ಉಡುಪಿ | ಗಾಂಜಾ ಮಾರಾಟ ಪ್ರಕರಣ: ಇಬ್ಬರು ಆರೋಪಿಗಳಿಗೆ 2 ವರ್ಷಗಳ ಕಠಿಣ ಜೈಲುಶಿಕ್ಷೆ

Update: 2023-06-07 07:19 GMT

ಉಡುಪಿ, ಜೂ.7: ಗಾಂಜಾ ಮಾರಾಟ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳಿಗೆ ಉಡುಪಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಎರಡು ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಮತ್ತು ದಂಡ ವಿಧಿಸಿ ಇಂದು ಆದೇಶ ನೀಡಿದೆ.

ಹೈದರಬಾದ್ ಮೂಲದ ಮಪಾಲ ಸರಳೇಬೆಟ್ಟು ನಿವಾಸಿ ತಿಪಿರ್ ನೇನಿ ಆದಿತ್ಯ(21) ಹಾಗೂ ತೆಲಂಗಣ ರಾಜ್ಯದ ಖಾನಪುರಂ ಮೂಲದ ಮಪಾಲ ಈಶ್ವರನಗರ ನಿವಾಸಿ ಮೊಗಿಲಿ ಹೇಮಂತ್ ರೆಡ್ಡಿ(20) ಶಿಕ್ಷೆಗೆ ಗುರಿಯಾಗಿರುವ ಆರೋಪಿಗಳು.

2019ರ ಅ.27ರಂದು ಉಡುಪಿ ನಗರದ ಶಂಕರನಾರಾಯಣ ದೇವಸ್ಥಾನದ ಬಳಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಇವರಿಬ್ಬರನ್ನು ಜಿಲ್ಲಾ ಸೆನ್ ಅಪರಾಧ ಠಾಣೆಯ ಪೊಲೀಸರು ಬಂಧಿಸಿದ್ದರು. ಇವರಿಂದ 4ಕೆ.ಜಿ. 034ಗ್ರಾಂ ತೂಕದ ಗಾಂಜಾ ಹಾಗೂ ಇತರ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿ ದ್ದರು. ಈ ಬಗ್ಗೆ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆಗಿನ ಸೆನ್ ಠಾಣೆಯ ಪೊಲೀಸ್ ನಿರೀಕ್ಷಕ ಸೀತಾರಾಮ ಪಿ. ಪ್ರಕರಣದ ತನಿಖೆ ನಡೆಸಿದ್ದು, ನಂತರ ಪೊಲೀಸ್ ನಿರೀಕ್ಷಕ ರಾಮಚಂದ್ರ ನಾಯಕ್ ಎಫ್‌ಎಸ್‌ಎಲ್ ವರದಿಯನ್ನು ಸ್ವೀಕರಿಸಿ ಆರೋಪಿಗಳ ವಿರುದ್ಧ ಅ.13ರಂದು ದೋಷಾರೋಪಣಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಶಾಂತವೀರ ಶಿವಪ್ಪ, ಆರೋಪಿಗಳ ಮೇಲಿನ ಆರೋಪ ಸಾಬೀತಾಗಿದೆ ಎಂದು ಅಭಿಪ್ರಾಯಪಟ್ಟು, ಇಬ್ಬರು ಆರೋಪಿಗಳಿಗೆ ಎರಡು ವರ್ಷ ಕಠಿಣ ಜೈಲುಶಿಕ್ಷೆ ಮತ್ತು ತಲಾ 50ಸಾವಿರ ರೂ. ದಂಡ ಹಾಗೂ ದಂಡ ವಿಧಿಸಲು ತಪ್ಪಿದಲ್ಲಿ 6 ತಿಂಗಳ ಸಾದಾ ಕಾರಾಗೃಹ ಶಿಕ್ಷೆಯನ್ನು ವಿಧಿಸಿ ಆದೇಶ ನೀಡಿದ್ದಾರೆ.

ಈ ಪ್ರಕರಣದಲ್ಲಿ ಸರಕಾರಿ ಅಭಿಯೋಜಕಿ ಶಾಂತಿಬಾಯಿ ವಿಚಾರಣೆ ನಡೆಸಿದ್ದು, ಸರಕಾರಿ ಅಭಿಯೋಜಕ ಜಯರಾಮ್ ಶೆಟ್ಟಿ ವಾದ ಮಂಡಿಸಿದ್ದಾರೆ.

Similar News