ಜನತಂತ್ರದ ರಕ್ಷಣೆ; ನ್ಯಾಯಾಂಗ ಮತ್ತು ಕಾರ್ಯಾಂಗ
ಸಿಬಿಐ ಸೇರಿ ಇತರ ತನಿಖಾ ಸಂಸ್ಥೆಗಳಂತೆ ನ್ಯಾಯಾಂಗವೂ ತನ್ನ ಕೈಗೊಂಬೆಯಾಗಿರಬೇಕೆಂದು ಬಯಸುವುದು ನ್ಯಾಯ ಸಮ್ಮತವಲ್ಲ. 2002 ಗುಜರಾತ್ ಹತ್ಯಾಕಾಂಡದ ಬಗ್ಗೆ (ಆಗ ಗುಜರಾತ್ ಮುಖ್ಯಮಂತ್ರಿ ಯಾಗಿದ್ದ) ಹಾಲಿ ಪ್ರಧಾನಿಯವರ ಆಡಳಿತ ವೈಖರಿಯ ಬಗ್ಗೆ ಪ್ರಶ್ನಿಸಲು ಈವರೆಗೆ ನ್ಯಾಯಾಲಯಗಳೂ ಹಿಂಜರಿಯುತ್ತಿದ್ದವು. ಆದರೆ ಈಗ ಅವುಗಳು ಕೂಡ ಸಂವಿಧಾನದ ರಕ್ಷಣೆಗಾಗಿ ಮೈ ಕೊಡವಿ ಎದ್ದು ನಿಂತಿವೆ.
ಅದೊಂದು ಕಾಲವಿತ್ತು. ಸ್ವಾತಂತ್ರ್ಯ ಬಂದ ಹೊಸದರಲ್ಲಿ ಅಂದರೆ ಐವತ್ತರ ದಶಕದಲ್ಲಿ ಶಾಸಕಾಂಗ ಹಲವಾರು ಜನಪರ, ಸಾಮಾಜಿಕ, ಆರ್ಥಿಕ ಕಾರ್ಯಕ್ರಮಗಳನ್ನು ಜಾರಿಗೆ ತರಲು ಮುಂದಾದಾಗ ಅದರಲ್ಲೂ ಭೂ ಸುಧಾರಣಾ ವಿಧೇಯಕ ತರಲು ಹೊರಟಾಗ ಮತ್ತು 1968-70ರಲ್ಲಿ ಅಂದಿನ ಪ್ರಧಾನಿ ಇಂದಿರಾಗಾಂಧಿ ಅವರು ಬ್ಯಾಂಕುಗಳ ರಾಷ್ಟ್ರೀಕರಣ ಹಾಗೂ ರಾಜಧನ ರದ್ದತಿಗೆ ಕ್ರಮ ಕೈಗೊಂಡಾಗ ನ್ಯಾಯಾಂಗ ಅಡ್ಡ ಬಂದಿತ್ತು. ನ್ಯಾಯಾಂಗದ ಕ್ರಿಯಾಶೀಲತೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಹಿರಿಯ ಕಮ್ಯುನಿಸ್ಟ್ ನಾಯಕ ಶ್ರೀಪಾದ ಅಮೃತ ಡಾಂಗೆಯವರು, ‘ಭಾರತದ ಭವಿಷ್ಯದ ಬಗ್ಗೆ ಐದಾರು ಜನ ನ್ಯಾಯಾಧೀಶರು ನೀಡುವ ತೀರ್ಪಿನ ಬಗ್ಗೆ, ಅವರ ವಿವೇಕದ ಬಗ್ಗೆ ನನಗೆ ನಂಬಿಕೆಯಿಲ್ಲ’ ಎಂದಿದ್ದರು. ಆಗಿನ ಸಂಸತ್ತಿನ ಎರಡೂ ಸದನಗಳ ಗುಣಮಟ್ಟ ಪ್ರಶ್ನಾತೀತ ಆಗಿತ್ತು. ಸ್ವಾತಂತ್ರ್ಯ ಹಾಗೂ ಜನ ಚಳವಳಿಗಳ ನಡುವಿನಿಂದ ಬಂದವರು ಸಂವಿಧಾನ ಮುಂದಿಟ್ಟುಕೊಂಡು ಶಾಸನಗಳನ್ನು ರಚಿಸುತ್ತಿದ್ದರು. ಅದೇ ಸಂವಿಧಾನವನ್ನೇ ಆಧಾರವಾಗಿ ಇಟ್ಟುಕೊಂಡು ನ್ಯಾಯಾಲಯಗಳು ತೀರ್ಪು ನೀಡುತ್ತಿದವು.
ಆದರೆ, ಈಗ ಅಂದರೆ ಜಾಗತೀಕರಣ ಮತ್ತು ನವ ಉದಾರೀಕರಣದ ನಂತರದ ದಿನಗಳಲ್ಲಿ ಕಾಲ ಬದಲಾಗಿದೆ. ಚುನಾವಣೆ ಮೂಲಕ ಅಧಿಕಾರಕ್ಕೆ ಬಂದವರು ಪ್ರಭುತ್ವದ ಮೇಲೆ ಹಿಡಿತ ಸಾಧಿಸಿ ಸಂವಿಧಾನ ಬುಡಮೇಲು ಮಾಡಲು ಹೊರಟಾಗ, ‘ಒಂದೇ ರಾಷ್ಟ್ರ, ಒಂದೇ ಧರ್ಮ, ಒಂದೇ ಭಾಷೆ’ ಎಂದು ಮನುವಾದಿ ಹಿಂದೂರಾಷ್ಟ್ರವನ್ನು, ನಿರ್ಮಿಸುವ ಅದರ ಮರೆಯಲ್ಲಿ ಖಾಸಗೀಕರಣಕ್ಕೆ ಒತ್ತು ನೀಡಿ ಸಾಮಾಜಿಕ ಮತ್ತು ಬಹುತ್ವ ಭಾರತಕ್ಕೆ ಅಪಾಯ ತಂದೊಡ್ಡಿದಾಗ ನ್ಯಾಯಾಂಗ ಅದರಲ್ಲೂ ಸುಪ್ರೀಂ ಕೋರ್ಟ್ ಮಧ್ಯಪ್ರವೇಶ ಸಕಾರಾತ್ಮಕವಾಗಿದೆ. ಕಳೆದ 10 ವರ್ಷಗಳಿಂದ ಕೇಂದ್ರದ ಅಧಿಕಾರ ಸೂತ್ರವನ್ನು ಹಿಡಿದು ಕೂತಿರುವ ಪಕ್ಷ ಭಿನ್ನಾಭಿಪ್ರಾಯ ಹೊಂದಿದವರ ಮೇಲೆ ಸಿಬಿಐ (ಕೇಂದ್ರೀಯ ತನಿಖಾ ಸಂಸ್ಥೆ ), ಐಟಿ (ಆದಾಯ ತೆರಿಗೆ ಇಲಾಖೆ) ಮತ್ತು ಈ.ಡಿ. (ಜಾರಿ ನಿರ್ದೇಶನಾಲಯ) ಮತ್ತು ಎನ್‌ಐಎ (ರಾಷ್ಟ್ರೀಯ ತನಿಖಾ ಸಂಸ್ಥೆ)ಗಳನ್ನು ಛೂ ಬಿಟ್ಟು ಹತ್ತಿಕ್ಕುತ್ತಿರುವಾಗ ಜನರು ಅನಿವಾರ್ಯವಾಗಿ ನ್ಯಾಯಾಲಯಗಳು ಮೆಟ್ಟಿಲು ಹತ್ತ ಬೇಕಿದೆ. ಪ್ರಜಾಪ್ರಭುತ್ವಕ್ಕೆ ಅಪಾಯ ಎದುರಾಗಿರುವಾಗ ನ್ಯಾಯಾಲಯಗಳ ಜನರ ಭಾವನೆಗಳಿಗೆ ಸ್ಪಂದಿಸಲೇ ಬೇಕಿದೆ. ಇದು ನ್ಯಾಯಾಂಗದ ಸಕಾರಾತ್ಮಕ ಮಧ್ಯಪ್ರವೇಶ ವಾಗಿದೆ. ಸರಕಾರದ ಲೋಪದೋಷಗಳನ್ನು ಪ್ರಶ್ನಿಸುವವರನ್ನೆಲ್ಲ ದೇಶ ದ್ರೋಹಿಗಳೆಂದು ಕರೆದು ತೇಜೋವಧೆ ಮಾಡುತ್ತಿರುವಾಗ, ರಾಜದ್ರೋಹದ ಆರೋಪ ಹೊರಿಸಿ ಜೈಲಿಗೆ ತಳ್ಳಿದಾಗ ನ್ಯಾಯಾಲಯ ಸ್ಪಂದಿಸಲಿಲ್ಲ. ಸರಕಾರಕ್ಕೆ ಅನುಕೂಲಕರವಾಗಿ ನಡೆದುಕೊಂಡ ಸುಪ್ರೀಂ ಕೋರ್ಟಿನ ಹಿಂದಿನ ಮುಖ್ಯ ನ್ಯಾಯಾಧೀಶರು ನಿವೃತ್ತಿ ಹೊಂದಿದಾಗ, ಅವರಿಗೆ ಕಾಣಿಕೆಯಾಗಿ ರಾಜ್ಯಸಭಾ ಸದಸ್ಯತ್ವ ದೊರಕಿತು. ಆದರೆ ಈ ನ್ಯಾಯಾಲಯಗಳು ಅದರಲ್ಲೂ ಸುಪ್ರೀಂ ಕೋರ್ಟ್ ವ್ಯಕ್ತಿ ಸ್ವಾತಂತ್ರ್ಯಕ್ಕೆ ಸರಕಾರದಿಂದ ಧಕ್ಕೆ ಉಂಟಾದಾಗ ಪ್ರಶ್ನಿಸುತ್ತಿರುವುದು ಸಕಾರಾತ್ಮಕ ಬೆಳವಣಿಗೆ ಆಗಿದೆ.
ಇತ್ತೀಚೆಗೆ ತೆಲಂಗಾಣದ ಭಾರತ ರಾಷ್ಟ್ರ ಸಮಿತಿಯ (ಬಿಆರ್‌ಎಸ್) ನಾಯಕಿ ಕವಿತಾ ಅವರಿಗೆ ಜಾಮೀನು ಮಂಜೂರು ಮಾಡಿದೆ. ಅವರಿಗೆ ಜಾಮೀನು ನೀಡುವ ಸಂದರ್ಭದಲ್ಲಿ ನಾಗರಿಕರ ಮೂಲಭೂತ ಹಕ್ಕುಗಳ ಕುರಿತು ನ್ಯಾಯಾಧೀಶರು ಆಡಿರುವ ಮಾತುಗಳು ಗಮನಾರ್ಹ. ‘ಘನತೆಯಿಂದ ಜೀವಿಸುವ ಹಕ್ಕು ಸಂವಿಧಾನಾತ್ಮಕವಾಗಿ ಮೂಲಭೂತ ಹಕ್ಕುಗಳಲ್ಲಿ ಅತ್ಯಂತ ಮುಖ್ಯವಾಗಿದೆ’ ಎಂದು ಹೇಳಿದ್ದಾರೆ. ‘ನಾಗರಿಕರ ವೈಯಕ್ತಿಕ ಸ್ವಾತಂತ್ರ್ಯವನ್ನು ಕಾರ್ಯಾಂಗವು ಅತಾರ್ಕಿಕವಾಗಿ ಮನ ಬಂದಂತೆ ಕಿತ್ತುಕೊಳ್ಳುವ ಹಾಗಿಲ್ಲ’ ಎಂದು ಸುಪ್ರೀಂ ಕೋರ್ಟ್ ಮತ್ತೆ ಮತ್ತೆ ಸ್ಪಷ್ಟಪಡಿಸಿದೆ. ಕೋವಿಡ್ ಸಂದರ್ಭದಲ್ಲಿ ಕೊರೋನ ರೋಗಿಗಳ ಶವಗಳು ಗಂಗಾನದಿಯಲ್ಲಿ ತೇಲುತ್ತಿರುವಾಗ, ಆಮ್ಲಜನಕ ಇಲ್ಲದೇ ಜನರು ಸಾಯುತ್ತಿರುವಾಗ, ದವಾಖಾನೆಗಳಲ್ಲಿ ಬೆಡ್ ಸಿಗದೇ ಪರದಾಟ ನಡೆಸಿದಾಗ ನ್ಯಾಯಾಂಗ ಸ್ಪಂದಿಸಿ ಕೇಂದ್ರ ಸರಕಾರವನ್ನು ತರಾಟೆಗೆ ತೆಗೆದುಕೊಂಡಿತ್ತು.
ದಿಲ್ಲಿಯ ಅಬಕಾರಿ ಹಗರಣಕ್ಕೆ ಸಂಬಂಧಿಸಿದಂತೆ ಹಣದ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಕವಿತಾ ಅವರ ಮೇಲೆ ಕಳೆದ ಮಾರ್ಚ್‌ನಲ್ಲಿ ಜಾರಿ ನಿರ್ದೇಶನಾಲಯ ಹೊರಿಸಿದ ಆರೋಪಗಳ ಕುರಿತಂತೆ ಸುಪ್ರೀಂ ಕೋರ್ಟ್ ಹೇಳಿರುವ ಮಾತುಗಳು ಸೂಕ್ತವಾಗಿವೆ. ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹಾಗೂ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ವಿರುದ್ಧ ತನಿಖಾ ಸಂಸ್ಥೆಗಳು ಇಂಥದ್ದೇ ಆರೋಪಗಳನ್ನು ಹೊರಿಸಿವೆ. ಆದರೆ, ಸುಪ್ರೀಂ ಕೋರ್ಟ್ ಸಿಸೋಡಿಯಾ ಅವರಿಗೆ ಇತ್ತೀಚೆಗೆ ತನಿಖಾ ಸಂಸ್ಥೆಗಳ ಅಪಸ್ವರದ ನಡುವೆ ಜಾಮೀನು ನೀಡಿ ತನಿಖಾ ಸಂಸ್ಥೆಗಳ ಕಾರ್ಯನಿರ್ವಹಣೆಯ ವೈಖರಿ ಬಗ್ಗೆ ಮತ್ತು ಅವುಗಳು ಸಂಗ್ರಹಿಸುವ ಸಾಕ್ಷ್ಯಗಳ ಬಗ್ಗೆ ಮಹತ್ವದ ಪ್ರಶ್ನೆಗಳನ್ನು ಎತ್ತಿದೆ.
ಸರಕಾರದ ಸೂತ್ರದ ಗೊಂಬೆಯಂತಿರುವ ತನಿಖಾ ಸಂಸ್ಥೆಗಳ ನಿಷ್ಪಕ್ಷಪಾತತನದ ಬಗ್ಗೆ ಸುಪ್ರೀಂ ಕೋರ್ಟ್ ನ್ಯಾಯ ಸಮ್ಮತವಾಗಿ ಕೆಲವು ಪ್ರಶ್ನೆಗಳನ್ನು ಕೇಳಿದೆ. ಅದರಲ್ಲೂ ಮುಖ್ಯವಾಗಿ ದಿಲ್ಲಿಯ ಅಬಕಾರಿ ಹಗರಣಕ್ಕೆ ಸಂಬಂಧಿಸಿದಂತೆ ಹಾಗೂ ಇತರ ಕೆಲ ಪ್ರಕರಣಗಳಲ್ಲಿ ಮಾಫಿ ಸಾಕ್ಷಿಧಾರರ ಹೇಳಿಕೆಗಳನ್ನೇ ಮುಖ್ಯ ಸಾಕ್ಷಿಯಾಗಿ ಬಳಕೆ ಮಾಡುತ್ತಿರುವ ಪ್ರವೃತ್ತಿಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಸುಪ್ರೀಂ ಕೋರ್ಟ್ ಆರೋಪಿಯೊಬ್ಬ ಇನ್ನೊಬ್ಬ ಆರೋಪಿಯ ಬಗ್ಗೆ ನೀಡುವ ಹೇಳಿಕೆಗಳನ್ನು ಆಧಾರ, ಪುರಾವೆಯಾಗಿ ಬಳಸಿಕೊಳ್ಳುವುದು ಸೂಕ್ತವೇ ಎಂದು ಕೇಳಿದೆ.
ವ್ಯಕ್ತಿಯೊಬ್ಬನ ಮೂಲಭೂತ ಸ್ವಾತಂತ್ರ್ಯದ ಪ್ರಶ್ನೆ ಒಳಗೊಂಡ ಪ್ರಕರಣಗಳಲ್ಲಿ ಈ ಅಂಶಗಳನ್ನು ಪರಿಗಣಿಸಬೇಕೆಂದು ಮತ್ತು ನಿಯಮಗಳನ್ನು ಅನುಸರಿಸಬೇಕೆಂದು ಅಧೀನ ನ್ಯಾಯಾಲಯಗಳಿಗೆ ಸುಪ್ರೀಂ ಕೋರ್ಟ್ ಸೂಚಿಸಿದೆ. ಯಾವುದೇ ವ್ಯಕ್ತಿಯನ್ನು ಬಂಧಿಸುವಾಗ ತನಿಖಾ ಸಂಸ್ಥೆಗಳು ಕಾನೂನಿನ ಸರಿಯಾದ ಪ್ರಕ್ರಿಯೆಗಳಿಗೆ ವ್ಯತಿರಿಕ್ತವಾಗಿ ನಡೆದುಕೊಳ್ಳಬಾರದು ಎಂದು ಸ್ಪಷ್ಟವಾಗಿ ಹೇಳಿದೆ. ಯಾವುದೇ ವ್ಯಕ್ತಿಯ ಸಂವಿಧಾನಾತ್ಮಕವಾದ ಮೂಲಭೂತ ಹಕ್ಕುಗಳನ್ನು ಹತ್ತಿಕ್ಕುವ ದುರುದ್ದೇಶದಿಂದ ಕಾರ್ಯಾಂಗವು ತನ್ನ ಅಧಿಕಾರವನ್ನು ಮಿತಿ ಮೀರಿ ಬಳಸಿಕೊಳ್ಳುವ ಚಾಳಿಯನ್ನು ಕೈ ಬಿಡಬೇಕು. ವ್ಯಕ್ತಿ ಸ್ವಾತಂತ್ರ್ಯವನ್ನು ಗಮನದಲ್ಲಿ ಇಟ್ಟುಕೊಂಡು ನ್ಯಾಯಾಂಗ ಪ್ರಕ್ರಿಯೆ ನಡೆಯಬೇಕು ಎಂದು ಸುಪ್ರೀಂ ಕೋರ್ಟ್ ಸೂಚಿಸಿದೆ.
ಕವಿತಾ ಅವರಿಗೆ ಸಂಬಂಧಿಸಿದ ಪ್ರಕರಣದಲ್ಲಿ 493 ಸಾಕ್ಷಿಗಳಿದ್ದಾರೆ. ಅವರಲ್ಲಿ 57 ಮಂದಿ ಆರೋಪಿಗಳಿದ್ದಾರೆ. ಹೀಗಾಗಿ ಪ್ರಕರಣದ ವಿಚಾರಣೆ ತಡವಾಗುತ್ತದೆ ಎಂಬುದರ ಬಗ್ಗೆ ಪ್ರಸ್ತಾವಿಸಿದ ಸುಪ್ರೀಂ ಕೋರ್ಟ್, ವಿಚಾರಣೆಯ ಪ್ರಕ್ರಿಯೆಯೇ ಒಂದು ಶಿಕ್ಷೆಯಾಗಿ ಪರಿಣಮಿಸುತ್ತದೆ. ಅಂಥ ಸಂದರ್ಭಗಳಲ್ಲಿ ಸಹಜ ನ್ಯಾಯ ಎಂಬುದು ಆರೋಪಿಯ ಪಾಲಿಗೆ ಮರೀಚಿಕೆಯಂತಾಗುತ್ತದೆ. ಕವಿತಾ ಅವರ ಪ್ರಕರಣದಲ್ಲಿ ತನಿಖೆ ಪೂರ್ಣಗೊಂಡಿದೆ. ಅವರು ತಪ್ಪಿಸಿಕೊಂಡು ಪರಾರಿಯಾಗುವ ಅಪಾಯವೂ ಇಲ್ಲ ಯಾವುದೇ ನೆಪ ಮುಂದೆ ಮಾಡಿ ಕವಿತಾ ಅವರ ಸ್ವಾತಂತ್ರ್ಯವನ್ನು ಹತ್ತಿಕ್ಕುವುದಕ್ಕೆ ಯಾವ ಕಾರಣವೂ ಇಲ್ಲ ಎಂದು ಹೇಳಿ ಜಾಮೀನು ಮಂಜೂರು ಮಾಡಿದೆ.
ವಾಸ್ತವವಾಗಿ ಜನಸಾಮಾನ್ಯರ ಮೂಲಭೂತ ಹಕ್ಕುಗಳ ದಮನವಾಗಿರುವಾಗ ನ್ಯಾಯಾಂಗ ಕಣ್ಣು ಮುಚ್ಚಿ ಕೂರಬೇಕಿಲ್ಲ. ಅಧಿಕಾರದಲ್ಲಿ ಇರುವವರು ನ್ಯಾಯಾಲಯಗಳ ತೀರ್ಪುಗಳನ್ನು ಕಡೆಗಣಿಸುವ ಪ್ರವೃತ್ತಿ ಸರಿಯಾದುದಲ್ಲ.
ನ್ಯಾಯಾಂಗದ ಈ ಕ್ರಿಯಾಶೀಲತೆ ಬಗ್ಗೆ ಅಧಿಕಾರದಲ್ಲಿ ಇರುವವರಿಗೆ ಮತ್ತು ಅವರ ಪಕ್ಷದ ನಾಯಕರಿಗೆ ಅಸಹನೆ ಉಂಟಾಗಬಹುದು. ಸಿಬಿಐ ಸೇರಿ ಇತರ ತನಿಖಾ ಸಂಸ್ಥೆಗಳಂತೆ ನ್ಯಾಯಾಂಗವೂ ತನ್ನ ಕೈಗೊಂಬೆಯಾಗಿರಬೇಕೆಂದು ಬಯಸುವುದು ನ್ಯಾಯ ಸಮ್ಮತವಲ್ಲ. 2002 ಗುಜರಾತ್ ಹತ್ಯಾಕಾಂಡದ ಬಗ್ಗೆ (ಆಗ ಗುಜರಾತ್ ಮುಖ್ಯಮಂತ್ರಿ ಯಾಗಿದ್ದ) ಹಾಲಿ ಪ್ರಧಾನಿಯವರ ಆಡಳಿತ ವೈಖರಿಯ ಬಗ್ಗೆ ಪ್ರಶ್ನಿಸಲು ಈವರೆಗೆ ನ್ಯಾಯಾಲಯಗಳೂ ಹಿಂಜರಿಯುತ್ತಿದ್ದವು. ಆದರೆ ಈಗ ಅವುಗಳು ಕೂಡ ಸಂವಿಧಾನದ ರಕ್ಷಣೆಗಾಗಿ ಮೈ ಕೊಡವಿ ಎದ್ದು ನಿಂತಿವೆ.
ವಾಸ್ತವವಾಗಿ ನ್ಯಾಯಾಂಗ ತನ್ನ ಲಕ್ಷ್ಮಣ ರೇಖೆಯನ್ನು ದಾಟಿ ವಿಪರೀತ ಕ್ರಿಯಾಶೀಲತೆಯನ್ನೇನೂ ತೋರಿಸುತ್ತಿಲ್ಲ. ಆದರೆ, ಜನಸಾಮಾನ್ಯರ ಮೂಲಭೂತ ಹಕ್ಕುಗಳಿಗೆ ಧಕ್ಕೆಯಾದಾಗ ನ್ಯಾಯಾಂಗ ಸುಮ್ಮನಿರಲಾಗುವುದಿಲ್ಲ. ಕೋವಿಡ್ ಸಮಯದಲ್ಲಿ ಕೇಂದ್ರ ಸರಕಾರ, ರಾಜ್ಯಗಳಿಗೆ ಆಮ್ಲಜನಕ ಒದಗಿಸಲು ಬೇಕಂತಲೇ ವಿಳಂಬ ಮಾಡಿದಾಗ ಹಾಗೂ ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಸುಪ್ರೀಂ ಕೋರ್ಟ್ ಆದೇಶವನ್ನು ಧಿಕ್ಕರಿಸಿ ಕೇರಳ ಮೂಲದ ಪತ್ರಕರ್ತರೊಬ್ಬರನ್ನು ದಿಲ್ಲಿಯ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಆಸ್ಪತ್ರೆಯಿಂದ ಗುಟ್ಟಾಗಿ ಮಥುರಾ ಜೈಲಿಗೆ ಕರೆದುಕೊಂಡು ಹೋಗಿದ್ದನ್ನು ಕಂಡು ನ್ಯಾಯಾಂಗ ಸುಮ್ಮನಿರಲಾಗುವುದಿಲ್ಲ.
ಪ್ರಗತಿಪರ ಚಿಂತಕರು, ಲೇಖಕರು, ವಿಜ್ಞಾನಿಗಳ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆಯಾದಾಗ ನ್ಯಾಯಾಂಗ ಮಾತಾಡಬೇಕಾಗುತ್ತದೆ.
ಆನಂದ ತೇಲ್ತುಂಬ್ಡೆೆ, ಗೌತಮ್ ನವ್ಲಾಖಾ, ವರವರರಾವ ಮುಂತಾದ ಬುದ್ಧಿಜೀವಿಗಳನ್ನು ಜೈಲಿಗೆ ಹಾಕಿ ಕಿರುಕುಳ ಕೊಟ್ಟಾಗ ನ್ಯಾಯಾಲಯಗಳು ಮಧ್ಯಪ್ರವೇಶ ಮಾಡಲೇಬೇಕಾಯಿತು. ಈ ಹಿನ್ನೆಲೆಯಲ್ಲಿ ನ್ಯಾಯಾಂಗವನ್ನು ನಿಯಂತ್ರಿಸಲು ಈ ಕೇಂದ್ರ ಸರಕಾರ ನಡೆಸಿದ ಮಸಲತ್ತುಗಳು ಒಂದೆರಡಲ್ಲ. ನ್ಯಾಯಾಧೀಶರ ನೇಮಕಾತಿಯ ಅಧಿಕಾರವನ್ನು ಕಬಳಿಸಲು ಯತ್ನಿಸಿದ್ದು ಎಲ್ಲರಿಗೂ ಗೊತ್ತಿದೆ. ಇಂಥ ಸಂದರ್ಭಗಳಲ್ಲಿ ನ್ಯಾಯಾಂಗದ ಕ್ರಿಯಾಶೀಲತೆಯನ್ನು ನಾವು ಸ್ವಾಗತಿಸಬೇಕಿದೆ.