ಇವು ಬಿಟ್ಟಿ ಭಾಗ್ಯಗಳಲ್ಲ, ಭರವಸೆಯ ಹೆಜ್ಜೆಗಳು

Update: 2023-06-05 12:31 GMT

ಭಾರತದಲ್ಲಿ ಸಂಪನ್ಮೂಲಗಳ ಕೊರತೆ ಇಲ್ಲ. ಇರುವ ಸಂಪನ್ಮೂಲಗಳ ಅಸಮಾನ ಹಂಚಿಕೆಯ ಪ್ರಶ್ನೆ ಮುಖ್ಯವಾಗಿದೆ. ನವ ಉದಾರೀಕರಣದ ಆರ್ಥಿಕತೆಯನ್ನು ಒಪ್ಪಿಕೊಂಡ ಭಾರತ ಸೇರಿದಂತೆ ಇಂದಿನ ಜಗತ್ತಿನಲ್ಲಿ ಸಮಾಜ ಬದಲಾವಣೆಯ ಕನಸು ನನಸಾಗುವ ದಿನಗಳು ದೂರ ಹೋಗಿವೆ. ಸೋವಿಯತ್ ರಶ್ಯದ ಸಮಾಜವಾದಿ ಪ್ರಯೋಗ ವಿಫಲಗೊಂಡ ನಂತರ ಜಾಗತಿಕ ಪರಿಸ್ಥಿತಿ ಬದಲಾಗಿದೆ. ಇಂಥ ಸನ್ನಿವೇಶದಲ್ಲಿ ಜನಪರ ಆಶಯಗಳನ್ನು ಹೊಂದಿದ ಸರಕಾರಗಳು ಜನಸಾಮಾನ್ಯರ ಮೇಲಿನ ಹೊರೆಯನ್ನು ಕಡಿಮೆ ಮಾಡಲು ಅನ್ನಭಾಗ್ಯದಂಥ ಯೋಜನೆಗಳನ್ನು ರೂಪಿಸಬೇಕಾಗುತ್ತದೆ.



ಕಳೆದ ಮೂರೂವರೆ ವರ್ಷಗಳ ಬಿಜೆಪಿ ಸರಕಾರದ ಕಾಲಾವಧಿಯಲ್ಲಿ ಹಿಜಾಬ್, ಹಲಾಲ್ ಕಟ್, ಲವ್ ಜಿಹಾದ್, ಅನೈತಿಕ ಪೊಲೀಸಗಿರಿ ಯನ್ನು ಕಂಡಿದ್ದ ಕರ್ನಾಟಕ ಚುನಾವಣೆ ಫಲಿತಾಂಶ ಬಂದು ಕಾಂಗ್ರೆಸ್ ಅಧಿಕಾರಕ್ಕೆ ಬಂದ ಹತ್ತೇ ದಿನಗಳಲ್ಲಿ ಉಚಿತ ವಿದ್ಯುತ್, ಅನ್ನಭಾಗ್ಯ, ಉಚಿತ ಪ್ರಯಾಣ, ಮನೆ ಯಜಮಾನಿಗೆ ಮಾಸಾಶನ ಕಾಣುತ್ತಿದ್ದೇವೆ. ಗೃಹ ಜ್ಯೋತಿ, ಯುವನಿಧಿ ಗಳಂಥ ಬಡವರ ಪಾಲಿನ ಸಂಭ್ರಮದ ಕ್ಷಣಗಳನ್ನು ಕಾಣುತ್ತಿದೆ.

ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಜನರಿಗೆ ಕಾಂಗ್ರೆಸ್ ನೀಡಿದ್ದ ಗ್ಯಾರಂಟಿ ಕಾರ್ಡ್‌ಗಳ ಬಗ್ಗೆ ಲೇವಡಿ ಮಾಡಿದವರು ಈಗ ಯಾವ ರೀತಿ ಪ್ರತಿಕ್ರಿಯೆ ನೀಡಬೇಕೆಂದು ಗೊತ್ತಾಗದೇ ತರಾವರಿ ಹೇಳಿಕೆಗಳನ್ನು ನೀಡುತ್ತಿ ದ್ದಾರೆ. ಬಿಜೆಪಿ ಒಂದು ವಿರೋಧ ಪಕ್ಷವಾಗಿ ಟೀಕಿಸುವುದು ಸಹಜ. ಆದರೆ ನಾನಾ ರೀತಿಯಲ್ಲಿ ಸರಕಾರದ ಸವಲತ್ತುಗಳನ್ನು ಪಡೆಯುತ್ತಲೇ ವಾಟ್ಸ್‌ಆ್ಯಪ್ ಯುನಿವರ್ಸಿಟಿಯ ಸುಳ್ಳು ಸುದ್ದಿಗಳನ್ನು ಓದಿ ಅದನ್ನೇ ಸತ್ಯವೆಂದು ವಾದಿಸುತ್ತಿರುವ ಆರಕ್ಕೆ ಏರದ, ಮೂರಕ್ಕೆ ಇಳಿಯದ ಮಧ್ಯಮವರ್ಗದ ಭ್ರಮಾ ಜೀವಿಗಳೂ ಬಡವರಿಗೆ ಅನ್ನಭಾಗ್ಯ ತಂದಿರುವುದನ್ನು ಸಹಿಸಲಾಗದೇ ಕೊಳಕು ಮಾತುಗಳನ್ನು ಆಡುತ್ತಿದ್ದಾರೆ.

ದುಡಿಯುವ ಬಡವರಿಗೆ ಕೊಡುವ ಯಾವುದೂ ಕೂಡ ಬಿಟ್ಟಿ ಭಾಗ್ಯವಲ್ಲ ಎಂಬುದನ್ನು ಇದನ್ನು ವಿರೋಧಿಸುವವರು ತಿಳಿದುಕೊಳ್ಳಬೇಕು. ತಮ್ಮ ಮೈ ಬೆವರಿನಿಂದ ಭಾರತ ಎಂಬ ಒಕ್ಕೂಟ ರಾಷ್ಟ್ರವನ್ನು ಕಟ್ಟಿದವರು ಈ ದೇಶದ ಶ್ರಮಿಕರು.. ನಿತ್ಯ ನಮ್ಮ ನಗರ, ಪಟ್ಟಣ, ಊರುಗಳ ನೈರ್ಮಲ್ಯಕ್ಕಾಗಿ ಅವರು ಪಡುವ ಶ್ರಮ, ಆಹಾರ ಧಾನ್ಯ ಬೆಳೆಯಲು ಅವರು ಪಡುವ ಕಷ್ಟ,ಅವರು ನೇಯ್ದು, ಒಗೆದು ಇಸ್ತ್ರಿ ಮಾಡಿ ಕೊಡುವ ನಾವು ತೊಡುವ ಬಟ್ಟೆ, ತಿನ್ನುವ ಅನ್ನ, ನಡೆಯುವ ರಸ್ತೆ, ಕಾಯಿಲೆ ಬಿದ್ದಾಗ ಹೋಗುವ ಆಸ್ಪತ್ರೆ, ನಮ್ಮ ಮನೆಗಳನ್ನು ಜತನದಿಂದ ಕಾಪಾಡುವ ಹೆಣ್ಣು ಮಕ್ಕಳು, ನಮ್ಮ ಮನೆಗಳ ಕಸ ಗುಡಿಸುವ, ಪಾತ್ರೆಗಳನ್ನು ತೊಳೆಯುವ ಮಹಿಳೆಯರು, ಆಟೋ ರಿಕ್ಷಾದಲ್ಲಿ ನಮ್ಮನ್ನು ಕರೆದು ಕೊಂಡು ಹೋಗುವವರು, ನಮ್ಮ ಬೂಟು, ಚಪ್ಪಲಿಗಳನ್ನು ಹೊಲಿದು ಪಾಲಿಶ್ ಮಾಡಿ ಕೊಡುವವರು, ಊರಿಂದೂರಿಗೆ ನಮ್ಮನ್ನು ಸಾಗಿಸುವ ಸರಕಾರಿ, ಖಾಸಗಿ ಸಾರಿಗೆಗಳ ವಾಹನ ಚಾಲಕರು ಇವರಿಗೆ ಪ್ರತಿಯಾಗಿ ನಾವೇನು ಕೊಟ್ಟಿದ್ದೇವೆ. ಹಿಂದೆ ಅಧಿಕಾರದಲ್ಲಿದ್ದವರು ಮತಾಂಧತೆಯ ನಶೆ ಏರಿಸಲು ಯತ್ನಿಸಿದರು. ಕೇಂದ್ರದಲ್ಲಿರುವ ಇವರ ಸರಕಾರ ಅಡುಗೆ ಮಾಡುವ ಸಿಲಿಂಡರ್ ದರ ಏರಿಸಿ , ಉರಿಯುವ ಗಾಯಕ್ಕೆ ಉಪ್ಪು ಸುರಿಯಿತು, ಇನ್ನೇನು ಮುಗಿದೇ ಹೋಯಿತೆನ್ನುವಾಗ ಬುದ್ದಿವಂತ ಕರ್ನಾಟಕದ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ನೀಡಿದರು.ಹೊಸ ಸರಕಾರ ಸೋತು ಹೋದ ಮೇಲ್ಕಂಡ ಶ್ರಮಜೀವಿಗಳಿಗೆ ಕೆಲವು ಅನುಕೂಲ ಕಲ್ಪಿಸುವ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದೆ.ಇದನ್ನು ಸ್ವಾಗತಿಸೋಣ. ಒಳ್ಳೆಯದನ್ನು ಮಾಡಿದಾಗ ಶ್ಲಾಸೋಣ, ತಪ್ಪು ಮಾಡಿದರೆ ವಿರೋಧಿಸೋಣ. ಹಸಿದವರಿಗೆ ಅನ್ನ ಹಾಕುವುದು ಧರ್ಮ; ಜಾತಿ, ಮತದ ಹೆಸರಿನಲ್ಲಿ ಹಸಿದವರ ನಡುವೆ ಹೊಡೆದಾಟ ಹಚ್ಚುವುದು ಅಧರ್ಮ.

ದೇಶ ಉದ್ಧಾರ ಮಾಡಲು ಅಚ್ಚೇ ದಿನಗಳನ್ನು ತರುತ್ತೇವೆಂದು ಬಂದವರು ಮಾಡಿದ್ದೇನು? ರೈಲು ಪ್ರಯಾಣದಲ್ಲಿ ಹಿರಿಯ ನಾಗರಿಕರಿಗೆ ಇದ್ದ ರಿಯಾಯಿತಿ ಸೌಕರ್ಯ ರದ್ದು ಮಾಡಿದರು. ಅಡುಗೆ ಅನಿಲದ ಸಿಲಿಂಡರ್ ಮೇಲಿನ ಸಬ್ಸಿಡಿಯನ್ನು ರದ್ದುಗೊಳಿಸಿದರು. ವಿದೇಶದಲ್ಲಿರುವ ಕಪ್ಪು ಹಣವನ್ನು ತರುತ್ತೆವೆಂದವರು ನೋಟು ಅಮಾನ್ಯೀಕರಣ ಮಾಡಿ ಜನಸಾಮಾನ್ಯರನ್ನು ಗೋಳಾಡಿಸಿದರು. ಅದರೆ ಇಲ್ಲಿ ಕರ್ನಾಟಕದ ಕಾಂಗ್ರೆಸ್ ಸರಕಾರ ಭರವಸೆ ಕೊಟ್ಟಂತೆ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಜಾರಿಗೆ ತಂದಿತು. ಕಾಂಗ್ರೆಸ್-ಬಿಜೆಪಿ ನಡುವೆ ಇರುವ ವ್ಯತ್ಯಾಸ ಇದು.

ಜನಸಾಮಾನ್ಯರಿಗೆ ಉಚಿತವಾಗಿ ನೀಡಿದರೆ ಆರ್ಥಿಕತೆ ದಿವಾಳಿಯಾ ಗುತ್ತದೆ, ಮೂಲಭೂತ ಸೌಕರ್ಯಗಳನ್ನು ಒದಗಿಸಲು ಹಣಕಾಸಿನ ಕೊರತೆಯಾಗುತ್ತದೆ ಎಂದು ವಿತಂಡ ವಾದ ಮಾಡಿಸುವವರು ಅದಾನಿಯಂಥ ಕಾರ್ಪೊರೇಟ್ ಬಂಡವಾಳಗಾರರ ಸಾವಿರಾರು ಕೋಟಿ ರೂ. ಬ್ಯಾಂಕ್ ಸಾಲ ಮನ್ನಾ ಮಾಡಿದ ಬಗ್ಗೆ ಮಾತಾಡುವುದಿಲ್ಲ. ಮೋದಿಯವರು ಅಧಿಕಾರಕ್ಕೆ ಬಂದ ನಂತರ ಸುಮಾರು ಹತ್ತು ಲಕ್ಷ ಕೋಟಿ ರೂ. ಕಾರ್ಪೊರೇಟ್ ಉದ್ಯಮಿಗಳ ಸಾಲವನ್ನು ಮನ್ನಾ ಮಾಡಿದ್ದಾರೆ. ಇದರಿಂದಾಗಿ ಸಾರ್ವಜನಿಕ ರಂಗದ ಬ್ಯಾಂಕುಗಳು ದಿವಾಳಿಯ ಅಂಚಿಗೆ ಬಂದಿವೆ. ಕಾರ್ಪೊರೇಟ್ ಸಾಲ ಮನ್ನಾದಿಂದ ಮೂಲಭೂತ ಸೌಕರ್ಯಗಳಿಗೆ ಹಣ ಹೊಂದಿಸಲು ಕಷ್ಟವಾಗುವುದಿಲ್ಲವೇ? ಬಡವರಿಗೆ ಕೊಟ್ಟರೆ ಹೊರೆ, ಕಾರ್ಪೊರೇಟ್ ಬಂಡವಾಳಿಗರ ಸಾಲ ಮನ್ನಾ ಮಾಡಿದರೆ ತಪ್ಪಿಲ್ಲ, ಇದೆಂಥ ವಿಚಿತ್ರ ವಾದ, ಬಹುತೇಕ ಮಾಧ್ಯಮಗಳು ಉದ್ಯಮಿಗಳ ತುತ್ತೂರಿಯಾಗಿರುವುದರಿಂದ ಅವು ಇಂಥ ಕತೆ ಕಟ್ಟಿ ತಮಗೆ ಅನುಕೂಲ ವಾದ ಜನಾಭಿಪ್ರಾಯ ರೂಪಿಸುತ್ತವೆ. ನಾಗಪುರದ ಸಂವಿಧಾನೇತರ ಶಕ್ತಿ ಕೇಂದ್ರದ ವಾಟ್ಸ್‌ಆ್ಯಪ್ ಯುನಿವರ್ಸಿಟಿಗಳು ಕೂಡ ಸುಳ್ಳು ಕತೆಗಳನ್ನು ಕಟ್ಟುತ್ತವೆ. ವಾಸ್ತವವಾಗಿ ಕಾರ್ಪೊರೇಟ್ ಬಂಡವಾಳಶಾಹಿಗಳಿಗೂ ಅನೇಕ ಬಿಟ್ಟಿ ಭಾಗ್ಯಗಳಿವೆ.ಉದ್ಯೋಗ ಸೃಷ್ಟಿಯ ಹೆಸರಿನಲ್ಲಿ ರಿಯಾಯಿತಿ ದರದಲ್ಲಿ ಭೂಮಿ, ತೆರಿಗೆ ರಿಯಾಯಿತಿ, ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡರೂ ಅಭ್ಯಂತರವಿಲ್ಲ. ಆದರೂ ಇವುಗಳ ಬಗ್ಗೆ ಮಾತನಾಡದ ವಾಟ್ಸ್‌ಆ್ಯಪ್ ಯುನಿವರ್ಸಿಟಿ ಪರಿಣಿತರು ಬಡವರಿಗೆ, ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದಂಥ ಒಂದಿಷ್ಟು ಅನುಕೂಲ ಮಾಡಿಕೊಟ್ಟರೆ ಹೊಟ್ಟೆ ಉರಿದುಕೊಳ್ಳುತ್ತಾರೆ.

ಕಾಂಗ್ರೆಸ್ ಪಕ್ಷ ಜನತೆಗೆ ನೀಡಿದ ಗ್ಯಾರಂಟಿ ಯೋಜನೆಯ ಭರವಸೆಗಳನ್ನು ಈಡೇರಿಸಲು ಸಾಧ್ಯವೇ? ಇದರಿಂದ ದುಡ್ಡು ಎಲ್ಲಿಂದ ತರುತ್ತೀರಿ ಎಂದು ಪ್ರತಿಪಕ್ಷಗಳಿಗಿಂತ ಮೊದಲು ಟಿ.ವಿ. ಮಾಧ್ಯಮಗಳು ಅಪಸ್ವರ ತೆಗೆದವು. ಗ್ಯಾರಂಟಿ ಯೋಜನೆಗೆ ಗ್ಯಾರಂಟಿ ಎಲ್ಲಿದೆ? ಎಂದು ಲೇವಡಿ ಮಾಡಿದವು. ಇದರಿಂದ ರಾಜ್ಯದ ಆರ್ಥಿಕತೆ ದಿವಾಳಿಯಾಗುತ್ತದೆಂದು ಹುಯಿಲೆಬ್ಬಿಸಿವೆ.ರಾಜ್ಯದ ಆರ್ಥಿಕತೆಯ ಬಗ್ಗೆ ಕಾಳಜಿಯಿಂದ ಇಂಥ ಪ್ರಶ್ನೆಗಳನ್ನು ಎತ್ತಿದ್ದರೆ ಆಕ್ಷೇಪವಿರುತ್ತಿರಲಿಲ್ಲ. ಆದರೆ ಇವೆಲ್ಲ ಕುಹಕದ, ಕುಚೇಷ್ಟೆಯ ಅಪಸ್ವರಗಳೆಂದು ಎಲ್ಲರಿಗೂ ಗೊತ್ತಿದೆ. ಸುಮಾರು ನಲವತ್ತು ವರ್ಷಗಳಿಂದ ರಾಜಕೀಯದಲ್ಲಿರುವ, ಸಮಾಜವಾದಿ ಚಳವಳಿಯಿಂದ ಬಂದ ಹಾಗೂ ಹಿಂದೆ ಕೆಲವು ಸಲ ಹಣಕಾಸು ಮಂತ್ರಿಯಾಗಿ ಹದಿಮೂರು ಮುಂಗಡಪತ್ರಗಳನ್ನು ಮಂಡಿಸಿರುವ ಸಿದ್ದರಾಮಯ್ಯನವರಿಗೆ ಇದೆಲ್ಲ ಗೊತ್ತಿಲ್ಲವೇ? ಎಲ್ಲಾ ಪರಾಮರ್ಶೆ ಮಾಡಿ ಜಾರಿಗೆ ತಂದ ಗ್ಯಾರಂಟಿ ಯೋಜನೆಗಳ ಬಗ್ಗೆ ಕೊಳಕುತನದ ಲೇವಡಿ ಮಾಡುವವರು ಬಡವರು, ದುಡಿಯುವವರು ಮತ್ತು ಮಹಿಳೆಯರನ್ನು ಕಂಡರಾಗದ ಲಪೂಟರು.

ಕಾಂಗ್ರೆಸ್ ಸರಕಾರದ ಗ್ಯಾರಂಟಿ ಯೋಜನೆಯಲ್ಲಿ ಸಮಾಜದ ಕಟ್ಟಕಡೆಯ ಮನುಷ್ಯನಿಗೂ ಅನ್ನ,ಆರೋಗ್ಯ, ಶಿಕ್ಷಣ, ವಸತಿ, ಮತ್ತು ಉದ್ಯೋಗ ಸಿಗಬೇಕೆಂಬಅಂತಃಕರಣದ ಕಾಳಜಿಯಿದೆ. ಈ ಸೌಕರ್ಯಗಳು ಜಾತಿ, ಮತ, ಭಾಷೆಗಳೆಂಬ ಭೇದವಿಲ್ಲದೆ ಎಲ್ಲರಿಗೂ ಸಿಗಬೇಕೆಂಬುದು ಕರ್ನಾಟಕದ ಅಭಿವೃದ್ಧಿ ಮಾದರಿ. ಈ ಅಭಿವೃದ್ಧಿ ಮಾದರಿಯನ್ನು ವಿರೋಧಿಸುವವರು ಭಾರತವನ್ನು ಕೊಳ್ಳೆ ಹೊಡೆಯುತ್ತಿರುವ ಕಾರ್ಪೊರೇಟ್ ಕಂಪೆನಿಗಳ ಚೇಲಾಗಳು.

ಸಮಾಜವಾದಿ ಚಳವಳಿಯಿಂದ ಬಂದ ಬಂಗಾರಪ್ಪನವರೂ ಜನ ಸಾಮಾನ್ಯರ ಏಳಿಗೆಗಾಗಿ ಹಲವಾರು ಯೋಜನೆಗಳನ್ನು ತಂದಿದ್ದರು. ಹತ್ತು ಎಚ್.ಪಿ.ಒಳಗಿರುವ ಪಂಪ್‌ಸೆಟ್‌ಗೆ ಉಚಿತ ವಿದ್ಯುತ್ ನೀಡಿದರು. ವಿಧವೆ ಯರು, ಅಂಗವಿಕಲರು, ಮುಂತಾದವರಿಗೆ ಪಿಂಚಣಿ ಬರುತ್ತದೆ ಇದರಿಂದ ಆರ್ಥಿಕತೆ ಹಾಳಾಯಿತೇ? ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ರೈತರ ಸಾಲ ಮನ್ನಾ ಮಾಡಿದರು ಇದರಿಂದ ಆರ್ಥಿಕತೆ ಹಾಳಾಯಿತೇ?
ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರ ಅಸ್ತಿತ್ವಕ್ಕೆ ಬಂದ ತಕ್ಷಣ ಗ್ಯಾರಂಟಿ ಯೋಜನೆ ಜಾರಿ ಮಾಡಿದ್ದರಿಂದ ದಿಗಿಲುಗೊಂಡ ಬಿಜೆಪಿಯ ಕೆಲ ನಾಯಕರು ಒಂದೆಡೆ ಕರೆಂಟ್ ಬಿಲ್ ಕಟ್ಟುವುದಿಲ್ಲ ಎಂದು ಹೇಳುತ್ತಾರೆ, ಇನ್ನೊಂದೆಡೆ ಅದೇ ಪಕ್ಷದ ನಾಯಕರು ಗ್ಯಾರಂಟಿ ಯೋಜನೆ ಜಾರಿಯಾದರೆ ಆರ್ಥಿಕ ಪರಿಸ್ಥಿತಿ ದಿವಾಳಿಯಾಗುತ್ತದೆ ಎನ್ನುತ್ತಾರೆ. ಗ್ಯಾರಂಟಿ ಯೋಜನೆಯಿಂದ ಪ್ರಧಾನಿ ನರೇಂದ್ರ ಮೋದಿಯವರು ಗಾಬರಿಯಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಸಿದವರಿಗೆ ಅನ್ನಭಾಗ್ಯ ,ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆ, ಉಚಿತ ಪ್ರಯಾಣ, ಗೃಹಜ್ಯೋತಿ, ಯುವ ನಿಧಿ ಮುಂತಾದ ಯೋಜನೆಗಳಿಂದ ಸಂಪನ್ಮೂಲಗಳ ಕೊರತೆ ಉಂಟಾಗುತ್ತದೆ ಎಂದು ಕೆಲವರು ದಿಢೀರ್ ಕಾಳಜಿತೋರಿಸುತ್ತಿದ್ದಾರೆ. ಆದರೆ ವಾಸ್ತವವಾಗಿ ಈ ಎಲ್ಲಾ ಗ್ಯಾರಂಟಿ ಯೋಜನೆಗಳ ಅಂದಾಜು ವೆಚ್ಚ 60,000 ಕೋಟಿ ರೂ.ಎಂದು ತಿಳಿದು ಬಂದಿದೆ.ಇದೇನು ದೊಡ್ಡ ಮೊತ್ತವಲ್ಲ.ಕೇಂದ್ರದ ನರೇಂದ್ರ ಮೋದಿಯವರ ನೇತೃತ್ವದ ಬಿಜೆಪಿ ಸರಕಾರ ಕಾರ್ಪೊರೇಟ್ ಬಂಡವಾಳಗಾರರಿಗೆ 2021-22ರಲ್ಲಿ ನೀಡಿದ್ದ ತೆರಿಗೆ ವಿನಾಯಿತಿ 4.35 ಲಕ್ಷ ಕೋಟಿ ರೂ. ದುಡಿಯುವ ಬಡವರ, ಮಹಿಳೆಯರ, ಯುವಕರ ಕಲ್ಯಾಣ ಕಾರ್ಯಕ್ರಮ ರೂಪಿಸಿದರೆ ಅನುತ್ಪಾದಕ, ಬೊಕ್ಕಸಕ್ಕೆ ಹೊರೆ ಎಂದು ಟೀಕಿಸುವವರು ಉದ್ಯಮಪತಿಗಳಿಗೆ ತೆರಿಗೆ ರಿಯಾಯಿತಿ ನೀಡಿದರೆ, ಸಾಲ ಮನ್ನಾ ಮಾಡಿದರೆ ಬಾಯಿ ಮುಚ್ಚಿಕೊಂಡಿರುತ್ತಾರೆ.

ಅನ್ನಭಾಗ್ಯ ಮುಂತಾದ ಯೋಜನೆಗಳಿಂದ ಆರ್ಥಿಕ ಪರಿಸ್ಥಿತಿ ಹದಗೆಡುತ್ತದೆ ಎನ್ನುವ ಪಂಡಿತರು ಹಿಂದೆ ರಾಜ್ಯದಲ್ಲಿ ಬಿಜೆಪಿ ಸರಕಾರವಿದ್ದಾಗ ಬಳ್ಳಾರಿಯ ಅಮೂಲ್ಯ ಖನಿಜ ಸಂಪತ್ತು ಲೂಟಿಯಾಗುತ್ತಿರುವಾಗ, ಯಾರೋ ಕೆಲವರು ತಮ್ಮ ಮನೆ ತುಂಬಿಕೊಳ್ಳುತ್ತಿರುವಾಗ ತಮ್ಮ ಪಂಚೇಂದ್ರಿಯಗಳಿಗೆ ಲಕ್ವಾ ಹೊಡೆದವರಂತೆ ತೆಪ್ಪಗಿದ್ದರು. ಬಳ್ಳಾರಿ ಗಣಿಗಳಿಂದ ದಿನ ನಿತ್ಯವೂ ಒಂದು ಸಾವಿರಕ್ಕೂ ಹೆಚ್ಚು ಲಾರಿಗಳು ಕಬ್ಬಿಣದ ಅದಿರು ಹೇರಿಕೊಂಡು ಕಾರವಾರ ಬಂದರಿಗೆ ಹೋಗುತ್ತಿರುವಾಗ ಈಗ ಸಂಪನ್ಮೂಲಗಳ ಬಗ್ಗೆ ಮಾತಾಡುವವರು ಕಣ್ಣಿಗೆ ಬಟ್ಟೆ ಕಟ್ಟಿಕೊಂಡಿದ್ದರು. ಬಡವರಿಗೆ ಅನ್ನ ಕೊಡಲು ಸರಕಾರ ಮುಂದಾದಾಗ ಅಪಸ್ವರ ತೆಗೆಯುತ್ತಿದ್ದಾರೆ.

ಭಾರತದಲ್ಲಿ ಸಂಪನ್ಮೂಲಗಳ ಕೊರತೆ ಇಲ್ಲ. ಇರುವ ಸಂಪನ್ಮೂಲಗಳ ಅಸಮಾನ ಹಂಚಿಕೆಯ ಪ್ರಶ್ನೆ ಮುಖ್ಯವಾಗಿದೆ. ನವ ಉದಾರೀಕರಣದ ಆರ್ಥಿಕತೆಯನ್ನು ಒಪ್ಪಿಕೊಂಡ ಭಾರತ ಸೇರಿದಂತೆ ಇಂದಿನ ಜಗತ್ತಿನಲ್ಲಿ ಸಮಾಜ ಬದಲಾವಣೆಯ ಕನಸು ನನಸಾಗುವ ದಿನಗಳು ದೂರ ಹೋಗಿವೆ. ಸೋವಿಯತ್ ರಶ್ಯದ ಸಮಾಜವಾದಿ ಪ್ರಯೋಗ ವಿಫಲಗೊಂಡ ನಂತರ ಜಾಗತಿಕ ಪರಿಸ್ಥಿತಿ ಬದಲಾಗಿದೆ. ಇಂಥ ಸನ್ನಿವೇಶದಲ್ಲಿ ಜನಪರ ಆಶಯಗಳನ್ನು ಹೊಂದಿದ ಸರಕಾರಗಳು ಜನಸಾಮಾನ್ಯರ ಮೇಲಿನ ಹೊರೆಯನ್ನು ಕಡಿಮೆ ಮಾಡಲು ಅನ್ನಭಾಗ್ಯದಂಥ ಯೋಜನೆಗಳನ್ನು ರೂಪಿಸಬೇಕಾಗುತ್ತದೆ.ಕೇಂದ್ರದ ಮೋದಿ ಸರಕಾರದ ಜನ ಮಾರಕ ನೀತಿಗಳಿಂದ ಜನರನ್ನು ಬಚಾವ್‌ಮಾಡಲು ಗ್ಯಾರಂಟಿಯಂಥ ಯೋಜನೆಗಳ ಅಗತ್ಯವಿದೆ.ಸಿದ್ದರಾಮಯ್ಯ ನವರಂಥ ಜನಕಾಳಜಿಯ ಮುಖ್ಯಮಂತ್ರಿ ಇದ್ದರೆ ಜನಸಾಮಾನ್ಯರು ನೆಮ್ಮದಿ ಯಿಂದ ಬದುಕಬಹುದು.ಇದು ಮುಂದೆ ಅಧಿಕಾರಕ್ಕೆ ಬರುವವರಿಗೂ ಭರವಸೆ ದಾಯಕ ಅಭಿವೃದ್ಧಿ ಮಾದರಿ. ಇದು ಅಭಿವೃದ್ಧಿ ಹೆಸರಿನಲ್ಲಿ ಉಳ್ಳವರನ್ನು ಇನ್ನಷ್ಟು ಕೋಟ್ಯಧೀಶರನ್ನಾಗಿ ಮಾಡುವ ಮಾದರಿಯಲ್ಲ. ಸಮಾಜದ ಕಟ್ಟಕಡೆಯ ವ್ಯಕ್ತಿಗೆ, ಕುಟುಂಬಕ್ಕೆ ಒಂದಿಷ್ಟು ಉಸಿರಾಡಲು ಅವಕಾಶ ನೀಡುವ ಭರವಸೆಯ ಮಾದರಿ. ಎಡಪಂಥೀಯ ಸರಕಾರವಿದ್ದರೂ ಇಂಥದೇ ಕಾರ್ಯಕ್ರಮ ರೂಪಿಸುತ್ತಿತ್ತು. ಸಿದ್ದರಾಮಯ್ಯನವರು ಇನ್ನೂ ಒಂದು ಹೆಜ್ಜೆ ಮುಂದಿಟ್ಟು ಅವಕಾಶ ವಂಚಿತ ಸಮುದಾಯಗಳಿಗೆ ಭರವಸೆಯ ಬೆಳಕನ್ನು ನೀಡಿದ್ದಾರೆ.

Similar News