ಇದು ಎಲ್ಲರೂ ಸೇರಿ ಕಟ್ಟಿದ ದೇಶ

2024ರ ಲೋಕಸಭಾ ಚುನಾವಣೆಯ ನಂತರವೂ ಭಾರತದಲ್ಲಿ ಕೋಮು ಧ್ರುವೀಕರಣ ಮಾಡುವ ಜೊತೆಗೆ ಸಮುದಾಯಗಳ ನಡುವೆ ಕಲಹದ ಕಿಡಿ ಹೊತ್ತಿಸುವ ವಿಭಜನಕಾರಿ ಚಟುವಟಿಕೆಗಳು ಕಡಿಮೆಯಾಗಿಲ್ಲ. ಅಲ್ಪಸಂಖ್ಯಾತರು ಅದರಲ್ಲೂ ಮುಸ್ಲಿಮ್ ಸಮುದಾಯವನ್ನು ಗುರಿಯಾಗಿಸಿಕೊಂಡು ನಡೆಯುತ್ತಿರುವ ದಾಳಿಗಳು, ವ್ಯವಸ್ಥಿತವಾಗಿ ಹರಡಲಾಗುತ್ತಿರುವ ಸುಳ್ಳು ಸುದ್ದಿಗಳು ನಿಂತಿಲ್ಲ. ಇಂತಹ ಗಂಭೀರ ಸನ್ನಿವೇಶದಲ್ಲೂ ವಿರೋಧ ಪಕ್ಷಗಳನ್ನು ಶತ್ರುಗಳಂತೆ ಕಾಣುವ, ಭಿನ್ನಾಭಿಪ್ರಾಯವನ್ನು ಲೇವಡಿ ಮಾಡುವ ಪ್ರಧಾನಿ ವರ್ತನೆ ಸದಭಿರುಚಿಯಿಂದ ಕೂಡಿಲ್ಲ.

Update: 2024-08-12 05:48 GMT

ದೇಶ 78ನೇ ಸ್ವಾತಂತ್ರ್ಯ ದಿನದ ಸಂಭ್ರಮದಲ್ಲಿದೆ. ಸಂಭ್ರಮಾಚರಣೆಗೆ ಇನ್ನೆರಡೇ ದಿನ ಬಾಕಿ. ಲಕ್ಷಾಂತರ ಜನರ ತ್ಯಾಗ, ಬಲಿದಾನದ ಜೊತೆ ಮಹಾತ್ಮಾ ಗಾಂಧೀಜಿಯವರ ನೇತೃತ್ವದಲ್ಲಿ ನಡೆದ ಅಸಹಕಾರ ಚಳವಳಿಯ ಪರಿಣಾಮವಾಗಿ ಭಾರತ ಬ್ರಿಟಿಷ್ ದಾಸ್ಯದಿಂದ ಮುಕ್ತಿ ಪಡೆಯಿತು. ಅಷ್ಟೇ ಅಲ್ಲ, ಆಗ ಜಾಗತಿಕವಾಗಿ ಸಮಾಜವಾದಿ ಸೋವಿಯತ್ ರಶ್ಯವಿತ್ತು. ಆದರೆ, ರಾಜಕೀಯ ಅಧಿಕಾರ ಹಸ್ತಾಂತರವಾದಾಗ ಇದು ಜನಸಾಮಾನ್ಯರಿಗೆ ದೊರೆತ ನೈಜ ಸ್ವಾತಂತ್ರ್ಯವಲ್ಲ ಎಂದು ಅನೇಕರು ವಿಶೇಷವಾಗಿ ಎಡಪಂಥೀಯ ಗೆಳೆಯರು ವ್ಯಾಖ್ಯಾನಿಸಿದರು.

ಕವಿ ಸಿದ್ದಲಿಂಗಯ್ಯನವರು, ‘ಯಾರಿಗೆ ಬಂತು, ಎಲ್ಲಿಗೆ ಬಂತು ನಲವತ್ತೇಳರ ಸ್ವಾತಂತ್ರ್ಯ, ಟಾಟಾ, ಬಿರ್ಲಾ ಜೇಬಿಗೆ ಬಂತು ನಲವತ್ತೇಳರ ಸ್ವಾತಂತ್ರ್ಯ’ ಎಂದು ನಂತರದ ದಿನಗಳಲ್ಲಿ ಪದ್ಯ ಬರೆದರು. ಅದು ಮುಂದೆ ಜನ ಚಳವಳಿಗಳ ಹಾಡಾಯಿತು. ಈಗ 77 ವರ್ಷಗಳ ಆನಂತರ ಈ ಸ್ವಾತಂತ್ರ್ಯಕ್ಕೂ ಗಂಡಾಂತರ ಎದುರಾಗಿದೆ. ಬೇಲಿ ಹೊಲವನ್ನು ಮೇಯ್ದಂತೆ ಸ್ವಾತಂತ್ರ್ಯ ಮತ್ತು ಸಂವಿಧಾನವನ್ನು ಕಾಪಾಡುವ ಸಾಂವಿಧಾನಿಕ ಹೊಣೆ ಹೊತ್ತವರಿಂದಲೇ ಸ್ವಾತಂತ್ರ್ಯ ಮತ್ತು ಸಂವಿಧಾನದ ಅಸ್ತಿತ್ವಕ್ಕೆ ಅಪಾಯ ಎದುರಾಗಿದೆ ಎಂಬ ಆತಂಕವಿದೆ ಎಂದರೆ ಅತಿಶಯೋಕ್ತಿಯಲ್ಲ.

77 ವರ್ಷಗಳ ಹಿಂದೆ ಭಾರತ ಸ್ವತಂತ್ರಗೊಂಡಾಗ ವಾಸ್ತವವಾಗಿ ಇದೊಂದು ದೇಶವಾಗಿರಲಿಲ್ಲ. ಇಲ್ಲಿ 500ಕ್ಕೂ ಹೆಚ್ಚು ಅರಸೊತ್ತಿಗೆಗಳು ಇದ್ದವು. ಯಾವುದೇ ಆಡಳಿತಕ್ಕೆ ಒಳಪಡದ ಬುಡಕಟ್ಟು ಸಮುದಾಯಗಳಿದ್ದವು. ಇದು ಯುರೋಪಿಯನ್ ದೇಶಗಳಂತೆ ಯಾವುದೇ ಒಂದು ಧರ್ಮ, ಸಮುದಾಯ, ಜನಾಂಗ, ಭಾಷೆ, ಸಂಸ್ಕೃತಿಯನ್ನು ಹೊಂದಿದ ದೇಶವಾಗಿರಲಿಲ್ಲ. ಈಗಲೂ ಆಗಿಲ್ಲ.

ಆಗಲೂ ಈಗಲೂ ಹಲವಾರು ಧರ್ಮಗಳು, ಸಂಸ್ಕೃತಿಗಳು, ಭಾಷೆಗಳು, ಜನಾಂಗಗಳು ಮತ್ತು ರಾಷ್ಟ್ರೀಯತೆಗಳನ್ನು ಹೊಂದಿದ ವಿಭಿನ್ನ ಭೂ ಪ್ರದೇಶವಾಗಿದೆ. ಇದರ ಸಂಪೂರ್ಣ ಅರಿವಿದ್ದ ನಮ್ಮ ಸ್ವಾತಂತ್ರ್ಯ ಚಳವಳಿಯ ನೇತಾರರು ಮುಖ್ಯವಾಗಿ ಮಹಾತ್ಮಾ ಗಾಂಧೀಜಿ, ನೇತಾಜಿ ಸುಭಾಷ್ ಚಂದ್ರ ಬೋಸ್, ಪಂಡಿತ್ ಜವಾಹರಲಾಲ್ ನೆಹರೂ, ಶಹೀದ್ ಭಗತ್ ಸಿಂಗ್, ಪಟೇಲ್, ಮೌಲಾನಾ ಅಬುಲ್ ಕಲಾಂ ಆಝಾದ್ ಮೊದಲಾದವರು ಎಲ್ಲ ಸಮುದಾಯಗಳನ್ನು ಜೊತೆಗೂಡಿಸಿಕೊಂಡು ಸ್ವಾತಂತ್ರ್ಯ ಚಳವಳಿಯನ್ನು ರೂಪಿಸಿದರು. ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನ ರಚನಾ ಸಮಿತಿಯ ಅಧ್ಯಕ್ಷರಾಗಿ ಎಲ್ಲ ಸಮುದಾಯಗಳನ್ನು ಬೆಸೆದು ಒಂದು ಮಾಡುವ, ಆದರೆ ಅವುಗಳ ವೈವಿಧ್ಯವನ್ನು ಗೌರವಿಸುವ ಸಂವಿಧಾನವನ್ನು ದೇಶಕ್ಕೆ ನೀಡಿದರು.

ಇದರಿಂದ ಸ್ವತಂತ್ರ ಭಾರತವನ್ನು ಮನುವಾದಿ ಹಿಂದೂರಾಷ್ಟ್ರವನ್ನಾಗಿ ಮಾಡುವ ಸಾವರ್ಕರ್ ಮತ್ತು ಗೋಳ್ವಾಲ್ಕರ್ ಅವರ ಹುನ್ನಾರ ವಿಫಲಗೊಂಡಿತು. ಅವರು ಮತ್ತು ಅವರ ಹಿಂಬಾಲಕರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಲಿಲ್ಲ. ಭಾರತ ಜಾತ್ಯತೀತ ಒಕ್ಕೂಟ ರಾಷ್ಟ್ರವಾಗಿ ಹೊರಹೊಮ್ಮಿತು. ಒಕ್ಕೂಟ ಎನ್ನುವ ಪದದಲ್ಲೇ ಎಲ್ಲ ವಿಭಿನ್ನ ಜನ ಸಾಮುದಾಯಗಳನ್ನು ಗೌರವಿಸುವ ಭಾವನೆ ಅಡಕವಾಗಿದೆ. ಇದು ಕೆಲವರಿಗೆ ಇಷ್ಟವಾಗಲಿಲ್ಲ.

ಭಾರತದ ಮೊದಲ ಪ್ರಧಾನಿ ನೆಹರೂ ನಾಯಕತ್ವದಲ್ಲಿ ಭಾರತ ಆರಂಭದ ಎರಡೇ ದಶಕದಲ್ಲಿ ಸರ್ವತೋಮುಖ ಅಭಿವೃದ್ಧಿಯನ್ನು ಸಾಧಿಸಿ ಜಗತ್ತಿನ ಪ್ರಭಾವಿ ದೇಶವಾಗಿ ಹೊರಹೊಮ್ಮಿತು. ಅಷ್ಟೇ ಅಲ್ಲ, ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆ ಆಳವಾಗಿ ಬೇರೂರಿತು.

ಇಂತಹ ಬಹುತ್ವ ಭಾರತ ಈಗ ಅಂದರೆ ಕಳೆದ ಮೂರು ದಶಕಗಳಿಂದ ಅನೈಕ್ಯದ ಅಪಾಯವನ್ನು ಎದುರಿಸುತ್ತಿದೆ. ನಿರ್ದಿಷ್ಟವಾಗಿ 2014ರ ಆನಂತರ ಒಕ್ಕೂಟ ಸರಕಾರದ ಸೂತ್ರ ಹಿಡಿದವರು ಸ್ವತಂತ್ರ ಭಾರತದ ಬಹುತ್ವದ ಸ್ವರೂಪವನ್ನು ಬದಲಿಸಿ ಏಕ ಧರ್ಮ, ಏಕ ಸಂಸ್ಕೃತಿ, ಏಕ ಭಾಷೆ, ಏಕ ಜನಾಂಗೀಯ ದೇಶವನ್ನಾಗಿ ಮಾಡಲು ಮಸಲತ್ತು ನಡೆಸಿದ್ದಾರೆ. ಇದರ ಪರಿಣಾಮವಾಗಿ ಮಣಿಪುರ ಸೇರಿದಂತೆ ಈಶಾನ್ಯ ಭಾರತದ ರಾಜ್ಯಗಳಲ್ಲಿ ಹಿಂಸಾಚಾರ ತಾಂಡವವಾಡುತ್ತಿದೆ.

ಮಣಿಪುರದಲ್ಲಿ ಎರಡು ಸಮುದಾಯಗಳ ನಡುವ ಕಿಡಿ ಹಚ್ಚಿ ದಳ್ಳುರಿ ಏಳುವಂತೆ ಮಾಡಿ ಯಾರು ಚಳಿ ಕಾಯಿಸಿಕೊಳ್ಳುತ್ತಿದ್ದಾರೆ ಎಂದು ಎಲ್ಲರಿಗೂ ಗೊತ್ತಿದೆ. ಈ ಬಗ್ಗೆ ಮಣಿಪುರಕ್ಕೆ ಹೋಗಿ ಸಮಾಧಾನ ಮಾಡಿ ಬೆಂಕಿ ನಂದಿಸಬೇಕಾದ ಜವಾಬ್ದಾರಿ ಸ್ಥಾನದಲ್ಲಿ ಇರುವ ವ್ಯಕ್ತಿ ಅಲ್ಲಿಗೆ ಹೋಗಲಿಲ್ಲ. ಸಂಸತ್ತಿಗೂ ಬರುವುದು ವಿರಳ .ಮಣಿಪುರದ ಬಗ್ಗೆ ಹಿಂದೆ ಹಿಂದೆ ಪ್ರತಿಪಕ್ಷಗಳು ಸಂಸತ್ತಿಗೆ ಕರೆಸಿಕೊಳ್ಳಲು ಅವಿಶ್ವಾಸ ಗೊತ್ತುವಳಿಯನ್ನು ಮಂಡಿಸಿದಾಗ, ಅನಿವಾರ್ಯವಾಗಿ ಸದನಕ್ಕೆ ಬಂದ ವ್ಯಕ್ತಿ ಎರಡೂವರೆ ಗಂಟೆ ತೌಡು ಕುಟ್ಟಿದ್ದು ಹೊರತುಪಡಿಸಿದರೆ ಮಣಿಪುರದ ಬಗ್ಗೆ ಯಾವುದೇ ನಿರ್ದಿಷ್ಟ ಉತ್ತರವನ್ನು ನೀಡಲಿಲ್ಲ.ಪರಿಹಾರ ಕ್ರಮಗಳನ್ನೂ ರೂಪಿಸಲಿಲ್ಲ.

ಈ ನಡುವೆ ಲೋಕಸಭಾ ಚುನಾವಣೆ ನಡೆದು ಬಿಜೆಪಿ ಏಕಾಂಗಿಯಾಗಿ ನಿಚ್ಚಳ ಬಹುಮತವನ್ನು ಗಳಿಸಲಾಗಲಿಲ್ಲ. ಆಗ ಚಂದ್ರಬಾಬು ನಾಯ್ಡು ಮತ್ತು ನಿತೀಶ್ ಕುಮಾರ್‌ರನ್ನು ಓಲೈಸಿ ಅಧಿಕಾರಕ್ಕೆ ಬರಬೇಕಾಯಿತು.ಚುನಾವಣೆಯಲ್ಲಿ ಜನತೆ ಮಂಗಳಾರತಿ ಮಾಡಿದರೂ ‘ವಿಶ್ವಗುರುವಿನ’ ದುರಹಂಕಾರ ಕಡಿಮೆಯಾಗಿಲ್ಲ. ಸಂಸತ್ತಿನಲ್ಲಿ ಅವರು ಆಡುವ ಭಾಷೆ ಅತ್ಯಂತ ಹೀನಾಯವಾಗಿದೆ.ಸಂಸದೀಯ ಪರಂಪರೆಗೆ ಚ್ಯುತಿ ತರುವ ಭಾಷೆಯಾಗಿದೆ.

ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿಯವರನ್ನು ‘ಬಾಲಕ’ ಎಂದು ಕರೆದ ಈ ಮನುಷ್ಯ ತನ್ನ ಸಣ್ಣತನವನ್ನು ತೋರಿಸಿಕೊಂಡರು. ಯಾವುದೇ ಚರ್ಚೆ, ಸಂವಾದ, ಪರಾಮರ್ಶೆಗಳಿಲ್ಲದ ಸದನ ಅವರಿಗೆ ಬೇಕಾಗಿದೆ. ಅಭಿವ್ಯಕ್ತಿ ಸ್ವಾತಂತ್ರ್ಯ ಹತ್ತಿಕ್ಕಲು ನಡೆಸಿರುವ ಹುನ್ನಾರ, ಪತ್ರಿಕಾ ಸ್ವಾತಂತ್ರ್ಯವನ್ನು ಸಮಾಧಿ ಮಾಡಲು ನಡೆಸಿರುವ ಕುತಂತ್ರಗಳು ಇವುಗಳನ್ನು ಗಮನಿಸಿದಾಗ ಭಾರತದ ಸ್ವಾತಂತ್ರ್ಯ ಮತ್ತು ಸಂವಿಧಾನಕ್ಕೆ ಬಹುದೊಡ್ಡ ಅಪಾಯ ಎದುರಾಗಿರುವುದು ಸ್ಪಷ್ಟವಾಗುತ್ತದೆ.

ಈಗ ಕೇಂದ್ರ ಸರಕಾರ ತರಲು ಹೊರಟಿರುವ ಪ್ರಸಾರ ಸೇವೆಗಳ (ನಿಯಂತ್ರಣ) ಕರಡು ವಿಧೇಯಕವನ್ನು ಗಮನಿಸಿದರೆ ಸಂವಿಧಾನ ನೀಡಿರುವ ಮೂಲಭೂತ ಹಕ್ಕಿಗೆ ಗಂಡಾಂತರ ಬಂದಿರುವುದು ಸ್ಪಷ್ಟವಾಗುತ್ತದೆ.ಇನ್ನು ಮುಂದೆ ಸಾಮಾಜಿಕ ಜಾಲತಾಣಗಳಲ್ಲಿ, ಯೂಟ್ಯೂಬ್ ಗಳಲ್ಲಿ ಮುಕ್ತವಾಗಿ ಮಾತಾಡುವ, ಬರೆಯುವ ಸ್ವಾತಂತ್ರ್ಯ ಅಪಹರಣ ಆಗುವ ಸೂಚನೆಗಳು ಗೋಚರಿಸುತ್ತಿವೆ.

2024ರ ಲೋಕಸಭಾ ಚುನಾವಣೆಯ ನಂತರವೂ ಭಾರತದಲ್ಲಿ ಕೋಮು ಧ್ರುವೀಕರಣ ಮಾಡುವ ಜೊತೆಗೆ ಸಮುದಾಯಗಳ ನಡುವೆ ಕಲಹದ ಕಿಡಿ ಹೊತ್ತಿಸುವ ವಿಭಜನಕಾರಿ ಚಟುವಟಿಕೆಗಳು ಕಡಿಮೆಯಾಗಿಲ್ಲ. ಅಲ್ಪಸಂಖ್ಯಾತರು ಅದರಲ್ಲೂ ಮುಸ್ಲಿಮ್ ಸಮುದಾಯವನ್ನು ಗುರಿಯಾಗಿಸಿಕೊಂಡು ನಡೆಯುತ್ತಿರುವ ದಾಳಿಗಳು, ವ್ಯವಸ್ಥಿತವಾಗಿ ಹರಡಲಾಗುತ್ತಿರುವ ಸುಳ್ಳು ಸುದ್ದಿಗಳು ನಿಂತಿಲ್ಲ. ಇಂತಹ ಗಂಭೀರ ಸನ್ನಿವೇಶದಲ್ಲೂ ವಿರೋಧ ಪಕ್ಷಗಳನ್ನು ಶತ್ರುಗಳಂತೆ ಕಾಣುವ, ಭಿನ್ನಾಭಿಪ್ರಾಯವನ್ನು ಲೇವಡಿ ಮಾಡುವ ಪ್ರಧಾನಿ ವರ್ತನೆ ಸದಭಿರುಚಿಯಿಂದ ಕೂಡಿಲ್ಲ.

ಏಕ ಪಕ್ಷದ, ಏಕ ಪರಿವಾರದ, ಏಕ ವ್ಯಕ್ತಿಯ ಸರ್ವಾಧಿಕಾರಕ್ಕೆ ಯಾವುದೇ ಅಡ್ಡಿ ಆಗಬಾರದೆಂದು ಸುಪ್ರೀಂ ಕೋರ್ಟನ್ನು ಮತ್ತು ಅದರ ತೀರ್ಪುಗಳನ್ನು ನಿಷ್ಕ್ರಿಯಗೊಳಿಸುವ ಸಲುವಾಗಿ ಆಡಳಿತ ಪಕ್ಷ ಸಂಸತ್ತಿನಲ್ಲಿರುವ ಬಹುಮತವನ್ನು ಬಳಸಿಕೊಳ್ಳುತ್ತಿರುವ ಅಪಾಯವೂ ಇಲ್ಲದಿಲ್ಲ. ರಾಜ್ಯಗಳ ಸ್ಥಾಯತ್ತತೆಯನ್ನು ನಾಶ ಮಾಡುವ ಮೂಲಕ ಒಕ್ಕೂಟ ವ್ಯವಸ್ಥೆಯನ್ನು ಹಂತಹಂತವಾಗಿ ನಿರ್ನಾಮ ಮಾಡುವುದು ಭಾರತಕ್ಕೆ ಬಹುದೊಡ್ಡ ಅಪಾಯವನ್ನು ತಂದೊಡ್ಡಲಿದೆ. ಈ ಅಪಾಯದಿಂದ ಬಹುತ್ವ ಭಾರತವನ್ನು ಕಾಪಾಡುವುದು ಎಲ್ಲಾ ಪ್ರಜ್ಞಾವಂತ ಜನಸಾಮಾನ್ಯರ ಆದ್ಯ ಕರ್ತವ್ಯವಾಗಿದೆ.

ಮಣಿಪುರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕುಸಿದು ಬಿದ್ದು ವರ್ಷದ ಮೇಲಾಯಿತು.ಪೊಲೀಸರು ಮತ್ತು ಭದ್ರತಾ ಪಡೆಗಳು ಕೂಡ ಜನಾಂಗೀಯ ಆಧಾರದಲ್ಲಿ ವಿಭಜನೆಗೊಂಡಿವೆ. ಅಲ್ಲಿ ತುರ್ತಾಗಿ ಶಾಂತಿಯನ್ನು ಮರು ಸ್ಥಾಪಿಸಬೇಕಿದೆ. ಅದಕ್ಕಾಗಿ ತಮ್ಮ ಸರಕಾರ ಏನು ಮಾಡಲಿದೆ ಎಂಬುದನ್ನು ಸಂಸತ್ತಿಗೆ ವಿವರಿಸಬೇಕಾದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅದನ್ನು ಬಿಟ್ಟು ಪ್ರತಿಪಕ್ಷಗಳ ಬಗ್ಗೆ ಲೇವಡಿ ಮಾತುಗಳನ್ನು ಆಡುತ್ತಿದ್ದಾರೆ

ಈ ಎಲ್ಲ ವಿದ್ಯಮಾನಗಳನ್ನು ಗಮನಿಸಿದರೆ ಭಾರತದ ಸ್ವಾತಂತ್ರ್ಯ ಮತ್ತು ಸಂವಿಧಾನಗಳು ಅಪಾಯದಲ್ಲಿ ಇರುವುದು ಸ್ಪಷ್ಟವಾಗುತ್ತದೆ. ಪ್ರಭುತ್ವದ ಸೂತ್ರ ಯಾರ ಕೈಗೆ ಹೋಗಬಾರದಿತ್ತೋ ಅವರ ಕೈಗೆ ಹೋಗಿದೆ. ಇಂಥ ಸನ್ನಿವೇಶದಲ್ಲಿ ಗಾಂಧೀಜಿ, ಬಾಬಾಸಾಹೇಬರು, ಭಗತ್ ಸಿಂಗ್, ಸುಭಾಷ್ ಚಂದ್ರ ಬೋಸ್ ಮತ್ತು ಮೌಲಾನಾ ಆಝಾದರ ಪರಿಕಲ್ಪನೆಯ ಸ್ವತಂತ್ರ, ಜಾತ್ಯತೀತ ಭಾರತವನ್ನು ಕಾಪಾಡಿಕೊಳ್ಳಲು ಎಲ್ಲ ಭಾರತೀಯರು ಪಣ ತೊಡಬೇಕಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Contributor - ಸನತ್ ಕುಮಾರ ಬೆಳಗಲಿ

contributor

Similar News