರೂವಾರಿಗಳಲ್ಲಿ ಮರೆಯಬಾರದ, ಮರೆಯಲಾಗದ ಇನ್ನೊಬ್ಬರು ಕವಲಕ್ಕಿಯ ಎಚ್.ಎಸ್.ಅನುಪಮಾ ಅವರು. ಬಿಡುವಿಲ್ಲದ ವೈದ್ಯಕೀಯ ವೃತ್ತಿಯ ಜೊತೆಗೆ ಬರವಣಿಗೆ ಮತ್ತು ಸಂಘಟನೆಗೆ ತಮ್ಮ ಬದುಕನ್ನು ಮೀಸಲಾಗಿಟ್ಟಿರುವ ಅನುಪಮಾ ಅವರು ಕ್ರಿಯಾಶೀಲತೆಯಿಂದ  ಹಿಂದಿನ ಒಂಭತ್ತು ಮೇ ಸಾಹಿತ್ಯ ಸಮ್ಮೇಳನಗಳು ಯಶಸ್ವಿಯಾಗಿವೆ.

ಸಮಾನ ಮನಸ್ಕ ಶಕ್ತಿಗಳು ಮತ್ತು ಸಂಘಟನೆಗಳು, ವ್ಯಕ್ತಿಗಳು ಒಂದು ಕೂಡಿದರೆ ಒಂದು ಸಾಹಿತ್ಯ ಸಮ್ಮೇಳನವನ್ನು ಹೇಗೆ ಯಶಸ್ವಿಗೊಳಿಸ ಬೇಕೆಂಬುದಕ್ಕೆ ಮೇ ಸಾಹಿತ್ಯ ಸಮ್ಮೇಳನ ಒಂದು ಉದಾಹರಣೆಯಾಗಿದೆ.

Similar News